Friday, November 14, 2008

ಕೋತಿಯ ಕಾಲಡಿ ನಿಂಬೆ.........

-ಜಯದೇವ ಪ್ರಸಾದ.



ಧಡೂತಿ ಆಸಾಮಿಯನ್ನು ಪರಿಚಯವಾಗಿದ್ದು ಹೀಗೆ:

ಹಾಸ್ಯ ಸಂಜೆ ಕಾರ್ಯಕ್ರಮ . ಕಿಕ್ಕಿರದ ಜನಸಂದಣಿ. ಆಸನಗಳೆಲ್ಲಾ ಭರ್ತಿಯಾಗಿದ್ದು ಇನ್ನೂ ಜನರು ಹಿಂಭಾಗದಲ್ಲಿ ನಿಂತಿದ್ದರು. "ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು" ಎಂಬ ಗಾದೆಮಾತು ನೆನಪಾಯಿತು. ಪರರ ಅಂಬರ ಪರಾಂಬರ- ಕರ್ಮಧಾರಯ ಸಮಾಸ !! ಪರಾಂಬರಿಸುವುದು ಎಂದರೆ ಬೇರೆಯವರ ಡ್ರೆಸ್ ಧರಿಸುವುದೇ ಸರಿ !! ಹಾಗೆಯೇ ಕೈಯಲ್ಲಿದ್ದ ಅಣ್ಣನ ಹಳೆಯ ಕೋಟನ್ನು ಧರಿಸಿ ಸರಿಯಾಗಿ ನೋಡಿದಾಗ ಸಭೆಯ ಮಧ್ಯ ಭಾಗದಲ್ಲಿ ಒಂದು ಕುರ್ಚಿ ಖಾಲಿ ಇರುವುದನ್ನು ಸಂಶೋಧಿಸಿ "ಜೈ ಗಾದೆಮಾತೇ !" ಎನ್ನುತ್ತಾ ಅಲ್ಲಿ ಹೋಗಿ ಕುಳಿತೆ.

ಒಬ್ಬರು ಸಾಹಿತಿ ಹಾಸ್ಯ ಭಾಷಣ ಮಾಡುತ್ತಿದ್ದರು, ಮೈಕಿನ ತೊಂದರೆಯಿಂದಾಗಿ ಸರಿಯಾಗಿ ಕೇಳಿಸುತ್ತಿರಲಿಲ್ಲ. ’ಪರಾಂಬರಿಸಿಕೇಳುವ ಬಗ್ಗೆ ಯಾವುದೇ ಗಾದೆಯ ಮಾತನ್ನ ನಾನು ಇದುವರೆಗೆ ಕೇಳದಿದ್ದುದರಿಂದ ಅಲ್ಲದೆ ವಿಪರೀತ ಸೆಖೆಯಿಂದಾಗಿ ನನ್ನಣ್ಣನ ಹಳೆ ಕೋಟು ಕಳಚಿದೆ. ಸಭೆಯ ಮಧ್ಯಭಾಗದಲ್ಲೇ ಸರಿಯಾಗಿ ಕೇಳಿಸುವುದಿಲ್ಲವಾದ್ದರಿಂದ ಹಿಂಭಾಗದಲ್ಲಂತೂ ಏನೇನೂ ಕೇಳಿಸುತ್ತಿದ್ದಿರಲಾರದು. ಹಾಸ್ಯ ರಸಾಯನ ಹರಿದು ಬರುತ್ತಲೇ ಇತ್ತು ಹಾಗೂ ಸಭಿಕರು ನಗುತ್ತಲೇ ಇದ್ದರು. ಮುಂಭಾಗದ ಸಭಿಕರು ಸ್ವಲ್ಪ ಗಂಭೀರವಾಗಿ ಮುಗುಳು ನಗೆ ತೇಲಿಸುತ್ತಿದ್ದರೂ ಹಿಂಭಾಗದ ಜನರಂತೂ ಗಟ್ಟಿಯಾಗಿ ಸಶಬ್ದವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಕೇಕೆ ಹಾಕಿ ನಗುತ್ತಿದ್ದರು- ಸಂಧರ್ಭೋಚಿತವಾಗಿ. ಸಭೆಯಲ್ಲಿ ಕಳೆಗಟ್ಟಿತ್ತು. ಭಾಷಣಗಾರರು ಸಭೆಯ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿದ್ದರು. ಸಮಯಾವಧಾನದಿಂದ ಸ್ಥಳದಲ್ಲಿಯೇ ಹಾಸ್ಯದ ಮಾತುಗಳನ್ನು ಸೃಷ್ಟಿಸಿ ಹೇಳತೊಡಗಿದರು. ಇಡೀ ಸಭೆಯೇ ಹಾಸ್ಯ ಸಂಜೆಯ ಆನಂದ ಪಡೆಯುತ್ತಿತ್ತು. ಸಂದರ್ಭದಲ್ಲಿ ಸಭೆಯಲ್ಲಿ ಸುತ್ತಾಡುತ್ತಿದ್ದ ಸಂಘದ ಸಂಘಟಕರಾದವರು ಕೂಗಿ ಹೇಳಿದರು "ಮೈಕ್ ಸರಿಯಿಲ್ಲ; ಹಿಂಭಾಗದಲ್ಲಿ ಏನೇನೂ ಕೇಳಿಸುವುದೇ ಇಲ್ಲ !!" ಪಾಪ. ಭಾಷಣಗಾರರು ಕಕ್ಕಾಬಿಕ್ಕಿ !! ಹಿಂಭಾಗದಲ್ಲಿ ಕೇಳಿಸದಿದ್ದರೆ ಅಲ್ಲಿಯ ಸಭಿಕರು ಕೇಕೆ ಹಾಕಿ ನಕ್ಕಿದ್ದಾದರೂ ಹೇಗೆ ?? ನಗಿಸಲು ಬಂದವರ ಮುಖದಲ್ಲಿ ನಗೆ ಮಾಸಿ ಆಶ್ಚರ್ಯದ ಛಾಯೆ ಮೂಡತೊಡಗಿತು. ಹಾಸ್ಯದ ನಲ್ಲಿ ಮುನಿಸಿಪಾಲಿಟಿಯಾಯಿತು.

