Monday, August 24, 2009


ಜಪಾನೀಯರ ಬಿಸಿನೆಸ್ ಸ್ಟೈಲ್. . . . . .

ಟೋಕ್ಯೋದ ನರಿತಾ ಇಂಟರ್ನಾಶನಲ್ ಏರ್ಪೋರ್ಟಿನಲ್ಲಿ ವಿಮಾನ ಇಳಿದು ಬಾಗಿಲು ತೆರೆದಾಗ ಏರೋಬ್ರಿಜ್ ಹಾದು ಏರ್ಪೋರ್ಟಿನ ಭವ್ಯ ಕಟ್ಟಡವನ್ನು ಹೊಕ್ಕ ನಾನು ಜಪಾನಿನ ಇನ್ನೊಂದು ಅನುಭವಕ್ಕಾಗಿ ಮನಸ್ಸಿನಲ್ಲಿ ಸಿದ್ಧನಾಗುತ್ತೇನೆ. ಪಾಸ್ ಪೋರ್ಟ್, ಟಿಕೆಟ್ ತುಂಡು, ಇಮಿಗ್ರೇಶನ್ ಕಾರ್ಡ್ ಎಲ್ಲಾ ರೆಡಿ ಮಾಡಿಕೊಂಡು ಇಮಿಗ್ರೇಶನ್ನಿನಲ್ಲಿ ಮೈಲಿಗಟ್ಟಲೆ ಕ್ಯೂ ತಪ್ಪಿಸಲೆಂದು ಬುಡುಬುಡುನೆ ಸ್ಟ್ರೋಲಿ ಎಳೆದುಕೊಂಡು ಓಡುತ್ತೇನೆ. ಅಂತೂ ಇಂತೂ ಕ್ಯೂ ಮುಗಿಸಿ ಲಗೇಜು ತೆಗೆದುಕೊಂಡು ಏರ್ಪೋರ್ಟ್ ಕಟ್ಟಡದಿಂದ ಹೊರಬಂದಂತೆ ಮೊತ್ತ ಮೊದಲನೆಯದಾಗಿ ಡಾಲರು ಕೊಟ್ಟು ಯೆನ್ ಕರೆನ್ಸಿಯನ್ನು ಪಡೆದುಕೊಳ್ಳಲು ಮರೆಯುವುದಿಲ್ಲ. ಹಾಗೆಯೇ ಇನ್ನೊಂದು ಕೌಂಟರ್ನಲ್ಲಿ ೨೬೦೦ ಯೆನ್ ತೆತ್ತು ಜಪಾನೀಯರು ’ಲಿಮ್ ಜಿಮ್’ ಎಂದು ಪ್ರೀತಿಯಿಂದ ಕರೆಯುವ ’ಲಿಮೋಸಿನ್’ ಬಸ್ಸಿನಲ್ಲಿ ’ಟಿ-ಕಾಟ್’ (ಸಿಟಿ ಟರ್ಮಿನಸ್) ಗಾಗಿ ಟಿಕೆಟ್ ಕೊಂಡು ಕಟ್ಟಡದಿಂದ ಹೊರ ಬೀಳುತ್ತೇನೆ. ಥಂಡಿಹವೆಯನ್ನು ಆಸ್ವಾದಿಸುತ್ತಾ ನಮೂದಿಸಿದ ಪ್ಲಾಟ್ ಫಾರ್ಮ್ ನಲ್ಲಿ ನಮೂದಿಸಿದ ಘಂಟೆ-ನಿಮಿಷಕ್ಕೆ ಸರಿಯಾಗಿ ಬಂದ ಬಸ್ಸನ್ನೇರಿ ಸೀಟ್ ಬೆಲ್ಟ್ ಧರಿಸಿ ’ಹೋಟೆಲಿಗೆ ಇನ್ನೂ ಒಂದೂವರೆ ಘಂಟೆ ಇದೆ’ ಎಂದುಕೊಂಡು ಹೀಗೇ-ಸುಮ್ಮನೇ ಕಣ್ಣು ಮುಚ್ಚುತ್ತೇನೆ. ಮೊದಮೊದಲು ಕಂಪೆನಿಯಿಂದ ನಾವುಗಳು ಜಪಾನಿಗೆ ಬರುವಾಗ ನಮ್ಮ ಬಿಸಿನೆಸ್ ಸ್ನೇಹಿತರು ಏರ್ಪೋರ್ಟಿಗೇ ಬಂದು ಬಿಡುತ್ತಿದ್ದರು; ಸ್ವಾಗತಿಸಿ ಹೋಟೆಲ್ಲಿಗೆ ಕರೆದುಕೊಂಡು ಹೋಗಲು. ಜಪಾನಿನಲ್ಲಿ ಇಂಗ್ಲಿಷ್ ಬಳಕೆ ಬಲುಕಡಿಮೆ. ಎಲ್ಲಿ ಹೋಗಬೇಕಾದರೂ ಅವರಲ್ಲಿ ಒಬ್ಬ ಇಂಗ್ಲಿಷ್ ಬಲ್ಲ ಸ್ನೇಹಿತ ಇಲ್ಲದಿದ್ದರೆ ದಾರಿಕೆಟ್ಟು ಅವಾಂತರವಾಗುವುದು ಖಂಡಿತ. ಕ್ರಮೇಣ ನಮಗೆ ಜಪಾನ್ ಪರಿಚಯವಾದಂತೆಲ್ಲಾ ನಾವಾಗಿಯೇ ಹೋಟೆಲ್ಲಿಗೆ ಹೋಗಿ, ಮರುದಿನ ಟಾಕ್ಸಿ ಹಿಡಿದು ಅವರ ಆಫೀಸಿಗೆ ಹೋಗತೊಡಗಿದೆವು. ಆದರೂ ನಮ್ಮ ಸುರಕ್ಷತೆ ಸೌಕರ್ಯಗಳ ಬಗ್ಗಿಗಿನ ಅವರ ಕಾಳಜಿ ಏನೂ ಕಡಿಮೆಯಾಗಿರಲಿಲ್ಲ. ಹೋಟೆಲ್ ತಲುಪಿದಾಕ್ಷಣ ನನ್ನ ಹೆಸರನ್ನು ಅಲ್ಲಿದ್ದ ಪ್ಯಾಡ್ ಮೇಲೆ ದೊಡ್ಡಕ್ಷರಗಳಲ್ಲಿ ಬರೆದು ಬೊಂಬೆಯಂತೆ ಕಾಣುವ ಡೆಸ್ಕ್ ಹುಡುಗಿಗೆ ತೋರಿಸುತ್ತೇನೆ. ಹೆಸರನ್ನು ಉಚ್ಚರಿಸಿದರೆ ಅವರಿಗೆ ಸರ್ವಥಾ ಅರ್ಥವಾಗುವುದಿಲ್ಲ. ಸುಮ್ಮನೇ ಗೊಂದಲ ಸೃಷ್ಟಿಯಾಗುತ್ತದೆ. ಡೆಸ್ಕ್ ಹುಡುಗಿ ’ಮೋಶಿ ಮೋಶಿ’ (ಹಲೋ) ಎನ್ನುತ್ತಾ, ’ಚೊಟ್ಟೊ..’ (ಒಂದು ನಿಮಿಷ..) ಎನ್ನುತ್ತಾ ಕ್ಷಣಾರ್ಧದಲ್ಲೇ ಕಂಪ್ಯೂಟರ್ ನಲ್ಲಿ ನನ್ನ ಬುಕ್ಕಿಂಗ್ ಅನ್ನು ಕಂಡುಹಿಡಿದು ಮುಖವೆಲ್ಲಾ ನಗೆಚೆಲ್ಲುತ್ತಾ ಕೈಭಾಷೆಯೊಂದಿಗೆ ’ಪಸು ಪೋರ್ಟೊ’ ಎನ್ನುತ್ತಾಳೆ. ಫಾರ್ಮ್ ನನ್ನಲ್ಲಿ ತುಂಬಿಸಿ, ಪಾಸ್ಪೋರ್ಟ್ ಪರೀಕ್ಷಿಸಿ (ಜರೋಕ್ಸ್ ತೆಗೆದು) ’ಅರಿಗತೋ...ಅರಿಗತೋ.. ’(ವಂದನೆಗಳು) ಎಂದು ಎರಡೆರಡು ಬಾರಿ ನಡು ಬಗ್ಗಿಸಿ ರೂಮಿನ ಇಲೆಕ್ಟ್ರಾನಿಕ್ ಕೀ (ಕಾರ್ಡ್) ನೀಡುತ್ತಾಳೆ. ಕೀ ಜಾಕೆಟ್ ಮೇಲಿನ ರೂಮ್ ನಂಬರಿಗೆ ರೌಂಡ್ ಸುತ್ತಿ ಗಮನ ಹರಿಸುತ್ತಾಳೆ. ಲಿಫ್ಟ್ ಏರಿ ರೂಮು ಹುಡುಕಿಕೊಂಡು ಬಂದು ಕೀ ಕಾರ್ಡ್ ತೂರಿಸಿ ಬಾಗಿಲು ತೆರೆದಾಗ ಇಲಿಬಿಲ ಹೊಕ್ಕಂತಾಗುತ್ತದೆ. ಅಷ್ಟು ಸಣ್ಣ ರೂಮು. ಮಧ್ಯೆ ಹಾಸಿಗೆ; ಅಲ್ಲಿ ಕುಳಿತು ಎರಡೂ ಕೈ ಸ್ಟ್ರೆಚ್ ಮಾಡಿದರೆ ಗೋಡೆಗೆ ತಾಗುತ್ತದೆ. ಹಾಸಿಗೆ ಸುತ್ತಲೂ ಕಷ್ಟದಿಂದ ನಡೆದಾದಲು ಜಾಗ. ಮೂಲೆಯಲ್ಲಿ ಒಂದು ಪುಟ್ಟ ಟಿ.ವಿ. (ಹೆಚ್ಚಾಗಿ, ಎಲ್ಲಾ ಚಾನಲ್ ಜಪಾನೀಸ್.) ಹಾಗೂ ಬಾಗಿಲಿನ ಬದಿಯಲ್ಲೇ ಒಂದು ಬಾತ್ ರೂಮ್ ಅದರೊಳಗೆ ಒಂದು ಕಮೋಡ್ ಮತ್ತು ಬೇಬಿ ಸೈಜ್ ಬಾತ್ ಟಬ್. ಟೋಕ್ಯೋದಲ್ಲಿ ನೂರು ಡಾಲರಿಗೆ ಇಷ್ಟು ಸಿಕ್ಕುವುದೇ ಭಾಗ್ಯ!! ಮರುದಿನ ಬೆಳಗ್ಗೆ ಎದುರಿನ ಕಡಿಮೆ ಬೆಲೆಯ ’ಲಾಸನ್ ಸ್ಟೋರ್’ ನಲ್ಲಿ ಎರಡೂವರೆ ಡಾಲರಿಗೆ ಕೊಂಡ ಬ್ರೆಡ್, ಜೂಸ್ ಸೇವಿಸಿ, ಬೀದಿ ಬದಿಯಲ್ಲೇ ಕೈಬೀಸಿ ಟಾಕ್ಸಿ ಹಿಡಿದು ಮೊದಲೇ ತೆಗೆದಿರಿಸಿದ ಮೀಟಿಂಗಿಗೆ ಹೋಗಲಿರುವ ಆಫೀಸಿನ ಜಪಾನಿಸ್ ಭಾಷೆಯ ವಿಸಿಟಿಂಗ್ ಕಾರ್ಡನ್ನು ಟಾಕ್ಸಿ ಡ್ರೈವರನಿಗೆ ನೀಡುತ್ತೇನೆ. ಅದನ್ನು ಆತ ಅತ್ಯಂತ ಸೌಜನ್ಯಪೂರ್ವಕವಾಗಿ ನೋಡಿ ಸೊಂಟ ಬಗ್ಗಿಸಿ ’ಹೈ... ಹೈ...’ (ಯೆಸ್. ಯೆಸ್) ಎಂದು ತಲೆಯಾಡಿಸಿ ಕುಳಿತಲ್ಲಿಂದಲೇ ನನ್ನ ಬದಿಯ ಬಾಗಿಲನ್ನು ಸ್ವಿಚ್ ಮೂಲಕ ಕ್ಲೋಸ್ ಮಾಡುತ್ತಾನೆ. ಹತ್ತು ನಿಮಿಷದ ಬಳಿಕ ಒಂದು ಬೃಹದಾಕಾರದ ಕಟ್ಟಡದ ಎದುರಿಗೆ ಟಾಕ್ಸಿ ನಿಲ್ಲುತ್ತದೆ. ಮೀಟರ್ ಪ್ರಕಾರ ಕೊಟ್ಟ ಹಣಕ್ಕೆ ರಿಸಿಟ್ ಕೂಡಾ ನೀಡಿ ’ಅರಿಗತೋ..’ ಹೇಳಿ ಇನ್ನೊಮ್ಮೆ ತಲೆಬಾಗುತ್ತಾನೆ. ಆಫೀಸಿ ಹೊಕ್ಕೊಡನೆ ಡೆಸ್ಕ್ ಹುಡುಗಿ ಹೆಸರು ವಿಚಾರಿಸಿ ’ವನ್ ಮೊಮೆಂತ್ ಪ್ಲೀಸ್..’ ಎಂದು ನಗೆ ಚೆಲ್ಲಿ ವಿಸಿಟರ್ ಟಾಗ್ ಹಾಗೂ ಚೀಟಿ ನೀಡಿ ’೨೭ ನೇ ಫ್ಲೋರ್’ ಎಂದು ಬರೆದುಕೊಡುತ್ತಾಳೆ. . ಬಹು ಮಹಡಿಯ ಭವ್ಯ ಕಟ್ಟಡದಲ್ಲಿ ೨೭ ನೇ ಫ್ಲೋರ್ ಹೊಕ್ಕಾಗ ಇನ್ನೊಬ್ಬಳು ಡೆಸ್ಕ್ ಹುಡುಗಿ ಅಲ್ಲಿನ ಮೀಟಿಂಗ್ ರೂಮಿಗೆ ಕರೆದೊಯ್ದು ಅಲ್ಲಿಯ ಮೆತ್ತನೆ ಸೋಫದಲ್ಲಿ ತಗ್ಗಿನ ಮೇಜಿನೆದುರು ಕುಳಿತುಕೊಳ್ಳಲು ಹೇಳುತ್ತಾಳೆ. ಬಳಿಕ ಪೇಪರ್ ಕಪ್ನಲ್ಲಿ ಬಿಸಿ ಬಿಸಿ ಟೀ/ಕಾಫಿ ತಂದು ಕೊಡುತ್ತಾಳೆ. ಜಪಾನಿನಲ್ಲಿ ಆಫೀಸಿನೊಳಗೆ ಬಂದವರಿಗೆ ಪ್ರವೇಶ ನಿಷಿದ್ಧ. ಎಲ್ಲರೂ ಮೀಟಿಂಗ್ ರೂಮುಗಳಲ್ಲಿ ಕುಳಿತು ಮಾತುಕತೆ ಮುಗಿಸಿ ಹೊರಡಬೇಕು. ಹೀಗಾಗಿ ನಮಗೆ ಅವರ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ದೊರಕುವುದಿಲ್ಲ. ಜಪಾನೀಯರು ದಂಧೆಯಲ್ಲಿ ಗೌಪ್ಯತೆಯನ್ನು ಬಹಳವಾಗಿ ಕಾಪಾಡುತ್ತಾರೆ. ಉದ್ಯಮದಲ್ಲಿ ಮಾಹಿತಿ ಕೂಡಾ ಒಂದು ಸಂಪತ್ತು. ಎರಡೇ ನಿಮಿಷದಲ್ಲಿ ನಾನು ಭೇಟಿಯಾಗಬೇಕಾಗಿದ್ದ ನನ್ನ ಬಿಸಿನೆಸ್ ಸ್ನೇಹಿತ ವ್ಯಕ್ತಿ ತನ್ನ ಬಾಸು ಹಾಗೂ ಇತರ ಒಂದೆರಡು ಸಹೋದ್ಯೋಗಿಗಳೊಡನೆ ಬರುತ್ತಾನೆ. ಎಲ್ಲರೂ ಮಿರಿ ಮಿರಿ ಕೋಟು ಬೂಟುಗಳಲ್ಲಿ ಮಿಂಚುತ್ತಿರುತ್ತಾರೆ. ನಾನೂ ನನ್ನ ಅಪರೂಪದ ಕೋಟು ಟೈಗಳೊಂದಿಗೆ ಸಹಜವಾಗಿರಲು ಹೆಣಗಾಡುತ್ತಾ ಇರುತ್ತೇನೆ. ಅವರುಗಳು ಹೊಸ ಪರಿಚಯವಾದ ಕಾರಣ ವಿಸಿಟಿಂಗ್ ಕಾರ್ಡ್ ವಿನಿಮಯ ನಡೆಯುತ್ತದೆ. ಬಂದವರು ನಾನು ಕೊಟ್ಟ ಕಾರ್ಡನ್ನು ಸರಿಯಾಗಿ ಓದಿನೋಡಿ, ಡೆಸಿಗ್ನೇಶನ್ ನೋಡಿ ಹುಬ್ಬೇರಿಸಿ, ಹೆಸರನ್ನು ಹೇಗೆ ಉಚ್ಚರಿಸುವುದು ಎಂಬ ತರಬೇತಿಯನ್ನು ನನ್ನಿಂದ ಕೇಳಿ ಪಡೆದುಕೊಳ್ಳುತ್ತಾರೆ. "ಪ್ರ...ಸಾ...ದ್.... ಪ್ರಸಾದ್ ಸಾನ್!!"ಎಂದು ಸಾನ್ (ಶ್ರೀ) ಸೇರಿಸಿ ಗೌರವದಿಂದ, ಅತ್ಯಂತ ಸೌಜನ್ಯದಿಂದಲು ಮಾತನಾಡುತ್ತಾರೆ. ನಾನು ಕೊಟ್ಟ ಕಾರ್ಡನ್ನು ಮೀಟಿಂಗ್ ಕೊನೆಯವರೆಗೆ ಟೇಬಲ್ ಮೇಲೆ ಇರಿಸಿಯೇ ಮೀಟಿಂಗ್ ನಡೆಸುತ್ತಾರೆ. ಪ್ರತಿಯೊಬ್ಬನಲ್ಲೂ ಒಂದು ಪೆನ್ ಹಾಗೂ ಸದಾ ಕಿಸೆಯಲ್ಲಿಯೇ ಇರುವ ಒಂದು ನೋಟ್ ಬುಕ್ ಇರುತ್ತದೆ. ಜೊತೆಗೆ ಸಿಗರೇಟ್ ಲೈಟರ್, ಮೊಬೈಲ್ ಕೂಡಾ ಇರುತ್ತದೆ. ಮೊತ್ತ ಮೊದಲು ಅವರ ಬಾಸ್ ಒಂದು ಸಿಗರೇಟ್ ಹಚ್ಚಿ ಮಾತು ಆರಂಭಿಸುತ್ತಾನೆ. ಉಳಿದ ಎಲ್ಲರೂ ಬಾಯಿ ಪಿಟಿಕ್ ಎನ್ನದೆ ಗಂಭೀರವಾಗಿ ಧ್ಯಾನಕ್ಕೆ ಕುಳಿತಂತೆ ಬೆನ್ನು ನೇರ ಮಾಡಿ ಕುಳಿತು ಸುಮ್ಮನೇ ಆಲಿಸುತ್ತಾರೆ. ಜಪಾನಿನಲ್ಲಿ ಸರದಿಯಂತೆ ಜನರು ಮಾತನಾಡುತ್ತಾರೆ ಹಾಗೂ ತನ್ನ ಸರದಿ ಬಾರದೆ, ಇನ್ನೊಬ್ಬನ ಮಾತು ಮುಗಿಯದೆ ತಾನು ಹೊರತು ಬಾಯಿ ತೆರೆಯುವುದಿಲ್ಲ. ಈ ಶಿಷ್ಟಾಚಾರವೇ ಅವರ ಆಲಿಸುವ ಹಾಗೂ ಸಂವಹನ ಕಲೆಯನ್ನು ತೀಕ್ಷ್ಣವಾಗಿಸಿದೆ ಎಂದು ಕಾಣುತ್ತದೆ. ಅವರ ಬಾಸು ’ನಿನ್ನೆಯ ಟ್ರಿಪ್ ಹೇಗಿತ್ತು? ಯಾವ ಫೈಟ್? ಎಷ್ಟು ಹೊತ್ತು? ಯಾವ ಹೋಟೆಲ್?’ ಎಂಬೆಲ್ಲ ಪ್ರಶ್ನೆಗಳೊಂದಿಗೆ ಮಾತು ಆರಂಭಿಸುತ್ತಾನೆ. ಫ್ಯಾಮಿಲಿಯ ಬಗ್ಗೆ ವಿಚಾರಿಸುತ್ತಾನೆ. ವೈಯಕ್ತಿಕ ವಿಷಯ ಮುಗಿಸಿ ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ವಿಚಾರಿಸುತ್ತಾನೆ. ಪ್ರಗತಿ, ಹಣದುಬ್ಬರಗಳ ಬಗ್ಗೆ ವಿತ್ತ ಮಂತ್ರಿ, ರಾಜಕೀಯಗಳ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾನೆ. ಕಟ್ಟ ಕಡೆಯದಾಗಿ ನಾವೆರಡೂ ಕಂಪನಿಯವರು ಒಟ್ಟಿಗೆ ಬಿಸಿನೆಸ್ ಮಾಡೋಣ. ಒಟ್ಟಿಗೆ ಬೆಳೆಯೋಣ ಎಂದೆಲ್ಲ ಹೇಳುತ್ತಾನೆ. ದೀರ್ಘಕಾಲಿಕ ಬಿಸಿನೆಸ್ ಸಂಬಂಧ ಅತಿ ಮುಖ್ಯ ಎಂದು ಒತ್ತಿ ಹೇಳುತ್ತಾನೆ. ಇದು ಜಪಾನೀಯರ ಬಿಸಿನೆಸ್ಸಿನ ಒಂದು ಪ್ರಾಮುಖ್ಯ ಅಂಗ. ವಿಶೇಷವೇನೆಂದರೆ, ನಾನು ಮಾರಲು ಬಂದ ಸರಕಿನ ಬಗ್ಗೆ, ಸೇಲ್ಸ್ ಬಗ್ಗೆ ಚಕಾರ ಎತ್ತುವುದಿಲ್ಲ. ಅದು ಅವನ ಕೆಲಸವಲ್ಲ. ಅದರ ಬಗ್ಗೆ ಅವನಿಗೆ ಜಾಸ್ತಿ ಅರಿವೂ ಇರುವುದಿಲ್ಲ. ಆ ಕೆಲಸವನ್ನು ಅದರ ಸಂಪೂರ್ಣ ಹೊಣೆ ಹೊತ್ತ ಜೂನಿಯರಿಗೆ ಬಿಟ್ಟು, ಲಾಸ್ಟ್ ಸಿಪ್ ಚಾ ಹೀರಿ, ಸಿಗರೇಟ್ ನಂದಿಸಿ, ನೋಟ್ ಬುಕ್, ಪೆನ್ ಕಿಸೆಗೇರಿಸಿ ಶುಭ ಹಾರೈಸಿ ಅಲ್ಲಿಂದ ಹೊರಡುತ್ತಾನೆ. ಈಗ ಅವನ ಜೂನಿಯರ್; ಅಂದರೆ, ನಾನು ಕಾಣಲು ಬಂದ ವ್ಯಕ್ತಿ ಮಾತು ಆರಂಭಿಸುತ್ತಾನೆ. ನಮ್ಮ ಉದ್ಯಮದ ಬಗ್ಗೆ, ಕಾರ್ಖಾನೆ ಬಗ್ಗೆ, ಸಪ್ಲೈ ಬಗ್ಗೆ, ಕ್ವಾಲಿಟಿ ಬಗ್ಗೆ ವಿವರವಾಗಿ ಮಾತುಕತೆ ನಡೆಸುತ್ತಾನೆ ಹಾಗೂ ಅಗಾಗ್ಗೆ ತನ್ನ ಪುಟ್ಟ ನೋಟ್ ಬುಕ್ನಲ್ಲಿ ನೋಟ್ ಮಾಡಿಕೊಳ್ಳುತ್ತಾನೆ. ಈ ನೋಟ್ ಬುಕ್ಕುಗಳಲ್ಲಿ ಒಂದು ಬ್ರಹ್ಮಾಂಡವೇ ಅಡಗಿರುತ್ತದೆ. ನಾನು ಯಾವಾಗಲೋ ಹೇಳಿ ನಾನೇ ಮರೆತಿದ್ದ ವಿಷಯಗಳನು ಪುಟ ತಿರುವಿ ನನಗೇ ತೋರಿಸುತ್ತಾನೆ. ಅಲ್ಲದೆ ಬಿಸಿನೆಸ್ ಬಗ್ಗೆ ಅವನಿಗೆ ಖಚಿತವಾದ ಮಾಹಿತಿಯಿರುತ್ತದೆ. ಜಪಾನೀಯರು ಹೋಮ್ ವರ್ಕಿಗೆ ಬಹಳ ಮಹತ್ವ ನೀಡುತ್ತಾರೆ. ಒಂದು ಮಾಹಿತಿ ನಾವು ತಪ್ಪಾಗಿ ಹೇಳಿದರೂ ’ಅದು ಸರಿಯಲ್ಲ; ಇದು ಸರಿಯಾದ ಮಾಹಿತಿ’ ಎಂದು ಎತ್ತಿ ತೋರಿಸುತ್ತಾರೆ - ಜ಼ೆನ್ ಗುರುವೊಬ್ಬ ದೊಣ್ಣೆಯಲ್ಲಿ ’ಟೊಪ್’ ಅಂತ ನೆತ್ತಿ ಮೇಲೆ ಹೊಡೆದಂತೆ ! ಕಟ್ಟ ಕಡೆಗೆ ನಾನು ಬಂದ ಕಾರಣಕ್ಕಿಳಿಯುತ್ತೇವೆ - ಸೇಲ್ಸ್ ! ಸರಕಿನ ಮಾರಾಟ ಹಾಗೂ ಬೆಲೆ ನಿಗದಿಪಡಿಸುವುದು. ಇನ್ನೊಮ್ಮೆ ಸಿಗರೆಟ್ ಹೊತ್ತಿಸಿ ಚಹ ಹೀರುತ್ತಾನೆ. ’ಪ್ರಸಾದ್ ಸಾನ್ ...’ ಎಂದು ರಾಗ ಎಳೆಯುತ್ತಾನೆ. ಕಿರು ನಗೆ ಬೀರುತ್ತಾನೆ. ನನಗೆ ಅಖಾಡಕ್ಕಿಳಿದ ಅನುಭವ. ಇದೀಗ ಸಮರ ಆರಂಭ. ಇಷ್ಟು ಸಮಯ ಜಪಾನಿನ ಸೌಜನ್ಯದ ಸವಿ ಉಂಡವನಿಗೆ ಈಗ ಕುತ್ತಿಗೆ ಕತ್ತರಿಸುವ ನೆಗೋಸಿಯೇಶನ್ ಮೂಲಕ ನುಸುಳಬೇಕಾಗುತ್ತದೆ. ಮಾರ್ಕೆಟ್ ಬಹಳ ಹಾಳಿದೆ, ಬೆಲೆ ಇಳಿಮುಖವಾಗಿದೆ ಎಂದು ಲೊಚಗುಟ್ಟುತ್ತಾನೆ. ಪೂರಕ ಅಂಕಿ ಅಂಶಗಳನ್ನು ತೋರಿಸಿ ನಂಬಿಕೆ ಹುಟ್ಟಿಸುತ್ತಾನೆ. ಬಾಲ್ಯದಿಂದಲೇ ’ನೆಗೋಸಿಯೇಶನ್ ಎಂದರೆ ಮಾತುಗಾರಿಕೆ’, ’ಜಾಣ ಮಾತುಗಾರ ಉತ್ತಮ ಸೇಲ್ಸ್ ಮನ್’ ಎಂದೆಲ್ಲ ನಂಬಿದ್ದ ನನಗೆ ಸತ್ಯದ ದರ್ಶನವಾಗುತ್ತದೆ. ನೇಗೋಸಿಯೇಶನ್ ಎಂದರೆ ಹೋಮ್ ವರ್ಕ್, ನೆಗೋಸಿಯೆಶನ್ ಎಂದರೆ ಮಾಹಿತಿ, ನೆಗೋಸಿಯೇಶನ್ ಎಂದರೆ ನಾವು ತಯಾರಿ ಮಾಡಿಕೊಂಡ ಪರ್ಯಾಯ ಪ್ಲಾನ್ಸ್ (ಆಲ್ಟರ್ನೇಟಿವ್ಸ್). ಇವೆಲ್ಲ ಇದ್ದರೆ ಮಾತುಗಾರಿಕೆಯ ಯಾವುದೆ ಆವಶ್ಯಕತೆಯಿರುವುದಿಲ್ಲ. ಇರದಿದ್ದಲ್ಲಿ ಮಾತಿಗೆ ಯಾವ ಬೆಲೆಯೂ ಇರುವುದಿಲ್ಲ. ಮಣ್ಣು ಮುಕ್ಕಿಸುತ್ತಾನೆ. ಅವನು ಹೇಳಿದ ಬೆಲೆಗೆ ಮಾರಾಟ ಮಾಡಿ ಹಿಂದಿರುಗುತ್ತೇವೆ ಅಷ್ಟೆ!! ಅಂತೂ ಹಿಗ್ಗಾ ಮುಗ್ಗಿ ಎಳೆದು ಒಂದು ಡೀಲ್ ಒಪ್ಪಿಕೊಳ್ಳುತ್ತೇನೆ. ಅಲ್ಲಿಗೆ ಬಿಸಿನೆಸ್ಸ್ ಮಾತು ಮುಗಿಯುತ್ತದೆ. ಸಂಜೆಯ ಡಿನ್ನರ್ ಬಗ್ಗೆ ವಿಚಾರಿಸುತ್ತಾನೆ. ’ಇಸ್ಶೋನಿ...ತಬೆರುಮಾಶೋ’ (ಒಟ್ಟಿಗೆ ಊಟ ಮಾಡೋಣ...). ’ಸಂಜೆ ೭ ಘಂಟೆಗೆ ಹೋಟೆಲ್ ಲೋಬ್ಬಿಯಲ್ಲಿ ತಯಾರಾಗಿರು. ನಾನು ಬರುತ್ತೇನೆ ’ ಎಂದು ಹೇಳಿ ಕೈ ಕುಲುಕಿ ಬೀಳ್ಕೊಡುತ್ತಾನೆ. ಸಂಜೆ ಟಾಕ್ಸಿಯಲ್ಲಿ ಬಂದು ಕರೆದುಕೊಂಡು ಹೋಗುತ್ತಾನೆ. ದಾರಿಯಲ್ಲಿ ನಿನಗೆ ಯಾವ ತರಹದ ಆಹಾರ ಇಷ್ಟ?’ ಎಂದು ವಿಚಾರಿಸುತ್ತಾನೆ. ವೆಜಿಟೇರಿಯನ್ನಾ...??? ಅಂತ ಬೇಸರಪಡುತ್ತಾನೆ. ಸೀಫುಡ್ ಆಗಬಹುದೇ? ಅಂತೆಲ್ಲಾ ವಿಚಾರಿಸುತ್ತಾನೆ. ಕೊನೆಗೂ ಯಾವುದೋ ಒಂದು ಬ್ರಹತ್ ಕಟ್ಟಡದಲ್ಲಿನ ಒಂದು ಚಿಕ್ಕ ಗೂಡಿನಂತಿರುವ ರೆಸ್ಟುರಾಂಟಿಗೆ ಕರೆದೊಯ್ಯುತ್ತಾನೆ. ಪ್ರತಿಯೊಂದು ವಿಷಯವನ್ನೂ ವಿಚಾರಿಸಿ ಬೇಕಾದ ಆಹಾರ ಆರ್ಡರ್ ಮಾಡಿ ಸೌಜನ್ಯ ತೋರುತ್ತಾನೆ. ಪರ್ಸನಲ್ ವಿಷಯ, ಅದೂ ಇದೂ ಮಾತನಾಡುತ್ತಾನೆ. ಲೀಟರುಗಟ್ಟಲೆ ಬೀರು ಹೀರುತ್ತಾನೆ. ಕೊಳವೆಯಂತೆ ಸಿಗರೇಟ್ ಹೊಗೆ ಉಗುಳುತ್ತಾನೆ. ಬಿಸಿನೆಸ್ಸ್ ಬಗ್ಗೂ ಗ್ರೈಂಡ್ ಮಾಡುತ್ತಾನೆ. ಸಾಕಷ್ಟು ಮಾಹಿತಿ ಸಂಗ್ರಹ ಮಾಡುತ್ತಾನೆ. ಭಾರತದಲ್ಲಿ ನನ್ನದೇ ಆಫೀಸಿನ ಸಹೊದ್ಯೋಗಿಯ ಮಗನ ಶಾಲೆಯ ಬಗ್ಗೆ ವಿಚಾರಿಸುತ್ತಾನೆ, ಇನ್ನೊಬ್ಬನೆ ಹೆಂಡತೆ ಹೆತ್ತಳೇ? ಎಮ್ದು ಕೇಳುತ್ತಾನೆ. ನನಗೇ ಗೊತ್ತಿರುವುದಿಲ್ಲ. ಇನ್ನೊಂದಿಬ್ಬರನ್ನು ಇಮಿಟೇಟ್ ಮಾಡಿ ನಗಾಡುತ್ತಾನೆ........... ಊಟ ಮುಗಿಸಿ ’ಕರವೋಕೆ...." ಎಂದು ಎಬ್ಬಿಸುತ್ತಾನೆ. ಇನ್ನೊಂದು ಟಾಕ್ಸಿ ಹಿಡಿದು ಗಿಂಝಾ ಪ್ರದೇಶದ ಅತ್ಯಂತ ದುಬಾರಿ ಕರವೋಕೆ ಬಾರ್ ಎದುರುಗಡೆ ಇಳಿಯುತ್ತಾನೆ. ಬಾಗಿಲಲ್ಲೇ ಬಾರ್ ಒಡತಿ ’ಮಾಮಾ ಚಾನ್’ ತನ್ನ ಹುಡುಗಿಯರ ಹಿಂಡಿನೊಂದಿಗೆ ನಮ್ಮನ್ನು ಎದುರ್ಗೊಳ್ಳುತ್ತಾಳೆ. ತರುಣಿಯರೆಲ್ಲ ಒಕ್ಕೊರಲಿನಿಂದ "ಇರಸ್ಶೇಮಸ್ಸೇ........" (ವೆಲ್ಕಮ್) ಎಂದು ಉಲಿಯುತ್ತಾರೆ. ನನ್ನನ್ನು ಪರಿಚಯಿಸುತ್ತಾನೆ. ಅವರೆಲ್ಲ ನಕ್ಕು ಪುನಃ ಬಲೆಬಾಗಿ ವಂದಿಸುತ್ತಾರೆ. ಕೈಹಿಡಿದು ಬಾರ್ ಒಳಗೆ ಕರೆದುಕೊಂಡು ಹೋಗುತ್ತಾರೆ. ನಮ್ಮ ಕೋಟುಗಳನ್ನು ಕಳಚಿ ಹ್ಯಾಂಗರ್ ತೂರಿಸಿ ಒಳಗೆ ಇಡುತ್ತಾರೆ. ಮೊದಲ ಬಾರಿಗೆ ನಾನು ಇಂತಹ ಜಾಗಕ್ಕೆ ಬಂದಾಗ ನನಗೆ ಗಾಬರಿಯಾಗಿತ್ತು. ಜಪಾನೀಯರ ಕಾಮದ ಜೀವನದ ಬಗ್ಗೆ ಸಾಕಷ್ಟು ಕೇಳಿ ತಿಳಿದಿದ್ದ ನನಗೆ ’ಇದೆಲ್ಲಿಗೆ ನನ್ನನ್ನು ಎಳೆದುಕೊಂಡು ಬಂದ?’ ಅಂತ ದಿಗಿಲಾಗಿತ್ತು. ಆದರೆ, ಕರವೋಕೆ ಬಾರಿನಲ್ಲಿ ಅಂತಹದ್ದೇನೂ ನಡೆಯುವುದಿಲ್ಲ. ಅಲ್ಲಿ ಹಿನ್ನೆಲೆ ಸಂಗೀತಕ್ಕೆ ಮೈಕ್ ಹಿಡಿದು ಹಾಡುತ್ತಾರೆ, ಕುಣಿಯುತ್ತಾರೆ, ಕಂಠಪೂರ್ತಿ ಕುಡಿಯುತ್ತಾರೆ. ಬೊಬ್ಬೆ ಹಾಕುತ್ತಾರೆ, ಸಹೊದ್ಯೋಗಿಗಳೊಡನೆ ಆಫೀಸ್ ಜಗಳಾಡುತ್ತಾರೆ - ಒಟ್ಟಿನಲ್ಲಿ, ದಿನದ ಟೆನ್ಶನ್ ಮರೆತು ಸಡಿಲಗೊಳ್ಳುತ್ತಾರೆ. ಹುಡುಗಿಯರು ನಮ್ಮ ಜೊತೆ ಇರುತ್ತಾರೆ. ಸ್ನೇಹದಿಂದ ನಮ್ಮೊಡನೆ ಸೋಫಾದಲ್ಲಿ ಅಕ್ಕ ಪಕ್ಕದಲ್ಲಿ ಕುಳಿತು ನಮಗೆ ಬೀರು, ವಿಸ್ಕಿ ಸುರಿಯುತ್ತಾರೆ, ತಾವೂ ಖುದ್ ಲೀಟರ್ಗಟ್ಟಲೆ ವಿಸ್ಕಿ ಹೀರುತ್ತಾರೆ. ಹಾಡುತ್ತಾರೆ, ಜೊತೆಗೆ ಡಾನ್ಸ್ ಮಾಡುತ್ತಾರೆ, ಡೈಸ್ ಹಾಕಿ ನಮ್ಮೊಡನೆ ಸಿಲ್ಲಿ ಸಿಲ್ಲಿ ಆಟ ಆಡುತ್ತಾರೆ. ಕಲ್ಲು-ಕತ್ತರೆ-ಕಾಗದ ಆತ ಕಲಿಸುತ್ತಾರೆ. ತಮ್ಮ ಮೈಮೇಲೆ ಹರಿಯಬಿಟ್ಟ ಕೈಗಲನ್ನು ನಯವಾಗಿ ತಿರಸ್ಕರಿಸುತ್ತಾರೆ. ನನ್ನ ಸ್ನೇಹಿತ ಕುಡಿದು ಕುಣಿದು ಸುಸ್ತಾಗುತ್ತಾನೆ. ಇನ್ನೇನು ಅಮಲೇರಿ ಬಿದ್ದೇ ಬಿಡುತ್ತಾನೆ ಅಂತ ಅನ್ನಿಸಿದಾಗ ಹತ್ತಿರ ಬಂದು ಕುಳಿತು ಮೆಲುದನಿಯಲ್ಲಿ ಮಾತನಾಡುತ್ತಾನೆ. ಬಿಸಿನೆಸ್ಸ್ ಬಗ್ಗೆ ಒಂದೆರಡು ಪ್ರಸ್ತಾಪ ಮಾಡುತ್ತಾನೆ. ಹೊಸ ಓರ್ಡರ್ ಕೊಡುತ್ತೇನೆ ಅನ್ನುತ್ತಾನೆ. ಮಾತು ತೊದಲುತ್ತಿರುತ್ತದೆ. ’ಇದೇನು ಕುಡುಕರ ಚಾಳಿ’ ಅಂತ ಕೀಳಂದಾಜಿಸುವಂತಿಲ್ಲ. ಇಲ್ಲಿ ನುಡಿದ ಪ್ರತಿಯೊಂದು ಬಿಸಿನೆಸ್ಸ್ ಮಾತು ಕೂಡಾ ಅವನ ಬುದ್ಧಿಯಲ್ಲಿ ಪ್ರಿಂಟ್ ಆಗಿರುತ್ತದೆ. ಇಲ್ಲಿ ನೋಟ್ಸ್ ತೆಗೆದುಕೊಳ್ಳುವುದಿಲ್ಲ. ಆದರೆ ಮರುದಿನ ಬೆಳಗ್ಗಿನ ಈ-ಮೈಲಿನಲ್ಲಿ ಎಲ್ಲಾ ಅಚ್ಚುಕಟ್ಟಾಗಿ ದಾಖಲಾಗಿ ಬರುತ್ತದೆ. ಜಪಾನೀಯರ ಕಾರ್ಯ ವೈಖರಿ !! ಘಂಟೆ ಹನ್ನೆರಡು ದಾಟಿರುತ್ತದೆ. ನಾನು ತೂಕಡಿಸುತ್ತಿರುತ್ತೇನೆ. ಅವನ ಕುಡಿತ-ಕುಣಿತ ಮುಗಿದಿರುವುದಿಲ್ಲ. ಕೊನೆಗೂ ಯಾವಾಗಲೋ ಬಿಲ್ ಪೇ ಮಾಡಿ, ನನ್ನ ಕೈಹಿಡಿದು ’ಲೆಟ್ಸ್ ಗೋ... ಪ್ರಸಾದ್ ಸಾನ್,’ ಅಂತ ಹೇಳುತ್ತಾನೆ. ನಾನು ಗಡಬಡಿಸೆ ಅರೆನಿದ್ದೆಯಿಂದ ಎಚ್ಚೆತ್ತು ನೋಡುತ್ತೇನೆ - ಇಲ್ಲ, ಸೂರ್ಯೋದಯವಾಗಿರುವುದಿಲ್ಲ; ಬರೇ ಒಂದು ಘಂಟೆಯಷ್ಟೆ ಆಗಿರುತ್ತದೆ! ಹುಡುಗಿಯರು ನಮ್ಮೊಡನೆ ಹೊರ ಬಂದು ಬೀಳ್ಕೊಡುತ್ತಾರೆ. ಟಾಕ್ಸಿ ಹಿಡಿದು ನಮ್ಮನ್ನು ಕೂರಿಸಿ ’ಅರಿಗತೋ...’ ಎಂದು ಉಲಿಯುತ್ತಾರೆ. ಸ್ನೇಹಿತ ತೊದಲುತ್ತಾ ಟಾಕ್ಸಿ ಡ್ರೈವರನಿಗೆ ನನ್ನ ಹೋಟೆಲ್ ಹೆಸರು ಹೇಳಿ ಬಳಿಕ ಆತನ ಮನೆ ವಿವರ ಹೇಳುತ್ತಾನೆ. ನಿಶ್ಶಬ್ದ ರಾತ್ರಿಯಲ್ಲಿ ಟಾಕ್ಸಿ ಮೌನವಾಗಿ ಹೊರಡುತ್ತದೆ. ಹೋಟೆಲ್ ತನಕ ದಾರಿಯುದ್ದಕ್ಕೂ ನಿದ್ದೆ ಹೊಡೆಯುತ್ತಾನೆ. ಹೋಟೆಲ್ ಬಂದಾಕ್ಷಣ ಗಡಬಡಿಸಿ ಎದ್ದು ನನಗೆ ’ಥಾಂಕ್ಯೂ.... ಥಾಂಕ್ಯೂ... ’ ಹೇಳಿ ಕೈಕುಲುಕುತ್ತಾನೆ. ಕೈಬೀಸಿ ’ಬೈ’ ಹೇಳುವಾಗ ಗೆಳೆಯ ಇನ್ನೊಮ್ಮೆ ತೊದಲುತ್ತಾ ನೆನಪಿಸುತ್ತಾನೆ : ಪ್ರಸಾದ್ ಸಾನ್.. ನಾಳೆ ಬೆಳಗ್ಗೆ ೪.೩೦ ಘಂಟೆಗೆ ಲೋಬ್ಬಿಯಲ್ಲಿ ಭೇಟಿಯಾಗೋಣ. ೪.೫೦ ಕ್ಕೆ ಶಿಂಕಾನ್ಸೇನ್ (ಬುಲ್ಲೆಟ್ ಟ್ರೈನ್) ನೀಗತಕ್ಕೆ ಹೋಗಲು". "ಕಸ್ಟಮರ್ ಜೊತೆ ಬಿಜಿನೆಸ್ ಮೀಟಿಂಗ್" ಅನ್ನುತ್ತಾನೆ. ಘಂಟೆ ಈಗಾಗಲೇ ಒಂದೂವರೆಯಾಗಿರುತ್ತದೆ. ಅವನ ಮನೆ ಇಲ್ಲಿಂದ ಕನಿಷ್ಟ ಒಂದು ಘಂಟೆ ದೂರವಾದರೂ, ಅವನಂತೂ ೪.೩೦ ಕ್ಕೆ ಲೋಬ್ಬಿಯಲ್ಲಿ ಬೆಳಗ್ಗೆ ನನ್ನನ್ನು ನಿರೀಕ್ಷಿಸುತ್ತಾ ಇರುತ್ತಾನೆ - ವಜ್ರದಂತೆ ಖಚಿತವಾಗಿ, ಲಿಂಬೆಯಂತೆ ಫ಼್ರೆಶ್ ಆಗಿ. ಗೆಳೆಯನನ್ನು ಹೊತ್ತ ಟಾಕ್ಸಿ ಹೊರಟುಹೋಗುತ್ತದೆ. ನನ್ನ ಮೈಯಿಡೀ ನೋಯುತ್ತಿರುತ್ತದೆ. ಕಣ್ಣುಗಳು ಭಾರವಾಗಿರುತ್ತದೆ. ’ನಾಲ್ಕೂವರೆಗೆ ಹೇಗಪ್ಪಾ ರೆಡಿಯಾಗೋದು?’ ಅಂತ ತಲೆಕೆರೆಯುತ್ತೇನೆ.
* * *
(ಪ್ರಕಟನೆ: ಕನ್ನಡ ಪ್ರಭ ಸಾಪ್ತಾಹಿಕ, ೩ ಮೇ ೨೦೦೯)

