Monday, August 24, 2009


ಜಪಾನೀಯರ ಬಿಸಿನೆಸ್ ಸ್ಟೈಲ್. . . . . .

ಟೋಕ್ಯೋದ ನರಿತಾ ಇಂಟರ್ನಾಶನಲ್ ಏರ್ಪೋರ್ಟಿನಲ್ಲಿ ವಿಮಾನ ಇಳಿದು ಬಾಗಿಲು ತೆರೆದಾಗ ಏರೋಬ್ರಿಜ್ ಹಾದು ಏರ್ಪೋರ್ಟಿನ ಭವ್ಯ ಕಟ್ಟಡವನ್ನು ಹೊಕ್ಕ ನಾನು ಜಪಾನಿನ ಇನ್ನೊಂದು ಅನುಭವಕ್ಕಾಗಿ ಮನಸ್ಸಿನಲ್ಲಿ ಸಿದ್ಧನಾಗುತ್ತೇನೆ. ಪಾಸ್ ಪೋರ್ಟ್, ಟಿಕೆಟ್ ತುಂಡು, ಇಮಿಗ್ರೇಶನ್ ಕಾರ್ಡ್ ಎಲ್ಲಾ ರೆಡಿ ಮಾಡಿಕೊಂಡು ಇಮಿಗ್ರೇಶನ್ನಿನಲ್ಲಿ ಮೈಲಿಗಟ್ಟಲೆ ಕ್ಯೂ ತಪ್ಪಿಸಲೆಂದು ಬುಡುಬುಡುನೆ ಸ್ಟ್ರೋಲಿ ಎಳೆದುಕೊಂಡು ಓಡುತ್ತೇನೆ. ಅಂತೂ ಇಂತೂ ಕ್ಯೂ ಮುಗಿಸಿ ಲಗೇಜು ತೆಗೆದುಕೊಂಡು ಏರ್ಪೋರ್ಟ್ ಕಟ್ಟಡದಿಂದ ಹೊರಬಂದಂತೆ ಮೊತ್ತ ಮೊದಲನೆಯದಾಗಿ ಡಾಲರು ಕೊಟ್ಟು ಯೆನ್ ಕರೆನ್ಸಿಯನ್ನು ಪಡೆದುಕೊಳ್ಳಲು ಮರೆಯುವುದಿಲ್ಲ. ಹಾಗೆಯೇ ಇನ್ನೊಂದು ಕೌಂಟರ್ನಲ್ಲಿ ೨೬೦೦ ಯೆನ್ ತೆತ್ತು ಜಪಾನೀಯರು ’ಲಿಮ್ ಜಿಮ್’ ಎಂದು ಪ್ರೀತಿಯಿಂದ ಕರೆಯುವ ’ಲಿಮೋಸಿನ್’ ಬಸ್ಸಿನಲ್ಲಿ ’ಟಿ-ಕಾಟ್’ (ಸಿಟಿ ಟರ್ಮಿನಸ್) ಗಾಗಿ ಟಿಕೆಟ್ ಕೊಂಡು ಕಟ್ಟಡದಿಂದ ಹೊರ ಬೀಳುತ್ತೇನೆ. ಥಂಡಿಹವೆಯನ್ನು ಆಸ್ವಾದಿಸುತ್ತಾ ನಮೂದಿಸಿದ ಪ್ಲಾಟ್ ಫಾರ್ಮ್ ನಲ್ಲಿ ನಮೂದಿಸಿದ ಘಂಟೆ-ನಿಮಿಷಕ್ಕೆ ಸರಿಯಾಗಿ ಬಂದ ಬಸ್ಸನ್ನೇರಿ ಸೀಟ್ ಬೆಲ್ಟ್ ಧರಿಸಿ ’ಹೋಟೆಲಿಗೆ ಇನ್ನೂ ಒಂದೂವರೆ ಘಂಟೆ ಇದೆ’ ಎಂದುಕೊಂಡು ಹೀಗೇ-ಸುಮ್ಮನೇ ಕಣ್ಣು ಮುಚ್ಚುತ್ತೇನೆ. ಮೊದಮೊದಲು ಕಂಪೆನಿಯಿಂದ ನಾವುಗಳು ಜಪಾನಿಗೆ ಬರುವಾಗ ನಮ್ಮ ಬಿಸಿನೆಸ್ ಸ್ನೇಹಿತರು ಏರ್ಪೋರ್ಟಿಗೇ ಬಂದು ಬಿಡುತ್ತಿದ್ದರು; ಸ್ವಾಗತಿಸಿ ಹೋಟೆಲ್ಲಿಗೆ ಕರೆದುಕೊಂಡು ಹೋಗಲು. ಜಪಾನಿನಲ್ಲಿ ಇಂಗ್ಲಿಷ್ ಬಳಕೆ ಬಲುಕಡಿಮೆ. ಎಲ್ಲಿ ಹೋಗಬೇಕಾದರೂ ಅವರಲ್ಲಿ ಒಬ್ಬ ಇಂಗ್ಲಿಷ್ ಬಲ್ಲ ಸ್ನೇಹಿತ ಇಲ್ಲದಿದ್ದರೆ ದಾರಿಕೆಟ್ಟು ಅವಾಂತರವಾಗುವುದು ಖಂಡಿತ. ಕ್ರಮೇಣ ನಮಗೆ ಜಪಾನ್ ಪರಿಚಯವಾದಂತೆಲ್ಲಾ ನಾವಾಗಿಯೇ ಹೋಟೆಲ್ಲಿಗೆ ಹೋಗಿ, ಮರುದಿನ ಟಾಕ್ಸಿ ಹಿಡಿದು ಅವರ ಆಫೀಸಿಗೆ ಹೋಗತೊಡಗಿದೆವು. ಆದರೂ ನಮ್ಮ ಸುರಕ್ಷತೆ ಸೌಕರ್ಯಗಳ ಬಗ್ಗಿಗಿನ ಅವರ ಕಾಳಜಿ ಏನೂ ಕಡಿಮೆಯಾಗಿರಲಿಲ್ಲ. ಹೋಟೆಲ್ ತಲುಪಿದಾಕ್ಷಣ ನನ್ನ ಹೆಸರನ್ನು ಅಲ್ಲಿದ್ದ ಪ್ಯಾಡ್ ಮೇಲೆ ದೊಡ್ಡಕ್ಷರಗಳಲ್ಲಿ ಬರೆದು ಬೊಂಬೆಯಂತೆ ಕಾಣುವ ಡೆಸ್ಕ್ ಹುಡುಗಿಗೆ ತೋರಿಸುತ್ತೇನೆ. ಹೆಸರನ್ನು ಉಚ್ಚರಿಸಿದರೆ ಅವರಿಗೆ ಸರ್ವಥಾ ಅರ್ಥವಾಗುವುದಿಲ್ಲ. ಸುಮ್ಮನೇ ಗೊಂದಲ ಸೃಷ್ಟಿಯಾಗುತ್ತದೆ. ಡೆಸ್ಕ್ ಹುಡುಗಿ ’ಮೋಶಿ ಮೋಶಿ’ (ಹಲೋ) ಎನ್ನುತ್ತಾ, ’ಚೊಟ್ಟೊ..’ (ಒಂದು ನಿಮಿಷ..) ಎನ್ನುತ್ತಾ ಕ್ಷಣಾರ್ಧದಲ್ಲೇ ಕಂಪ್ಯೂಟರ್ ನಲ್ಲಿ ನನ್ನ ಬುಕ್ಕಿಂಗ್ ಅನ್ನು ಕಂಡುಹಿಡಿದು ಮುಖವೆಲ್ಲಾ ನಗೆಚೆಲ್ಲುತ್ತಾ ಕೈಭಾಷೆಯೊಂದಿಗೆ ’ಪಸು ಪೋರ್ಟೊ’ ಎನ್ನುತ್ತಾಳೆ. ಫಾರ್ಮ್ ನನ್ನಲ್ಲಿ ತುಂಬಿಸಿ, ಪಾಸ್ಪೋರ್ಟ್ ಪರೀಕ್ಷಿಸಿ (ಜರೋಕ್ಸ್ ತೆಗೆದು) ’ಅರಿಗತೋ...ಅರಿಗತೋ.. ’(ವಂದನೆಗಳು) ಎಂದು ಎರಡೆರಡು ಬಾರಿ ನಡು ಬಗ್ಗಿಸಿ ರೂಮಿನ ಇಲೆಕ್ಟ್ರಾನಿಕ್ ಕೀ (ಕಾರ್ಡ್) ನೀಡುತ್ತಾಳೆ. ಕೀ ಜಾಕೆಟ್ ಮೇಲಿನ ರೂಮ್ ನಂಬರಿಗೆ ರೌಂಡ್ ಸುತ್ತಿ ಗಮನ ಹರಿಸುತ್ತಾಳೆ. ಲಿಫ್ಟ್ ಏರಿ ರೂಮು ಹುಡುಕಿಕೊಂಡು ಬಂದು ಕೀ ಕಾರ್ಡ್ ತೂರಿಸಿ ಬಾಗಿಲು ತೆರೆದಾಗ ಇಲಿಬಿಲ ಹೊಕ್ಕಂತಾಗುತ್ತದೆ. ಅಷ್ಟು ಸಣ್ಣ ರೂಮು. ಮಧ್ಯೆ ಹಾಸಿಗೆ; ಅಲ್ಲಿ ಕುಳಿತು ಎರಡೂ ಕೈ ಸ್ಟ್ರೆಚ್ ಮಾಡಿದರೆ ಗೋಡೆಗೆ ತಾಗುತ್ತದೆ. ಹಾಸಿಗೆ ಸುತ್ತಲೂ ಕಷ್ಟದಿಂದ ನಡೆದಾದಲು ಜಾಗ. ಮೂಲೆಯಲ್ಲಿ ಒಂದು ಪುಟ್ಟ ಟಿ.ವಿ. (ಹೆಚ್ಚಾಗಿ, ಎಲ್ಲಾ ಚಾನಲ್ ಜಪಾನೀಸ್.) ಹಾಗೂ ಬಾಗಿಲಿನ ಬದಿಯಲ್ಲೇ ಒಂದು ಬಾತ್ ರೂಮ್ ಅದರೊಳಗೆ ಒಂದು ಕಮೋಡ್ ಮತ್ತು ಬೇಬಿ ಸೈಜ್ ಬಾತ್ ಟಬ್. ಟೋಕ್ಯೋದಲ್ಲಿ ನೂರು ಡಾಲರಿಗೆ ಇಷ್ಟು ಸಿಕ್ಕುವುದೇ ಭಾಗ್ಯ!! ಮರುದಿನ ಬೆಳಗ್ಗೆ ಎದುರಿನ ಕಡಿಮೆ ಬೆಲೆಯ ’ಲಾಸನ್ ಸ್ಟೋರ್’ ನಲ್ಲಿ ಎರಡೂವರೆ ಡಾಲರಿಗೆ ಕೊಂಡ ಬ್ರೆಡ್, ಜೂಸ್ ಸೇವಿಸಿ, ಬೀದಿ ಬದಿಯಲ್ಲೇ ಕೈಬೀಸಿ ಟಾಕ್ಸಿ ಹಿಡಿದು ಮೊದಲೇ ತೆಗೆದಿರಿಸಿದ ಮೀಟಿಂಗಿಗೆ ಹೋಗಲಿರುವ ಆಫೀಸಿನ ಜಪಾನಿಸ್ ಭಾಷೆಯ ವಿಸಿಟಿಂಗ್ ಕಾರ್ಡನ್ನು ಟಾಕ್ಸಿ ಡ್ರೈವರನಿಗೆ ನೀಡುತ್ತೇನೆ. ಅದನ್ನು ಆತ ಅತ್ಯಂತ ಸೌಜನ್ಯಪೂರ್ವಕವಾಗಿ ನೋಡಿ ಸೊಂಟ ಬಗ್ಗಿಸಿ ’ಹೈ... ಹೈ...’ (ಯೆಸ್. ಯೆಸ್) ಎಂದು ತಲೆಯಾಡಿಸಿ ಕುಳಿತಲ್ಲಿಂದಲೇ ನನ್ನ ಬದಿಯ ಬಾಗಿಲನ್ನು ಸ್ವಿಚ್ ಮೂಲಕ ಕ್ಲೋಸ್ ಮಾಡುತ್ತಾನೆ. ಹತ್ತು ನಿಮಿಷದ ಬಳಿಕ ಒಂದು ಬೃಹದಾಕಾರದ ಕಟ್ಟಡದ ಎದುರಿಗೆ ಟಾಕ್ಸಿ ನಿಲ್ಲುತ್ತದೆ. ಮೀಟರ್ ಪ್ರಕಾರ ಕೊಟ್ಟ ಹಣಕ್ಕೆ ರಿಸಿಟ್ ಕೂಡಾ ನೀಡಿ ’ಅರಿಗತೋ..’ ಹೇಳಿ ಇನ್ನೊಮ್ಮೆ ತಲೆಬಾಗುತ್ತಾನೆ. ಆಫೀಸಿ ಹೊಕ್ಕೊಡನೆ ಡೆಸ್ಕ್ ಹುಡುಗಿ ಹೆಸರು ವಿಚಾರಿಸಿ ’ವನ್ ಮೊಮೆಂತ್ ಪ್ಲೀಸ್..’ ಎಂದು ನಗೆ ಚೆಲ್ಲಿ ವಿಸಿಟರ್ ಟಾಗ್ ಹಾಗೂ ಚೀಟಿ ನೀಡಿ ’೨೭ ನೇ ಫ್ಲೋರ್’ ಎಂದು ಬರೆದುಕೊಡುತ್ತಾಳೆ. . ಬಹು ಮಹಡಿಯ ಭವ್ಯ ಕಟ್ಟಡದಲ್ಲಿ ೨೭ ನೇ ಫ್ಲೋರ್ ಹೊಕ್ಕಾಗ ಇನ್ನೊಬ್ಬಳು ಡೆಸ್ಕ್ ಹುಡುಗಿ ಅಲ್ಲಿನ ಮೀಟಿಂಗ್ ರೂಮಿಗೆ ಕರೆದೊಯ್ದು ಅಲ್ಲಿಯ ಮೆತ್ತನೆ ಸೋಫದಲ್ಲಿ ತಗ್ಗಿನ ಮೇಜಿನೆದುರು ಕುಳಿತುಕೊಳ್ಳಲು ಹೇಳುತ್ತಾಳೆ. ಬಳಿಕ ಪೇಪರ್ ಕಪ್ನಲ್ಲಿ ಬಿಸಿ ಬಿಸಿ ಟೀ/ಕಾಫಿ ತಂದು ಕೊಡುತ್ತಾಳೆ. ಜಪಾನಿನಲ್ಲಿ ಆಫೀಸಿನೊಳಗೆ ಬಂದವರಿಗೆ ಪ್ರವೇಶ ನಿಷಿದ್ಧ. ಎಲ್ಲರೂ ಮೀಟಿಂಗ್ ರೂಮುಗಳಲ್ಲಿ ಕುಳಿತು ಮಾತುಕತೆ ಮುಗಿಸಿ ಹೊರಡಬೇಕು. ಹೀಗಾಗಿ ನಮಗೆ ಅವರ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ದೊರಕುವುದಿಲ್ಲ. ಜಪಾನೀಯರು ದಂಧೆಯಲ್ಲಿ ಗೌಪ್ಯತೆಯನ್ನು ಬಹಳವಾಗಿ ಕಾಪಾಡುತ್ತಾರೆ. ಉದ್ಯಮದಲ್ಲಿ ಮಾಹಿತಿ ಕೂಡಾ ಒಂದು ಸಂಪತ್ತು. ಎರಡೇ ನಿಮಿಷದಲ್ಲಿ ನಾನು ಭೇಟಿಯಾಗಬೇಕಾಗಿದ್ದ ನನ್ನ ಬಿಸಿನೆಸ್ ಸ್ನೇಹಿತ ವ್ಯಕ್ತಿ ತನ್ನ ಬಾಸು ಹಾಗೂ ಇತರ ಒಂದೆರಡು ಸಹೋದ್ಯೋಗಿಗಳೊಡನೆ ಬರುತ್ತಾನೆ. ಎಲ್ಲರೂ ಮಿರಿ ಮಿರಿ ಕೋಟು ಬೂಟುಗಳಲ್ಲಿ ಮಿಂಚುತ್ತಿರುತ್ತಾರೆ. ನಾನೂ ನನ್ನ ಅಪರೂಪದ ಕೋಟು ಟೈಗಳೊಂದಿಗೆ ಸಹಜವಾಗಿರಲು ಹೆಣಗಾಡುತ್ತಾ ಇರುತ್ತೇನೆ. ಅವರುಗಳು ಹೊಸ ಪರಿಚಯವಾದ ಕಾರಣ ವಿಸಿಟಿಂಗ್ ಕಾರ್ಡ್ ವಿನಿಮಯ ನಡೆಯುತ್ತದೆ. ಬಂದವರು ನಾನು ಕೊಟ್ಟ ಕಾರ್ಡನ್ನು ಸರಿಯಾಗಿ ಓದಿನೋಡಿ, ಡೆಸಿಗ್ನೇಶನ್ ನೋಡಿ ಹುಬ್ಬೇರಿಸಿ, ಹೆಸರನ್ನು ಹೇಗೆ ಉಚ್ಚರಿಸುವುದು ಎಂಬ ತರಬೇತಿಯನ್ನು ನನ್ನಿಂದ ಕೇಳಿ ಪಡೆದುಕೊಳ್ಳುತ್ತಾರೆ. "ಪ್ರ...ಸಾ...ದ್.... ಪ್ರಸಾದ್ ಸಾನ್!!"