ಒಬ್ಬ ಧಡೂತಿ ವ್ಯಕ್ತಿ ನನ್ನಿಂದ ನಾಲ್ಕು ಸೀಟು ಆಚೆ ಕುಳಿತಿದ್ದರು. ಬಕ್ಕ ತಲೆ, ಉದ್ದ ಮೂಗು, ಗಜಕರ್ಣ, ತೊಂಡೇ ತುಟಿ; ತಿಂದದ್ದೆಲ್ಲಾ ಬಹಳ ಚೆನ್ನಾಗಿ ಮೈಗೂಡ್ಸಿಕೊಂಡಿದ್ದು "ಮಧ್ಯ ವಯಸ್ಸಿನ ರೇಖಾ"ಳನ್ನು ದಾಟಿದ ಅಸಾಮಿ ತನ್ನ ಒಂದು ಸೀಟಿನಲ್ಲಿ ಒಂದೂವರೆಯಾಗಿ ಕೂತು ಸಶಬ್ಧವಾಗಿ ತಾಳಬದ್ಧವಾಗಿ ದೇಹ ಕುಣಿಸುತ್ತಾ ಅಲ್ಲಲ್ಲಿ ಧಾರಾಳವಾಗಿ ತನ್ನದೇ ಆದ ವಿಲಕ್ಷಣ ಶೈಲಿಯಲ್ಲಿ ನಗುತ್ತಿದ್ದರು. ಅಲ್ಲಲ್ಲಿನಗೆಹನಿಗಳನ್ನು ಸಿಂಪಡಿಸುತ್ತಾ ನಕ್ಕೂ ನಕ್ಕೂ ಕಣ್ಣಲ್ಲಿ ನೀರು ಹರಿಸುತ್ತಾ ಆಗಾಗ ಕಣ್ಣುಗಳನ್ನು ಕೈ ಬೆರಳುಗಳಲ್ಲಿ ಒತ್ತುತ್ತಾ ಜೋರಾಗಿ ಉಚ್ಚಸ್ಥಾಯಿಯಲ್ಲಿ ನಗುತ್ತಿದ್ದರು. ಆತನ ಸಂಪೂರ್ಣ ಜವಾಬ್ದಾರಿ ಹೊತ್ತ ಕುರ್ಚಿ ಕೂಡಾ ಪಕ್ಕ ವಾದ್ಯದಲ್ಲಿ ಸಹಕರಿಸುತ್ತಿತ್ತು.

ಅಲ್ಲದೆ, ಹಿಂಬದಿಯಲ್ಲಿ ಕುಳಿತಿದ್ದ ಇತರರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಭಾಷಣ ಸರಿಯಾಗಿ ಕೇಳಲ್ಪಡದ ಸಕಲರಿಗೂ ಮಾರ್ಗದರ್ಶಕರೂ ಆಗಿ ಕೆಲಸಮಾಡುತ್ತಿದ್ದರು. ಭಾಷಣಕಾರರ ಮಾತಿನಲ್ಲಿ, ಆಯಕಟ್ಟಿನ ಸ್ಥಳಗಳಲ್ಲಿ ಹಾಸ್ಯದ ಶಾಂಪೇನ್ಟಪ್ಎಂದು ಸಿಡಿದಾಗ ಸಾಮಿ ಅದನ್ನು ಗುರುತಿಸಿಗೊಳ್ಎಂದು ಮೈಕುಣಿಸಿ ನಗುವುದೇ ಹಿಂಭಾಗದಲ್ಲಿರುವವರಿಗೆ ಒಂದು ಸಿಗ್ನಲ್. ಸರಿಯಾಗಿ ಅದೇ ಸಂದರ್ಭವನ್ನು ನೋಡಿ ಹಿಂಭಾಗದ ಜನತೆ ಕೇಕೆ ಹಾಕಿ ನಗುತ್ತಿದ್ದರು- ಪಾಪ, ಭಾಷಣಕಾರರಿಗೆ ಬೇಸರವಾಗದಿರಲೆಂದು ! ದಕ್ಷಿಣ ಕನ್ನಡದ ಜನಾರೀ, ದಾಕ್ಷಿಣ್ಯ ಜಾಸ್ತಿ !!

ಭಾಷಣಕಾರರಿಂದ ಹಾಸ್ಯ ಧಡೂತಿಗೆ ಹಾಗೂ ಧಡೂತಿಯಿಂದ ಅದು ಕನ್ನಡದ ದಾಕ್ಷಿಣ್ಯಮೂರ್ತಿಗಳಿಗೆರಿಲೇಆಗುತ್ತಿತ್ತು. ಕಾಲ ಕ್ರಮೇಣ ನಾನೂ ಇತರರಂತೆ ಧಡೂತಿಯನ್ನೇ ಗಮನಿಸತೊಡಗಿದೆ. ದಿನದ ಆಯಾಸ ಬಳಲುವಿಕೆ ಮರೆಯಾಗಿ ಅದೇ ಒಂದು ಮೋಜೆನಿಸಿತು. ಅವರು ಸಿಗ್ನಲ್ ಕೊಟ್ಟಕ್ಷಣ ಇತರರಂತೆ ಯಾವುದೇ ಹಿಂಜರಿಕೆಯಿಲ್ಲದೆ ಮನಃಪೂರ್ವಕ ನಗಲು ಆರಂಭಿಸಿದೆ. ಅಕ್ಕಪಕ್ಕದವರೆಲ್ಲರೂ ಇದನ್ನೇ ಒಂದು ಆಟವಾಗಿಸಿ ಹಾಸ್ಯ ಸಂಜೆಯ ಮಜ ಹೀರುತ್ತಿದ್ದರು.

ಅಬ್ಬಬ್ಬ !! ಮುಗಿಯಿತು, ಪರಿಚಯಿಸುವ ಕಾರ್ಯ. ಯಾಕೆಂದರೆ, ಇಂತಹ ಘಟಾನುಘಟಿಗಳನ್ನು ಪರಿಚಯಿಸುವುದು ಒಂದು ಸುಲಭದ ಕೆಲಸವಲ್ಲ. ನಂಗಂತೂ ಟೆಂಶನ್ ! ಇವರ ಹೆಸರು-ಕುಲ-ಗೋತ್ರ ನಾನು ಹೇಳೇ ಇಲ್ಲ. ಯಾಕಂದ್ರೆ, ನನಗೂ ಗೊತ್ತಿಲ್ಲ. ನಾನು ಈಗಷ್ಟೇ ಅವರನ್ನು ಕಂಡಿದ್ದು. ಅಷ್ಟರಲ್ಲೇ ಇಷ್ಟವಾದರು.