Sunday, August 23, 2009

ಏನಿದು ಕ.ಎ.ಓ ಜೀನ್ ??


ಏನಿದು, C.E.O ಜೀನ್ ??


ಟಿ.ವಿ, ಪತ್ರಿಕೆಗಳಲ್ಲೆಲ್ಲಾ ಸಾವಿರಾರು ಕೋಟಿ ಬಿಸಿನೆಸ್ ಮಾಡುವ ಉದ್ಯಮಪತಿಗಳನ್ನು ಕಾಣುತ್ತೇವೆ. ಐ.ಐ.ಎಂ ಸುಶಿಕ್ಷಿತ ಕಾರ್ಪೋರೇಟ್ C.E.O ಗಳನ್ನು ನೋಡುತ್ತೇವೆ. ಚಿಕ್ಕ ಪ್ರಾಯದಲ್ಲೇ ಕೋಟಿ ಕೋಟಿಯಲ್ಲಿ ವ್ಯವಹಾರ ನಡೆಸುವ ಕೋರ್ಪೋರೇಟ್ ನಮೂನೆಯ ಹುಡುಗ ಹುಡುಗಿಯರನ್ನು ಕಂಡು ಅಚ್ಚರಿ ಪಡುತ್ತೇವೆ. ಒಬ್ಬ ರತನ್ ಟಾಟಾ, ಒಬ್ಬ ನಾರಾಯಣ ಮೂರ್ತಿ ಇಲ್ಲವೇ ಚಂದಾ ಕೊಚ್ಚರ್ ಹೇಗೆ ಉಂಟಾಗುತ್ತಾರೆ. ಒಬ್ಬ ಅಂಬಾನಿ ಇತರರಿಗಿಂತ ಹೇಗೆ ಭಿನ್ನ? ನಾವೂ ಯಾಕೆ ಹಾಗಾಗಬಾರದು? ಅಥವಾ ನಮ್ಮ ಮಕ್ಕಳು ಹಾಗಾಗಬೇಕಾದರೆ ಏನು ಮಾಡಬೇಕು? - ಸಹಜವಾಗಿ ಕಾಡುವ ಪ್ರಶ್ನೆಗಳು. ಒಬ್ಬ ವಿಜಯಶಾಲಿ C.E.O ನ ಲಕ್ಷಣಗಳಾವುವು? ಮುಖ್ಯವಾಗಿ C.E.O ಎಂಬ ಒಂದು ‘ಜೀನ್’ ಇದೆಯೇ?
ಹಿಂದುಸ್ತಾನ್ ಲಿವರ್‌ನ ಎಂಭತ್ತರ ದಶಕದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿದ್ದ ಶುನು ಸೇನ್ ಪಟ ಪಟನೆ ಅರಳು ಹುರಿದಂತೆ ಮಾತನಾಡುತ್ತಿದ್ದರು. ಅಂಕಿ ಅಂಶಗಳನ್ನ ಲೀಲಾಜಾಲವಾಗಿ ಸ್ಮರಣಶಕ್ತಿಯ ಆಧಾರದಿಂದ ಖೋಟ್ ಮಾಡುತ್ತಿದ್ದರು. ದೇಶದ ಯಾವ ಮೂಲೆಯಲ್ಲಿ ಯಾವ ಬ್ರಾಂಡ್‌ನ ಸೋಪ್ ಎಷ್ಟು ಬಿಕರಿಯಾಗುತ್ತದೆ, ಎದುರಾಳಿಗಳ ಬ್ರಾಂಡ್ ಎಷ್ಟು ಬಿಕರಿಯಾಗುತ್ತದೆ ಎಂದು ನಿಖರವಾಗಿ ಹೇಳಬಲ್ಲವರಾಗಿದ್ದರು. ಯಾವುದೇ ಮಾಹಿತಿ/ವಿವರಗಳನ್ನು ಯಥಾವತ್ತಾಗಿ ಹೇಳುತ್ತಿದ್ದರು. ನೂರಾರು ಪುಟಗಳ ಯಾವುದೇ ರಿಪೋರ್ಟನ್ನು ಕೂಡಾ ಬರೇ ಕಣ್ಣು ಹಾಯಿಸಿ ಅದರಲ್ಲಿರುವ ಮಾಹಿತಿಯನ್ನು ಹೀರುತ್ತಿದ್ದರು. ಯಾವ ಯಾವುದೋ ಸ್ಥಳಗಳಲ್ಲಿ, ಕಾಲಗಳಲ್ಲಿ ನೋಡಿದ, ನಡೆದ ಘಟನೆಗಳನ್ನು ಕೂಡಲೇ ರಿಕಾಲ್ ಮಾಡಿ ಒಂದಕ್ಕೊಂದು ತಾಳೆ ಹಾಕುತ್ತಿದ್ದರು. ಅಂದೆಲ್ಲಾ ನಾವುಗಳು ಅವರ ಛೇಂಬರ್ ಒಳಗೆ ಹೋಗಬೇಕಾದರೆ ಸ್ಪೆಶಲ್ ತಯಾರಿ ನಡೆಸಿಯೇ ಹೋಗ ಬೇಕಾಗಿತ್ತು. ಎಲ್ಲಾದರೂ ಒಂದು ಅಂಕಿ ತಪ್ಪು ಹೇಳಿದರೂ ಅಲ್ಲೇ ಹಿಡಿಯುತ್ತಿದ್ದರು. ಯಾವಾಗಲಾದರೂ ಒಂದು ಬಾರಿ ಕೇಳಿದ, ನೋಡಿದ ಅಥವಾ ಓದಿದ ವಿಷಯ ಅಲ್ಲೇ ಮೆದುಳಲ್ಲಿ ಅಚ್ಚಾಗುತ್ತಿತ್ತು ಮತ್ತು ಬೇಕಾದಾಗ ಪಟ್ ಅಂತ ಹೊರಬರುತ್ತಿತ್ತು. ಸ್ಮರಣ ಶಕ್ತಿ ಕೂಡಾ ಇಂಟೆಲಿಜೆನ್ಸ್‌ನ ಒಂದು ಪ್ರಕಾರ. ಮತ್ತು ಅತಿ ಮುಖ್ಯದ್ದು. ಕ್ಲಪ್ತ ಸಮಯಕ್ಕೆ ಅಗತ್ಯವಿರುವ ಮಾಹಿತಿ ನೆನಪಿಗೆ ಬಂದಾಗ ಮಾತ್ರ ವಿಷಯವನ್ನು ಸರಿಯಾಗಿ ವಿಶ್ಲೇಶಿಸಿ ಸರಿಯಾದ ನಿರ್ಧಾರಕ್ಕೆ ಬರಬಹುದು. ಬಿಸಿನೆಸ್ ನಲ್ಲಿ ಸರಿಯಾದ ಮಾಹಿತಿ ಸಮಯಕ್ಕೆ ಸರಿಯಾಗಿ ಸಿಗದಿದ್ದರೆ ನಿರ್ಧಾರಕ್ಕೆ ಕೂಡಾ ಸತ್ವವಿರುವುದಿಲ್ಲ.
ಲೋಜಿಕ್, ಅಥವಾ ತರ್ಕಶಾಸ್ತ್ರ. ನಾವು ಯಾವುದನ್ನ ಬಹುತೇಕ ಇಂಟೆಲಿಜೆನ್ಸ್ ಎಂದು ಕರೆಯುತ್ತೇವೋ ಅದು ಬಿಸಿನೆಸ್‌ನಲ್ಲಿ ತರ್ಕಶಾಸ್ತ್ರದ ರೂಪದಲ್ಲಿ ಅಗತ್ಯ ಬರುತ್ತದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ಼್ ಮ್ಯಾನೇಜ್ಮೆಂಟಿನಲ್ಲಿ ಎರಡೂ ವರ್ಷ ಕೇಸ್ ಸ್ಟಡಿ ಮೂಲಕ ಹಗಲೂ ರಾತ್ರಿ ವಿಧ್ಯಾರ್ಥಿಗಳನ್ನು ಕೊರೆಯುವುದು ಲಾಜಿಕ್ ಎಂಬ ಸೂತ್ರವನ್ನು ಹಿಡಿದೇ. ಪ್ರತಿಯೊಂದು ವಾದ, ಪ್ರತಿಯೊಂದು ಯೋಜನೆ ತಾರ್ಕಿಕವಾಗಿ ಧೃಡವಾಗಿರಬೇಕು. ಇಲ್ಲದಿದ್ದರೆ ಕ್ಲಾಸಿನ ಚರ್ಚೆಯಲ್ಲಿ ಇತರರು ಅದನ್ನು ಕೊಚ್ಚಿಹಾಕಿಬಿಡುತ್ತಾರೆ. ಪ್ರಾಧ್ಯಾಪಕರು ಜೀವಂತ ನುಂಗುತ್ತಾರೆ. ಮುಂದೆ ವೃತ್ತಿ ಜೀವನದಲ್ಲೂ ಅತಾರ್ಕಿಕವಾದ ವಾದಕ್ಕೆ ಯಾವುದೇ ಬೆಲೆ ಇರುವುದಿಲ್ಲ. ತರ್ಕಬದ್ಧವಾದ ಕಾರ್ಯಯೋಜನೆಯನ್ನು ಕಾರ್ಯರೂಪಕ್ಕೆ ತರುವುದೇ ಒಬ್ಬ ಪ್ರೊಫ಼ೆಶನಲ್ ಮ್ಯಾನೇಜರ್‌ನ ಕೆಲಸ. ಒಂದು ರೀತಿಯಲ್ಲಿ ಹೇಳುವುದಾದರೆ, ಕಾರ್ಪೋರೇಟ್ ಜಗತ್ತಿನಲ್ಲಿ ಲಾಜಿಕ್ ಅನ್ನು ದೇವರಂತೆ ಪೂಜಿಸಲಾಗುತ್ತದೆ.
ಮಹಾತ್ಮಾ ಗಾಂಧಿಯವರಷ್ಟು ಶ್ರೇಷ್ಠ ಮ್ಯಾನೇಜರನ್ನು ಅಥವಾ ನಾಯಕನನ್ನು ಈ ದೇಶ ಇದುವರೆಗೆ ಕಂಡಿಲ್ಲ. ಈ ಮಾತನ್ನು ಕಾರ್ಪೋರೇಟ್ ಜಗತ್ತು ಕೂಡಾ ಒಪ್ಪುತ್ತದೆ ಎಂದರೆ ಕೆಲವರಿಗೆ ಅಚ್ಚರಿಯಾಗಬಹುದು. ಒಂದು ದೇಶವನ್ನಾಗಲಿ, ಸಮಾಜವನ್ನಾಗಲಿ ಇಲ್ಲವೇ ಒಬ್ಬ ಅಂಬಾನಿಯ ರಿಲಯನ್ಸ್ ಸಾಮ್ರಾಜ್ಯವನ್ನಾಗಲಿ, ಕಟ್ಟುವುದು ಯಾವುದೇ ದಾರ್ಶನಿಕತೆ(ವಿಶನ್)ಯಿಲ್ಲದೆ ಅಸಾಧ್ಯ. ಒಬ್ಬ ಸಿ.ಇ.ಓ ರಾಷ್ಟ್ರಪಿತನಲ್ಲದಿದ್ದರೂ ಅತನಿಗೆ ತನ್ನದೇ ಪರಿಧಿಯಲ್ಲಿ ದಾರ್ಶನಿಕತೆ ಇರಲೇ ಬೇಕಾಗುತ್ತದೆ. ವಿಶ್ವದ ಆರ್ಥಿಕತೆ, ತನ್ನ ಉದ್ಯಮದ ಭವಿಷ್ಯ, ತಾನು ಎಲ್ಲಿದ್ದೇನೆ? ಎಲ್ಲಿ ಇರಬೇಕು? ಇತ್ಯಾದಿ ದೂರದರ್ಶಿತ್ವ ಇರದವ ಸಫ಼ಲನಾಗಲಾರನು. ಮಾರ್ಟಿನ್ ಲೂಥರ್ ಕಿಂಗ್ ಅಂದ ‘ ಐ ಹಾವ್ ಅ ಡ್ರೀಮ್. . .’ ಅದೇ ಆ ವಿಶನ್, ಒಬ್ಬ ಶ್ರೇಷ್ಠ ನಾಯಕನ ಮುಖ್ಯ ಗುಣ.

ಅಷ್ಟಾದರೆ ಸಾಕೇ? ಕನಸಿನ ಅರಮನೆ, ಕನಸಿನ ಸಾಮ್ರಾಜ್ಯ !! ಇಲ್ಲ. ಆ ಕನಸನ್ನು ಸಾಕಾರಗೊಳಿಸಲು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಈ ಹಂತ ಹಂತದ ಕಟ್ಟುವಿಕೆಯಲ್ಲಿ ಬೇಕಾದದ್ದು ಪರಿಶ್ರಮ. ಪರಿಶ್ರಮ ಅಂದರೆ ‘ಕತ್ತೆ ಕೆಲಸ’ವಲ್ಲ. ಅರ್ಜುನನ ಲಕ್ಷ್ಯದೊಡಗೂಡಿದ ಪರಿಶ್ರಮ. ಲೋಂಗ್ ಅವರ್ಸ್. ನೋ ಸ್ಲೀಪ್-ನೋ ಫ಼ುಡ್, ತಿಂಗಳಿಡೀ
ಟ್ರಾವೆಲ್. . . ಇದೆಲ್ಲವನ್ನೂ ಸಹಿಸಿಕೊಂಡು ಒಂದು ತಪಸ್ಸಿನಂತೆ, ಬಿಟ್ಟ ಬಾಣದಂತೆ ಮುನ್ನುಗ್ಗಬೇಕಾಗುತ್ತದೆ. ಯಾವುದೇ ಅಡ್ಡಿ, ಅಡೆತಡೆಗಳಿಂದ ಕುಗ್ಗದೆ ಛಲದಿಂದ ಕಾರ್ಯ ಸಾಧನೆ ಮಾಡುತ್ತಾ ಹೋಗಬೇಕಾಗುತ್ತದೆ.
ತಿಂಗಳು ತಿಂಗಳು ಹಾಕಿಕೊಂಡ ಮಾಸಿಕ ಟಾರ್ಗೆಟ್ಸ್ ಸಾಧಿಸಲೇ ಬೇಕು. ಇಲ್ಲ ಎಂಬ ಪ್ರಶ್ನೆಯೇ ಇಲ್ಲ. ಇದಕ್ಕೆ, ಲಕ್ಷ್ಯ, ಪರಿಶ್ರಮವಲ್ಲದೆ ಬಹಳಷ್ಟು ಶಿಸ್ತು ಕೂಡಾ ಬೇಕು. ಭಾರತದಲ್ಲಂತೂ ಫ಼ಾಲೋ-ಅಪ್ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ನಿಮ್ಮ ಟೇಬಲ್ ಮೇಲೆ ತೆರೆದಿಟ್ಟ ಡೈರಿಯಲ್ಲಿ ಹಾಕಿಕೊಂಡ ಯೋಜನೆಯನ್ನು ಎದುರಿಗೇ ತೂಗು ಹಾಕಿದ ಗಡಿಯಾರ ಸೂಚಿಸುವ ಸಮಯ ಸಮಯಕ್ಕೂ ಟ್ರಾಕ್ ಮಾಡುತ್ತಲೇ ಇರಬೇಕಾಗುತ್ತದೆ. ನಿಯತಕಾಲಿಕ ರಿವ್ಯೂ ಶಿಸ್ತು ಇಲ್ಲದೆ ಸಾಧ್ಯವಾಗಲಾರದು. ಯಾವ ಸಾಧನೆಯನ್ನೂ ಶಿಸ್ತು ಇಲ್ಲದೆ ಸಾಧಿಸಿದವರಿಲ್ಲ.
ಗಂಟೆಗmಲೆ ದೇವರ ಪೂಜೆ ಮಾಡಿಯೇ ಆಫ಼ೀಸಿಗೆ ಹೋಗುವ ಉದ್ಯೋಗಪತಿ ಇರಬಹುದು; ನಾಸ್ತಿಕ ಸಿ.ಇ.ಓ ಇರಬಹುದು. ಮಹಾಭಾರತ ಕಟ್ಟುಕತೆ ಎಂದು ಹೇಳುವವರಿರಬಹುದು. ಆದರೆ ‘ಕರ್ಮಣ್ಯೇವಾಧಿಕಾರಸ್ತೇ॒॒’ ಅನ್ನು ತಿಳಿದೋ ತಿಳಿಯದೆಯೋ ಆಚರಿಸದ ಸಿ.ಇ.ಓ ಇರಲಾರನು. ಯಾವುದೇ ಗೆಲುವು ಬರಲಿ, ಸೋಲು ಬರಲಿ ಹಿಗ್ಗದೆ-ಕುಗ್ಗದೆ, ಭಾವುಕನಾಗದೆ ಮುಂದೆ ಮಾಡಬೇಕಾಗಿರುವ ಕೆಲಸದ ಮೇಲೆ ಮಾತ್ರ ಫ಼ೋಕಸ್ ಇಟ್ಟುಕೊಂಡು ಕೂಲ್ ಆಗಿ ವ್ಯವಹರಿಸುತ್ತಾನೆ, ಒಬ್ಬ ಸಫ಼ಲ ಉದ್ಯೋಗಪತಿ. ಹೌದು. ಒಬ್ಬ ‘ಕೂಲ್ ಡ್ಯೂಡ್’ ಆಗಿರುವುದು ಅತೀ ಅಗತ್ಯ. ಭಾವುಕತೆ ಮತ್ತು ಬಿಸಿನೆಸ್ ಕೈ-ಕೈ ಹಿಡಿದು ಎಂದೂ ವಿಹರಿಸುವುದಿಲ್ಲ. ಸದಾ ಕೂಲ್ ಮತ್ತು ಕಂಪೋಸ್ಡ್ ಆಗಿ ಸದ್ಯದ ರಿಯಲ್ ಟೈಮ್‌ನಲ್ಲಿ ಜೀವಿಸುತ್ತಾನೆ ನಮ್ಮ ಸಿ.ಇ.ಓ. ಈ ಸಾಮರ್ಥ್ಯವನ್ನು ಯಾವ ಬಿಸಿನೆಸ್ ಶಾಲೆಯಲ್ಲೂ ಹೇಳಿಕೊಡಲಾಗುವುದಿಲ್ಲ. ಇದೂ ಒಂದು ಜೀನ್..
"ಮೊನ್ನೆ ಮೊನ್ನೆ ತಾನೆ ಕಂಪೆನಿ ಸೇರ್ಕೊಂಡ, ಮಾರಾಯ್ರೆ. ಆದ್ರೆ ಏನು ಸಕತ್ ಕಾಂಟಾಕ್ಟ್ ಬೆಳೆಸ್ಕೊಂಡ ಅಂದ್ರೆ. . . ಅಬ್ಬಬ್ಬ !! ಅವ್ನಿಗೆ ಗೊತ್ತಿಲ್ದೋರೇ ಇಲ್ಲ. ನಾವು ನಾಲಕ್ಕು ವರ್ಷಗಳಿಂದ ಮಣ್ಣು ಹೊರ್ತೀವಿ. ನಮ್ಗೂ ಅಷ್ಟು ಕಾಂಟಾಕ್ಟ್ ಇಲ್ಲ." - ಈ ಡೈಲಾಗ್ ಖಂಡಿತಾ ಕೇಳಿದ್ದೀವಿ ಅಲ್ವಾ? ಯಾವ ಕೆಲಸಾನೇ ಇರ್ಲಿ. ಕಂಪೆನಿಯ ಎಲ್ಲಾ ಮೂಲೆಗಳಲ್ಲೂ ಈ ಅಸಾಮಿಗೆ ಒಬ್ಬ ಕಾಂಟಾಕ್ಟ್ ಇರ್ತಾನೆ ಮತ್ತು ಅವನು ಬಂದು ಹೆಲ್ಪ್ ಮಾಡ್ತಾನೆ. ಅಲ್ಲದೆ, ಮೇಲಿನ ಎಲ್ಲಾ ಬಾಸ್‌ಗಳ ಪ್ರಿಯ ವ್ಯಕ್ತಿಯೂ ಆಗಿರ್ತಾನೆ. ಮೇಲ್ಗಡೆ ಹೋಗಿ ಯಾವ ಪೇಪರ್ಸ್ಗೆ ಬೇಕಾದ್ರೂ ಸೈನ್ ಹಾಕಿಸ್ಕೊಂಡು ಬರ್ತಾನೆ. ಆಗದಿದ್ದವರು ‘ಚಮಚಾಗಿರಿ’ ಎಂದು ಸುಲಭವಾಗಿ ಮೂಗು ಮುರಿಯಬಹುದಾದ ಈ ಗುಣ ಈಗ ಅಫ಼ೀಶಿಯಲ್! ಹೆಸರು ‘ನೆಟ್‌ವರ್ಕಿಂಗ್’.
‘ಬಿಸಿನೆಸ್ ಸೆನ್ಸ್’, . . . ಬಹಳ ಕೇಳಿದ್ದೇವೆ. ಏನಿದು ಬಿಸಿನೆಸ್ ಸೆನ್ಸ್? ಹಾಗೊಂದು ಇದೆಯಾ? ಹೀಗೊಬ್ಬ ಸಿ.ಇ.ಓ. . . ಮುಂಬಯಿನ ನಾರಿಮನ್ ಪಾಯಿಂಟ್‌ನ ಬಹುಮಾಳಿಗೆ ಕಟ್ಟಡಗಳಲ್ಲಿ ಒಂದಾದ ಮೇಕರ್ಸ್ ಚೇಂಬರ್ಸ್‌ನ ಯಾವುದೋ ಒಂದು ಎ.ಸಿ ಕೋಣೆಯಲ್ಲಿ ಕುಳಿತುಕೊಂಡು ಕಂಪೆನಿ ಮ್ಯಾನೇಜರ್‌ಗಳ ಪ್ರೆಸೆಂಟೇಶನ್ ಆಲಿಸುತ್ತಾ ಇರುತ್ತಾನೆ. ಅವರೆಲ್ಲಾ 500 ಕೋಟಿ ರೂಪಾಯಿಗಳ ಒಂದು ಹೊಸ ಹೂಡಿಕೆಯ ಪ್ರಸ್ತಾಪವನ್ನು ಹಾಡಿ ಹೊಗಳುತ್ತಾ ಇರುತ್ತಾರೆ. ಎಲ್ಲಾ ಪಾಸಿಟಿವ್, ನಷ್ಟದ ಪ್ರಶ್ನೆಯೇ ಇಲ್ಲ. ಎಲ್ಲಾ ವಾದ ಕೇಳಿ ಸಿ.ಇ.ಓ ‘ನೋ’ ಅಂತಾನೆ. ಹೆಚ್ಚಾಗಿ ಎ.ಸಿ ಕೋಣೆಯಲ್ಲೇ ಕಾಲ ಕಳೆಯುವ ಇವನು ದೇಶದ ಯಾವುದೋ ಒಂದು ಮೂಲೆಯಲ್ಲಾಗಲಿರುವ ಪ್ರಾಜೆಕ್ಟ್‌ನ ಬಗ್ಗೆ ‘ಫ಼ರ್ಗೆಟ್ ಇಟ್’ ಅಂತಾನೆ. ಇನ್ಯಾರಿಗೋ ‘ಗೋ ಅಹೆಡ್’ ಅಂತಾನೆ. ದಿನದ ಹೆಚ್ಚಿನ ಭಾಗ ‘ಯೆಸ್-ನೋ’ ಗಳಲ್ಲೇ ಈತನ ಸಮಯ ಕಳೆಯುತ್ತದೆ. ಈ ಯೆಸ್-ನೋ ಗಳಲ್ಲೇ ಒಂದೋ ಕಂಪೆನಿ ಮುಳುಗುತ್ತದೆ ಅಥವಾ ನೆಗೆಯುತ್ತದೆ. ಅದೇ ಆ ‘ಯೆಸ್-ನೋ’ ಗಳ ಮಹತ್ವ. ಈ ಯೆಸ್-ನೋ ಹೇಗೆ ನಿರ್ಧರಿಸುತ್ತಾನೆ ಅಂದರೆ ಅದಕ್ಕೆ ಉತ್ತರ. . .’ಅದು ಆತನ ಬಿಸಿನೆಸ್ ಸೆನ್ಸ್!’ ವಿವರಣೆಗೆ ನಿಲುಕುವುದು ಕಷ್ಟ. ಅಂತಹ ಬಿಸಿನೆಸ್ ಸೆನ್ಸ್‌ನಲ್ಲಿ ಎಲ್ಲಾದರು ಒಂದು ನೋಬೆಲ್ ಪ್ರೈಜ಼್ ಇದ್ದಿದ್ದರೆ ಅದು ಖಂಡಿತವಾಗಿ ಧೀರೂಭಾಯ್ ಅಂಬಾನಿಗೆ ಸಿಗುತ್ತಿತ್ತು.

ಮರೆಯಲುಂಟೇ ಲೀಡರ್ಶಿಪ್ ಗುಣವನ್ನ? ತಾನು ಕಂಡ ಕನಸನ್ನು ನನಸಾಗಿಸುವ ದಾರಿಯಲ್ಲಿ ಇಡೀ ಕಂಪೆನಿಯೇ ನಂಬಿಕೆಯಿರಿಸಿ ಹಿಂಬಾಲಿಸುವಂತಹ ಆ ಒಂದು ನಾಯಕತ್ವದ ಶಕ್ತಿ ಇಲ್ಲದಿದ್ದರೆ ಏನೂ ಆಗುವುದಿಲ್ಲ. ಕನಸು ಕಂಡವ ತನ್ನ ಕನಸುಗಾಡಿನಲ್ಲಿ ಒಬ್ಬಂಟಿಯಾಗಿ ಅಲೆಯಬೇಕಾಗುತ್ತದೆ. ನಾಯಕತ್ವ ಅನ್ನುವುದು ಕೂಡಾ ಸ್ಪಷ್ಟ ವಿವರಣೆಗೆ ನಿಲುಕದ ಪರಿಕಲ್ಪನೆ. ವಿವರಣೆ ಕಷ್ಟ, ಆದರೆ ನಮಗೆಲ್ಲಾ ಗೊತ್ತಿದೆ, ಅದು ಅಲ್ಲಿ ಇದೆ! ಇಟ್ ಈಸ್ ದೇರ್. . . !
ಈ ಎಲ್ಲಾ ಗುಣಲಕ್ಷಣಗಳೂ ಒಂದೇ ರೀತಿಯಾಗಿ ಎಲ್ಲಾ ಸಮಯ ಅಗತ್ಯ ಬೀಳುವುದಿಲ್ಲ. ಮ್ಯಾನೇಜ್ಮೆಂಟಿನ ಬೇರೆ ಬೇರೆ ಸ್ತರಗಳಲ್ಲಿ ಬೇರೆ ಬೇರೆ ಲಕ್ಷಣಗಳು ಅವಶ್ಯವಾಗುತ್ತವೆ. ಉದಾಹರಣೆಗಾಗಿ, ಕೆಳಗಿನ ಸ್ತರಗಳಲ್ಲಿ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ, ನಿರ್ವಹಿಸುವ ಗುಣಗಳು ಮುಖ್ಯವಾದರೆ ಕಾರ್ಪೋರೇಟ್ ಏಣಿಯಲ್ಲಿ ಮೇಲೇರಿದಂತೆಲ್ಲಾ ಬಿಸಿನೆಸ್ ಸೆನ್ಸ್,
ದೂರದರ್ಶಿತ್ವ, ನಾಯಕತ್ವ ಇತ್ಯಾದಿ ಗುಣಗಳು ಮುಖ್ಯವಾಗುತ್ತವೆ. ಈ ರೀತಿ ಕೆಲಸವನ್ನು ಹೊಂದಿಕೊಂಡು ಬೇರೆ ಬೇರೆ ಅಧಿಕಾರದ ಮಟ್ಟಗಳಲ್ಲಿ ಬೇರೆ ಬೇರೆ ಗುಣಲಕ್ಷಣಗಳು ಬೇರೆ ಬೇರೆ ಪ್ರಮಾಣದಲ್ಲಿ ಅಗತ್ಯ ಬೀಳುತ್ತದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ಼್ ಮ್ಯಾನೇಜ್ಮೆಂಟ್ ಆಗಲಿ, ಇತರ ಯಾವುದೇ ಪ್ರತಿಷ್ಠಿತ ಎಂ.ಬಿ.ಎ
ಕಲಿಸುವ ವಿಶ್ವವಿದ್ಯಾಲಯಗಳಾಗಲ್ಲಿ; ಸ್ವಲ್ಪಮಟ್ಟಿಗೆ ಲಾಜಿಕ್ ಒಂದು ಹೊರತುಪಡಿಸಿ, ಈ ಗುಣಗಳನ್ನು ಕಲಿಸುವುದೇ ಇಲ್ಲ. ಬದಲಾಗಿ, ಅಂತಹ ಗುಣಗಳು ಇರುವಂತಹ ವಿದ್ಯಾರ್ಥಿಗಳನ್ನೇ ಕೋರ್ಸಿಗೆ ಆಯ್ದುಕೊಳ್ಳುವ ಪ್ರಕ್ರಿಯೆಯನ್ನು ಪ್ರವೇಶ ಪರೀಕ್ಷೆಗಳ ಮೂಲಕ ನಡೆಸುತ್ತವೆ. ಅನಂತರ ಅಂತಹ ವಿದ್ಯಾರ್ಥಿಗಳಿಗೆ ಸಮರ್ಥವಾಗಿ ಉದ್ಯಮ ನಿರ್ವಹಿಸಲು ಬೇಕಾದ ಫ಼ೈನಾನ್ಸ್, ಮಾರ್ಕೆಟಿಂಗ್ ಇತ್ಯಾದಿ ವಿಷಯಗಳ ಬಗೆಗಿನ ರೀತಿ ನೀತಿಗಳನ್ನೂ, ಸೂತ್ರ-ತಂತ್ರಗಳನ್ನೂ, ಟೂಲ್ಸ್ ಐನ್ಡ್ ಟೆಕ್ನಿಕ್ಸ್‌ಗಳನ್ನೂ ಡ್ರಿಲ್ ಮಾಡುತ್ತಾರೆ.
ಮೂಲಭೂತ ಬಿಸಿನೆಸ್ ಸಾಮರ್ಥ್ಯ ಹೊಂದಿದ, ಯಾವುದೇ ವಿಶೇಷ ಡಿಗ್ರಿಗಳಿಲ್ಲದ ಕರ್ಸನ್ ಭಾಯ್ ಪಟೇಲ್ ಗಳು, ಅಂಬಾನಿಗಳು, ಸಿಂಧಿ, ಗುಜರಾತಿ, ಮಾರ್ವಾಡಿಗಳು ಹೇಗೆ ಸಫಲರಾಗುತ್ತಾರೆ ಅಲ್ಲದೆ ಐ.ಐ.ಎಂ ನಂತಹ ಡಿಗ್ರಿ ಇದ್ದರೂ ಜೀವನಪರ್ಯಂತ ಮಧ್ಯಮ ಮಟ್ಟದ ಮ್ಯಾನೇಜ್ಮೆಂಟಿನ ಹುದ್ದೆಗಳಲ್ಲೇ ಕಾಲಕಳೆದು ಒಬ್ಬ ಉತ್ತಮ ಉದ್ಯಮಪತಿಯಾಗಲು ಹೇಗೆ ವಿಫಲರಾಗುತ್ತಾರೆ ಎಂಬುದನ್ನು ಇದರಿಂದ ನಾವು ಅರ್ಥೈಸಬಹುದು. ವ್ಯಕ್ತಿಗತವಾಗಿ ಇರುವ ‘ಗುಣಲಕ್ಷಣಗಳು’ ಮೂಲಭೂತವಾಗಿಯೂ, ಡಿಗ್ರಿದತ್ತವಾಗಿ ಬಂದ ‘ಟೂಲ್ಸ್ ಐನ್ಡ್ ಟೆಕ್ನಿಕ್ಸ್’ ಗಳು ಪೂರಕವಾಗಿಯೂ ಪಾತ್ರವಹಿಸುತ್ತವೆ.
ಇವೆರಡರ ಮಿಶ್ರಿತ ಅಂತಿಮ ಫಲವೇ ಒಬ್ಬ ಉದ್ಯಮಪತಿಯ ಸಫಲತೆಯನ್ನು ನಿರ್ಣಯಿಸುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಈ ಸತ್ಯವನ್ನು ಮನಗಂಡು ತಮ್ಮ ನೇಮಕಾತಿ, ತರಬೇತಿ ಮತ್ತು ‘ಎಪ್ರೈಸಲ್’ಗಳನ್ನು ಹೆಚ್ಚು ಹೆಚ್ಚು ‘ಮೂಲಭೂತ ಗುಣಲಕ್ಷಣ’ಗಳ ಮೇಲೆ ನಡೆಸತೊಡಗಿದ್ದಾರೆ. ಹೊಸ ನೇಮಕಾತಿಯ ಸಂದರ್ಭದಲ್ಲಿ ಅಂಕಗಳಿಗಿಂತ ಸಿ.ಇ.ಓ ಜೀನ್‌ಗಾಗಿ ಹುಡುಕಾಡುತ್ತಾರೆ. ಪರ್ಫ಼ೋರ್ಮನ್ಸ್ ಮೇಲೆ ಬಡ್ತಿ ಕೊಡುವುದು ಬಹುತೇಕ ನಿಂತೇ ಹೋಗಿದೆ. ಮೇಲಿನ ಹುದ್ದೆಗೆ ಬೇಕಾದ ‘ಗುಣಲಕ್ಷಣಗಳು’ ಇವೆಯೋ ಎಂದು ಮ್ಯಾಪ್ಪಿಂಗ್ ಮಾಡಿಯೇ ಬಡ್ತಿಯ ಬಗ್ಗೆ ನಿರ್ಧರಿಸುತ್ತಾರೆ. ಇದು ಕಾರ್ಪೋರೇಟ್ ಜಗತ್ತಿನ ಬಹಳ ಇತ್ತೀಚೆಗಿನ ಬೆಳವಣಿಗೆ.
ಈಗ ಮಿಲಿಯನ್ ಡಾಲರ್ ಪ್ರಶ್ನೆ: ‘ಇವೆಲ್ಲ ಹುಟ್ಟಿನಿಂದ ಮಾತ್ರವೇ ಬರುವಂತಹದ್ದಾ? ಅಲ್ಲ ಸಾಧನೆಯಿಂದ ಬೆಳೆಸಿಕೊಳ್ಳುವಂತಹದ್ದಾ?’ ಎರಡೂ ಹೌದು! ಬಹಳಷ್ಟು ಮಟ್ಟಿಗೆ ಇದು ಜನ್ಮಗತವಾಗಿ ಬರುವಂತಹ ಗುಣಲಕ್ಷಣಗಳೇ. ಆದರೂ ಸಾಕಷ್ಟು ಸಮಯ ವಿನಿಯೋಗಿಸಿದಲ್ಲಿ ಪ್ರಯತ್ನದಿಂದ, ಸಾಧನೆಯಿಂದ ಇವುಗಳ ಅಭಿವೃದ್ಧಿ ಖಂಡಿತಾ ಸಾಧ್ಯ. ಸಾಧನೆಯಿಂದ ಯಾವ ನಿಯಮವನ್ನು ಕೂಡಾ ಮೀರಿ ಬೆಳೆಯಬಹುದು. ಅಲ್ಲವೆ? ಆದರೆ, ಆದಷ್ಟು ಬೇಗ ಶುರು ಮಾಡಿದಷ್ಟು ಒಳ್ಳೆಯದು ಯಾಕೆಂದರೆ ಈ ಗುಣಗಳ ಬೆಳವಣಿಗೆಗೆ ಸಾಕಷ್ಟು ಸಮಯ ತಗಲುತ್ತದೆ.