ಎಂದು ಸಾನ್ (ಶ್ರೀ) ಸೇರಿಸಿ ಗೌರವದಿಂದ, ಅತ್ಯಂತ ಸೌಜನ್ಯದಿಂದಲು ಮಾತನಾಡುತ್ತಾರೆ. ನಾನು ಕೊಟ್ಟ ಕಾರ್ಡನ್ನು ಮೀಟಿಂಗ್ ಕೊನೆಯವರೆಗೆ ಟೇಬಲ್ ಮೇಲೆ ಇರಿಸಿಯೇ ಮೀಟಿಂಗ್ ನಡೆಸುತ್ತಾರೆ. ಪ್ರತಿಯೊಬ್ಬನಲ್ಲೂ ಒಂದು ಪೆನ್ ಹಾಗೂ ಸದಾ ಕಿಸೆಯಲ್ಲಿಯೇ ಇರುವ ಒಂದು ನೋಟ್ ಬುಕ್ ಇರುತ್ತದೆ. ಜೊತೆಗೆ ಸಿಗರೇಟ್ ಲೈಟರ್, ಮೊಬೈಲ್ ಕೂಡಾ ಇರುತ್ತದೆ. ಮೊತ್ತ ಮೊದಲು ಅವರ ಬಾಸ್ ಒಂದು ಸಿಗರೇಟ್ ಹಚ್ಚಿ ಮಾತು ಆರಂಭಿಸುತ್ತಾನೆ. ಉಳಿದ ಎಲ್ಲರೂ ಬಾಯಿ ಪಿಟಿಕ್ ಎನ್ನದೆ ಗಂಭೀರವಾಗಿ ಧ್ಯಾನಕ್ಕೆ ಕುಳಿತಂತೆ ಬೆನ್ನು ನೇರ ಮಾಡಿ ಕುಳಿತು ಸುಮ್ಮನೇ ಆಲಿಸುತ್ತಾರೆ. ಜಪಾನಿನಲ್ಲಿ ಸರದಿಯಂತೆ ಜನರು ಮಾತನಾಡುತ್ತಾರೆ ಹಾಗೂ ತನ್ನ ಸರದಿ ಬಾರದೆ, ಇನ್ನೊಬ್ಬನ ಮಾತು ಮುಗಿಯದೆ ತಾನು ಹೊರತು ಬಾಯಿ ತೆರೆಯುವುದಿಲ್ಲ. ಈ ಶಿಷ್ಟಾಚಾರವೇ ಅವರ ಆಲಿಸುವ ಹಾಗೂ ಸಂವಹನ ಕಲೆಯನ್ನು ತೀಕ್ಷ್ಣವಾಗಿಸಿದೆ ಎಂದು ಕಾಣುತ್ತದೆ. ಅವರ ಬಾಸು ’ನಿನ್ನೆಯ ಟ್ರಿಪ್ ಹೇಗಿತ್ತು? ಯಾವ ಫೈಟ್? ಎಷ್ಟು ಹೊತ್ತು? ಯಾವ ಹೋಟೆಲ್?’ ಎಂಬೆಲ್ಲ ಪ್ರಶ್ನೆಗಳೊಂದಿಗೆ ಮಾತು ಆರಂಭಿಸುತ್ತಾನೆ. ಫ್ಯಾಮಿಲಿಯ ಬಗ್ಗೆ ವಿಚಾರಿಸುತ್ತಾನೆ. ವೈಯಕ್ತಿಕ ವಿಷಯ ಮುಗಿಸಿ ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ವಿಚಾರಿಸುತ್ತಾನೆ. ಪ್ರಗತಿ, ಹಣದುಬ್ಬರಗಳ ಬಗ್ಗೆ ವಿತ್ತ ಮಂತ್ರಿ, ರಾಜಕೀಯಗಳ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾನೆ. ಕಟ್ಟ ಕಡೆಯದಾಗಿ ನಾವೆರಡೂ ಕಂಪನಿಯವರು ಒಟ್ಟಿಗೆ ಬಿಸಿನೆಸ್ ಮಾಡೋಣ. ಒಟ್ಟಿಗೆ ಬೆಳೆಯೋಣ ಎಂದೆಲ್ಲ ಹೇಳುತ್ತಾನೆ. ದೀರ್ಘಕಾಲಿಕ ಬಿಸಿನೆಸ್ ಸಂಬಂಧ ಅತಿ ಮುಖ್ಯ ಎಂದು ಒತ್ತಿ ಹೇಳುತ್ತಾನೆ. ಇದು ಜಪಾನೀಯರ ಬಿಸಿನೆಸ್ಸಿನ ಒಂದು ಪ್ರಾಮುಖ್ಯ ಅಂಗ. ವಿಶೇಷವೇನೆಂದರೆ, ನಾನು ಮಾರಲು ಬಂದ ಸರಕಿನ ಬಗ್ಗೆ, ಸೇಲ್ಸ್ ಬಗ್ಗೆ ಚಕಾರ ಎತ್ತುವುದಿಲ್ಲ. ಅದು ಅವನ ಕೆಲಸವಲ್ಲ. ಅದರ ಬಗ್ಗೆ ಅವನಿಗೆ ಜಾಸ್ತಿ ಅರಿವೂ ಇರುವುದಿಲ್ಲ. ಆ ಕೆಲಸವನ್ನು ಅದರ ಸಂಪೂರ್ಣ ಹೊಣೆ ಹೊತ್ತ ಜೂನಿಯರಿಗೆ ಬಿಟ್ಟು, ಲಾಸ್ಟ್ ಸಿಪ್ ಚಾ ಹೀರಿ, ಸಿಗರೇಟ್ ನಂದಿಸಿ, ನೋಟ್ ಬುಕ್, ಪೆನ್ ಕಿಸೆಗೇರಿಸಿ ಶುಭ ಹಾರೈಸಿ ಅಲ್ಲಿಂದ ಹೊರಡುತ್ತಾನೆ. ಈಗ ಅವನ ಜೂನಿಯರ್; ಅಂದರೆ, ನಾನು ಕಾಣಲು ಬಂದ ವ್ಯಕ್ತಿ ಮಾತು ಆರಂಭಿಸುತ್ತಾನೆ. ನಮ್ಮ ಉದ್ಯಮದ ಬಗ್ಗೆ, ಕಾರ್ಖಾನೆ ಬಗ್ಗೆ, ಸಪ್ಲೈ ಬಗ್ಗೆ, ಕ್ವಾಲಿಟಿ ಬಗ್ಗೆ ವಿವರವಾಗಿ ಮಾತುಕತೆ ನಡೆಸುತ್ತಾನೆ ಹಾಗೂ ಅಗಾಗ್ಗೆ ತನ್ನ ಪುಟ್ಟ ನೋಟ್ ಬುಕ್ನಲ್ಲಿ ನೋಟ್ ಮಾಡಿಕೊಳ್ಳುತ್ತಾನೆ. ಈ ನೋಟ್ ಬುಕ್ಕುಗಳಲ್ಲಿ ಒಂದು ಬ್ರಹ್ಮಾಂಡವೇ ಅಡಗಿರುತ್ತದೆ. ನಾನು ಯಾವಾಗಲೋ ಹೇಳಿ ನಾನೇ ಮರೆತಿದ್ದ ವಿಷಯಗಳನು ಪುಟ ತಿರುವಿ ನನಗೇ ತೋರಿಸುತ್ತಾನೆ. ಅಲ್ಲದೆ ಬಿಸಿನೆಸ್ ಬಗ್ಗೆ ಅವನಿಗೆ ಖಚಿತವಾದ ಮಾಹಿತಿಯಿರುತ್ತದೆ. ಜಪಾನೀಯರು ಹೋಮ್ ವರ್ಕಿಗೆ ಬಹಳ ಮಹತ್ವ ನೀಡುತ್ತಾರೆ. ಒಂದು ಮಾಹಿತಿ ನಾವು ತಪ್ಪಾಗಿ ಹೇಳಿದರೂ ’ಅದು ಸರಿಯಲ್ಲ; ಇದು ಸರಿಯಾದ ಮಾಹಿತಿ’ ಎಂದು ಎತ್ತಿ ತೋರಿಸುತ್ತಾರೆ - ಜ಼ೆನ್ ಗುರುವೊಬ್ಬ ದೊಣ್ಣೆಯಲ್ಲಿ ’ಟೊಪ್’ ಅಂತ ನೆತ್ತಿ ಮೇಲೆ ಹೊಡೆದಂತೆ ! ಕಟ್ಟ ಕಡೆಗೆ ನಾನು ಬಂದ ಕಾರಣಕ್ಕಿಳಿಯುತ್ತೇವೆ - ಸೇಲ್ಸ್ ! ಸರಕಿನ ಮಾರಾಟ ಹಾಗೂ ಬೆಲೆ ನಿಗದಿಪಡಿಸುವುದು. ಇನ್ನೊಮ್ಮೆ ಸಿಗರೆಟ್ ಹೊತ್ತಿಸಿ ಚಹ ಹೀರುತ್ತಾನೆ. ’ಪ್ರಸಾದ್ ಸಾನ್ ...’ ಎಂದು ರಾಗ ಎಳೆಯುತ್ತಾನೆ. ಕಿರು ನಗೆ ಬೀರುತ್ತಾನೆ. ನನಗೆ ಅಖಾಡಕ್ಕಿಳಿದ ಅನುಭವ. ಇದೀಗ ಸಮರ ಆರಂಭ. ಇಷ್ಟು ಸಮಯ ಜಪಾನಿನ ಸೌಜನ್ಯದ ಸವಿ ಉಂಡವನಿಗೆ ಈಗ ಕುತ್ತಿಗೆ ಕತ್ತರಿಸುವ ನೆಗೋಸಿಯೇಶನ್ ಮೂಲಕ ನುಸುಳಬೇಕಾಗುತ್ತದೆ. ಮಾರ್ಕೆಟ್ ಬಹಳ ಹಾಳಿದೆ, ಬೆಲೆ ಇಳಿಮುಖವಾಗಿದೆ ಎಂದು ಲೊಚಗುಟ್ಟುತ್ತಾನೆ. ಪೂರಕ ಅಂಕಿ ಅಂಶಗಳನ್ನು ತೋರಿಸಿ ನಂಬಿಕೆ ಹುಟ್ಟಿಸುತ್ತಾನೆ. ಬಾಲ್ಯದಿಂದಲೇ ’ನೆಗೋಸಿಯೇಶನ್ ಎಂದರೆ ಮಾತುಗಾರಿಕೆ’, ’ಜಾಣ ಮಾತುಗಾರ ಉತ್ತಮ ಸೇಲ್ಸ್ ಮನ್’ ಎಂದೆಲ್ಲ ನಂಬಿದ್ದ ನನಗೆ ಸತ್ಯದ ದರ್ಶನವಾಗುತ್ತದೆ. ನೇಗೋಸಿಯೇಶನ್ ಎಂದರೆ ಹೋಮ್ ವರ್ಕ್, ನೆಗೋಸಿಯೆಶನ್ ಎಂದರೆ ಮಾಹಿತಿ, ನೆಗೋಸಿಯೇಶನ್ ಎಂದರೆ ನಾವು ತಯಾರಿ ಮಾಡಿಕೊಂಡ ಪರ್ಯಾಯ ಪ್ಲಾನ್ಸ್ (ಆಲ್ಟರ್ನೇಟಿವ್ಸ್). ಇವೆಲ್ಲ ಇದ್ದರೆ ಮಾತುಗಾರಿಕೆಯ ಯಾವುದೆ ಆವಶ್ಯಕತೆಯಿರುವುದಿಲ್ಲ. ಇರದಿದ್ದಲ್ಲಿ ಮಾತಿಗೆ ಯಾವ ಬೆಲೆಯೂ ಇರುವುದಿಲ್ಲ. ಮಣ್ಣು ಮುಕ್ಕಿಸುತ್ತಾನೆ. ಅವನು ಹೇಳಿದ ಬೆಲೆಗೆ ಮಾರಾಟ ಮಾಡಿ ಹಿಂದಿರುಗುತ್ತೇವೆ ಅಷ್ಟೆ!! ಅಂತೂ ಹಿಗ್ಗಾ ಮುಗ್ಗಿ ಎಳೆದು ಒಂದು ಡೀಲ್ ಒಪ್ಪಿಕೊಳ್ಳುತ್ತೇನೆ. ಅಲ್ಲಿಗೆ ಬಿಸಿನೆಸ್ಸ್ ಮಾತು ಮುಗಿಯುತ್ತದೆ. ಸಂಜೆಯ ಡಿನ್ನರ್ ಬಗ್ಗೆ ವಿಚಾರಿಸುತ್ತಾನೆ. ’ಇಸ್ಶೋನಿ...ತಬೆರುಮಾಶೋ’ (ಒಟ್ಟಿಗೆ ಊಟ ಮಾಡೋಣ...). ’ಸಂಜೆ ೭ ಘಂಟೆಗೆ ಹೋಟೆಲ್ ಲೋಬ್ಬಿಯಲ್ಲಿ ತಯಾರಾಗಿರು. ನಾನು ಬರುತ್ತೇನೆ ’ ಎಂದು ಹೇಳಿ ಕೈ ಕುಲುಕಿ ಬೀಳ್ಕೊಡುತ್ತಾನೆ. ಸಂಜೆ ಟಾಕ್ಸಿಯಲ್ಲಿ ಬಂದು ಕರೆದುಕೊಂಡು ಹೋಗುತ್ತಾನೆ. ದಾರಿಯಲ್ಲಿ ನಿನಗೆ ಯಾವ ತರಹದ ಆಹಾರ ಇಷ್ಟ?’ ಎಂದು ವಿಚಾರಿಸುತ್ತಾನೆ. ವೆಜಿಟೇರಿಯನ್ನಾ...??? ಅಂತ ಬೇಸರಪಡುತ್ತಾನೆ. ಸೀಫುಡ್ ಆಗಬಹುದೇ? ಅಂತೆಲ್ಲಾ ವಿಚಾರಿಸುತ್ತಾನೆ. ಕೊನೆಗೂ ಯಾವುದೋ ಒಂದು ಬ್ರಹತ್ ಕಟ್ಟಡದಲ್ಲಿನ ಒಂದು ಚಿಕ್ಕ ಗೂಡಿನಂತಿರುವ ರೆಸ್ಟುರಾಂಟಿಗೆ ಕರೆದೊಯ್ಯುತ್ತಾನೆ. ಪ್ರತಿಯೊಂದು ವಿಷಯವನ್ನೂ ವಿಚಾರಿಸಿ ಬೇಕಾದ ಆಹಾರ ಆರ್ಡರ್ ಮಾಡಿ ಸೌಜನ್ಯ ತೋರುತ್ತಾನೆ. ಪರ್ಸನಲ್ ವಿಷಯ, ಅದೂ ಇದೂ ಮಾತನಾಡುತ್ತಾನೆ. ಲೀಟರುಗಟ್ಟಲೆ ಬೀರು ಹೀರುತ್ತಾನೆ. ಕೊಳವೆಯಂತೆ ಸಿಗರೇಟ್ ಹೊಗೆ ಉಗುಳುತ್ತಾನೆ. ಬಿಸಿನೆಸ್ಸ್ ಬಗ್ಗೂ ಗ್ರೈಂಡ್ ಮಾಡುತ್ತಾನೆ. ಸಾಕಷ್ಟು ಮಾಹಿತಿ ಸಂಗ್ರಹ ಮಾಡುತ್ತಾನೆ. ಭಾರತದಲ್ಲಿ ನನ್ನದೇ ಆಫೀಸಿನ ಸಹೊದ್ಯೋಗಿಯ ಮಗನ ಶಾಲೆಯ ಬಗ್ಗೆ ವಿಚಾರಿಸುತ್ತಾನೆ, ಇನ್ನೊಬ್ಬನೆ ಹೆಂಡತೆ ಹೆತ್ತಳೇ? ಎಮ್ದು ಕೇಳುತ್ತಾನೆ. ನನಗೇ ಗೊತ್ತಿರುವುದಿಲ್ಲ. ಇನ್ನೊಂದಿಬ್ಬರನ್ನು ಇಮಿಟೇಟ್ ಮಾಡಿ ನಗಾಡುತ್ತಾನೆ........... ಊಟ ಮುಗಿಸಿ ’ಕರವೋಕೆ...." ಎಂದು ಎಬ್ಬಿಸುತ್ತಾನೆ. ಇನ್ನೊಂದು ಟಾಕ್ಸಿ ಹಿಡಿದು ಗಿಂಝಾ ಪ್ರದೇಶದ ಅತ್ಯಂತ ದುಬಾರಿ ಕರವೋಕೆ ಬಾರ್ ಎದುರುಗಡೆ ಇಳಿಯುತ್ತಾನೆ. ಬಾಗಿಲಲ್ಲೇ ಬಾರ್ ಒಡತಿ ’ಮಾಮಾ ಚಾನ್’ ತನ್ನ ಹುಡುಗಿಯರ ಹಿಂಡಿನೊಂದಿಗೆ ನಮ್ಮನ್ನು ಎದುರ್ಗೊಳ್ಳುತ್ತಾಳೆ. ತರುಣಿಯರೆಲ್ಲ ಒಕ್ಕೊರಲಿನಿಂದ "ಇರಸ್ಶೇಮಸ್ಸೇ........" (ವೆಲ್ಕಮ್) ಎಂದು ಉಲಿಯುತ್ತಾರೆ. ನನ್ನನ್ನು ಪರಿಚಯಿಸುತ್ತಾನೆ. ಅವರೆಲ್ಲ ನಕ್ಕು ಪುನಃ ಬಲೆಬಾಗಿ ವಂದಿಸುತ್ತಾರೆ. ಕೈಹಿಡಿದು ಬಾರ್ ಒಳಗೆ ಕರೆದುಕೊಂಡು ಹೋಗುತ್ತಾರೆ. ನಮ್ಮ ಕೋಟುಗಳನ್ನು ಕಳಚಿ ಹ್ಯಾಂಗರ್ ತೂರಿಸಿ ಒಳಗೆ ಇಡುತ್ತಾರೆ. ಮೊದಲ ಬಾರಿಗೆ ನಾನು ಇಂತಹ ಜಾಗಕ್ಕೆ ಬಂದಾಗ ನನಗೆ ಗಾಬರಿಯಾಗಿತ್ತು. ಜಪಾನೀಯರ ಕಾಮದ ಜೀವನದ ಬಗ್ಗೆ ಸಾಕಷ್ಟು ಕೇಳಿ ತಿಳಿದಿದ್ದ ನನಗೆ ’ಇದೆಲ್ಲಿಗೆ ನನ್ನನ್ನು ಎಳೆದುಕೊಂಡು ಬಂದ?’ ಅಂತ ದಿಗಿಲಾಗಿತ್ತು. ಆದರೆ, ಕರವೋಕೆ ಬಾರಿನಲ್ಲಿ ಅಂತಹದ್ದೇನೂ ನಡೆಯುವುದಿಲ್ಲ. ಅಲ್ಲಿ ಹಿನ್ನೆಲೆ ಸಂಗೀತಕ್ಕೆ ಮೈಕ್ ಹಿಡಿದು ಹಾಡುತ್ತಾರೆ, ಕುಣಿಯುತ್ತಾರೆ, ಕಂಠಪೂರ್ತಿ ಕುಡಿಯುತ್ತಾರೆ. ಬೊಬ್ಬೆ ಹಾಕುತ್ತಾರೆ, ಸಹೊದ್ಯೋಗಿಗಳೊಡನೆ ಆಫೀಸ್ ಜಗಳಾಡುತ್ತಾರೆ - ಒಟ್ಟಿನಲ್ಲಿ, ದಿನದ ಟೆನ್ಶನ್ ಮರೆತು ಸಡಿಲಗೊಳ್ಳುತ್ತಾರೆ. ಹುಡುಗಿಯರು ನಮ್ಮ ಜೊತೆ ಇರುತ್ತಾರೆ. ಸ್ನೇಹದಿಂದ ನಮ್ಮೊಡನೆ ಸೋಫಾದಲ್ಲಿ ಅಕ್ಕ ಪಕ್ಕದಲ್ಲಿ ಕುಳಿತು ನಮಗೆ ಬೀರು, ವಿಸ್ಕಿ ಸುರಿಯುತ್ತಾರೆ, ತಾವೂ ಖುದ್ ಲೀಟರ್ಗಟ್ಟಲೆ ವಿಸ್ಕಿ ಹೀರುತ್ತಾರೆ. ಹಾಡುತ್ತಾರೆ, ಜೊತೆಗೆ ಡಾನ್ಸ್ ಮಾಡುತ್ತಾರೆ, ಡೈಸ್ ಹಾಕಿ ನಮ್ಮೊಡನೆ ಸಿಲ್ಲಿ ಸಿಲ್ಲಿ ಆಟ ಆಡುತ್ತಾರೆ. ಕಲ್ಲು-ಕತ್ತರೆ-ಕಾಗದ ಆತ ಕಲಿಸುತ್ತಾರೆ. ತಮ್ಮ ಮೈಮೇಲೆ ಹರಿಯಬಿಟ್ಟ ಕೈಗಲನ್ನು ನಯವಾಗಿ ತಿರಸ್ಕರಿಸುತ್ತಾರೆ. ನನ್ನ ಸ್ನೇಹಿತ ಕುಡಿದು ಕುಣಿದು ಸುಸ್ತಾಗುತ್ತಾನೆ. ಇನ್ನೇನು ಅಮಲೇರಿ ಬಿದ್ದೇ ಬಿಡುತ್ತಾನೆ ಅಂತ ಅನ್ನಿಸಿದಾಗ ಹತ್ತಿರ ಬಂದು ಕುಳಿತು ಮೆಲುದನಿಯಲ್ಲಿ ಮಾತನಾಡುತ್ತಾನೆ. ಬಿಸಿನೆಸ್ಸ್ ಬಗ್ಗೆ ಒಂದೆರಡು ಪ್ರಸ್ತಾಪ ಮಾಡುತ್ತಾನೆ. ಹೊಸ ಓರ್ಡರ್ ಕೊಡುತ್ತೇನೆ ಅನ್ನುತ್ತಾನೆ. ಮಾತು ತೊದಲುತ್ತಿರುತ್ತದೆ. ’ಇದೇನು ಕುಡುಕರ ಚಾಳಿ’ ಅಂತ ಕೀಳಂದಾಜಿಸುವಂತಿಲ್ಲ. ಇಲ್ಲಿ ನುಡಿದ ಪ್ರತಿಯೊಂದು ಬಿಸಿನೆಸ್ಸ್ ಮಾತು ಕೂಡಾ ಅವನ ಬುದ್ಧಿಯಲ್ಲಿ ಪ್ರಿಂಟ್ ಆಗಿರುತ್ತದೆ. ಇಲ್ಲಿ ನೋಟ್ಸ್ ತೆಗೆದುಕೊಳ್ಳುವುದಿಲ್ಲ. ಆದರೆ ಮರುದಿನ ಬೆಳಗ್ಗಿನ ಈ-ಮೈಲಿನಲ್ಲಿ ಎಲ್ಲಾ ಅಚ್ಚುಕಟ್ಟಾಗಿ ದಾಖಲಾಗಿ ಬರುತ್ತದೆ. ಜಪಾನೀಯರ ಕಾರ್ಯ ವೈಖರಿ !! ಘಂಟೆ ಹನ್ನೆರಡು ದಾಟಿರುತ್ತದೆ. ನಾನು ತೂಕಡಿಸುತ್ತಿರುತ್ತೇನೆ. ಅವನ ಕುಡಿತ-ಕುಣಿತ ಮುಗಿದಿರುವುದಿಲ್ಲ. ಕೊನೆಗೂ ಯಾವಾಗಲೋ ಬಿಲ್ ಪೇ ಮಾಡಿ, ನನ್ನ ಕೈಹಿಡಿದು ’ಲೆಟ್ಸ್ ಗೋ... ಪ್ರಸಾದ್ ಸಾನ್,’ ಅಂತ ಹೇಳುತ್ತಾನೆ. ನಾನು ಗಡಬಡಿಸೆ ಅರೆನಿದ್ದೆಯಿಂದ ಎಚ್ಚೆತ್ತು ನೋಡುತ್ತೇನೆ - ಇಲ್ಲ, ಸೂರ್ಯೋದಯವಾಗಿರುವುದಿಲ್ಲ; ಬರೇ ಒಂದು ಘಂಟೆಯಷ್ಟೆ ಆಗಿರುತ್ತದೆ! ಹುಡುಗಿಯರು ನಮ್ಮೊಡನೆ ಹೊರ ಬಂದು ಬೀಳ್ಕೊಡುತ್ತಾರೆ. ಟಾಕ್ಸಿ ಹಿಡಿದು ನಮ್ಮನ್ನು ಕೂರಿಸಿ ’ಅರಿಗತೋ...’ ಎಂದು ಉಲಿಯುತ್ತಾರೆ. ಸ್ನೇಹಿತ ತೊದಲುತ್ತಾ ಟಾಕ್ಸಿ ಡ್ರೈವರನಿಗೆ ನನ್ನ ಹೋಟೆಲ್ ಹೆಸರು ಹೇಳಿ ಬಳಿಕ ಆತನ ಮನೆ ವಿವರ ಹೇಳುತ್ತಾನೆ. ನಿಶ್ಶಬ್ದ ರಾತ್ರಿಯಲ್ಲಿ ಟಾಕ್ಸಿ ಮೌನವಾಗಿ ಹೊರಡುತ್ತದೆ. ಹೋಟೆಲ್ ತನಕ ದಾರಿಯುದ್ದಕ್ಕೂ ನಿದ್ದೆ ಹೊಡೆಯುತ್ತಾನೆ. ಹೋಟೆಲ್ ಬಂದಾಕ್ಷಣ ಗಡಬಡಿಸಿ ಎದ್ದು ನನಗೆ ’ಥಾಂಕ್ಯೂ.... ಥಾಂಕ್ಯೂ... ’ ಹೇಳಿ ಕೈಕುಲುಕುತ್ತಾನೆ. ಕೈಬೀಸಿ ’ಬೈ’ ಹೇಳುವಾಗ ಗೆಳೆಯ ಇನ್ನೊಮ್ಮೆ ತೊದಲುತ್ತಾ ನೆನಪಿಸುತ್ತಾನೆ : ಪ್ರಸಾದ್ ಸಾನ್.. ನಾಳೆ ಬೆಳಗ್ಗೆ ೪.೩೦ ಘಂಟೆಗೆ ಲೋಬ್ಬಿಯಲ್ಲಿ ಭೇಟಿಯಾಗೋಣ. ೪.೫೦ ಕ್ಕೆ ಶಿಂಕಾನ್ಸೇನ್ (ಬುಲ್ಲೆಟ್ ಟ್ರೈನ್) ನೀಗತಕ್ಕೆ ಹೋಗಲು". "ಕಸ್ಟಮರ್ ಜೊತೆ ಬಿಜಿನೆಸ್ ಮೀಟಿಂಗ್" ಅನ್ನುತ್ತಾನೆ. ಘಂಟೆ ಈಗಾಗಲೇ ಒಂದೂವರೆಯಾಗಿರುತ್ತದೆ. ಅವನ ಮನೆ ಇಲ್ಲಿಂದ ಕನಿಷ್ಟ ಒಂದು ಘಂಟೆ ದೂರವಾದರೂ, ಅವನಂತೂ ೪.೩೦ ಕ್ಕೆ ಲೋಬ್ಬಿಯಲ್ಲಿ ಬೆಳಗ್ಗೆ ನನ್ನನ್ನು ನಿರೀಕ್ಷಿಸುತ್ತಾ ಇರುತ್ತಾನೆ - ವಜ್ರದಂತೆ ಖಚಿತವಾಗಿ, ಲಿಂಬೆಯಂತೆ ಫ಼್ರೆಶ್ ಆಗಿ. ಗೆಳೆಯನನ್ನು ಹೊತ್ತ ಟಾಕ್ಸಿ ಹೊರಟುಹೋಗುತ್ತದೆ. ನನ್ನ ಮೈಯಿಡೀ ನೋಯುತ್ತಿರುತ್ತದೆ. ಕಣ್ಣುಗಳು ಭಾರವಾಗಿರುತ್ತದೆ. ’ನಾಲ್ಕೂವರೆಗೆ ಹೇಗಪ್ಪಾ ರೆಡಿಯಾಗೋದು?’ ಅಂತ ತಲೆಕೆರೆಯುತ್ತೇನೆ.
* * *
(ಪ್ರಕಟನೆ: ಕನ್ನಡ ಪ್ರಭ ಸಾಪ್ತಾಹಿಕ, ೩ ಮೇ ೨೦೦೯)

No comments:

Post a Comment