ಮುಂದಿನ ಕೆಲವು ಸಮಾರಂಭಗಳಲ್ಲೂ ಅವರನ್ನು ಕಂಡೆ. ತಮ್ಮದೇ ವಿಲಕ್ಷಣ ಶೈಲಿಯಲ್ಲಿ ನೆರೆದ ಜನತೆಗೆ ನಗು ಬರುವಂತೆ ನಡೆದಾಡುತ್ತಿದ್ದರು. ಪಕ್ಕಾ ಹಾಸ್ಯ ಸ್ವಭಾವವಲ್ಲದೆ ಅಕ್ಕ ಪಕ್ಕದವರಲ್ಲಿ ಆತ್ಮೀಯವಾಗಿ ನಗುತ್ತಾ ಮಾತನಾಡಿಸುತ್ತಾ ಇರುತ್ತಿದ್ದರು. ನಾನು ದೂರದಿಂದ ಅವರನ್ನು ಗಮನಿಸುತ್ತಿದ್ದರೂ ಹೆಚ್ಚು ಮಾತನಾಡಿ ಪರಿಚಯಿಸಿಕೊಳ್ಳಲು ಸಂದರ್ಭವಾಗಿರಲಿಲ್ಲ.

ಒಂದು ಶನಿವಾರ ಊರಿಗೆ ಬಂದವನೇ ಸಂಜೆ ಪೇಟೆಗೆ ಹೊರಟೆ ತರಕಾರಿ ಖರೀದಿಗೆ. ಊರಿನ ಮುಖ್ಯ ತರಕಾರಿ ಮಾರುಕಟ್ಟೆ ಇರುವುದು ಬಸ್ ಸ್ಟಾಂಡಿನ ಪಕ್ಕದಲ್ಲಿ. ಅಂಗಡಿ ಸುತ್ತಾಡುತ್ತಾ ತರಕಾರಿಗಳ ಗುಣಮಟ್ಟ ನೋಡುತ್ತಾ ಬೆಲೆ ಕೇಳುತ್ತಾ ಟೊಮಾಟೋ ಬೆಲೆ ಕೇಳಿದಾಗ ಗೊತ್ತಾಯಿತು, ನನ್ನ ಕಾರ್ಡಿಯಾಲಜಿಸ್ಟ್ ಇದೊಂದು ಸಲಹೆ ನೀಡಲೇ ಇಲ್ವಲ್ಲ !!- ಹತ್ತು ಹಲವು ಮಾಡಬಾರದ ಸಲಹೆಗಳ ಪಟ್ಟಿಯಲ್ಲಿ "ಮಾರ್ಕೆಟ್ನಲ್ಲಿ ಟೊಮಾಟೋ ಬೆಲೆ ಕೇಳಬಾರದು" ಎಂದು ಹೇಳಲೇ ಇಲ್ಲ. ಬಗ್ಗೆ ಅವರಿಗೆ ಹೇಳಬೇಕು ಎಂದು ಅಲೋಚಿಸುತ್ತಾ ನಿಂತಿದ್ದೆ. ಆಗಲೇ ನನ್ನ ಪ್ಯಾಂಟಿಗೆ ರಾಚಿತು ಒಂದು ಕೊಳೆತ ಲಿಂಬೇ ಹುಳಿ. ಪ್ಯಾಂಟಿಗೆ ತಗಲಿತು ಕೊಳಕು. ಲಿಂಬೇಹುಳಿ ಮೇಲೆ ಕನ್ಸ್ಯೂಮರ್ ಹಾಕುವಷ್ಟು ಕೋಪ ಏರಿತು. ನನ್ನ ಕರ್ಮ !!

ಈಗ ಅದರ ಕರ್ತೃವಿನ ದರ್ಶನ:

ಒಂದೂವರೆ ಸೈಜಿನ ದಢೂತಿ ಎದುರಿಗೆ ನಿಂತು "ಸಾರಿ..... ಸಾರಿ" ಎಂದು ಪೆಚ್ಚು ನಗೆ ಬೆಳಗುತ್ತಿದ್ದರು. ಕೂಡಲೇ ನೆನಪಾಯಿತು- ಸಭೆಗಳಲ್ಲಿ ನೋಡಿದ ವ್ಯಕ್ತಿ ಇವರೇ.

" ಸಾರಿ.....ವೆರಿ ವೆರಿ ಸಾರಿ. ನಾ ನೋಡಲಿಲ್ಲ. ಲಿಂಬೆ ಹುಳಿ ಕಾಲಡಿ ಸಿಕ್ಕು ನಿಮ್ಮ ಪ್ಯಾಂಟು ಮೇಲೆ ಬಿತ್ತು. ಯ್ಯಾಮ್ ರಿಯಲ್ಲಿ ಸೋರಿ." ಎಂದು ಪಶ್ತಾತ್ತಾಪ ಸೂಚಿಸಿದರು.

" ಇಟ್ ಈಸ್ ಓಕೆ....ತೊಂದ್ರೆ ಇಲ್ಲ" ಎಂದೆ. ಇನ್ನೆಷ್ಟು ಸೋರಿದರೇನು ಫಲ ?

" ನಿಮ್ಮನ್ನು ನಾ ನೋಡಿದ್ದೇನೆ.... ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ.." ಅವರ ಅಂದಿನ ಹಾವ-ಭಾವ ನೆನಪಾಗುತ್ತಲೇ ನಗು ಉಮ್ಮಳಿಸಿತು.

"ಹೌದಾ. ಸಂತೋಷ. ನಾನು "ತಿರುಮಲೇಶ್ ಕೋವಳ್ಳಿ, - ಟಿ.ಕೆ ಇನ್ ಶಾರ್ಟ್" ಎಂದು ನಗೆ ಬೀರಿದ ಲಿಂಬೇ ಗೌಡ !