Sunday, December 7, 2008

’ಗುಲಾಬಿ ಕತೆ - ಉತ್ತರ ಕಾಂಡ’


- ಜಯದೇವ ಪ್ರಸಾದ


ದಿನವಿಡೀ ಆಫ಼ೀಸಿನಲ್ಲಿ ಬಾಸ್ ನಿಂದ ಉಗಿಸಿಕೊಂಡು ’ಒಂದು ಚೋಟಾ ಸಾ ಬ್ರೇಕ್ ಕೇ ಬಾದ್’ ಸಲುವ ನೈಟ್ ಶಿಫ಼್ಟ್ ನಲ್ಲಿ ಪುನಃ ಉಗಿಸಿಕೊಳ್ಳಲು ಮನೆಗೆ ಬಂದಾಗ ಬಾಗಿಲಲ್ಲೇ ಮುದ್ದಿನ ಮಡದಿ ಸ್ವಾಗತಕ್ಕಾಗಿ ಕಾದು ನಿಂತದ್ದನ್ನು ಕಂಡು "ಆಹಾ... ಏನಾಶ್ಚರ್ಯವೋ....!?" ಅಂದು ಕೊಂಡೆ. ಈ ರೀತಿ ಬಾಗಿಲಲ್ಲೇ ಭಾಗ್ಯಲಕ್ಷ್ಮಿಯ ಭಾಗ್ಯದರ್ಶನವನ್ನು ಯಾವ ಪತಿ ತಾನೇ ಬಯಸಲಾರ?
"ಹಾಯ್..." ಸ್ವೀಟಾಗಿ ನಕ್ಕಳು "ಹೌ ವಾಸ್ ದ ಡೇ ?"
’ಏನೋ ಎಡವಟ್ಟಾಗಿದೆ ಗುರೂ, ಎಲ್ಲಾ ಒಳ್ಳೆ ರೂಲ್ ಬುಕ್ ತರಾ ನಡೀತಾ ಇದೆ’ ಅಂತ ವೈರಸ್ ಸ್ಕಾನ್ ವಾರ್ನಿಂಗ್ ಕೊಟ್ಟರೂ, ಮುಂಬರುವ ಮಧುರ ಕ್ಷಣಗಳ ಕಲ್ಪನೆಯಲ್ಲಿ ಅರೆಕ್ಷಣ ಮೈಮರೆತೆ.
’ಇದೇನ್ರೀ....’ ಅಂತ ಮಾದಕ ಮೊಗದಿಂದ ಇನ್ನೊಮ್ಮೆ ನಶೆ ಹತ್ತಿಸಿದಳು. ಸೆರಗಿನ ಹಿಂದಿನಿಂದ ಪತ್ರಿಕೆ ಮುಂದೆ ಮಾಡಿದಳು. ತಲೆಯೊಳಗೆ ವೈರಿಸ್ಕಾನ್ ’ಫ಼ೇಟಲ್ ಎರರ್’ ಮೆಸ್ಸೇಜನ್ನು ಹೂಟರ್ ಸದ್ದಿನೊಡನೆ ಮೂಡಿಸಿತು. ನನಗೂ ಈ ಗಂಡನ ಪೋಸ್ಟಿನಲ್ಲಿ ಇಪ್ಪತ್ತು ವರ್ಷ ಸರ್ವಿಸ್ ಆಗಿಲ್ಲವೇ? ’ಇದು ಖಂಡಿತಾ ಏನೋ ಡೇಂಜರ್ ಸಿಗ್ನಲ್...’ ಅಂತ ಗೊತ್ತಾಯ್ತು. ಆದರೂ ಕೂಲಾಗಿ ಉತ್ತರಿಸಿದೆ "ಓ ಇದಾ, ಇದು ತರಂಗ...., ವಾರಪತ್ರಿಕೆ’
"ಹ್ಹ....ಹ್ಹ.... ಅದ್ಸರಿ....ಆದರೆ ಇದರಲ್ಲಿ ಒಂದು ಗುಲಾಬೀ ಕತೆ ಬರೆದವರು ಯಾರೂ..?" ಉಪಾಯದಿಂದ ಮಗುವಿನ ಬಾಯಿಂದ ಚೋಕ್ಲೇಟ್ ತೆಗೆಯುವ ಸ್ವರ.
’ಆಹಾ, .....ವಿರೋಧಾಭಾಸ ಅಲಂಕಾರ !!!! ಮುಂಬರುವ ಮಹಾಯುದ್ಧಕ್ಕೆ ಮುನ್ನ ಶಾಂತಿಯ ಮಧುರವಾದ ಪೀಠಿಕೆ! ಇರ್ಲಿ, ಅಂದ್ರೆ ನಾನು ಕಳಿಸಿದ ಹಾಸ್ಯ ರಸಾಯನ ಈಗ ಪ್ರಕಟವಾಗಿದೆ. ಅದನ್ನು ಓದಿ ಇಲ್ಲಿ ಅಪಾರ್ಥ ಮಾಡಿಕೊಂಡೂ ಆಗಿದೆ. ಸಂತೋಷವಾದರೂ ಅನುಭವಿಸುವ ಹಾಗಿಲ್ಲವಲ್ಲ - ಎದುರಿಗೆ ಯಾವ ಕ್ಷಣದಲ್ಲೂ ಸಿಡಿಯಬಹುದಾದ ಬಾಂಬ್..! ಈಗ ತಾನೇ ಹುಟ್ಟಿದ ಹಾಸ್ಯ ಸಾಹಿತಿಯ ಹುಟ್ಟಡಗಿಸುವಂತಹ ಭಯೋತ್ಪಾದನೆ !! ನನ್ನ ಪ್ರಥಮ ವಿಮರ್ಶೆ ಇದೀಗ ಸ್ಪೋಟಿಸಲಿದೆ
"ಗುಲಾಬಿ? ಎಂತ ಗುಲಾಬಿ?" ಎಲ್ಲಾ ಗಂಡಂದಿರು ತಲೆತಲಾಂತರದಿಂದ ಮಾಡುತ್ತಿರುವ ಗಂಡಾಂತರದ ಕೆಲಸ ಮಾಡೇ ಬಿಟ್ಟೆ; ಅಂದರೆ - ಸುಳ್ಳಿನ ಸೃಷ್ಟಿ!
"ಓಹ್.., ಈ ಜಯದೇವ ಪ್ರಸಾದ್ ಅಂದ್ರೆ ನೀವೇ ತಾನೇ?" (ಸಿಡಿಯಲಿಲ್ಲ..ಈಗ ಸಿಡಿಯುತ್ತೆ.)
"ಇರ್ಲೇ ಬೇಕು, ಯಾಕಂದ್ರೆ ಆ ಮೋಡೆಲ್ನಲ್ಲಿ ಒಂದೇ ಪೀಸ್ ಅವ್ನು ಸೃಷ್ಟಿ ಮಾಡಿರೋದು , ಆದ್ರೆ ಏನದು ಗುಲಾಬಿ ಕತೆ?" (ಈಗ ಖಂಡಿತ ಸಿಡಿಯುತ್ತೆ.)
"ಮಾನ ಹರಾಜು ಹಾಕಿದ್ದೀರಲ್ರೀ ಮಾರಾಯ್ರೇ....?" ಪತ್ನಿ ಅಬ್ಬರಿಸಿದಳು. (ಯಿಪ್ಪೀ.....ಸಿಡಿಯಿತು.....ನಾನು ಹೇಳ್ಲಿಲ್ವಾ? ಈಗ ಸಿಡೀತದೆ ಅಂತ.....) "ನಿಮಗೆ ಇಲ್ಲ ಅಂತ ಇದ್ದವರದ್ದು ತೆಗ್ದು ಬಿಡೋದಾ?"
ಒಂದು ಕೈ ಸೊಂಟದ ಮೇಲೆ ಏರಿ ತರಂಗ ಹಿಡಿದ ಇನ್ನೊಂದು ಕೈ ಫರಫರನೆ ಮೇಲೆ ಕೆಳಗೆ ಕುಣಿಯತೊಡಗಿತು. ಒಂದಾನೊಂದು ಕಾಲದಲ್ಲಿ ಈ ಕೈ ಕುಣಿತದ ಫ಼್ರೀಕ್ವೆನ್ಸಿಯನ್ನು ’ಸೈಕಲ್ಸ್ ಪರ್ ಸೆಕೆಂಡ್’ ಮಾಪದಲ್ಲಿ ಅಳೆಯುತ್ತಿದ್ದೆ. ಕಾಲ ಕ್ರಮೇಣ ಪ್ರೊಮೋಷನ್ ಆಗ್ತಾ ಆಗ್ತಾ ಅದನ್ನ ’ಬಸಸ್ ಪರ್ ಸೆಕೆಂಡ್’ ಆಮೇಲೆ ’ಕಾರ್ಸ್ ಪರ್ ಸೆಕೆಂಡ್’ ಹಾಗೂ ಇತ್ತೀಚೆಗೆ ’ಆರೋಪ್ಲೇನ್ಸ್ ಪರ್ ಸೆಕಂಡ್’ ಸ್ಕೇಲಿನಲ್ಲಿ ಅಳತೆ ಮಾಡತೊಡಗಿದ್ದೆ. (ಮನೋರಂಜನೆಗಾಗಿ ಗಣಿತ!) ಇವತ್ತಂತೂ ’ರಾಕೆಟ್ಸ್ ಪರ್ ಸೆಕೆಂಡ್’ ಸ್ಪೀಡಿನಲ್ಲಿ ಕೈ ಮೇಲೆ ಕೆಳಗೆ ಹಾರುತ್ತಿತ್ತು. ಅಧರಗಳು ಅದುರುತ್ತಿದ್ದವು. ಕಣ್ಣುಗಳು ಕಂಜಂಕ್ಟಿವೈಟಿಸ್ ಥರಾ ಕೆಂಪಾಗತೊಡಗಿದವು. ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆ ಬೀಳಲಾರಂಭಿಸಿತು. ಅಂತೂ ಪಶ್ಚಿಮ ಕರಾವಳಿಗೆ ತ್ಸುನಾಮಿ ಅಪ್ಪಳಿಸಿತು !
ಎದುರು ಭೋರ್ಗರೆಯುವ ಕಡಲು. ಹೇಗೋ ಈಜಿಕೊಂಡು ಬಾಗಿಲಿನಿಂದ ಡ್ರಾಯಿಂಗ್ ರೂಮಿಗೆ ಬಂದು ತಲಪಿದೆ. ಸೋಫ಼ಾದೆಡೆ ಹೋಗಿ ಅದರಲ್ಲಿ ನನ್ನ ’ತಷ್ರೀಫ಼್’ ಇರಿಸಿ, ಮೊತ್ತ ಮೊದಲು ಮನೆಯಲ್ಲಿ ಮಕ್ಕಳು ಇದ್ದಾರೆಯೇ ಎಂದು ಕಣ್ಣಾಡಿಸಿದೆ. ಮುಂದೆ ಶೂನ್ಯಕ್ಕೆ ಔಟ್ ಆಗುವ ಆಟಗಾರರೂ ಕೂಡಾ ಕ್ರೀಸಿಗೆ ಬಂದು ಮೈದಾನಿನಲ್ಲಿ ಯಾರೆಲ್ಲ ಫ಼ೀಲ್ಡರ್ಸ್ ಎಲ್ಲೆಲ್ಲಿ ಇದ್ದಾರೆ ಅಂತ ಶ್ರೀಮದ್ಗಾಂಭೀರ್ಯದಿಂದ ಒಮ್ಮೆ ದಿವ್ಯ ಅವಲೋಕನ ಮಾಡುವುದನ್ನು ತಾವೆಲ್ಲ ನೋಡಿದವರೇ ಆಗಿದ್ದೀರಿ. ಮಕ್ಕಳು ಯಾರೂ ಮನೆಯಲ್ಲಿ ಇದ್ದಂತಿರಲಿಲ್ಲ. ಸರಿ. ಗೆಜ್ಜೆ ಕಟ್ಟಿದರೆ ಕುಣಿಯಲೇ ಬೇಕು. ಪ್ಯಾಡ್ ಕಟ್ಟಿದರೆ ಆಡಲೇ ಬೇಕು. ಬ್ಯಾಟನ್ನು ಕ್ರೀಸಿನಲ್ಲಿರಿಸಿ ಮುಂಬರುವ ಬೌನ್ಸರಿಗಾಗಿ ಕಾದೆ. ಬಾಗಿಲಿನಿಂದ ಸೋಫ಼ಾದವರೆಗೆ ’ಅಕ್ರಂ’ನಂತೆ ಆಕ್ರಮಣ ಮಾಡಲು ಬುಸುಗುಟ್ಟುತ್ತಾ ಬಂದಳು. ಈ ’ಅಕ್ರಂ’ ನನ್ನು ’ಸಕ್ರಂ’ ಮಾಡುವುದು ಹೇಗಪ್ಪಾ ಅಂತ ಬ್ಯಾಟಿನಿಂದ ನೆಲಕುಟ್ಟುತ್ತಾ ಕಾದು ಕುಳಿತೆ...........
"ಇದೆಲ್ಲಾ ಪ್ರೈವೇಟ್ ವಿಷ್ಯ ಯಾಕ್ರೀ ತರಂಗಕ್ಕೆ ಬರೆದು ಕಳಿಸಿದ್ದು? ತಲೆ ಎತ್ತಿ ತಿರುಗುವ ಹಾಗಿಲ್ಲ ಇನ್ನು. ತಂಗಿಗೆ ಹ್ಯಾಗ್ರೀ ಮುಖ ತೋರಿಸುವುದು?"
ಒಹ್.. ತಲೆ ಎತ್ತಿ ತಿರುಗುವ ಹಾಗಿಲ್ಲವಂತೆ! ಅವಳು ತಲೆ ಎತ್ತದೆ ಗರಗರ ತಿರುಗುವುದನ್ನೂ, ತಂಗಿಗೆ ಇನ್ನು ಮುಂದೆ ಮುಖ ತೋರಿಸದೆ ಬೆನ್ನು ತೋರಿಸಿಯೇ ಮಾತನಾಡುವುದು... ಇತ್ಯಾದಿಗಳನ್ನು ಮನಸ್ಸಿನಲ್ಲಿ ಕಲ್ಪಿಸುತ್ತಾ ತಣ್ಣನೆ ಕುಳಿತೆ. ಸಚಿನ್ ಕೂಡ ಹೀಗೆ ಬೌನ್ಸರಿಗೆ ತಲೆ ಕಡಿಸಿಕೊಳ್ಳದೆ ತಣ್ಣನೆ ಕೂರುವುದನ್ನು ನೀವು ನೋಡಿರಲೇ ಬೇಕು.
"ತಂಗಿ ಬಿಡೋದಿಲ್ಲ ಈಗ. ನನ್ನ ಕೊಲ್ತಾಳೆ....ನಾನು ಆ ಗುಲಾಬಿ ಗಿಡಕ್ಕೆ ಮಾಡಿದ ರಾಜಕೀಯ ಎಲ್ಲಾ ಈಗ ನೀವು ಪಬ್ಲಿಕ್ ಮಾಡಿ...ಅಯ್ಯೋ, ರಾಮ! ಈಗ ಏನು ಮಾಡೋದು ಅಂತ?........"
ಸಂಬಳ ಕೊಡುವ ಬಾಸು ಕೂಡಾ ಡೇ ಶಿಫ಼್ಟಿನಲ್ಲಿ ಇಷ್ಟು ಒತ್ತಡ ಹಾಕಿರಲಿಲ್ಲ. ಯಾಕಪ್ಪಾ ಬರೆದೆ? ಈ ಗು-ಲಾಬಾಯಣದಿಂದ ಈಗ ನಷ್ಟವೇ ಹೊರತು ಯಾವುದೇ ಲಾಭವಾಗುವ ಸೂಚನೆ ಕಾಣಲಿಲ್ಲ. ಈ ರಾದ್ಧಾಂತವನ್ನು ಹೇಗಾದರೂ ರದ್ದು/ಅಂತ ಮಾಡಿದರೆ ಸಾಕಿತ್ತು. ಇದೇ ಟಾಪಿಕ್ಕಿನಲ್ಲಿ ಪಿ. ಹೆಚ್ಚು. ಡಿ ಮಾಡುವ ಐಡಿಯಾ ನನಗೆ ಖಂಡಿತವಾಗಿಯೂ ಇಲ್ಲ. ಈಗ ಏನಪ್ಪಾ ಮಾಡುವುದು?..........
ರೀ....ಸ್ವಾಮೇ...ಓದುಗರೇ.., ಆರಾಮದಲ್ಲಿ ಕೂತ್ಕೊಂಡು ತರಂಗ ಓದ್ತಾ ಹಲ್ಲು ಕಿಸೀತಾ ಇದ್ದೀರಲ್ಲಾ? ನೀವೇನು ಗಂಡ್ಸಾ? ಅಲ್ಲ ಹೆಂಗ್ಸಾ? ಹೆಂಗ್ಸು ಆಗಿದ್ದರೆ ಪರ್ವಾ ಇಲ್ಲ. ಸಕತ್ ಎಂಜಾಯ್ ಮಾಡಿ. ಅಕಸ್ಮಾತ್ತಾಗಿ ಗಂಡಸಾಗಿದ್ದರೆ, ನಿಮಗೆಲ್ಲಾದರೂ ಅಕಾಸ್ಮಾತಾಗಿ ಮದ್ವೆ ಆಗಿದ್ಯೇ? ಆಗಿದ್ರೆ ನೀವು ನನ್ನ ಪರಿಸ್ಥಿತಿ ನೋಡಿ ನಗೋ ಹಾಗಿಲ್ಲ. ನಾವೆಲ್ಲ ಒಟ್ಟಾಗಬೇಕು. ಒಂದು ಫ಼ಾರಂ ಕೊಡ್ತೀನಿ, ಅದನ್ನ ಫ಼ಿಲ್-ಅಪ್ ಮಾಡಿ ಕೊಡಿ ನಾವೆಲ್ಲ ಒಂದು ಅಸೋಸಿಯೇಶನ್ ಫ಼ಾರಂ ಮಾಡೋಣ. ಈ ಘರ್ ಘರ್ ಕಿ ಕಹಾನಿಯ ನಿಜ ಸ್ವರೂಪವನ್ನು ಹೊರಗೆ ತರೋಣ. ಸರ್ಖಾರದ ಕಣ್ಣೋಪನ್ ಮಾಡಿ ’ಡೊಮೆಸ್ಟಿಕ್ ವೈಲೆಂಸ್ ಆಕ್ಟ್’ ಅನ್ನು ತಿದ್ದುಪಡಿ ಮಾಡಿಸ್ಬೇಕು. ಗಂಡಸರು ಹೆಂಗಸರ ಮೇಲೆ ಮಾಡೋ ದೌರ್ಜನ್ಯ ಅಲ್ಲದೆ ಹೆಂಗಸರು ಗಂಡಸರ ಮೇಲೆ ಮಾಡೋ ದೌರ್ಜನ್ಯ ಕೂಡಾ ಅದರ ವ್ಯಾಪ್ತಿಯೊಳಗೆ ಬರೋ ಹಾಗೆ ಮಾಡ್ಬೇಕು. ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣವೇ ಇಷ್ಟೆಲ್ಲಾ ಪ್ರಾಬ್ಲೆಂ........ಅದೇನೇ ಇರ್ಲಿ, ಸದ್ಯಕ್ಕೆ ಈ ಗುಲಾಬಿ ಪುರಾಣಕ್ಕೆ ಒಂದು ಪರಿಹಾರ ಸಿಕ್ರೆ ಸಾಕು. ಹಿಂದಿನ ಕಾಲದಲ್ಲಿ ಆಗಿದ್ರೆ ಇಂತಹ ಸಂದರ್ಭಗಳಲ್ಲಿ ಹೆಂಡತಿಗೆ ಒಂದು ಹಾರ ತಂದು ಕೊಡೋ ಮೂಲಕ ಪರಿಹಾರ ಕಂಡುಕೋಬಹುದಿತ್ತು. ಅಥವಾ ನೀರೆಗೊಂದು ಸೀರೆ.., ಇನ್ನೂ ಒಂದು ಸನಾತನ ಐಟಂ ಅಂದ್ರೆ ಮಲ್ಲಿಗೆ. ಈಗಿನ್ ಕಾಲದಲ್ಲಿ ಅದ್ಯಾವ್ದೂ ವರ್ಕ್ ಅಗೋದಿಲ್ಲ ಸ್ವಾಮಿ! ಇಂಟರ್ನೆಟ್ಟಿನಲ್ಲಿ ಹುಡ್ಕಿದ್ರೂ ಹೊಸಾ ಟೆಕ್ನಿಕ್ ಏನೂ ಕಾಣ್ಸೋದೇ ಇಲ್ಲ. ಅಲ್ಲಿ ಏನಿದ್ರೂ ಈಗಿನ ಜನರೇಶನ್ನಿಗೆ ಬೇಕಾಗಿರೋ ಡೇಟಿಂಗ್, ಚಾಟಿಂಗ್, ರೋಮಾನ್ಸ್ ಅಷ್ಟೇ.. ಇನ್ನೊಂದು ಹತ್ತು ವರ್ಷ ಬೇಕು ಅದ್ರಲ್ಲಿ ಮ್ಯಾರೇಜು, ಗ್ಯಾರೇಜು ಅಂತ ರೆಪೇರಿ ಕೆಲ್ಸಕ್ಕೆ ಐಡಿಯಾ ಕೊಡೋಕೆ........... ಮೊಬೈಲ್ ರಿಂಗ್ ಆಗ್ತಾ ಇದೆ. ಎಕ್ಸ್ಕ್ಯೂಸ್ ಮಿ..., ನೀವು ಸ್ವಲ್ಪ ಓದ್ತಾ ಇರಿ ನಾನು ಫೋನ್ ಅಟ್ಟೆಂಡ್ ಮಾಡ್ತೀನಿ.
ಮೊಬೈಲ್ ಫಲಕ ಬೆಳಗುತ್ತಾ ಇದೆ. "ಸರಿತ ಕಾಲಿಂಗ್..." ಅಯ್ಯೋ, ಸರಿತ...ಅವಳ ತಂಗಿ !!
"ಹಲೋ...,"
"ಹಲೋ ಭಾವ, ಹೇಗಿದೆ ಅಲ್ಲಿ ಹವಾಮಾನ?"
ಹವಾನೂ ಹೋಗಿದೆ ಮಾನಾನೂ ಹೋಗಿದೆ. ಆದ್ರೆ ಹೇಗೆ ಹೇಳೋದು ಅನ್ನಿಸ್ತು. ಹೆಂಡ್ತಿ ಅಲ್ಲೇ ನಿಂತಿದಾಳಲ್ಲ?
"ಯೆಸ್ ಸರ್.., ಫ಼ೈನ್ ಸರ್..." ಎನ್ನುತ್ತಾ ಹೊರಗೋಡಿದೆ. ಸಿಗ್ನಲ್ ವೀಕ್ ಎಂಬಂತೆ.
"ಇದೇನು ಭಾವ? ಸರ್ ಗಿರ್ ಅಂತೀರಾ? ಅಕ್ಕ ಅಲ್ಲೇ ಇದ್ದಾಳಾ?"
"ಹೌದಮ್ಮ ... ಸರ್ ಈಗ ಗಿರ್ ಎನ್ನುತ್ತೆ."
"ಛೆ, ಛೆ ಅಲ್ವೆ ಮತ್ತೆ? ಮತ್ಯಾಕೆ ಬೇಕಿತ್ತು ಈ ಕೆಲ್ಸ? ಗುಲಾಬಿಗೆ ಕೈ ಹಾಕಿದ್ರೆ ಮುಳ್ಳು ಚುಚ್ಚದೆ ಇರುತ್ಯೇ? ಹೇಗಿದೆ ಟ್ರೀಟ್ಮೆಂಟ್ ಇವತ್ತು? ’ನಾನು ನೋಡೋ’ ಕೇಸಾ? ಅಂದ್ರೆ ’ಐ.ಸಿ.ಯು’ ಕೇಸಾ?"
"ಗೋನ್ ಕೇಸೇ ಅಂತ ಕಾಣತ್ತೆ."
"ಹ್ಹ ಹ್ಹ ಹ್ಹ ... ಅಕ್ಕನತ್ರ ಸ್ವಲ್ಪ ನಾನು ಮಾತಾಡ್ಲಾ? ಸ್ವಲ್ಪ ಒಗ್ಗರಣೆ ಹಾಕ್ತೀನಿ...."
"ಅಯ್ಯೋ.., ಬೇಡ ದಮ್ಮಯ್ಯ"
"ಪುವರ್ ಭಾವ! ನಿಮ್ಮ ಪವರ್ ಎಲ್ಲ ಎಲ್ಲೋಯ್ತು ಈವಾಗ? ಐ ಪಿಟಿ ಯು. ನಾನು ಸೋಲ್ವ್ ಮಾಡಬಲ್ಲೆ. ಆದ್ರೆ ನಂಗೇನು ಕೊಡ್ತೀರಾ ಹೇಳಿ ಮೊದ್ಲು."
"ಡಯಾನದಲ್ಲಿ ಟ್ರೀಟ್....."
"ಜುಜುಬಿ ಟ್ರೀಟಾ... ಬೇಡಪ್ಪ.., ಅಕ್ಕನ ಟ್ರೀಟ್ ಮೆಂಟೇ ತಗೊಳ್ಳಿ"
"ಮತ್ತೇನು ಬೇಕು?"
"ಹ್ಹೂ....ನೀವು ಹೋದ್ಸಲ ಅಕ್ಕನಿಗೆ ಡ್ರೆಸ್ ಬೈ ಮಾಡಿದ್ರಲ್ಲ ಗ್ರೇ ಕಲರ್?.........."
"ಓ.ಕೆ.. ನಿಂಗೂ ಒಂದು ತೆಕ್ಕೊಡ್ತೀನಿ. ಅದ್ರಲ್ಲಿ ಏನಿದೆ? ಒಂದು ಡ್ರೆಸ್ ತಾನೆ?"
"ಅಷ್ಟೇ ಅಲ್ಲ ಭಾವ...."
(ಅಯ್ಯೋ ಗ್ರಹಚಾರವೇ, ಮತ್ತೇನು ಬೇಕು ಈ ಜ್ಯೂ||ಪಿಶಾಚಿಗೆ? ಡಾಕ್ಯುಮೆಂಟ್ಸ್ ಇಲ್ದೆ ಚೆಕ್-ಪೋಸ್ಟಿನಲ್ಲಿ ಸಿಕ್ಕಿಬಿದ್ದ ಹಾಗೆ ಆಯ್ತಲ್ಲಪ್ಪಾ !!)
"ಆಯ್ತು ಮಾರಾಯ್ತಿ.. ಬೇಕಾದ್ದು ತೆಕ್ಕೊಡ್ತೀನಿ. ಡ್ರೆಸ್ಸ್ಸು, ಸ್ವೀಟು, ಟ್ರೀಟು - ಅಷ್ಟೇ ಅಲ್ದೆ ನಿನ್ನ ಮಗ ನನ್ನ ಮನೆಗೆ ಬಂದು ಏನು ಒಡೆದು ಹಾಕಿದ್ರೂ ಇನ್ಮುಂದೆ ಏನೂ ಹೇಳಲ್ಲಮ್ಮ. ಬೇಕಾದ್ರೆ ಆ ಹೊಸ ಟಿ.ವಿ ನ ನಾನೇ ಅವನ ಕೈಗೆ ಒಪ್ಪಿಸ್ತೀನಿ."
"ವೆರಿ ಗುಡ್.. ಹಾಗೆ ಬನ್ನಿ ದಾರಿಗೆ.........." ಯಾವ ದಾರೀನೋ ಯಾವ ಹೈವೇನೋ...ಅಂತೂ ಹೆದ್ದಾರಿ ದರೋಡೆ ಕಂಪ್ಲೀಟ್ ಆದ ಹಾಗೆ ಆಯ್ತು.
"ಓ.ಕೆ ಭಾವ, ನವ್ ಲೆಟ್ ಮಿ ಸೀ ವಾಟ್ ಐ ಕಾನ್ ಡು ಫ಼ಾರ್ ಯು."
"ದಯವಿಟ್ಟು ದಾರಿ ತೋರಮ್ಮ, ಪಾರಮ್ಮ, ಬಾರಮ್ಮ. ಈ ನರಕದಿಂದ ನನ್ನನ್ನು ಎತ್ತಿ ಉದ್ಧರಿಸು ಮಹಾ ತಾಯೀ.....ಹಾಗೇ ನಿನ್ನ ಅಮ್ಮನತ್ರಾನೂ ಸ್ವಲ್ಪ ಮಾತನಾಡಮ್ಮ...ಇನ್ನು ಅಲ್ಲಿನ ಹವಾಮಾನ ಹೇಗಿದೆಯೋ?"
"ಹ್ಹು....ಓ.ಕೆ... ನೀವು ಇಷ್ಟೊಂದು ರೆಕ್ವೆಸ್ಟ್ ಮಾಡ್ತೀರಾ ಅಂದ್ಮೇಲೆ ಏನಾದ್ರೂ ಮಾಡ್ಲೇ ಬೇಕು. ಆದ್ರೆ ನಮ್ ಡೀಲ್ ನೆನಪಿರ್ಲಿ... ಹ್ಹ ಹ್ಹ ಹ್ಹ .... " ಫೋನ್ ಕಟ್ ಆಯಿತು.
ಅವಸರದಿಂದ ಬೆವರೊರಸಿಕೊಂಡು ಮನೆಯೊಳಗೆ ಪುನಃ ಅಡಿಯಿಟ್ಟೆ. ಅವಳು ಹಾಲಿನಲ್ಲಿ ಕಾಣಲಿಲ್ಲ.ಅಡಿಗೆ ಕೋಣೆಯಲ್ಲಿ ಇರಬಹುದು. ಕಾಫ಼ಿ ಮಾಡುತ್ತಿರಬಹುದು. ಒಂದು ಕಪ್ಪಾ..., ಎರಡು ಕಪ್ಪಾ? ಗೊತ್ತಿಲ್ಲಪ್ಪ !! ಹಾಗೇನೂ ಗಾಬ್ರಿ ಆಗೋ ಅಂಶ ಇಲ್ಲ. ಆಫ಼ೀಸು ಕ್ಯಾಂಟೀನಿನಲ್ಲಿ ದಿನಾ ಸೆಲ್ಫ಼್ ಸರ್ವಿಸ್ ಮಾಡ್ಕೊಳ್ಳಲ್ವೇ?
ಕಿಚನ್ನಿಂದ ಒಂದೇ ಕಪ್ ಕಾಫ಼ಿ ಹೊರಗ್ಬಂತು. ಹಾಗೇ ಕಾಫ಼ಿಯ ಹಿಂದೆ ಹಬೆಯಾಡೋ ಅವಳು !!
"ಅವಾಗ್ಲಿಂದ ಫ಼್ರೆಂಡ್ಸ್ ಎಲ್ಲ ಫ಼ೋನ್ ಮಾಡಿ ತಮಾಷೆ ಮಾಡ್ತಾ ಇದ್ದಾರೆ. ನಾನೊಳ್ಳೆ ಗಂಡನ್ನ ಹೆದರ್ಸೋ ಹಿಡಿಂಬಿ ಅಂತ ಅವ್ರೆಲ್ಲ ತಿಳ್ಕೊಂಡಿದಾರೆ. ಅಮ್ಮನ ಫ಼ೋನ್ ಇನ್ನೂ ಬಂದಿಲ್ಲ. ನೋಡಿದರೋ ಇಲ್ವೋ? ಅವರ ಬಗ್ಗೂ ಬರ್ದಿದಿರಾ. ಅವರೇನು ತಿಳ್ಕೊತಾರೋ ಏನೋ? ಅಲ್ಲ ಮಾರಯ್ರೆ, ಬರೆಯೋ ಮುಂಚೆ ಸ್ವಲ್ಪ ಅಲೋಚನೆ ಮಾಡ್ಬಾರ್ದಾ? ಬುದ್ಧಿ, ಗಿದ್ಧಿ ಇಲ್ವಾ ನಿಮ್ಗೆ?" ಅಂತ ಒಮ್ಮೆ ಕಾಫ಼ಿ ಹೀರಿದಳು.
"ಬುದ್ಧಿ ಇಲ್ಲ. ಈ ಗಿದ್ಧಿ ಅಂದ್ರೆ ಏನು?" ಪರಿಸ್ಥಿತಿಯನ್ನು ನಕ್ಕು ಹಗುರಾಗಿಸುವ ಪ್ರಯತ್ನ! ನಮ್ಮ ಹೆಗ್ಡೆ ಮೇಡಂ ಹೇಳ್ಕೊಟ್ಟಿದ್ದು.
"ಅದನ್ನ ತಿಳ್ಕೊಳೂಕೂ ಬುದ್ಧಿ ಬೇಕ್ರೀ, ಲೇಖಕರೆ........... ನೀವೊಬ್ರು ಬರೀಲಿಕ್ಕೆ, ಅವ್ರೊಬ್ರು ಪ್ರಿಂಟ್ ಮಾಡ್ಲಿಕ್ಕೆ. ಯಾರ್ರೀ ಅದು ಇದ್ರ ಎಡಿಟರ್..??" ಸಂಜೆಯ ಮನೋರಂಜನೆಗೆ ತಿಲಕವಿಟ್ಟಂತಿತ್ತು ಆ ಪ್ರಶ್ನೆ! ಪಾಪ! ಅವರೇನು ಮಾಡಿದಾರೆ. ಏನೋ ಚೆನ್ನಾಗಿದೆ ಅಂತ ಪ್ರಕಟಿಸುವ ಕೃಪೆ ಮಾಡಿದಾರೆ ಅಷ್ಟೆ.
"ಬರೀರೀ ಅವರಿಗೆ.."
"ಏನಂತ?"
"ಒಂದು ಸ್ಪಷ್ಟೀಕರಣ ಪ್ರಿಂಟ್ ಮಾಡ್ಬೇಕು ನೆಕ್ಸ್ಟ್ ಇಶ್ಯೂನಲ್ಲಿ. ’ಈ ಕತೆ ಬರೆದವರು ಜಯದೇವ್ ಅಲ್ಲ. ಬೇರೆ ಇನ್ಯಾರೋ ಪೆಕ್ರ ಬರ್ದಿದ್ದು. ಡಿ.ಟಿ.ಪಿ ತಪ್ಪಿನಿಂದಾಗಿ ಜಯದೇವ್ ಅವರ ಹೆಸರು ಪ್ರಿಂಟ್ ಆಗಿದ್ದಕ್ಕಾಗಿ ಅದೇನೋ ಅವ್ರು ಯಾವಾಗ್ಲೂ ಹೇಳ್ತಾರಲ್ಲ, ಹ್ಹಾಂ.... ವಿಷಾದಿಸುತ್ತೇವೆ ಅಂತ’. ಹಾಗೊಂದು ’ವಿಷಾದ’ ಹಾಕ್ಲಿಕ್ಕೆ ಹೇಳ್ರೀ" (ವ್ಹಾ ವ್ಹಾ..ಏನು ತಲೆ !)
"ಹಾಗೆಲ್ಲ ಪತ್ರಿಕೆಯೋರು ಪುಕ್ಸಟ್ಟೆ ವಿಷಾದಿಸೋದಿಲ್ಲ ಮಾರಾಯ್ತಿ. ಇದ್ರಲ್ಲಿ ಅವರ ತಪ್ಪಿಲ್ಲ ಅಲ್ವ?"
"ಯಾಕೆ ಹಾಕಲ್ಲ? ಆ ಮಹಾಕವಿ ವಾಲ್ಮೀಕಿನೇ ಹಕ್ಕೀನ ಕೊಂದು ’ನಾ ವಿಷಾದ’ ಅಂತ ಸಾರಿ ಹೇಳ್ಲಿಲ್ವ? ಮತ್ತೆ ಇವ್ರೇನು ಮಹಾ?. ಅದೆಲ್ಲ ನಂಗೊತ್ತಿಲ್ಲ. ಏನಾದ್ರೂ ಮಾಡಿ. ಆದ್ರೆ ಈ ಕತೆ ನನ್ ಬಗ್ಗೆ ಬರ್ದಿದ್ದು ಅಲ್ಲ ಅಂತ ಪ್ರೂವ್ ಆಗ್ಬೇಕು ಅಷ್ಟೆ." ಅಂತ ಇನ್ನೊಮ್ಮೆ ಕಾಫ಼ಿ ಹೀರಿದಳು.
ಬೆಡ್ರೂಮಿನಲ್ಲಿ ಫ಼ೋನ್ ಮೊಳಗಿತು. ಕಾಫ಼ಿ ಕಪ್ ಕೈಲಿ ಹಿಡ್ಕೊಂಡೇ ಒಳಕ್ಕೆ ಸರಿದಳು. ಈಗ ಛಾನಲ್ ಚೇಂಜ್ ಮಾಡಿ ಬೆಡ್ರೂಮಿಗೆ ಹೋಗೋಣ. ಇಲ್ಲಿ ಕಮರ್ಶಿಯಲ್ ಬ್ರೇಕ್.
ಬೆಡ್ರೂಮ್ ಛಾನೆಲಿನಲ್ಲಿ
ನನ್ಹೆಂಡ್ತಿ: "ಹಲೋ.."
ಅಲ್ಲಿಂದ: ".........."
ನನ್ಹೆಂಡ್ತಿ: " ಎಂತಮ್ಮ.."
ಡೋರ್ ಕ್ಲೋಸರ್ ನಿದಾನವಾಗಿ ಬಾಗಿಲನ್ನು ಮುಚ್ಚಿ ಮುಂದಿನ ಮಾತು ಮರೆಸಿತು. ಬೆಡ್ರೂಮ್ ಛಾನೆಲ್ ಬ್ಲಾಕ್-ಔಟ್.
’ಎಂತಮ್ಮ???????’ ಅಯ್ಯೋ ಸತ್ತೆ! ಅಮ್ಮ ಅಂದ್ರೆ ಅವಳಮ್ಮ! ಅವಳ ಹೆಡ್ ಆಫ಼ೀಸು!! ಇನ್ನು ಏನೇನು ’ಫ಼ತ್ವಾ’ ಹೊರಡುತ್ತೋ? ದೇವರೇ ಬಲ್ಲ. ಅಭ್ಯಾಸ ಬಲದಿಂದ ಆಂಜನೇಯನ ಸ್ತುತಿ ಪ್ರಾರಂಭಿಸಿದೆ. ಆದ್ರೆ ಅವ್ನು ಕೂಡಾ ಪಾರ್ಟಿ ಬಿಟ್ಟೋರಿಗೆ ಹೆಲ್ಪ್ ಮಾಡಲ್ಲ. ಬೆನಿಫ಼ಿಟ್ಸ್ ಎಲ್ಲ ಪಾರ್ಟಿ ಮೆಂಬರ್ಸ್ಗೆ ಮಾತ್ರ ಗ್ರಾಂಟ್ ಮಾಡೋದು. ಮದ್ವೆ ಆದ್ಕೂಡ್ಲೇ ನಮ್ದೆಲ್ಲಾ ಲಾಗ್-ಇನ್ ಐಡೀನೇ ಡಿಲೀಟ್ ಮಾಡ್ಬಿಡ್ತಾನೆ. ಇನ್ನು ಮದ್ವೆ ಆದ ದೇವ್ರುಗಳು ಯಾರೂ ಸಹಾಯ ಮಾಡೋ ಸ್ಥಿತಿನಲ್ಲಿ ಇರೋದಿಲ್ಲ. ಆ ತಾಯೀನೇ ಕಾಪಾಡ್ಬೇಕು ! ಕಟೀಲು ದುರ್ಗಾಪರಮೇಶ್ವರೀ...... ಅಮ್ಮ ತಾಯೇ !!
ಫ಼ೋನ್ ಇಟ್ಟು ಸೀದಾ ಹೊರಬಂದಳು ಸತಿ. ಇಷ್ಟು ಬೇಗ? ಅಂದ್ರೆ ’ಎಮರ್ಜೆನ್ಸಿ ಆಪರೇಶನ್’ ಆರ್ಡರ್ ಮಾಡಿರಬಹುದೇ? ಅಂತ ಯೋಚನೆ ಬಂದ ಕೂಡ್ಲೇ ಹೊಟ್ಟೆಯಲ್ಲಿ ಅಪ್ಪೆಂಡಿಸೈಟಿಸ್ ತರಾನೇ ನೋವು ಏಳತೊಡಗಿತು.
"ರೀ....... ಕಂಗ್ರಾಜುಲೇಶನ್ಸ್ !!" ಅಂತ ಕೈಮುಂದೆ ಮಾಡಿದಳು ಸತೀಮಣಿ. "ಅಮ್ಮಂದು ಫ಼ೋನು. ಹಾಸ್ಯ ಭಾರೀ ಒಳ್ಳೆದಾಗಿದೆಯಂತೆ. ಎಲ್ರೂ ಹೇಳಿದ್ರು. ಅಮ್ಮ, ಅಪ್ಪ, ಅಣ್ಣ, ಅತ್ಗೆ ಎಲ್ರಿಗೂ ಖುಶಿಯಾಯ್ತಂತೆ.... ನೇಬರ್ಸ್ ಕೂಡಾ, ಅಲ್ದೆ ಅಮ್ಮನ ಎಲ್ಲ ಫ಼್ರೆಂಡ್ಸ್ ಕೂಡಾ.. ಎಲ್ರೂ ಹೊಗಳಿದ್ರಂತೆ. ನೆಕ್ಸ್ಟ್ ಟೈಮ್ ಅಲ್ಲಿಗೆ ಹೋದಾಗ ಅಮ್ಮ ನಿಮ್ಗೆ ಟ್ರೀಟ್ ಕೊಡ್ತಾರಂತೆ...
ಹ್ಹಾ...ಟ್ರೀಟ್...!! ಅಂದ್ರೆ ಟ್ರೀಟ್ಮೆಂಟ್ ಇಲ್ಲ !! ಈ ಛಾನೆಲ್ ಚೇಂಜ್ ಹ್ಯಾಗೆ ಆಯ್ತು??
"ಕಾಫ಼ಿ ತಗೊಳ್ರಿ..ನಿಮ್ಗೇ ಮಾಡಿದ್ದು.... ತಣ್ಣಗಾಗ್ತಾ ಇದೆ." ಕಪ್ ಮುಂದೆ ಬಂತು.
"ಹ್ಹಾಂ.... ಕಾಫ಼ಿ ನಿಂದು ಅಲ್ವ? ನೀನು ಕುಡಿತಾ ಇದ್ದಿ ಮತ್ತೆ ?"
"ನಾನೆಲ್ಲಿ ಕುಡ್ದೆ? ಟೇಸ್ಟ್ ನೋಡಿದ್ದು ಅಷ್ಟೆ...ಸಕ್ರೆ ಸರಿಯಾಗಿದೆಯೋ ಇಲ್ವೊ ಅಂತ. ನಿಮ್ಗೇ ಮಾಡಿದ್ದು. ತಗೊಳ್ರೀ...ಇರ್ಲಿ. ಅದು ಹೇಗೆ ಮಾರಾಯ್ರೇ ಅಷ್ಟು ಚಂದ ಬರೆದ್ರಿ ನೀವು? ನಿಮ್ಗೆ ಎಲ್ಲಿಂದ ಬಂತು ಇಷ್ಟು ಬುದ್ಧಿ?"
"ಬುದ್ಧಿಯಾ? ಬುದ್ಧಿ ಇದೆ. ಅದ್ಕೇ ಅಲ್ವೇ ನಿನ್ನ ಮದುವೆ ಆಗಿದ್ದು?"
" ಸಾಹಿತಿಗಳು ಬೇರೆ ಏನಾದ್ರೂ ಬರ್ದಿದೀರಾ?... ನೀವು ಯಾವಾಗ ಬರ್ದಿದ್ದು ನಂಗೆ ಗೊತ್ತೇ ಆಗ್ಲಿಲ್ಲ.... ರೀ... ಇನ್ನೊಂದು ತುಷಾರಕ್ಕೆ ಕಳ್ಸಿ, ಹಾಸ್ಯ ಸಂಚಿಕೆಗೆ, ಅದ್ರಲ್ಲಿ ಬಂದ್ರೆ ಅದು ಅಲ್ಟಿಮೇಟ್ !!"
’ಟುಪ್’ ಅಂತ ಮೆಸೇಜ್ ಬಂತು ಮೊಬೈಲ್ನಲ್ಲಿ. ಓಪನ್ ಮಾಡ್ದೆ. ’ ಹಾಯ್... ಈಗ ಹೇಗಿದೆ ಭಾವ, ಹವಾಮಾನ? ನೆನಪಿದೆ ಅಲ್ವ ನಮ್ಮ ಡೀಲ್?’ ಸರಿತಾಳದ್ದು... ಮರ್ತೇ ಹೋಗಿತ್ತು!
ಕಾಫ಼ಿ ಕಪ್ ಕೆಳಗಿಟ್ಟು ’ಯೆಸ್,ಥಾಂಕ್ಸ್’ ಅಂತ ಟೈಪಿಸಿ ಸೆಂಡಿದೆ. ಮನಸ್ಸಿನಲ್ಲಿಯೇ ಪಟ್ಟಿ ಮಾಡಿದೆ..’ಒಂದು ಗ್ರೇ ಡ್ರೆಸ್, ಒಂದು ಡಯಾನದಲ್ಲಿ ಟ್ರೀಟ್, ಒಂದು ಕೇಜಿ ಸ್ವೀಟು, ಎರಡು ಕೇಜಿ ಗೀಟು.. ಅಲ್ಲದೆ ಅವಳ ಮರಿ ಸೈತಾನನ ಕೈಗೆ ನನ್ನ ನೆಚ್ಚಿನ ಟಿ.ವಿ.."
ಹೆಂಡ್ತಿ ಒಳಗೆ ಓಡಿ ಹೋಗಿ ಒಂದು ಬೌಲಿನಲ್ಲಿ "ಸಾಹಿತಿಯವರಿಗೆ.........." ಅನ್ನುತ್ತಾ "ಬರೇ ಕಾಫ಼ಿ ಯಾಕೆ? ಇದೂ ತಗೊಳ್ಳಿ" ಅಂತ ಏನೋ ತಂದಳು. ಒಳಗೆ ನೋಡ್ತೇನೆ, ಕೆಂಪು ಗುಲಾಬಿಯಂತೆ ಹೊಳೆಯುವ ಎರಡು ಜಾಮೂನ್; ಮೊನ್ನೆ ಮಗನ ಹುಟ್ಟುಹಬ್ಬಕ್ಕೆ ಮಾಡಿದ್ದು. ಚಮಚದಲ್ಲಿ ಒಂದನ್ನು ಎತ್ತಿ ಅವಳ ಬಾಯಿಗೆ ಹಾಕಿ ಇನ್ನೊಂದನ್ನು ನನ್ನ ಓನ್ ಬಾಯಿಗೆ ಹಾಕ್ಕೊಂಡೆ. ಅಷ್ಟರಲ್ಲಿ ’ಅಲ್ಲಾ, ಈ ಸರಿತ ನಿಜವಾಗ್ಲೂ ಏನಾದ್ರು ಕೆಲ್ಸಾ ಮಾಡಿದಾಳೋ ಅಲ್ಲ ಸುಮ್ನೆ ’ಛತ್ರಿ’ ತರಾ ಟೋಪಿ ಹೊಲ್ದೀದಾಳೊ’ ಅಂತ ಅನುಮಾನ ಕಾಡೋಕೆ ಶುರುವಾಯ್ತು. ’ಛೆ, ಛೆ !! ಅದೆಲ್ಲಾ ಯಾಕೀಗ? ಅಂತೂ ಡೀಲ್ ಪರ್ವಾಗಿಲ್ಲ’ ಅಂತ ಜಾಮೂನ್ ರುಚಿ ಸವಿಯತೊಡಗಿದೆ.

* * *

" ಏ ನನ್ನ ಗುಲಾಬೀ.............................. " (ಹಾಸ್ಯ ಕತೆ)............."



"ಏ ನನ್ನ ಗುಲಾಬೀ.........." ಎಂದು ಉಲಿದದ್ದು ಗುಲಾಬಿಯಂತಹ ಮುದ್ದಿನ ಮೊಗದ, ಬಳ್ಳಿಯಂತೆ ಬಳುಕುವ, 70 m m ಸ್ಚ್ರೀನಿನಲ್ಲಿ ಥಳುಕುವ ಮಾದಕ ಕಂಗಳ ಯಾವುದೇ ಆಮದಿತ ಸೆಕ್ಸೀ ಸ್ವರವಲ್ಲ. " ಏ ನನ್ನ ಗುಲಾಬೀ........." ಎಂದು ಒದರಿದ್ದು ಸುಡುಕು ಮೊಗದ, ಕೆಡುಕು ಕಂಗಳ ಒಂದು ಕೈ ಸೊಂಟದಲ್ಲಿರಿಸಿ, ಇನೊಂದು ಕೈಯಲ್ಲಿ ನನ್ನನ್ನು ’ಒಂದು ಕೈ’ ನೋಡಲಾಹ್ವಾನಿಸುವ ನನ್ನ ವನ್ ಐನ್ಡ್ ದ ವನ್ಲೀ ಹೌಸ್ ವಾನರ್ ನನ್ಹೆಂಡ್ತಿ !! ಅವಳು ಹಾಗಂದಿದ್ದು ಮೂರು ದಿನದಿಂದ ನೀರು ಕಾಣದ, ಬರಗಾಲ ಪೀಡಿತ, ಬಿಸಿಲಿಗೆ ಬಳಲಿ bend-ಆದ ಮುಡಿ ತಿರುಚಿದ, ಎಲೆ ಕರಟಿದ ಮನೆಯಂಗಳದಲ್ಲಿ ಪೋಟಸ್ಥ ನಮ್ಮ ಒಂದು ಗುಲಾಬಿ ಗಿಡವನ್ನು ನೋಡಿ.

ಇಷ್ಟರಲ್ಲೇ ನಿಮಗೆ ಆಗಿರುವ ಪ್ರಮಾದದ ಅರಿವು ಆಗಿರಬಹುದು. ಎಮ್ಮ ಮನೆಯಂಗಳದ ಗುಲಾಬಿ ಗಿಡವೊಂದು ನೀರು ಕಂಡು ಮೂರು ದಿನಗಳಾದ್ದವು; ಕಾಣದೆಯೂ ಮೂರು ದಿನಗಳೇ ಆಗಿದ್ದವು! ಬೇರೆಲ್ಲಾ ಗಿಡಗಳೂ ಕಾಲ ಕಾಲಕ್ಕೆ ನೀರುಂಡು ನಳ ನಳಿಸುತ್ತಿದ್ದರೂ ಇದೊಂದು ಗೋಡೆಯಂಚಿನ ಗಿಡ ಮಾತ್ರ ನೀರಿಗಾಗಿ ಕಳ ಕಳಿಸುತ್ತಿತ್ತು; ಬೇಸಿಗೆಯ ಈ ಬಿಸಿಗೆ ಸಾಯುವ ಪರಿಸ್ಥಿತಿಯಲ್ಲಿ ಮುಖ ಕರಟಿ ರೋಧಿಸುತ್ತಿತ್ತು.

" ಏ ನನ್ನ ಗುಲಾಬೀ......" ಸ್ವರಾತಿರೇಕದಿಂದ ಬೊಬ್ಬಿಟ್ಟಾಗಲೇ ನಿಮಗೆಲ್ಲ ತಿಳಿದುಹೋಗಿರಬೇಕು ನಮ್ಮಿಬ್ಬರೊಳಗೆ ಅದರ ನೀರಾವರಿಯ ಉಸ್ತುವಾರಿ ಯಾರ ಮಡಿಲಿನ ಕೂಸೆಂದು. ’ಪಂಪ-ರನ್ನ’ ಮಾಡಿ ’ಹನಿ ಹನಿ’ ಯಾಗಿ ನೀರನ್ನ ’ಹಾಯ್ಕು’ವ ಕೆಲಸ ಅಲ್ಪಸ್ವಲ್ಪ ಸಾಹಿತ್ಯದಲ್ಲಿ ಆಸಕ್ತಿಯಿರುವ ನನಗೇ ಬಂದು ಸೇರಿದ್ದು ಆಶ್ಚರ್ಯವೆನಿಸಲಾರದು. ಪುರುಷಸ್ವಾತಂತ್ರ್ಯದ ಕಾಲವಿನ್ನೂ ಆರಂಭವಾಗದಿದ್ದರೂ ಪತ್ರಿಕೆಗಳಲ್ಲಿ ಇತ್ತೀಚೆಗೆ " ಪುರುಷ ಸಂಪದ" ಎಂಬ ಕಾಲಂ ಅಂತೂ ಆರಂಭವಾಗಿರುವ ಕಲಿಯುಗದ ಈ ಅಪೂರ್ವ ಕಾಲಘಟ್ಟದಲ್ಲಿ ಎಲ್ಲರ ಮನೆ ದೋಸೆಯಂತೆ ನಮ್ಮ ಮನೆಯಲ್ಲೂ ಮನೆಗೆಲಸಗಳೆಲ್ಲಾ ಲಿಂಗಾವಾರು ಪ್ರಾಂತ್ಯಗಳಾಗಿ ಹಂಚಿಹೋಗಿವೆ. ಕೆಲವು ಹಿಸ್ಸಾದರೆ ಇನ್ನು ಕೆಲವು ಹರ್ಸಾಗಿವೆ. ಇನ್ನೆಷ್ಟೊ ಕೆಲವು ಕೆಲಸಗಳು ಕಾಸರಗೋಡು-ಬೆಳಗಾವಿನಂತೆ ವಿವಾದಿತ ಪ್ರಾಂತ್ಯಗಳಾಗಿ ಲಾಗಾಯ್ತಿನಿಂದ ವಾರಸುದಾರರಿಲ್ಲದೆ ಕಂಗೊಳಿಸುತ್ತವೆ. ಆದರೆ ಸದ್ಯಕ್ಕೆ ಈ ನೀರಾವರಿ ಯಂತೂ ಅವಿವಾದಾಸ್ಪದವಾಗಿಯೂ ನನ್ನದೇ ವರಿ ಎಂಬುದು ಅವಳು ಪ್ರಸ್ತುತ ಪಡಿಸಿದ ಡೆಸಿಬೆಲ್ಲಿನಿಂದಲೇ ಸ್ವಯಂವೇದ್ಯ !

ಹುಲಿಯನ್ನು ಕಂಡು ಜೀವದಾಸೆಯಿಂದ ಪ್ರಚೋದಿತವಾದ ಜಿಂಕೆಮರಿಯಂತೆ ಕೂಡಲೇ ನಾನು ಜಾಗೃತನಾದೆ. ನನ್ನ ಹೆಡ್ ಆಪೀಸು ಕೂಡಲೇ ದೇಶದ ಎಲ್ಲಾ ಹೆಡ್ ಆಪೀಸುಗಳಂತೆ ನಿಧಾನವಾಗಿ ಕೆಲಸ ಮಾಡಲು ಆರಂಭಿಸಿತು. ಆದರೆ, ನಮ್ಮೆರಡು ಕೈಗಳು ಭುಜಗಳಲ್ಲಿದ್ದರೂ ಇಂತಹ ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡಲಾರದೇ ಕೈ ಕೊಡುವುದು ತಲೆಯೇ ಅಲ್ಲದೆ ಭುಜಗಳಲ್ಲ. ಆ ಕ್ಷಣದಲ್ಲಿ ಹೊಳೆದ ಕೆಲವು ಉತ್ತರಗಳನ್ನು ಅದಷ್ಟು ಕ್ಷಿಪ್ರವಾಗಿ ಒಂದು ತೌಲನಾತ್ಮಕ ಅಧ್ಯಯನಕ್ಕೆ ಒಳಪಡಿಸಿ ಬೆಸ್ಟಾಫ಼್ ಕಾರಣಾಸ್ ಎಂಬ ಒಂದನ್ನು ಹೆಕ್ಕಿ ಹೊರಕ್ಕೆಳೆದೆ-

" ಗೋಡೆಯಂಚಿಗಿದೆಯಲ್ಲ......., ಹಾಗಾಗಿ ಪೈಪ್ ಅಲ್ಲಿಯವರೆಗೆ ಬರುವುದಿಲ್ಲ...ಹ್ಹೆ ಹ್ಹೆ ಹ್ಹೆ..... ನೀರು ಹಾಯಿಸುವಾಗ ಬಹುಶಃ ಸರಿಯಾಗಿ ಬಿದ್ದಿರಲಿಕ್ಕಿಲ್ಲ...ಹ್ಹೆ ಹ್ಹೆ ಹ್ಹೆ...ಬ್ಬೆ ಬ್ಬೆ ಬ್ಬೆ !! "

" ವೆಲ್ ಟ್ರಡ್.... ಕಮ್ ಔಟ್ ವಿದ್ ಅ ಬೆಟರ್ ವನ್ ನೆಕ್ಷ್ಟ್ ಟೈಮ್, ಡ್ಯೂಡ್ " ಎಂಬಂತೆ ಲುಕ್ಕಿದಳು ಅಲ್ಲಲ್ಲ, ಸ್ಟೇರಿದಳು.

ಅರ್ಧಾಂಗಿಯೆದುರು ನಾನು ಕಾಲಂಗಿಯಾದೆ (ಕಾಲಂಗಿ ಕನ್ನಡ; ಅದರ ಇಂಗ್ಲೀಷ್ ರೂಪಾಂತರ-socks!!). ತಪ್ಪು ನನ್ನದೇ. ಗುಲಾಬಿಯು ಬಾಡಿತ್ತು, ಆಟವು ಮುಗಿದಿತ್ತು. ಬಲೀ ಕಾ ಬಕ್ರಾ ಎಂದಾದೊಡೆ ತನ್ನ ಕೊರಳ್ ಒಪ್ಪಿಸುವುದೇ ಲೇಸೆಂದಿದ್ದ ಸರ್ವಜ್ಞ!

ನಂಬಿದರೆ ನಂಬಿ, ಬಿಟ್ಟರೆ ಬಿಡಿ; ನನ್ನಪ್ಪ್ರಾಣೆಗೂ ಹೇಳ್ತೇನೆ..... ನಾನಂತೂ ಒಂದು ಪೈ ವರದಕ್ಷಿಣೆ ತೆಗೆದುಕೊಂಡಿಲ್ಲ. ಪ್ರಮಾಣ ಬೇಕಿದ್ರೆ ಮಾಡ್ತೇನೆ. ಆದರೆ ತಿಂಗಳಿಗೊಮ್ಮೆ ನಾವು ಮಾವನ ಮನೆಗೆ ಹೋದಾಗ್ಲೆಲ್ಲ ಇನ್ಸ್ಟಾಲ್ಮೆಂಟೋಪಾದಿಯಲ್ಲಿ ಗುಲಾಬಿ ಗಿಡಗಳು ಪೋಟ್ ರೂಪೇಣ ನನ್ನ ಕಾರಿನ ಡಿಕ್ಕಿಯೇರಿ ನಕ್ಕದ್ದು ನಿಜ. ಇವು ವರದಕ್ಷಿಣೆಯೂ ಅಲ್ಲ; ವಾರದಕ್ಷಿಣೆಯೂ ಅಲ್ಲ, ಒಂಥರಾ ಮಾಸದಕ್ಷಿಣೆ ಎನ್ನ ಬಹುದು. ಆದರೆ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಸ್ವೀಕರಿಸಿರುವ ಈ ಮಾಸದಕ್ಷಿಣೆಗಳು ವರ್ಷಪೂರ್ತಿ ನನ್ನನ್ನು ’ದುಡಿಸಿಕೊಳ್ಳುವುದು’ ಅಂತೂ ಪರಮ ಸತ್ಯ. ಗೇಟಿನೊಳಗೆ ಸಾಲಾಗಿ ಕುಳಿತು ಸಾಲಂ ಕೃತ ನನ್ನ ಮನೆಯನ್ನು ಸಾಲಂಕೃತಗೊಳಿಸುತ್ತವೆ. ಈ ಗುಲಾಬೀ ಕುಂಡಗಳು ಸಂಸಾರವೆಂಬ ಶೋಕಭೂಮಿಯಲ್ಲಿ ಅಗ್ನಿಕುಂಡಗಳಾಗಿ ಉರಿಯುತ್ತವೆ. ದಿನಾ ನೀರು ಹಾಕಿದರೂ ಆರದ ಜಗತ್ತಿನ ಏಕೈಕ ಟೈಪ್ ಆಫ಼್ ಕುಂಡವಾಗಿ ನನ್ನ ಹೊಟ್ಟೆ ಉರಿಸುತ್ತವೆ.

ಇಂದಿನ ಕೊಳ್ಳಬಾಕ ಸಂಸ್ಕೃತಿಯ ಯಾವುದೇ ಸರಕಿನಂತೆ ಈ ಪಿಶಾಚಿಗಳೂ ಕೇವಲ ಅವೇ ಆಗಿ ಬರುವುದಿಲ್ಲ, ಜೊತೆಗೆ ಕೆಲವು ಸಲಹೆಗಳೂ ಉಚಿತವಾಗಿ ಬರುತ್ತವೆ. ಪ್ರತಿ ಬಾರಿ ಒಂದೊಂದು ಕುಂಡವನ್ನೂ ಬಿದಾಯಿಯೋ ಪಿದಾಯಿಯೋ ಮಾಡುವಾಗಲೂ ಅವಳ ಹೆಡ್ ಆಫ಼ೀಸು ವಾನರ್ ಅಂದ್ರೆ ನನ್ನತ್ತೆ ಈ ಉಚಿತ ಕೊಡುಗೆಗಳನ್ನ ಪುಂಖಾನುಪುಂಖವಾಗಿ ನೀಡುತ್ತಲೇ ಬಂದಿದ್ದಾರೆ. "ದಿನಕ್ಕೆರಡು ಬಾರಿ ನೀರು ಹಾಕಬೇಕು................ , ಸರೀ ನೀರು ಹಾಕಬೇಕು..... , ಸರೀ ಬಿಸಿಲು ಬೀಳಬೇಕು.......... , ಇರುವೆ ಬಾರದಂತೆ ನೋಡಿಕೊಳ್ಳಬೇಕು....... , ಸೆಗಣಿ ಹಾಕ ಬೇಕು (ಎಲ್ಲಾ ನಾನೇ ಮಾಡ ಬೇಕೆ !!!! ) ಹೌದು. ಈಚೀಚೆಗೆ ಅದರ ಬಗ್ಗೆ ಯಾವುದೇ ಸಂಶಯವೂ ಉಳಿದಿಲ್ಲ. ಅಂತಹ ಸಲಹಾರ್ಚನಾ ಸಂದರ್ಭಗಳಲ್ಲಿ ಕಾರಿನ ಬದಿಸೀಟಿನಲ್ಲಿ ಕೋಪೈಲಟಿಗಳಾಗಿ ವಿರಾಣಿಮಾನವಾಗಿರುವ ಅವಳು ಕೇವಲ "ಗೊತ್ತಾಯಿತೇ........" ಎಂಬಂತೆ ನನ್ನನ್ನು ನೋಡಿ ಹುಬ್ಬೇರಿಸುವುದು ಮಾತ್ರ. ನಾನಂತೂ ಈ ಗು-lobby ಗೆ ಸಂಪೂರ್ಣವಾಗಿ ಶರಣಾಗಿದ್ದೇನೆ, ನನ್ನನ್ನು ನಾನು ಅರ್ಪಿಸಿಕೊಂಡಿದ್ದೇನೆ. ಈ ನಾಲ್ಕು ಮಾತುಗಳೊಂದಿಗೆ ಸೆರಗಿನಿಂದ ಕಣ್ಣೊರಸುತ್ತಾ ತಾವೇ ನೀರುಣಿಸಿ ಸಾಕಿ ಸಲಹಿದ ಗುಲಾಬಿಗಿಡವನ್ನು ಅತೀವ ದುಃಖದಿಂದ ಬೀಳ್ಕೊಡುವ ಆ ಮಾಹಾದಾನಿಗಳ ನೇತ್ರಾವತಿ ನನ್ನ ಹಾಲತ್ತನ್ನು ಕಂಡು ನನಗಾಗಿಯೇ ಹರಿಸಿದ್ದು ಎಂದು ನಾನು ಸುಳ್ಳೇ ಭಾವಿಸಿ ಸಮಾಧಾನ ಪಟ್ಟುಕೊಳ್ಳುತ್ತೇನೆ.

ಈ ಹೂ ಕುಂಡಗಳಿಗೂ ನನಗೂ ಯಾವ ಜನ್ಮದ ಮೈತ್ರಿಯೋ ನಾನರಿಯೆ. ನನಗಂತೂ ಈ ಹದಿನಾರನೇ ಶತಮಾನದ ಇಂಗ್ಲೀಷ್ ನಾಟಕಕಾರನು ಹೇಳಿದ್ದೆಲ್ಲವೂ ಶುದ್ಧ ನಾಟಕವೆಂದು ಖಚಿತವಾಗಿದೆ. ನನಗಾದರೋ, ಗುಲಾಬಿ ಬೇರಾವ ಹೆಸರಿನಿಂದಲೂ ಅಷ್ಟೇ ಅಪ್ರಿಯ, ಅಷ್ಟೇ ಭಯಾನಕ! ನಾಳೆಯಿಂದ ಅದನ್ನು ಕಮಲವೆಂದು ಕರೆದರೆ ಅದರಲ್ಲಿರುವ ಮುಳ್ಳುಗಳು ಮಾಯವಾಗುತ್ತವೇನು ?

ಹಣದುಬ್ಬರದ ಅಬ್ಬರದ ಈ ಕಾಲದಲ್ಲಿ ಕುಟುಂಬಯೋಜನೆಗೆ ಯಾವುದೇ ಪ್ರಚಾರ ಬೇಕಿಲ್ಲ. ಹಣದ ಬೆಲೆ ಅರಿತಿರುವ ಯಾವನಾದರೂ ಬೇಕೂಫ ಕುಟುಂಬ ಯೋಜನೆಯ ಯೋಚನೆ ಮಾಡದಿರಲಾರ. ಹಾಗಾಗಿ ಮಕ್ಕಳನ್ನು ನರ್ಸಿಸಿ ಹೆಚ್ಚು ಅನುಭವವಿಲ್ಲದಿದ್ದರೂ ಒಂದು ಸಣ್ಣ ಹೂತೋಟ ಎಮ್ಮ ಮನೆಯಂಗಳದಿ ರಾರಾಜಿಪುದು. ಅಲ್ಲದೆ ಅದಕ್ಕೆ ನಾನೇ ಮಾಲಿ ನಾನೇ ಮಾಲೀಕ. ನಿವೃತ್ತಿ ಜೀವನದಲ್ಲಿ ಒಂದು ವೃತ್ತಿ. ಸ್ವಯಂ ನಿವೃತ್ತಿಯನ್ನು ನಾನೇ ತಗೊಂಡಿದ್ದರೂ ಈ ಹೂತೋಟದಲ್ಲಿನ ವೃತ್ತಿ ನನ್ನ ಮೇಲೆ ಹೇರಲ್ಪಟ್ಟಿದ್ದು. ಈ ಮಾಲಿತನ ಕಮ್ ಮಾಲೀಕತನ ಪಟ್ಟ ನನಗೆ ನಂಬಾಸ್ ಅರ್ಥಾತ್ ನನ್ಹೆಂಡ್ತಿಯೇ ಕಟ್ಟಿದ್ದು ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲವೆಂದು ಹೇಳತಕ್ಕಂಥಹ ಒಂದು ಮಾತನ್ನ ನಾನಿಲ್ಲಿ ಹೇಳಬಯಸುತ್ತೇನೆ.

ಮೊದಮೊದಲು ಈ ಪೂಕಳ ಕಾರ್ಯಕಾರೀ ವಿಷಯಗಳಲ್ಲಿ ನಮ್ಮೊಳಗೆ ಭಾರೀ ಮಾತುಕತೆಗಳಾಗುತ್ತಿದ್ದವು. ನೀರಿನ ಬಗ್ಗೆ, ಗೊಬ್ಬರದ ಬಗ್ಗೆ, ಸಸ್ಯದ ಆರೈಕೆಯ ಬಗ್ಗೆ..... ನಾನು ಲೆಫ಼್ಟಾದರೆ ಅವಳು ರೈಟು; ನಾನು ರೈಟಾದರೆ ಅವಳು ರಾಂಗು. ಹೂಗಳ ಸರ್ವತೋಮುಖ ಏಳ್ಗೆಗಾಗಿ ಅವಳು ಮಾಡಿದ ಕೆಲವು ನಿಸ್ವಾರ್ಥ ನಿರುಪದ್ರವೀ ಸಲಹೆಗಳು (ಸ್ವಯಂಘೋಷಿತ) ನನಗೆ ಕರ್ಣಕಠೋರವಾಗಿ ಕೇಳುತ್ತಿದ್ದವು. ನನ್ನ ಮೇಲೆ ನಡೆಯುವ ದಬ್ಬಾಳಿಕೆ ಎಂದೂ ತೋರುತ್ತಿದ್ದವು. ಕೆಲವೊಮ್ಮೆ ಮಾತಿಗೆ ಮಾತು ಜೋರಾಗಿ ಜಗಳಗಳಾಗಿ ಮಕ್ಕಳ ಮಧ್ಯಸ್ಥಿಕೆಯಿಲ್ಲದೆ ಪರಿಹರಿಸಲ್ಪಡುತ್ತಿರಲಿಲ್ಲ. ನಮ್ಮ ಮಾತುಗಳೆಲ್ಲ ಕತೆಗಳಾಗಿ ನೆರೆ ಹೊರೆಯ ಮನೆಗಳಲ್ಲಿ ಕರೆಂಟಿಲ್ಲದಾಗಲೋ, ಟಿ.ವಿ ಕೆಟ್ಟೋದಾಗಲೋ ಆಡಿಕೊಳ್ಳಲು ಬಳಕೆಯಾಗುತ್ತಿದ್ದವು. ’ಸಂಪೂರ್ಣ ಗುಲಾಬಾಯಣ ದರ್ಶನ’ದ ಅಖೈರಿಗೆ ಅವಳು ತೀರ್ಪಿಸಿದ್ದು ಹೀಗೆ:

೧. ನೀರಾವರಿಯ ಸಂಪೂರ್ಣ ವರಿ ನಿಮ್ಮದು.
೨. ನೀರಾವರಿಯನ್ನು ಬೇಕಾಬಿಟ್ಟಿ ಮಾಡುವ ಪರಿಯೂ ನಿಮ್ಮದೇ.
೩. ಆದರೆ, ಒಂದಾದರೂ ಗಿಡ ಬಾಡಿರುವ ಸ್ಥಿತಿಯಲ್ಲಿ ನನಗೆ ಕಾಣಬಾರದು.

ಇದು ಪುರುಷ ಸ್ವಾತಂತ್ರ್ಯಕ್ಕೆ ಅವಳು ಮಾಡಿದ ಅತ್ಯಂತ ಶ್ರೇಷ್ಠ ಸೇವೆ !

ಅಂತೂ ಜನ್ಮ ತಾಳಿತು ನಮ್ಮ ಕರಾರುವಾಕ್ಕಾದ ವಾಕ್-ಕರಾರು. ಇದನ್ನು ನಾನು ಸಹಿಸಲಿಲ್ಲ ’ಸಹಿ’ಸಲೂ ಇಲ್ಲ. ಆದರೂ ಈ ಉರುಳಿಗೆ ಕೊರಳ್ ಕೊಟ್ಟೆ. ಬೇ-ಸತ್ತಿದ್ದ ನನಗೆ ದಿನದಿಂದ ದಿನಕ್ಕೆ ಹದಗೆಡುತ್ತಿದ್ದ ಈ ಸಂಸದ್ ಅಧಿವೇಶನದಿಂದ ಒಟ್ಟಾರೆ ಹೊರಬಂದರೆ ಸಾಕಿತ್ತು. ಅಂದು ನನಗೆ ಅಷ್ಟರಲ್ಲೇ ವಿಜಯೋತ್ಸವ.

ಅಂದಿನಿಂದ ಆರಂಭವಾಯಿತು- ಸೊಂಟಕ್ಕೆ ಕೈ! ಒಪ್ಪಂದದಂತೆ ಒಪ್ಪ+ಅಂದವಾಗಿ ಗಿಡಗಳ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಮಡಿಲಲ್ಲಿ ಡಂಪಿಸಿ ಅವಳು ಬರೇ ಮೇಲ್ವಿಚಾರಣೆ ಮಾಡತೊಡಗಿದಳು. ಆಫ಼ೀಸಿನಿಂದ ಬೇಗನೆ ಬಂದ ದಿನಗಳಲ್ಲೆಲ್ಲಾ ಕೈತೋಟ ವನ್ನು ಒಂದು ಸ್ಕಾನ್ ಮಾಡುವಳು. (ವಾಹ್ ರೇ ನಸೀಬ್..., ಸೊಂಟಕ್ಕೂ ಕೈ ತೋಟಕ್ಕೂ ಕೈ!! ಸ್ಕಾನ್ನಿಂಗಿನಲ್ಲಂತೂ ಅವಳದು ಎತ್ತಿದ ಕೈ!! ) ಅವಳ ಕಣ್ಣುಗಳೇ ಒಂದು "ಬಾಡೋಮೀಟರ್" ಎಲ್ಲೆಲ್ಲಿ ಯಾವ ಗಿಡಗಳು ಬಾಡುತಿದೆಯೆಂದು ಕರಾರುವಾಕ್ಕಾಗಿ ( ಅಂದ್ರೆ, ಆಸ್ ಪರ್ ಕೋಂಟ್ರಾಕ್ಟ್) ಹೇಳಬಲ್ಲಳು. ಯಾವ ಯಾವ ಗಿಡಗಳಿಗೆ ಎಷ್ಟು ಮಿಲ್ಲಿ ನೀರು ಕಡಿಮೆ ಹನಿಸಿರುವೆ ಎಂದೂ ಗ್ರಹಿಸಬಲ್ಲಳು. " ಏ ನನ್ನ ಗುಲಾಬೀ............... , " ಎಂದು ಒದರಿದ್ದು ಅಂತಹುದೇ ಒಂದು ಸ್ಕಾನ್ನಿಂಗಿನ ಬಳಿಕ.

" ಇದನ್ನು ಬದುಕಿಸಿ ಜೀವ ಮಾಡಿ ತೋರಿಸಿದರೆ ಸಾಕಲ್ಲವೇ? ಅದು ನನ್ನ ಜವಾಬ್ದಾರಿ " ಎಂದು ಖಂಡಿತ ಸ್ವರದಲ್ಲಿ ಹೇಳಿದೆ. ಏನೂ ಹೇಳದೆ ಸೀದಾ ಮನೆಯೊಳಗೆ ಧಿಮಿ ಧಿಮಿಸಿದಳು ಭಾರ್ಯಾಮಣಿ. ಹಾಗೆ ನಡೆಯುವಾಗ ಮನೆಯೊಳಗೆ ಯಾವುದೇ ಕಂಪನ-ಗಿಂಪನ ಉಂಟಾಗದಿದ್ದರೂ ನನ್ನ ಮನದೊಳಗೆ ಭೂಕಂಪ ಸ್ಪೋಟಿಸತೊಡಗಿತು. ನಾನು ಮಾಡಿದ ಚ್ಯಾಲೆಂಜ್... !! ಅದು ನಾನು ಮಾಡಿದ ಎರಡನೇ ತಪ್ಪು. ಒಂದು ತಪ್ಪನ್ನು ಒಪ್ಪ ಮಾಡಲು ಹೋಗಿ ಇನ್ನೊಂದು ತಪ್ಪು. (ಶಾಬ್ಬಾಶ್ ಬೇಟೇ !! ) ಅಂತೂ ಚ್ಯಾಲೆಂಜ್ ಮಾಡಿಯಾಯಿತು, ಒಡನೇ ಕಾರ್ಯ ಪ್ರವೃತ್ತನಾದೆ. ಬಾಡಿದ ಗುಲಾಬಿ ಕುಂಡವನ್ನು ಡಾ| ಮಾಲಿ ಯವರ ಐ.ಸೀ.ಯು ಗೆ ಅಡ್ಮಿಟ್ ಮಾಡಿದೆ. ಗೋಡೆಯಂಚಿನಿಂದ ಸ್ಥಾನಪಲ್ಲಟಗೊಳಿಸಿ ಬಾಗಿಲೆದುರು ತಂದಿರಿಸಿದೆ. ತೀವ್ರ ಶುಶ್ರೂಶೆಗೆ ಒಳಪಡಿಸಿದೆ. ದಿನಕ್ಕೆ ನಾಲ್ಕು ಬಾರಿ ನಿರುಣಿಸತೊಡಗಿದೆ. ಅತ್ಯಂತ ಸೂಕ್ಷ್ಮವಾಗಿ ಪರೀಕ್ಷಿಸತೊಡಗಿದೆ. ಮೂರು ದಿನಗಳ ಬರಪೀಡೆಯಿಂದಾಗಿ ಎಲೆಗಳೆಲ್ಲವೂ ಒಣಗಿ ಉದುರಿತ್ತು. ಮಧ್ಯದ ಒಂದು ದಂಟು ಮಾತ್ರ ಉಳಿದಿತ್ತು. ಅದು ಕೂಡ ಅರೆಸತ್ತು ಹಸಿರು ಸಂಪೂರ್ಣ ಮಾಸಿ ಒಣಗಿದ ಗಿಡವಾಗಿಯೇ ತೋರುತ್ತಿತ್ತು. ಬದುಕಿಸುವ ಆಶೆ ಹೆಚ್ಚು ಉಳಿದಿಲ್ಲ ಎಂಬುದು ಮಕ್ಕಳಿಗೂ ತೋರತೊಡಗಿತು. ಆದರೆ ರಣವೀಳ್ಯೆ ತೆಗೆದುಕೊಂಡಾಗಿತ್ತಲ್ಲವೇ? ಇನ್ನು ಎರಡೇ ದಾರಿ- ಮಾಡು ಇಲ್ಲವೇ ಮಾಡಿ !! ಬೇರೆ ದಾರಿ ಇಲ್ಲ. ಮುಂಬರುವ ಕಷ್ಟದಿನಗಳ ಮುನ್ಸೂಚನೆಗಳು ನನಗವಳ ನಡವಳಿಕೆಯಿಂದಲೇ ಮನದಟ್ಟಾಗತೊಡಗಿತು.

ಅವಳ ಕೋಪ ಹುಸಿಮುನಿಸಲ್ಲ ಮಾರಾಯ್ರೇ, ಹಸಿ ಮೆಣಸು! ಖಾರ ಅಂದ್ರೆ ಖಾರ. ಮಾತೂ ಇಲ್ಲ ಕತೆಯೂ ಇಲ್ಲ. ಪಲ್ಯಗಳ ಉಪ್ಪೇರತೊಡಗಿತು; ಕಾಪಿಗಳು ಸಕ್ಕರೆ ಕಾಣದೆ ಡಯಾಬಿಟಿಸ್ ರೋಗಿಗಳಂತೆ ಕಂಗಾಲಾಗಹತ್ತಿದವು. ಅಡಿಗೆ ಕೋಣೆಯಲ್ಲಿಪಾತ್ರೆಗಳು ಸದ್ದೇರಿಸಿ ಸಂಭಾಷಿಸಲಾರಂಭಿಸಿದವು. " ಭಲ್ಲಿರೇನಯ್ಯ, ಈ ಸತಿಪತಿಯ ಕಾಳಗವನ್ನು..." ಎಂದು ’ಗುಲಾಬಿ ಪುರಾಣ’ ಎಂಬ ಪ್ರಸಂಗವನ್ನು ಯಕ್ಷಗಾನಿಸುವಂತೆ ಅನಿಸತೊಡಗಿತು. ಸ್ತ್ರೀವೇಷ ಸಡನ್ನಾಗಿ ರಾಕ್ಷಸ ವೇಷವಾಗಿ ಧಿಂಗಣಿಸುವಂತೆ ಕನಸುಬೀಳತೊಡಗಿತು. ಮಕ್ಕಳಿಗೂ ನಾನು ರಜದ ಮಜವಾದೆ. ಕುಡಿಯಲು ನೀರು ಬೇಕಾದಾಗ "ಅಪ್ಪಾ, ರೋಸ್ ವಾಟರ್" ಎಂದೋ, ಮನೆಯಲಿ ಅತ್ತಿತ್ತ ಸುತ್ತು ಬರುವಾಗ " ರೋಜ಼್ ರೋಜ಼್ ಮಕೋನಿಸ......" ಎಂದು ಹಾಡುತ್ತಲೋ, ಅಥವಾ " ಇಕ್ ರೋಜ಼್ ಮೈ ತಡಪ್ಕರ್........." ಎಂದು ಅರಚುತ್ತಲೋ, ಅಮ್ಮ ಆಪೀಸಿನಿಂದ ಬಂದು ತೋಟ ನೋಡಿ ಗುಲಾಬಿವದನಳಾದಾಗ " ರೋಸೀ ಲಿಪ್ಸ್, ಡಿಂಪಲ್ ಚಿನ್....." ಎಂದು ಕನಲುತ್ತಲೋ, ತೊದಲುತ್ತಲೋ, ಮರುಗುತ್ತಲೋ ನನ್ನ ಏರುತ್ತಿರುವ ಬಿ.ಪಿ ಗೆ ಶೃತಿ ಸೇರಿಸತೊಡಗಿದರು. ಪಕ್ಕವಾದ್ಯದಲ್ಲಿ ಬೀಟ್ಸ್ ನೊಂದಿಗೆ ನನ್ನ ಹಾರ್ಟ್ ಸಹಕರಿಸತೊಡಗಿತು.

ಮಿಸೆಸ್ ದ್ರೌಪದಿಗೆ ಒಂದು ಬಾರಿ ಪಾರಿಜಾತ ಪುಷ್ಪ ಬೇಕೆಂದು ಆಸೆಯಾಯಿತಂತೆ. ಆಸೆ ಹಟವಾಗಿ ರೂಪಾಂತರಗೊಳ್ಳಲು ಎಷ್ಟು ಹೊತ್ತು ಬೇಕು? ಎದುರಿಗೆ ಸಿಕ್ಕಿವ ಬಡ/ಭಡಾ ಭೀಮಸೇನ! ಪಾಪ! ಗಂಡುಗಲಿ ಭೀಮ ಗೊಂಡಾರಣ್ಯದಲ್ಲಿ ಅಲೆದಲೆದು ಅರೆಸತ್ತ. ಅವನ ಪಾಡು ಯಾರಿಗೂ ಬೇಡ. ಅಂತಹ ಮಹಾ ಧೈರ್ಯಶಾಲಿ ನಿಷ್ಪುಷ್ಪಿತನಾಗಿ ಬರಿಗೈಯಲ್ಲಿ ಮಡದಿಯ ಮುಖ ಕಾಣಲು ಧೈರ್ಯ ಸಾಲದೆ ತಾನಿದ್ದ ಅರಣ್ಯದಲ್ಲೇ ಇನ್ನೊಂದು ಟೆಂಪರವರಿ ಸತಿಗಾಗಿ ಅಲೆದಾಡಲಾರಂಭಿಸಿದ. ಪಾರಿಜಾತ ಪುಷ್ಪ ಸಿಗದಿದ್ದರೂ ಸುಲಭವಾಗಿ ಸಿಕ್ಕಳು ಹಿಡಿಂಬಿ ಎಂಬ ರಕ್ಕಸಿ! ಅವಳಾದರೂ ಸರಿ; ಮುನಿದ ನಾರಿಯಿಂದ ಒಲಿದ ಮಾರಿಯೇ ಲೇಸೆಂದು ಹಲವು ವರುಷ ಅವಳೊಂದಿಗೆ ಸಂಸಾರತೂಗಿಸಿದ. ವೀರಾಧಿವೀರ ಭೀಮಸೇನನೇ ಒಂದು ಕೇವಲ ಪಾರಿಜಾತ ಪುಷ್ಪಕ್ಕಾಗಿ ಇಷ್ಟು ಬವಣೆ ಪಟ್ಟಿರುವಾಗ ನಾನು ಒಂದು ಗುಲಾಬಿಗಾಗಿ ಬರುವ ಕಷ್ಟ ಏನು ಮಹಾ? ಆಫ಼್ಟರಾಲ್, ಇಟ್ಸ್ ಅ ರೋಸ್ ಯು ನೋ ! ನಾನು ಈ ವಿಷಯವನ್ನು ಹೇಳಿದಾಗೆಲ್ಲಾ ನಾನು ಪುರಾಣವನ್ನು ತಿರುಚಿದ್ದೇನೆ ಎಂದು ಅವಳು ಹೇಳುವಳು. ಮಹಾಭಾರತದಲ್ಲಿ ನಡೆದ ಘಟನೆ ಹಾಗಲ್ಲವೇ ಅಲ್ಲ ಎಂದು ವಾದಿಸುವಳು. ನನಗೆ ಅವಳೆದುರು ನನ್ನ ಇಷ್ಟು ಸಣ್ಣ ಮುಖ ತಿರುಚಲೇ ಧೈರ್ಯ ಸಾಲದು! ಇನ್ನು ಅಷ್ಟು ದೊಡ್ಡ ಪುರಾಣವನ್ನೆಂತು ತಿರುಚುವೆನು?

" ಅದು ಸತ್ತೇ ಹೋಗಿದೆ. ಇನ್ನು ಅದಿಕ್ಯಾಕೆ ನೀರು ವೇಸ್ಟ್ ಮಾಡೋದು? ನಿಮ್ಮ ಹತ್ರ ಹೇಳಿದ್ರೆ ಹೀಗೇ ಅಗೋದು. ನಾನು ಮೊದಲೇ ಹೇಳಿದ್ದೆ ದಿನ ನಿತ್ಯ ಸರೀ ನೀರು ಬಿದ್ದೇ ಬೀಳ ಬೇಕು ಗುಲಾಬಿಗೆ. ಹೇಳಿದ್ರೆ ಅಗಲ್ಲ, ಮಾಡ್ಲಿಕ್ಕೂ ಆಗಲ್ಲ. ಅವಸ್ಥೆ. ಈಗ ನನ್ನ ಅಮ್ಮನಿಗೆ ಏನು ಉತ್ತರ ಹೇಳ್ಲಿ? ಆ ವೆರೈಟಿ ಸಿಗಲ್ಲ. ಅಷ್ಟು ದೂರ ಕೊಡೈಯಿಂದ ತಂದಿದ್ರು..............."

ಎಂದು ನನ್ನ ಪರ್ಫ಼ಾರ್ಮನ್ಸ್ ಅಪ್ರೈಸಲನ್ನು ಸುಶ್ರಾವ್ಯವಾಗಿ ವಾಚಿಸತೊಡಗಿದಳು. ಓಟ್ಟಿನಲ್ಲಿ ಆ ಗುಲಾಬಿ ಗಿಡ ಅತ್ಯಂತ ವಿರಳವೆಂದೂ, ಅವಳ ಅಮ್ಮನ ಪ್ರೀತಿಯ ಕೊಡುಗೆಯೆಂದೂ, ನಾನು ಎಂದಿನಂತೆ ನನ್ನ ಅಹಂಕಾರದಿಂದ ಅದರ ಜೀವ ತೆಗೆದು ಹಾಕಿದೆನೆಂದೂ, ಅವಳ ತಂಗಿಗೆ ಆ ಗಿಡದಲ್ಲಿ ಮನಸ್ಸಿತ್ತೆಂದೂ, ಮತ್ತ್ಯಾವುದೋ ಚಾಣಾಕ್ಷ ರಾಜಕೀಯದಿಂದಾಗಿ ಅವಳು ಅದನ್ನು ಗಿಟ್ಟಿಸಿಕೊಂಡಿದ್ದಳೆಂದೂ ಅದನ್ನು ತಂಗಿಗಾದರೂ ಕೊಟ್ಟಿದ್ದರೆ ಗಿಡವಾದರೂ ಎಲ್ಲಾದರೂ ಒಂದು ಕಡೆ ಜೀವದಲ್ಲಿ ಇರುತ್ತಿತ್ತೆಂದೂ (ಮೊದಲು ಉದರ ಬುದ್ಧಿ ಈಗ ಉದಾರ ಬುದ್ಧಿ. ವಾವ್!!) ಈಗ ಅವಳು ನನ್ನಿಂದಾಗಿ ತನ್ನ ಹೆಡ್ಡಾಪೀಸಿನಲ್ಲಿ ಮುಖ ತೋರಿಸಲು ಹೇಗೆ ’ಲಾಯಖ್ ನಹೀ ರಹೀ’ ಎಂದೂ ಬುಸುಗುಟ್ಟತೊಡಗಿದಳು.

ಗುಲಾಬಿ ಗಿಡದ ಹಿಂದಿನ ರಾಜಕೀಯ ನನಗೆ ಈಗ ಪರಿಚಯವಾಗತೊಡಗಿತು. ಒಟ್ಟಿನಲ್ಲಿ, ಒಂದು ಗುಲಾಬಿ, ಬರೇ ಗುಲಾಬಿಯಲ್ಲ; ಗುಲಾಬಿಯಲ್ಲ; ಗುಲಾಬಿಯಲ್ಲ !!! ಎಂಬ ಪರಮ ಸತ್ಯದ ದರ್ಶನವಾಗತೊಡಗಿತು. ನಾನು ಅರಿಯದೆಯೇ ಯಾವ ಹುತ್ತಕ್ಕೆ ಕೈಹಾಕಿದೆನೋ ಎಂದು ಪರಿತಪಿಸತೊಡಗಿದೆ. ಗುಲಾಬಿ ಗಿಡದ ಜೀವಕ್ಕಿಂತ ತನ್ನಮ್ಮನ ಬಳಿ ಹೇಗೆ ಮುಖ ತೋರಿಸುವುದೆಂಬ ಸಮಸ್ಯೆಯೇ ಎಲ್ಲದರಿಂದ ಮಿಗಿಲಾಗಿ ಅವಳಿಗಿದ್ದಂತೆ ತೋರತೊಡಗಿತು. ಆದರೇನು ಮಾಡೋಣ? ಮಾಡದ್ದನ್ನು ಉಣ್ಣಲಾದೀತೇ? ಮಾಡಿದ್ದನ್ನು ಉಣ್ಣದಿರಲಾದೀತೇ?

ಆ ಭಗವಂತನಿಗೂ ನನ್ನಲ್ಲಿ ಕರುಣೆ ಬಾರದ ಕಾರಣ ದಿನೇ ದಿನೇ ಓ ನನ್ನ ಗುಲಾಬಿಯು ನನ್ನ ಮಡಿಲೆಂಬ ಐ. ಸಿ. ಯು ನಲ್ಲಿ ಕೊನೆಯುಸಿರೆಳೆಯತೊಡಗಿತು. ಒಂದು ವೇಳೆ ಇದು ಇಹ ಲೋಕ ತ್ಯಜಿಸಿ ಪರಂಧಾಮಕ್ಕೆ ವಿಮಾನವೇರಿದರೆ ಮುಂದೆ ಮನೆಯಲ್ಲಿ ಒಂದು ಯಃಕಶ್ಚಿತ್ ರೋಜಿಗಾಗಿ ರೋಜಾನಾ ನಡೆಯಲಿರುವ ಕುರುಕ್ಷೇತ್ರದ ಸವಿಗಲ್ಪನೆಯಲ್ಲೇ ನಡುಗತೊಡಗಿದೆ. ಈಗಾಗಲೇ ಹೂ, ಎಲೆಗಳನ್ನು ಉದುರಿಸಿಕೊಂಡು ಬರೇ ಮುಳ್ಳುಗಳನ್ನು ಹೊತ್ತು ನಿಂತು ಜೀವನ್ಮರಣಗಳ ಮಧ್ಯೆ ತುಯ್ದಾಡುತ್ತಿರುವ ಗಿಡ ನನಗೆ ಮುಂಬರುವ ದಿನಗಳ ಭೀಕರ ಕಲ್ಪನೆಯಾಗಿ ಚುಚ್ಚತೊಡಗಿದವು. " ಮೆಸರ್ಸ್ ಗುಲಾಬ್ ಚಂದ್ ಐನ್ಡ್ ಸನ್ಸ್" ಪ್ರಾಯೋಜಿತ ಧಾರಾವಾಹಿಯ ಎಪಿಸೋಡುಗಳ ಟ್ರೈಲರ್‌ಗಳು ಮನದಲ್ಲಿ ಮೂಡತೊಡಗಿದವು. ಹದಿಹರಯದಲ್ಲಿಯೂ ಕಟ್ಟುನಿಟ್ಟಾಗಿ ನಿಯತ್ತು ಪಾಲಿಸಿದ ನನಗೆ ಈಗ ಈ ವಯಸ್ಸಿನಲ್ಲಿ ಸೊಂಟಗಳೂ ಕೈಗಳೂ ಬಂದು ನಿದ್ದೆಯಲ್ಲಿ ಕಾಡತೊಡಗಿದವು.

ಹೇಗಾದರೂ ಮಾಡಿ ಗಿಡವನ್ನು ಬದುಕಿಸಬೇಕು, ಜೊತೆಗೆ ಅವಳ ಅಮ್ಮನ ಮನೆಯಲ್ಲಿ ನಡೆಯಲಿರುವ ಮರ್ಯಾದೆಯ ಹರಾಜನ್ನು ನಿಲ್ಲಿಸಬೇಕೆಂದು ನಾನು ಯಾವತ್ತೂ ಕಾಣದ ಯಾವತ್ತೂ ಬೇಡದ(ಪ್ರಾರ್ಥಿಸದ) ದೇವರಲ್ಲೆಲ್ಲಾ ಬೇಡತೊಡಗಿದೆ. ಹೇಗಾದರೂ ಅವಳಮ್ಮನಿಗೆ ಈ ಸುದ್ದಿ ಮುಟ್ಟುವ ಮೊದಲೇ ಗಿಡಕ್ಕೆ ಜೀವ ತುಂಬಿ ಆ ಮೂಲಕ ನನ್ನ ಜೀವವನ್ನೂ ಕಾಪಿಡುವ ಬಗ್ಗೆ ಚಿಂತಿಸತೊಡಗಿದೆ.

ಇಹ ಪರದ ತೊಳಲಾಟದಲ್ಲಿ ದಿನಗಳೆರಡು ಉರುಳಿದವು; ರಾತ್ರಿಗಳು ಹೊರಳಿದವು; ಕೋಪ-ರೋಷಗಳು ಕೆರಳಿದವು; ಕೆಂಗಣ್ಣುಗಳು ಅರಳಿದವು; ಕದನಗಳು ಮರಳಿದವು; ಉರುಳೊಳು ಕೊರಳುಗಳು ನರಳಿದವು;............

ಅಂತಹ ಒಂದು ಸುದಿನ ನಾನು ನನ್ನ ರೋಜಿಯೆದುರು ಸುಡುವ ಬಿಸಿಲಲ್ಲಿ ಕುಳಿತು ’ಮಂಡೆಬಿಸಿ’ ಮಾಡುತ್ತಿರುವಾಗ ಮನೆಯೆದುರು ಕಾರು ಬಂದು ನಿಂತ ಸದ್ದು ಕೇಳಿಸಿತು. ಕಾರಿನಿಂದ ಇಳಿದದ್ದು ಅವಳಮ್ಮ !! ಇಳಿದ ಕೂಡಲೇ ಅವರ ಸ್ಕಾನೀಗಣ್ಣಿಗೆ ಕಂಡಿದ್ದು ಸತ್ತು ಸುಣ್ಣವಾಗಿ ಇಹ ತ್ಯಜಿಸಿ ಇನ್ನಿಲ್ಲವಾದ, ಕೊಡೈ ಸಂಜಾತ, ಅಪರೂಪದ ಗುಲಾಬಿ ಗಿಡದ ಪಾರ್ಥವ ಶರೀರ!! ಹೈ ಕಮಾಂಡಿನ ಮುಖಚರ್ಯೆ ಬದಲಾಗುವುದಕ್ಕೂ, ನನ್ನ ಮನೆ ವಾನರೆಸ್ ನನ್ಹೆಂಡ್ತಿ ಕಾರಿನ ಸದ್ದಿಗೆ ಹೊರಬಂದು ಆ ಚರ್ಯೆಯನ್ನು ಗುರುತಿಸುವುದಕ್ಕೂ ಸರಿ ಹೋಯಿತು. ಒಂದೆಡೆಯಲ್ಲಿ ತಾಯಿ-ಮಗಳ ಈ ಅಪೂರ್ವ ಸಮಾಗಮ, ಇನ್ನೊಂದೆಡೆಯಲ್ಲಿ ಸತ್ತು ಕರಟಿ ಸ್ವರ್ಗವಾಸಿಯಾದ ಗುಲಾಬಿ ಗಿಡದ ಎದುರಲ್ಲಿ ಪೆಕರನಂತೆ ನಿಂತ ಬಕರನಾದ ನಾನು........!!!

................. ನಾನು ಇನ್ನೇನೂ ಹೇಳಲಾರೆ. ಇಲ್ಲಿಗೆ ನನ್ನ ಕಥೆ ಮುಗಿಯಿತು ಸ್ವಾಮಿ !!!


ಪ್ರಕಟನೆ: ’ತರಂಗ’ ೨೬.೧೧.೨೦೦೮

Sunday, November 16, 2008

"ಕಿಂಗ್ ಕತೆ"

- ಜಯದೇವ ಪ್ರಸಾದ.





ಶ್ರೀ. ಹರಿ ಕುಮಾರ್’, ಭಾ. . ಸೇ

ಕೋಣೆಯ ಹೊರಗೆ ಬಾಗಿಲಿನ ಪಕ್ಕದಲ್ಲಿ ಬೋರ್ಡ್ ತೂಗಿಹಾಕಿತ್ತು. ಕೆಳಗೆ ಗೋಡೆಯುದ್ದಕ್ಕೂ ಸಾಲಾಗಿ ನಾಲ್ಕೈದು ಬೆಂಚುಗಳನ್ನಿರಿಸಲಾಗಿತ್ತು. ಸಾರ್ವಜನಿಕರು ಬೆಂಚುಗಳನ್ನು ತುಂಬಿ ಅದೂ ಅಲ್ಲದೆ ಪಕ್ಕದಲ್ಲಿ ವೆರಾಂಡದುದ್ದಕ್ಕೂ ನೆರೆದಿದ್ದರು. ಎಲ್ಲರಿಗೂ ಹೆಚ್ಚಲ್ಲ; ಒಮ್ಮೆ, ಒಂದೇ ನಿಮಿಷಕ್ಕಾಗಿ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಬೇಕಾಗಿತ್ತು. ಪ್ರತಿಯೊಬ್ಬರಿಗೂ ಅವರವರದೇ ಅಹವಾಲು. ಕೆಲವರಿಗೆ ಪಟ್ಟೆ ಸಮಸ್ಯೆ, ಕೆಲವರಿಗೆ ದಾರಿಯ ಸಮಸ್ಯೆ, ಕೆಲವರಿಗೆ ನೀರಿನದ್ದು, ಇನ್ನು ಕೆಲವರಿಗೆ ಕಂದಾಯ. ಅಂತೂ ಪುಟ್ಟ ಜಿಲ್ಲೆಯಲ್ಲಿ ಬರಬಹುದಾದ ಎಲ್ಲಾ ತೆರನಾದ ಸಮಸ್ಯೆಗಳೂ ಅಲ್ಲಿ ಇಲ್ಲಿ ಎಲ್ಲಾ ಅಲೆದು ಕೊನೆಗೆ ಕೆಲವು ಬಿಳೀ ಹಾಳೆಗಳಲ್ಲಿ ಅಕ್ಷರಗಳಾಗಿ ದೈನ್ಯದಿಂದ ಜೋಡಿಸಿದ ಕೈಗಳೆಡೆಯಲ್ಲಿ ಅರ್ಜಿಯಾಗಿ ಬಾಗಿಲಿನ ಹೊರಗೆ ಘಂಟೆಗಟ್ಟಲೆ ಹಾಳ ಬೀಳುತ್ತವೆ.

ಬಾಗಿಲು ಹೊಕ್ಕು ಒಳಹೋದೊಡನೆ ಎದುರಿಗೆ ದೊಡ್ಡ ಟೇಬಲ್. ಅದರ ಹಿಂದೆ ಒಂದು ಚೇರ್ - ತಿರುಗು ಕುರ್ಚಿ. ಅದರಲ್ಲಿ ಕುಳಿತಿದ್ದಾರೆ ಶ್ರೀ. ಹರಿ ಕುಮಾರ್, . ಭಾ. ಸೇ. ಕೊಠಡಿಯೊಳಗೆ ಬರುವ ಪ್ರತಿಯೊಬ್ಬರೂ ದೀನರಾಗಿ ಅತ್ಯಂತ ಗೌರವದಿಂದ ತಮ್ಮ ಅಹವಾಲನ್ನು ನೀಡುತ್ತಾರೆ. ಅತ್ಯಂತ ಭಕ್ತಿಯಿಂದ ತಮ್ಮ ಸಮಸ್ಯೆಯನ್ನು ನಿವೇದಿಸಿ ಜಿಲ್ಲಾಧಿಕಾರಿಯವರಿಂದ ಅರ್ಜಿಯ ಕೊನೆಯಲ್ಲಿ ಬರೆಯಲ್ಪಡಬೇಕಾದ ಒಂದೆರಡು ಶಬ್ದಗಳ ಸಕಾರಾತ್ಮಕ ಟಿಪ್ಪಣಿಗಾಗಿ ಆಸೆಯಿಂದ ಕಾಯುತ್ತಾರೆ.

ಹರಿಕುಮಾರ್ ಅವರಿಗೆ ಇದೆಲ್ಲಾ ಭಕ್ತಿ, ನಯ ವಿನಯ ಮಾನ ಮನ್ನಣೆಗಳು ಅಭ್ಯಾಸವಾಗಿರುತ್ತದೆ. ಬಹಳ ಬಡ ಕುಟುಂಬದಿಂದ ಬಂದ ಹರಿಕುಮಾರ್ ..ಎಸ್ ಮಾಡಿ ೧೨ ವರ್ಷಗಳೇ ಸಂದಿದ್ದವು. ಅವರಿಗೆ ಇಂತಹ ವಾತಾವರಣ ತಮ್ಮ ದೈನಂದಿನ ಕೆಲಸಗಳಲ್ಲಿ ಗಾಳಿಯಷ್ಟೇ ಸಹಜವಾಗಿ ಹೋಗಿದೆ. ಜನ ಮನ್ನಣೆ, ರಾಜ ಮರ್ಯಾದೆ ಇತ್ಯಾದಿ ಏನೂ ವಿಶೇಷವೆನಿಸುವುದಿಲ್ಲ.

ಒಬ್ಬನ ಅರ್ಜಿಯಲ್ಲಿ ಷರಾ ಗೀಚಿ ಇನ್ನೊಬ್ಬನೆಡೆಗೆ ಮುಖ ತಿರುವುತ್ತಿರುವಾಗ ಪಿ. ಬಂದು ಮೆಲುದನಿಯಲ್ಲಿ ಉಸುರಿದ " ಸರ್, ಘಂಟೆಗೆ ಮೈದಾನಿನಲ್ಲಿ ಸಭೆ. ಎಲ್ಲರೂ ಕಾದಿದ್ದಾರೆ. ಲೇಟ್ ಆಗ್ತಾ ಇದೆ.". ಜಿಲ್ಲಾಧಿಕಾರಿ ಕೂಡಲೇ ಹೊರಟರು. ನೆರೆದಿದ್ದ ಜನರಿಗೆಲ್ಲಾ ನಿರಾಸೆಯಾದರೂ ಭಕ್ತಿಯಿಂದ ದೂರಸರಿದು ಅವರಿಗೆ ದಾರಿ ಮಾಡಿ ಕೊಟ್ಟರು ಪಿ. "ಇನ್ನು ನಾಳೆ.....ಸಾಹೇಬ್ರಿಗೆ ಬೇರೆ ಮೀಟಿಂಗಿಗೆ ಹೋಗ್ಲಿಕ್ಕೆ ಉಂಟು" ಎಂದು ಎರಡು-ಮೂರು ಬಾರಿ ಅನ್ನೌನ್ಸ್ ಮಾಡುತ್ತಿರುವಾಗಲೇ ಜಿಲ್ಲಾಧಿಕಾರಿಯ ಕೆಂಪುದೀಪದ ಕಾರು ಡುರ್ ಗುಟ್ಟುತ್ತಾ ಕಚೇರಿಯ ಆವರಣದಿಂದ ಹೊರಗೆ ಹೋಯಿತು.

ಅಂದು ಜಿಲ್ಲಾಧಿಕಾರಿ ಹರಿಕುಮಾರ್ ದಿನದ ಎಲ್ಲಾ ಕೆಲಸಗಳನ್ನು ಮುಗಿಸಿ ಮನೆಗೆ ಬಂದು ಊಟ ಮಾಡಿ ಸೋಫ಼ಾದಲ್ಲಿ ಕುಳಿತಾಗ ರಾತ್ರಿ ಘಂಟೆ ಹತ್ತು.

ಅಷ್ಟರಲ್ಲಿ " ಅಪ್ಪ, ಕತೆ.......ಅಪ್ಪ, ಕತೆ" ಎಂಟು ವರ್ಷದ ಮಗು ಹರ್ಷ ಕತೆಗಾಗಿ ರಾತ್ರಿಯ ಹತ್ತು ಗಂಟೆಗೆ ಅಪ್ಪನನ್ನು ಪೀಡಿಸತೊಡಗಿದ.

ರಾತ್ರಿ ಎಷ್ಟು ಹೊತ್ತಾದರೂ ಕತೆಯಿಲ್ಲದೆ ಮಗ ಹರ್ಷನಿಗೆ ನಿದ್ದೆ ಬರುವುದಿಲ್ಲ. ಅಪ್ಪ ಹರೀಶ್ ಕುಮಾರರಿಗಾದರೋ, ಹಗಲಿಡೀ ಆಫ಼ೀಸಿನ ಕೆಲಸ; ಟೆನ್ಷನ್, ಕೆಲಸದ ಒತ್ತಡ, ಪ್ರಯಾಣ - ಎಲ್ಲದರಿಂದ ಬಿಡುಗಡೆಯಾಗಿ ರಾತ್ರಿ ಊಟವಾಗಿ ಸೋಫ಼ಾದಲ್ಲಿ ಕುಳಿತು ಬೆಳಗ್ಗೆ ಅರೆಬರೆ ಓದಿದ ಪೇಪರ್ ತೆರೆದು ಕಣ್ಣು ಹಾಯಿಸುತ್ತಲೇ ತೂಕಡಿಕೆ ಆರಂಭವಾಗುತ್ತದೆ.

" ಬೇಡ. ನನಗೆ ನಿದ್ದೆ ಬರ್ತದೆ. ಅಮ್ಮನತ್ರ ಹೇಳು"
" ಅಮ್ಮ ಕಿಚನ್ನಲ್ಲಿ........ ನೀನೇ ಹೇಳು ಕತೆ. ಪ್ಲೀಸ್........"
" ದೀದಿ ಹತ್ರ ಕೇಳು. ಅವಳು ಹೇಳ್ತಾಳೆ." ಅಂತ ಮನೆಯಲ್ಲಿ ಕೆಲಸಕ್ಕಿರುವ ಮೈಡ್ ಹತ್ರ ಸಾಗ ಹಾಕಲು ಪ್ರಯತ್ನಿಸಿದರು.
" ದೀದಿಗೆ ಕತೆ ಹೇಳ್ಲಿಕ್ಕೆ ಬರುದಿಲ್ಲ. ನೀನೇ ಹೇಳಪ್ಪ." ಮಗನ ಸ್ವರದಲ್ಲಿ ಒತ್ತಾಯವಿತ್ತು, ಆಸೆಯಿತ್ತು.

ಮಗನ ಮನಸ್ಸನ್ನು ಒಡೆಯಲು ಇಚ್ಚಿಸದ ಹರಿ ಓದುತ್ತಿದ್ದ ಪೇಪರ್ ಮಡಚಿಟ್ಟು ಕುಳಿತಲ್ಲಿಂದ ಎದ್ದು ಕೈಯೆಳೆದುಕೊಂಡು ಹೋಗುತ್ತಿರುವ ಮಗನ ಹಿಂದೆ " .ಕೆ.., .ಕೆ" ಎಂದು ಹೇಳುತ್ತಾ ಹೆಜ್ಜೆ ಹಾಕಿದರು. ಕೆಲಸದಾಕೆ ಹಾಸಿಗೆಯನ್ನು ರೆಡಿ ಮಾಡಿಟ್ಟಿದ್ದಳು. ಹರ್ಷನನ್ನು ಹಾಸಿಗೆಯಲ್ಲಿ ಇರಿಸಿ ಪಕ್ಕದಲ್ಲಿ ಅಡ್ಡ ಬಿದ್ದುಕೊಂಡರು.

" ಕತೆ ಬೇಡ. ಇವತ್ತು ಬೆನ್ನು ತಟ್ಟುತ್ತೇನೆ. ಮಲಗು. ಕತೆ ನಾಳೆ ಆಯ್ತಾ?" ಇನ್ನೊಮ್ಮೆ ಕತೆಯ ಪೀಡೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರು ಹರಿ ಕುಮಾರ್.

" ಇಲ್ಲ. ಕತೆ ಬೇಕು. ನೀನು ಜಸ್ಟ್ ನವ್ ಎಗ್ರಿ ಆಗಿದ್ದಿ. ಈಗ ನೋ ಚೀಟಿಂಗ್", ಮಗ ಬಿಡಲಿಲ್ಲ.

"ಒಂದು ಕತೆ ಹೇಳಿ ಮರಾಯ್ರೆ.. ಮಗನನ್ನು ನಿದ್ದೆ ಮಾಡ್ಸಿ" ಕಿಚನ್ನಿನಿಂದ ಇತರ ಸದ್ದುಗಳನ್ನು ಮೀರಿಸಿ ಸತೀವಾಣಿ ಮೊಳಗಿತು.

"ಸರಿ" ಅಂತ ಹೇಳಿ ಮಗನನ್ನು ಸರಿಯಾಗಿ ಅಪ್ಪಿ ಹಿಡಿದುಕೊಂಡು ಕತೆ ಹೇಳಲು ರೆಡಿಯಾದರು ಹರಿ ಕುಮಾರ್.

"ಯಾವ ಕತೆ ಬೇಕು?"

"ಕಿಂಗ್ ಕತೆ...." ಉತ್ಸಾಹದಿಂದ ಹೇಳಿದ ಹರ್ಷ.

" ........... ಅದು ಬೇಡ. ಬೇರೆ ಯಾವುದಾದರೂ...." ಕಿಂಗ್ ಕತೆಗೆ ಶತಮಾನೋತ್ಸವ ಆಗಿತ್ತು. ಕತೆ ಹೇಳಿ ಹೇಳಿ ಬೋರ್ ಹೊಡೆದು ಹೋಗಿತ್ತು ಹರಿ ಅವರಿಗೆ. ಕಿಂಗಿಗೂ ಹರ್ಷನಿಗೂ ಅದ್ಯಾವ ಜನ್ಮದ ಋಣಾನುಬಂಧವೋ ಏನೋ, ಹರ್ಷನಿಗೆ ಅದೇ ಕತೆ ಬೇಕು. ಕೇಳಿದಷ್ಟೂ ಇನ್ನೂ ಬೇಕು ಅಂತ ಹಟ ಅವನದ್ದು. ಕೊನೆಗೆ ಅದೇ ಕಿಂಗ್ ಕತೆಯನ್ನು ತಿದ್ದಿ ತೀಡಿ ತಿರುಚಿ ಮುರುಚಿ ಹಲವಾರು ವೇರಿಯೇಶನ್ನುಗಳನ್ನು ಮಾಡಿ ಮಾಡಿ ಒಬ್ಬ ಅದ್ಭುತ ಅಶು-ಕತೆಗಾರರಾಗುವ ಎಲ್ಲಾ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದರು ಹರಿ ಕುಮಾರ್.

ಇಂದು ಪುನಃ ಕಿಂಗ್ ಕತೆ................

" ಒಂದು ಊರಿನಲ್ಲಿ ಒಬ್ಬ ಕಿಂಗ್ ಇದ್ದ............" ನಿದ್ದೆಯಿಂದ ಭಾರವಾದ ಕಣ್ಣುಗಳನ್ನು ಬಲವಂತವಾಗಿ ತೆರೆದಿಟ್ಟು ಕತೆ ಆರಂಭಿಸಿದರು ಹರಿ ಕುಮಾರ್. " ಅವನು ಬಹಳ ಚೆನ್ನಾಗಿ ರಾಜ್ಯಭಾರ ಮಾಡ್ತಿದ್ದ..."

"ರಾಜ್ಯಭಾರ ಅಂದ್ರೆ..?"

"ರಾಜ್ಯಭಾರ ಅಂದ್ರೆರೂಲ್’. ಹಿ ವಾಸ್ ಗುಡ್ ರೂಲರ್. ನೀನೀಗ ಬೇಗ ನಿದ್ದೆ ಮಾಡ್ಬೇಕು. ಕೊಶ್ಚನ್ ಕೇಳ್ಕೊಂಡು ಇರೋದು ಅಲ್ಲ."

" ಹೂಂ. ಕಂಟಿನ್ಯೂ...." ಹರ್ಷ ಅಪ್ಪನಿಗೆ ಇನ್ನಷ್ಟು ಅಂಟಿಕೊಂಡು ಮೈಯೆಲ್ಲ ಕಿವಿಯಾದ.

" .ಕೆ. ಒಂದು ದಿನ ರಾಜನಿಗೆ ಅವನ ರಾಜ್ಯಭಾರದ ಬಗ್ಗೆ ಜನ ಏನು ತಿಳ್ಕೊಂಡಿದಾರೆ ಅಂತ ಕಂಡು ಹಿಡಿಯುವ ಮನಸ್ಸಾಯಿತು. ಅದಕ್ಕೆ ಅವನು ಒಂದು ಮಾರುವೇಷ ಅಂದ್ರೆ; ಕಿಂಗ್ ಡ್ರೆಸ್ ಅಲ್ಲ, ಬೇರೆ ಒಂದು ಆರ್ಡಿನರಿ ಮಾಮ ಥರ ಡ್ರೆಸ್ ಮಾಡಿಕೊಂಡು ಒಂದು ಕಂಬಳಿ ಸುತ್ತಿಕೊಂಡು ಊರೆಲ್ಲ ಸುತ್ತು ಹಾಕ್ಲಿಕ್ಕೆ ಹೋದ. ಅವನು ಕಿಂಗ್ ಅಂತ ಯಾರಿಗೂ ಗುರುತು ಹಿಡಿಯಲಿಕ್ಕೆ ಸಾಧ್ಯವೇ ಇರಲಿಲ್ಲ...."

ಕತೆಗೆ ಒಂದು ಹೊಸ ತಿರುವು ಕೊಟ್ಟರು ಹರಿ ಕುಮಾರ್. ಹೊಸ ಟ್ರಾಕ್ ಕೇಳಿ ಹರ್ಷನಿಗೆ ಖುಶಿಯಾಯಿತು. ಒಂದು ಮುಗುಳ್ನಗೆ ಬೀರಿ ಕತೆಯನ್ನು ಆಸಕ್ತಿಯಿಂದ ಆಸ್ವಾದಿಸತೊಡಗಿದನು....

" ಹಾಗೇ ಕಂಬಳಿಯಲ್ಲಿ ಮುಸುಕು ಹಾಕ್ಕೊಂಡು ಮನೆ ಮನೆ ಸುತ್ತಿ ಕಿಟಕಿಗಳ ಹಿಂದೆ ಅಡಗಿ ನಿಂತುಕೊಂಡು ಜನರ ಮಾತುಕತೆ ಕೇಳಿಸಿಕೊಂಡು ಇದ್ದ ರಾಜ. ಹಾಗೇ ತಿರುಗುತ್ತಾ ಇರುವಾಗ ಒಂದು ಕಡೆಯಲ್ಲಿ ಸಡನ್ನಾಗಿ ಒಬ್ಬ ಪೋಲಿಸ್ ಬಂದು ಅವನನ್ನು ಹಿಡಿದುಬಿಟ್ಟ. ರಾಜ ಕೂಡಲೇ " ನನ್ನನ್ನು ಬಿಡಾ; ನಾನು ರಾಜ" ಅಂತ ಜೋರು ಮಾಡಿದ. ಅದನ್ನೆಲ್ಲ ಕೇಳಿಸಿಕೊಳ್ಳದೆ ಪೋಲಿಸ್ ಅವನ ಮುಸುಕನ್ನು ಎಳೆದು ಬಿಸಾಡಿ ರಾಜನ ಕೆನ್ನೆಗೆ ಒಂದು ಹೊಡೆದುಕಳ್ಳ..., ನೀನು ಕಳ್ಳತನ ಮಾಡೋದೂ ಅಲ್ದೆ....., ರಾಜ ಅಂತೆ ರಾಜ !!’ ಅಂತ ಜೋರಗಿ ಇನ್ನೆರಡು ಪೆಟ್ಟು ಹಾಕಿದ", ಹರಿ ಕುಮಾರ್ ನಿದ್ದೆಗಣ್ಣಿನಲ್ಲಿ ಮನಬಂದಂತೆ ಕತೆಕಟ್ಟತೊಡಗಿದರು.

"ರಾಜನಿಗೆ ಪೆಟ್ಟಾ........." ಹರ್ಷನಿಗೆ ಜೋರಾಗಿ ನಗೆ ಬಂತು.

" ಹೌದು. ಅವನಿಗೆ ಏನು ಗೊತ್ತು ರಾಜ ಅಂತ. ಅವನು ನೆನೆಸಿದ್ದು ಕಳ್ಳ ಅಂತ. ರಾಜನ ಡ್ರೆಸ್ ಇರ್ಲಿಲ್ಲ ಅಲ್ವ?" ಅವರು ವಿವರಣೆಕೊಟ್ಟರು.

ಹರ್ಷ ಜೋರಾಗಿ ನಗತೊಡಗಿದ. ಅವನಿಗೆ ಇವತ್ತಿನ ಕಿಂಗ್ ಕತೆ ಬಹಳ ಇಷ್ಟವಾಯಿತು. ಜೊತೆಗೆಡಿಶ್...ಡಿಶ್ಅಂತ ರಾಜನಿಗೆ ಅವನೂ ಎರಡು ಕೊಟ್ಟ.

" ಆಮೇಲೆ, ಇನ್ನೂ ಒಂದೆರಡು ಜನ ಪೋಲಿಸರು ಸೇರಿ ರಾಜನ ಕೈಗೆ ಹಗ್ಗ ಕಟ್ಟಿ ಅವನನ್ನು ಸ್ಟೇಶನಿಗೆ ಎಳ್ಕೊಂಡು ಹೋದ್ರು. ಧಾಂಡಿಗರ ಎದುರು ರಾಜನಿಗೆ ಫ಼ೈಟ್ ಮಾಡ್ಲಿಕ್ಕೆ ಆಗ್ಲೇ ಇಲ್ಲ. ಅವನುನಾನು ರಾಜ, ನಾನು ರಾಜ, ಬಿಡಿ ನನ್ನಅಂತ ಜೋರಾಗಿ ಬೊಬ್ಬೆ ಹಾಕ್ತಾ ಇದ್ದ. ಪೋಲೀಸರು ಅವನಿಗೆ ಸರಿಯಾಗಿ ನಾಲ್ಕು ಕೊಟ್ಟು ಎಳ್ಕೊಂಡು ಹೋದ್ರು."

" ರಾಜ ಯಾಕೆ ಅವರನ್ನ ಕಿಲ್ ಮಾಡ್ಬಾರ್ದು?" ಮಗ ಪ್ರಶ್ನೆ ಕೇಳಿದ. "ರಾಜ ಅಂದ್ರೆ ಆಲ್ ಪವರ್ ಫ಼ುಲ್ ಅಲ್ವ?"

" ಇಲ್ಲ ಮಗ.. ಈಗ ಅವನಿಗೆ ರಾಜನ ಡ್ರೆಸ್ ಇಲ್ಲ, ಕಿರೀಟ ಇಲ್ಲ, ಸಿಂಹಾಸನ ಇಲ್ಲ, ಮುಖ್ಯವಾಗಿ ರಾಜನ ಸ್ಥಾನ ಇಲ್ಲ. ಈಗ ಅವನೊಬ್ಬ ಪೋಲಿಸರ ಕೈಗೆ ಸಿಕ್ಕಿ ಬಿದ್ದ ಸಾಮಾನ್ಯ ವ್ಯಕ್ತಿ. ಅರಮನೆಯಲ್ಲಿ ಆಗುತ್ತಿದ್ದರೆ ಇಷ್ಟು ಹೊತ್ತಿಗೆ................. "

ಹೇಳುತ್ತಾ ಹೋದಂತೆ ಹರಿಕುಮಾರ್ ಅವರಿಗೆ ಕತೆಯಲ್ಲಿ ಹೊಸ ಹೊಸ ಹೊಳಹುಗಳು ಕಾಣಿಸತೊಡಗಿದವು. ಅವರದ್ದೇ ಆಶು-ಕತೆಯಲ್ಲಿ ಅವರಿಗೇ ಹೊಸ ಅರ್ಥಗಳು ಕಾಣತೊಡಗಿದವು. ಬರುತ್ತಿದ್ದ ನಿದ್ದೆ ಹಾರಿ ಹೋಯಿತು. ಸಂಪೂರ್ಣ ಎಚ್ಚರವಾಯಿತು. ಮಲಗಿದಲ್ಲೇ ಏನನ್ನೋ ಡೀಪಾಗಿ ಯೋಚಿಸುತ್ತಾ ಸುಮ್ಮನೆ ಇದ್ದು ಬಿಟ್ಟರು. ಹರ್ಷ ಅವನಷ್ಟಕ್ಕೇ ನಿದ್ದೆಗೆ ಜಾರಿದ್ದು ಅವರಿಗೆ ತಿಳಿಯಲೇ ಇಲ್ಲ.

ಕಿಚನ್ ಕೆಲಸ ಮುಗಿಸಿ ಹೆಂಡ್ತಿ "ಬನ್ನಿ ಮಾರಾಯ್ರೇ....ಇನ್ನು ಹೋಗಿ ಮಲಗೋಣ. ಏನು ಭಾರೀ ಅಲೋಚನೆ ಇವತ್ತು?" ಎಂದು ಕಣ್ಣು ತಿಕ್ಕಿಕೊಂಡು ಹತ್ತಿರ ಬಂದರು.

ಹರಿ ಕುಮಾರ್ ಸುಮ್ಮನೆ ಹೆಂಡತಿಯನ್ನೇ ದೃಷ್ಟಿಸುತ್ತಾ ಇದ್ದುಬಿಟ್ಟರು.

"ನಾಳೆ ಸಾಹೇಬ್ರು ಆಫ಼ಿಸಿಗೆ ಹೋಗಬೇಡ್ವೇ? ದರ್ಬಾರಿನಲ್ಲಿ ಜನ ಎಲ್ಲಾ ಕಾಯ್ತಾ ಇರಲ್ವಾ ನಿಮ್ಮ ದರ್ಶನಕ್ಕೆ... ?"

" ಹೌದು.........ಕಾಯ್ತಿರ್ತಾರೆ.... ಸಾವಿರಾರು ಜನ.....", ಹರಿ ಕುಮಾರ್ ಜೋರಾಗಿ ಒಮ್ಮೆ ನಿಟ್ಟುಸಿರು ಬಿಟ್ಟು ಮಲಗಿದಲ್ಲಿಂದ ಎದ್ದು ತಮ್ಮ ಬೆಡ್ ರೂಮಿನೆಡೆಗೆ ನಿಧಾನವಾಗಿ ಹೆಜ್ಜೆ ಹಾಕಿದರು.


* * * *


[ನಡುಮನೆಯವರ "ಮಲ್ಲಿಗೆ ಮುಗುಳು ೨೦೦೮" ಸ್ಪರ್ಧೆಯಲ್ಲಿ ಆಯ್ಕೆಯಾದ ಸಣ್ಣ ಕತೆ. ಪ್ರಕಟಣೆ ಡಿಸೆಂಬರ್ ನಲ್ಲಿ ]