ಟಿ.ಕೆ ಉಲ್ಟಾ ಮಾಡಿದ್ರೆ ಪಕ್ಕಾ ಕೋ. ತಿ ಆಗ್ತಾನಲ್ಲಾ ಅಂತ ನೆನೆದುಕೊಳ್ಳುತ್ತಾ ನನ್ನ ಪ್ಯಾಂಟನ್ನು ಇನ್ನೊಮ್ಮೆ ಬಗ್ಗಿ ಕೊಡವಿಕೊಂಡು ಪೆಚ್ಚು ಪೆಚ್ಚಾಗಿ ನಕ್ಕೆ. ನಗುವಾಗ ಕೋತಿ ಮುಖ ನೋಡಬಾರದೆಂಬ ಸಾಮಾನ್ಯ ಜ್ಞಾನವನ್ನಂತೂ ಪ್ರೈಮರಿ ಸ್ಕೂಲ್ ಮೇಷ್ಟ್ರು ದಂಡರೂಪೇಣ ನನಗೆ ಶತಸ್ಸಿದ್ಧ ಮಾಡಿದ್ದರು. ಎಲ್ಲಾದರು ಕ್ಲಾಸಿನಲ್ಲಿ ನಕ್ಕರೆ " ನನ್ನ ಮುಖಾದಲ್ಲಿ ಏನು ಕೋತಿ ಕುಣಿತದಾ..." ಎಂದು ಬಾರು ಕೋಲಿನಲ್ಲಿ ಬರೋಬ್ಬರ್ ಬಾರಿಸುತ್ತಿದ್ದರು. ಆವಾಗಲೇ ನಾನು ಮನಸ್ಸಿನಲ್ಲೇ ಒಂದು ದೊಡ್ಡ ಪೋಸ್ಟರ್ ಹಾಕಿ ಬಿಟ್ಟಿದ್ದೆ..... ಏನ್ ನೋಡಿ ಬೇಕಾದ್ರೂ ನಗ್ ಬೌದು...., ಹುಡ್ಗಿ ಮುಖಾ ನೋಡಿ ಬೇಕಿದ್ರೂ ನಗ್ ಬೌದು, ಪ್ರಿನ್ಸಿಪಾಲ್ ಮುಖಾ ನೋಡಿ ಬೇಕಿದ್ರೂ ನಗ್ ಬೌದು. ಆದ್ರೆ, ಏಳೇಳು ಜನ್ಮಕ್ಕೂ ಕೋತಿ ಮುಖಾ ಮಾತ್ರ ನೋಡಿ ನಗ್ ಬಾರ್ದು ಅಂತ.

ಅಂತೂ ಶನಿವಾರ ಸಂಜೆ, ಕೋವಳ್ಳಿ ತಿರುಮಲೇಶ್ ಅರ್ಥಾತ್ ಕೋ.ತಿ ದರ್ಶನ ಆಯಿತು. " ಜಯದೇವ್...." ಎಂದು ಹೇಳಿ ಕೈ ಕುಲುಕಿದೆ.

"ಬನ್ನಿ ನನ್ ಮನೆ ಇಲ್ಲೇ ಹತ್ರ. ಸ್ವಲ್ಪ ಪ್ಯಾಂಟ್ ತೊಳ್ಕೊಂಡು, ಕಾಫ಼ಿ ಕುಡ್ಕೊಂಡು ಹೋಗ್ ಬೌದು." ಎಂದು ನನ್ನ ಉತ್ತರಕ್ಕೂ ಕಾಯದೆ ನನ್ನ ತೋಳನ್ನು ಗಟ್ಟಿಯಾಗಿ ಹಿಡ್ಕೊಂಡು ಅಲ್ಮೋಸ್ಟ್ ಎಳೆದ್ಕೊಂಡೇ ಹೋದರು.

ಕಪಿಮುಷ್ಟಿಯ ಬಗ್ಗೆ ಕೇಳಿದ್ದೆ. ಆದ್ರೆ ಈಗ ಕಪಿ ತೋಳನನ್ನು ಹೇಗೆ ಹಿಡಿಯುತ್ತೆ ಎಂಬ "ಫ಼ಸ್ಟ್ ಹ್ಯಾಂಡ್" ಅನುಭವ ಆಗ ತೊಡಗಿತು. ಇನ್ನು ದಢೂತಿ ನನ್ನ ಸೆಕೆಂಡ್ ಹ್ಯಾಂಡನ್ನೂ ಹಿಡ್ಕೊಂಡ್ರೆ ಎಂಬ ಪ್ರಾಣ ಭಯ ಈವರೆಗೆ ಆವರಿಸಿದ್ದ ಕೊಳೆತ ಲಿಂಬೂ ಸ್ಪ್ರೇ ಗಿಂತ ಹೆಚ್ಚಾಗಿ ಕಾಡತೊಡಗಿತು. ನಶ್ವರ ಜೀವನದಲ್ಲಿ ಎಲ್ಲವೂ ಸಾಪೇಕ್ಷ ಎಂಬ ಸಂತವಾಣಿಗೆ ಒಂದು ಡೆಮೋ ತೋರಿದಂತಾಯ್ತು.!

ಅಲ್ಲೇ ಹಿಂಬದಿ ಓಣಿಯಲ್ಲಿ ಚೂರೇ ದೂರ ನನ್ನ ತೋಳನ್ನು (ನನ್ನ ಸಹಿತ) ಎಳೆದುಕೊಂಡು ಸೀದಾ ಅವರ ಮನೆ ಹೊಕ್ಕರು.ಇಬ್ಬರೂ ನಗುತ್ತಲೇ ಇದ್ದೆವು.

ಸಣ್ಣ ಮನೆ ಆದರೆ ಚೊಕ್ಕ. ಎದುರಿನ ಡ್ರಾಯಿಂಗ್ ರೂಮುನಲ್ಲಿ ಟಿ. ವಿ, ಸೋಫ಼ಾ ಎಲ್ಲಾ ಇತ್ತು. ನನ್ನನ್ನು ಕುಳ್ಳಿರಿಸಿ ತಾವೂ ಆಸೀನರಾದರು ನನ್ನೆದುರು. ನಾವು ಮನೆ ಹೊಕ್ಕಾಗ ಅಲ್ಲಿ ವ್ಹೀಲ್ ಚೈರ್ ನಲ್ಲಿ ಕುಳಿತಿದ್ದ ಶೂನ್ಯಭಾವದ ಮಧ್ಯಮ ವಯಸ್ಸಿನ ಹೆಂಗಸೊಬ್ಬರು ಕುರ್ಸಿ ತಳ್ಳಿಕೊಂಡು ಒಳಗೆ ಕಣ್ಮರೆಯಾದರು.

" ನನ್ನ ಹೆಂಡ್ತಿ..... ಆಕ್ಸಿಡೆಂಟ್.., ಹದಿನೈದು ವರ್ಷಗಳಾಯಿತು." ಎಂದರು.

ನನ್ನ ನಗು ನಿಂತಿತು. " ....." ಅಂದೆ ಬೇಸರದಿಂದ. ’ಎಷ್ಟು ಕಠೋರ ಭಗವಂತ. ಎಷ್ಟು ನಿಷ್ಕಲ್ಮಶ ಮನಸ್ಸಿನ ವ್ಯಕ್ತಿಗೆ ಹೀಗೆ..!!!’ ಅಂದುಕೊಂಡೆ.

"ಏಷ್ಟು ಗಮ್ಮತಲ್ಲವಾ ಅವತ್ತಿನ ಫ಼ಂಕ್ಷನ್ನು. ನನಗಂತೂ ನಕ್ಕು ನಕ್ಕು ಹುಣ್ಣು ಹೊಟ್ಟೆಯಾಯಿತು" ಎಂದು ಇನ್ನೊಮ್ಮೆ ಮೈಕುಲುಕುತ್ತಾ ಜೋರಾಗಿ ನಕ್ಕರು ವಿಷಯ ಬದಲಿಸುತ್ತಾ. ಅದೇ ಶೈಲಿ, ಅದೇ ದೇಹ, ಅದೇ ಭಾವ....ಆದರಿಲ್ಲಿ ಬಾಗಿಲ ಪರದೆ ಇನ್ನೂ ಲಾಸ್ಯವಾಡುತ್ತಿತ್ತು ಹಿನ್ನೆಲೆಯಲ್ಲಿ. ಎನೋ ಬೇಸರವಾಯಿತು. ನಾನೆಣಿಸಿದಂತಿಲ್ಲವಲ್ಲ ಎಂಬ ಕಳವಳ ಮನಸ್ಸಿನಲ್ಲಿ ಮೂಡಿತು. ಅಲ್ಲೇ ಸೋಫ಼ಾದಲ್ಲಿ ಕುಳಿತೆ.

"ನಾನು, ಅವಳು, ಮಗ, ಸೊಸೆ ಹಾಗೂ ಒಬ್ಬ ಮೊಮ್ಮಗ.... ಮಗ-ಸೊಸೆ ಇಬ್ಬರೂ ಲೆಕ್ಚರರ್ಸ್. ಮೊಮ್ಮಗನಿಗೆ ಒಂದು ವರ್ಷ. ನಾನು ಬ್ಯಾಂಕಿಂದ ಕೆ.ಆರ್.ಎಸ್ ತಗೊಂಡು ವರ್ಷ ಆಯ್ತು. ಈಗ ಆರಾಮದ ಜೀವನ." ಎಂದು ಪುನಃ ಜೋರಾಗಿ ನಗತೊಡಗಿದರು.

ನಾನು ಕೆ.ಆರ್.ಎಸ್ ಬಗ್ಗೆ ಯೋಚಿಸುತ್ತಾ ಪ್ರಯತ್ನಪೂರ್ವಕವಾಗಿ ಅವರ ನಗೆಗೆ ನಗೆ ಜೋಡಿಸುತ್ತಿದ್ದಂತೆ ಒಳಗಿನಿಂದ ಬಳೆಗಳ ಸದ್ದು ಕೇಳಿಸಿ ಪರದೆ ಸರಿಸಿ- ಅವರ ಸೊಸೆಯಿರಬಹುದು- ಹೊರಬಂದಳು. "ತಂದ್ರಾ, ಕೊತ್ತಂಬ್ರಿ ಸೊಪ್ಪು? " ಅವಳ ಸ್ವರದಲ್ಲಿ ಅಸಹನೆಯನ್ನು ಅಡಗಿಸುವ ಪ್ರಯತ್ನ ಕಾಣಲಿಲ್ಲ. ನಮ್ಮ ನಗೆಯ ಬಗ್ಗೆ ತಿರಸ್ಕಾರದ ಭಾವ ಇದ್ದ ಹಾಗಿತ್ತು. ನನ್ನ ಕಡೆಗೆ ಒಮ್ಮೆ ಕಣ್ಣು ಹಾಯಿಸಿ ಗಂಭೀರವಾಗಿ ತಿರುಮಲೇಶ್ ಕಡೆ ಮತ್ತೆ ದೃಷ್ಟಿ ನೆಟ್ಟಳು.

ತಿರುಮಲೇಶ್ ಚುರುಕಾದರು. ಸೊಪ್ಪಿಗಾಗಿ ಸೊಸೆ ಕಾಯುತ್ತಿದ್ದಂತಿತ್ತು. " ಇಲ್ಲ, ಅದು, ನಾನು .... ಇವರ ಪ್ಯಾಂಟಿಗೆ......" ಎಂದು ವಿಷಯ ತಿಳಿಸಲು ಆರಂಭಿಸುತ್ತಿದ್ದಂತೆಯೇ ಪರದೆಯಿಂದ ಕೈ ಒಳಕ್ಕೆ ಎಳೆದುಕೊಂಡಿತು. ಗಂಭೀರವದನೆ ಇನ್ನಷ್ಟು ಗಂಭೀರವಾಗಿ ಅದೃಷ್ಯವಾದಳು. ನಾನು ಅವಳೆಡೆ ನಕ್ಕು ಹಲೋ ಅನ್ನ ಬೇಕೆಂದು ಮಾಡಲಾರಂಭಿಸಿದ ಪ್ರಯತ್ನವನ್ನು ಅಲ್ಲೇ ಕೈಬಿಟ್ಟೆ.

ಹಾಸ್ಯದ ನಶೆ ಇಳಿಯಿತು. ಮನಸ್ಸು ಭಾರವಾಯಿತು, ಗಂಭೀರವಾಗಿ ಯೋಚಿಸತೊಡಗಿತು.
ಕೋ.ತಿ ಮಾತ್ರ ತನ್ನ ಮಾತನ್ನು ಮುಂದುವರಿಸುತ್ತಲೇ "ಪ್ಯಾಂಟು ಬೇಕಾದ್ರೆ ತೊಳೆದುಕೊಳ್ಳಿ ಸ್ವಲ್ಪ..."ಎಂದೆಲ್ಲ ಉಪಚರಿಸಿದರು. ನಾನು ಬೇಡ ಅಂದೆ. ನನ್ನ ಬಗ್ಗೆ ಕೇಳಲಾರಂಭಿಸಿದರು. "ನಾನೊಬ್ಬ ಇಂಜಿನಿಯರ್.." ಅಂದೆ.

" ಗೀತಾ, ಎರಡು ಕಾಫ಼ಿ ತರ್ತೀಯಾ.." ಎಂದು ಒಳಕ್ಕೆ ಸಂದೇಶ ರವಾನಿಸಿದರು. ಓಳಗಿಂದ ಏನೂ ಉತ್ತರ ಬಾರದಿರುವುದರಿಂದ ನನಗಾದ ಮುಜುಗರಕ್ಕೆ " ಛೇ ಛೇ ಕಾಫ಼ಿ ಯಾಕೆ ಬೇಡ. ನಾನು ಹೋಗ್ತೇನೆ. ಅರ್ಜೆಂಟ್ ಇದೆ" ಎಂದು ಏಳಲು ಹೊರಟೆ.

" ಇರಿ ಜಯದೇವ್. ಎಲ್ಲಿಗೆ ಹೋಗ್ತೀರಾ...ನೀವಲ್ಲದೆ ಬೇರೆ ಯಾರಾದರು ಆಗಿದ್ರೆ ಇವತ್ತು ನನ್ನನ್ನು ಒಂದು ಕ್ವಿಂಟಾಲ್ ಕೊಳೆತ ನಿಂಬೆಯಲ್ಲಿ ಶರ್ಬತ್ ಮಾಡಿ ಅದರಲ್ಲಿ ಮೂರು ಸಾರಿ ಮುಳುಗಿಸಿ ಎರಡೇ ಎರಡು ಬಾರಿ ಎತ್ತುತಿದ್ರು" ಇನ್ನೊಮ್ಮೆ ಗಹ ಗಹಿಸಿ ನಗತೊಡಗಿದರು ಕೋ.ತಿ. "ನೀವ್ ಆದ ಕಾರಣ ನಾನಿನ್ನೂ ಕೆಲವು ವರುಷ ಭೂಮಿಯಲ್ಲಿ ನಿಂಬೆ.......... ಎಂದು ಜೋರಾಗಿ ನಗತೊಡಗಿದರು. ನಾನು ಅಶ್ಚರ್ಯದಿಂದ ನಗುತ್ತಾ ಅವರನ್ನು ನೋಡುತ್ತಿರುವಂತೆಯೇ..,

ನನ್ ಕಾಲಡಿ ನಿಂಬೆ
ನಿಂ ಪ್ಯಾಂಟಿನಿಂ
ಬೆರೆದು; ನೀವ್
ಆಗಿರ್ದದರಿಂ
ನಾನಿಲ್ಲಿ ನಿಂಬೆ...........

ಎಂದು ಎನೇನೋ ಚುಟುಕ ಸೃಷ್ಟಿಕ್ರಿಯೆಯಲ್ಲಿ ಪದಗಳನ್ನು ಪೋಣಿಸತೊಡಗಿದರು. ಎನೂ ತೋಚದೆ ನಾನು ಸುಮ್ಮನೇ ಕುಳಿದಿದ್ದೆ. ಅಷ್ಟರಲ್ಲಿ ಕಾಫ಼ಿ ಬಂದೇ ಬಂದಿತು.. ಆದರೆ ಒಂದೇ ಗ್ಲಾಸ್ ! ನನ್ನ ಎದುರಿಗಿಟ್ಟು ಸೊಸೆ ಪರದೆಯೊಳಗೆ ಪುನಃ ಅದೃಶ್ಯಳಾದಳು.

ಕೋ. ತಿ ಮನೆಯ ದೃಶ್ಯಗಳು ಈಗ ಸ್ಪಷ್ಟವಾಗಿ ತೋರತೊಡಗಿತು. ಆದಷ್ಟು ಬೇಗ ಕಾಫ಼ಿ ಹೀರಿ ಅಲ್ಲಿಂದ ಹೊರಡುವ ಕಾಯಕದಲ್ಲಿ ತೊಡಗಿಸಿಕೊಂಡೆ. ಕೋ. ತಿ ಮಾತ್ರ ಇದೆಲ್ಲದರ ಪರಿವೆಯೇ ಇಲ್ಲದಂತೆ ಚುಟುಕವನ್ನು ಪರಿಷ್ಕರಿಸುವ ಕ್ರಿಯೆಯಲ್ಲಿ ತಲ್ಲೀನರಾಗಿದ್ದಂತೆ ಕಂಡಿತು. "ಪ್ಯಾಂಟಿನಿಂ ಬೆರೆದ" ಎಂಬಲ್ಲಿ ತೃಪ್ತಿ ಕಾಣದೆ ಅಲ್ಲೇ ಕಸರತ್ತು ನಡೆಸುವುದನ್ನು ಕಂಡು ವಿಸ್ಮಯಗೊಂಡೆ. ಬರೇ ಒಂದು ನಿಂಬೆ ಎಂಬ ಶಬ್ದದಲ್ಲಿ ಇಡೀ ಜಗತ್ತಿನ ಸಮಸ್ಯೆಗಳೆಲ್ಲವೂ ಅಡಗಿದೆಯೋ ಎಂಬಂತೆ ಹೆಣಗಾಡುವ ಒಂದು ಸರಳ ಜೀವನದೃಷ್ಟಿಯನ್ನು ಕಂಡು ಅಶ್ಚರ್ಯಗೊಂಡೆ.

"ಸಿಕ್ತು.., ಸಿಕ್ತು...ಪ್ಯಾಂಟಿನಲಿಂ ಬೆರೆದು....ಅಂದ್ರೆ ಹೇಗೆ? ಅದ್ರಲ್ಲೂ ಲಿಂಬೆ ಬರುತ್ತಲ್ಲ? " ಎಂದು ಗಹ ಗಹಿಸಿ ನಗತೊಡಗಿದರು.

ಬಾರದ ನಗುವನ್ನು ನಕ್ಕೆ; ಹಾಗೆ ನಕ್ಕಾಗ ಕಣ್ಣಲ್ಲಿ ಬಂದ ನೀರನ್ನೊರಸಿಕೊಂಡೆ.


PUBLISHED IN 'LOKADARSHANA' DEEPAVALI VISHESHANKA, NOVEMBER, 2008

"ಆಲದ ಮರ"

- ಜಯದೇವ ಪ್ರಸಾದ.





ನನ್ನ ಊರು ಅಂತಹ ದೊಡ್ಡ ಊರು ಏನೂ ಅಲ್ಲ. ಚಿಕ್ಕ ಹಳ್ಳಿ. ಬಿ. ಸಿ ರ್ಓಡಿಂದ ಒಳಕ್ಕೆ ತಿರುಗಿ ಒಂದು ಹತ್ತು ಕಿಲೋ ಮೀಟರ್ ಹೋದ್ರೆ ಅಲ್ಲಿ ಸಿಗುವುದೇ ನಾನು ಹುಟ್ಟಿದ ಹಳ್ಳಿ. ಹಳ್ಳಿಗೆ ಗುರುತು - ಒಂದು ಸಣ್ಣ ಬಸ್ ಸ್ಟಾಂಡ್, ಒಂದು ನಾಲ್ಕು ಚಿಕ್ಕ ಪುಟ್ಟ ಅಂಗಡಿಗಳು, ಒಂದೆರಡು ಬಸ್ಸು ನಿಲುವಷ್ಟು ಜಾಗ. ಅದೇ ನಾನು ಹುಟ್ಟಿದ ಹಳ್ಳಿ. ಅಲ್ಲಿಯ ಬಸ್ಸ್ಟಾಂಡ್ ಪಕ್ಕದ್ದೇ ನಮ್ಮ ಹಿತ್ತಿಲು ಜಾಗ. ಒಂದು ಸಣ್ಣ ಪುರಾತನ ಮನೆ. ಹತ್ತಾರು ಗಿಡ ಮರಗಳು, ಹಣ್ಣು, ಕಾಯಿ, ಒಂದು ಸ್ವಲ್ಪ ಗದ್ದೆ, ತರಕಾರಿ ತೋಟ. ಒಂದಿಷ್ಟು ಜಾಜಿ, ಅಬ್ಬಲ್ಲಿಗೆ ಅಲ್ಲದೆ ಹಿತ್ತಿಲ ಸುತ್ತಲೂ ಬೇಲಿ ಗಿಡಗಳು. ಅದ್ರೆ ವಿಶೇಷ ಅಂದ್ರೆ ಹಿತ್ತಿಲಿನ ಹಿಂಭಾಗದಲ್ಲಿ ಒಂದು ದೊಡ್ಡ ಆಲದ ಮರ. ಭಾರೀ ಗಾತ್ರದ್ದು. ಅದನ್ನು ಯಾವ ಕಾಲದಲ್ಲಿ ಯಾರು ನೆಟ್ಟರೋ ಗೊತ್ತಿಲ್ಲ, ತಲತಲಾಂತರದಿಂದ ಅದು ಅಲ್ಲೇ ನಿಂತು ತನ್ನ ಎಲ್ಲಾ ದಿಕ್ಕುಗಳಲ್ಲೂ ಹರಡಿ, ಭದ್ರವಾಗಿ ಬೇರೂರಿ, ಅದೂ ಸಾಲದೋ ಎಂಬಂತೆ ಇನ್ನೂ ಹತ್ತಾರು ಬೀಳಲುಗಳನ್ನು ಭೂಮಿಯತ್ತ ಕೈ ಚಾಚಿಕೊಂಡಿದೆ. ಮರತುಂಬ ಎಲೆಗಳು, ಸಕಾಲದಲ್ಲಿ ಹೂ ಹಣ್ಣುಗಳು, ಹಕ್ಕಿಗಳ ಗೂಡುಗಳು ಎಲ್ಲವೂ ಮರಕ್ಕೆ ಒಂದು ದಿವ್ಯ ವರ್ಛಸ್ಸನ್ನೇ ನೀಡಿದೆ.
ನಾವೆಲ್ಲಾ ಬಾಲ್ಯದಿಂದಲೇ ಅದರ ಬಳಿ ಆಟವಾಡಿಕೊಂಡೇ ಬೆಳೆದದ್ದು. ನೆರೆಮನೆ ಮಕ್ಕಳೆಲ್ಲ ಸೇರಿ ಅದರ ಬೀಳಲುಗಳಲ್ಲಿ ಜೋತಾಡಿಕೊಂಡು ಅರಚಾಡಿಕೊಂಡು ಕಾಲಹರಣ ಮಾಡುತ್ತಿದ್ರೆ ಅಮ್ಮ ಬಂದು ಬೆನ್ನಿಗೊಂದು ಗುದ್ದಿದ ಮೇಲೆಯೇ ಅಲ್ಲಿಂದ ಹೋಗಿ ನಾಳೆಗೆ ಯಾವ ಹೋಮ್ ವರ್ಕ್ ಕೊಟ್ಟಿದ್ದಾರೆ ಅಂತ ನೋಡ್ಲಿಕ್ಕೆ ಓಡುತ್ತಿದ್ದೆವು. ರಜೆ ತುಂಬಾ ಅಲ್ಲೇ ಆಡ್ತಾ ಇದ್ದೆವು. ಬೆಳಗ್ಗಿಂದ ಸಾಯಂಕಾಲದವರೆಗೂ ಅಲ್ಲೇ ಹಾರಾಡ್ತಾ ಇರುತ್ತಿದ್ದೆವು. ಬಾಲ್ಯದುದ್ದಕ್ಕೂ ನಮಗೆ ಅತ್ಯಂತ ಇಷ್ಟವಾದ ಜಾಗ ಅದಾಗಿತ್ತು.
ದೊಡ್ಡವರಾದ ಹಾಗೆ ನಮಗೆ- ಅಂದ್ರೆ, ನಾನೂ ಮತ್ತು ನನ್ನಣ್ಣ- ಗೊತ್ತಾಗ್ಲಿಕ್ಕೆ ಸುರುವಾಯ್ತು ಮರ ಅಂದ್ರೆ ಬರೇ ಒಂದು ಆಟಕ್ಕಾಗಿ ಅಲ್ಲ ಅದರ ಹಿಂದೆ ಒಂದು ಅಪಾರವಾದ ಶಕ್ತಿಯೇ ಇದೆ ಅಂತ. ನಮ್ಮ ಹಿರಿಯರೆಲ್ಲಾ ಸೇರಿ ದಿನಾ ಅದಕ್ಕೆ ಪೂಜೆ ಮಾಡ್ತಾ ಇದ್ರು. ಅದನ್ನು ಭಕ್ತಿಯಿಂದ ಪೂಜಿಸಿ ನಮ್ಮ ಮನೆತನದ ಸಕಲ ಸೌಭಾಗ್ಯಕ್ಕಾಗಿ ಪ್ರಾರ್ಥನೆ ಮಾಡ್ತಾ ಇದ್ರು. ಇಲ್ಲಾ, ಕಷ್ಟ ತೊಂದರೆ ನಿವಾರಣೆಗಾಗಿ ಬೇಡಿಕೊಳ್ತಾ ಇದ್ರು. ಇದು ಊರೆಲ್ಲಿ ಎಲ್ರಿಗೂ ಗೊತ್ತಿರುವ ಸಂಗತಿ. ಭಟ್ರ ಮನೆ ಆಲದ ಮರಾ ಅಂತಾನೇ ಹೆಸರು ಅದಕ್ಕೆ. ಕೆಲವರು ಹೊಗಳ್ತಾ ಇದ್ರು; ಕೆಲವರು ಟೀಕೆ ಮಾಡ್ತಾ ಇದ್ರು ಇನ್ನು ಕೆಲವರು ಅವರವರಿಗೆ ಏನಾದರೂ ಕಷ್ಟ ಬಂದಿದ್ರೆ ಅಥವಾ ಏನಾದರೂ ಕೇಳ್ಕೊಳ್ಲಿಕೆ ಇದ್ರೆ ಒಂದು ಲೋಟ ಹಾಲೂ ಐದು ಬಾಳೆಹಣ್ಣೂ ಮಕ್ಳದ್ದೋ ಇನ್ನು ಯಾರದ್ದೋ ಕೈಯಲ್ಲಿ ಕೊಟ್ಟು ಕಳುಹಿಸ್ತಾ ಇದ್ರು. ನಮ್ತಂದೆ ಇಲ್ದಿದ್ರೆ ತಾಯಿ ಅಂಥಾ ಕಾಣಿಕೆಗಳನ್ನು ಭಕ್ತಿಯಿಂದ ತಮ್ಮ ವಕಾಲತ್ತಿನೊಂದಿಗೆ ಮರಕ್ಕೆ ಸಮರ್ಪಿಸ್ತಾ ಇದ್ರು. ಒಂದು ಹತ್ತಾರು ದಿನಗಳ ಬಳಿಕ ಅಂಥವರು ಜರಿ ಜರಿ ಧೋತಿ ಸೀರೆ ಉಟ್ಟ್ಕೊಂಡು ಪ್ಲೇಟ್ ತುಂಬಾ ಸಿಹಿತಿಂಡಿ ಹಣ್ಣು ಹೂ ಹಿಡ್ಕೊಂಡು ನಮ್ಮ ಮನೆಗೆ ನಗು ನಗ್ತಾ ಬರ್ತಿದ್ರೆ ನಮ್ಮ ತಂದೆ ತಾಯಿ "ಎಲ್ಲ ನಾವಿಟ್ಟಿರೋ ನಂಬಿಕೆ ಫಲ. ದೇವ್ರು ನಂಬಿದವನನ್ನು ಎಂದಿಗೂ ಕೈ ಬಿಡುವುದಿಲ್ಲ" ಎಂದೆಲ್ಲಾ ಮಾತು ಹಚ್ಚುತ್ತಿದ್ದರು ಹಾಗೂ ಬಂದವರು ಅತ್ಯಂತ ದೈನ್ಯತಾ ಭಾವದಿಂದ ಮಾತಿಗೆ ದನಿಗೂಡಿಸುತ್ತಿದ್ದರು.
ಹಾಗೂ, ತಿಳಿದೋ ತಿಳಿಯದೆಯೋ ನಾವೂ ಕೂಡಾ ನಮ್ಮ ಆಟ ಆಡೋ ಬಾಲ್ಯದ ದೋಸ್ತಿ ಮರವನ್ನು ಮನಸಾರೆ ಪೂಜಿಸ್ಲಿಕ್ಕೆ ಶುರು ಮಾಡಿದೆವು. ನಮ್ಮ ಎಲ್ಲಾ ಕಷ್ಟಕ್ಕೂ ನಷ್ಟಕ್ಕೂ ನಮ್ಮ ಮುತ್ತಜ್ಜನ ಮುತ್ತಜ್ಜ ಯಾರೋ ನೆಟ್ಟ ಆಲದ ಮರವನ್ನೇ ನಂಬಿ ಮುಂದಡಿ ಇಡ್ಲಿಕ್ಕೆ ಶುರು ಮಾಡಿದ್ವಿ. ನಂಬಿಕೆ ಇದ್ರೆ ಅವನೆಂದೂ ಕೈ ಬಿಡೋದಿಲ್ಲ ಎಂಬ ಅಚಲ ನಂಬಿಕೆಯಿಂದ್ಲೇ ಎಲ್ಲಾ ಕಠಿಣ ನಿರ್ಧಾರಗಳನ್ನೂ ತಗೊಳ್ತಾ ಇದ್ವಿ. ಸತ್ಯದ ಮಾತು, ಸತ್ಯದ ಹಾದಿ, ನ್ಯಾಯಕ್ಕಾಗಿ ಬದುಕು ಅಂತೆಲ್ಲ ಆರಂಭ ಮಾಡಿದ್ವಿ. ವರ್ಷಕ್ಕೊಮ್ಮೆ ಹಳ್ಳಿಗೆ ಹೋದ್ರೆ ಒಂದು ಭರ್ಜರಿ ಪೂಜೆ ಮಾಡ್ಸಿ ಊರಿಗೆಲ್ಲಾ ಊಟ ಹಾಕಿಸ್ತಿದ್ದೆವು................................
ಹಾಗಂತ, ಈಗ ನನಗೆ ಕೂತ್ಕೊಂಡು ಕಥೆ ಹೇಳೋ ಟೈಮ್ ಅಲ್ಲ. ಇನ್ನು ಒಂದು ಐದು-ಹತ್ತು ನಿಮಿಷಗಳಲ್ಲೇ ಮೀಟಿಂಗ್ ಇದೆ. ವಿಶಾಲವಾದ ಹಾಲ್ನಲ್ಲಿ ನಾನು ಕುತಿರೋ ಕ್ಯೂಬಿಕಲ್ಲಿಂದ್ಲೇ ಎದುರಿಗೆ ಕಾಣ್ತಾ ಇದೆ ಮೀಟಿಂಗ್ ರೂಮ್. ಅಡ್ಮಿನ್ನವ್ರು ಈಗಾಗ್ಲೇ ಅದನ್ನ ತೆರೆದು ಲೈಟ್, .ಸಿ ಎಲ್ಲಾ ಆನ್ ಮಾಡಿ ಇಟ್ಟಿದ್ದಾರೆ. ಸಾದಾರಣ ಇಡೀ ರೂಮನ್ನೇ ಆವರಿಸುವ ದೊಡ್ಡ ಮೇಜು, ಸುತ್ತಲೂ ಕುಳಿತಿರುವ ತಿರುಗು-ಕುರ್ಚಿಗಳು, ಮೇಜಿನ ಮೇಲೆ ಕುಡಿಯವ ನೀರಿನ ಬಾಟಲಿಗಳು, ತಿನ್ನಲು ಮಿಂಟ್, ನೋಟ್ಸ್ ಬರೆದುಕೊಳ್ಳಲು ಪೆನ್-ಪ್ಯಾಡ್ ಎಲ್ಲಾ ಸುಸಜ್ಜಿತವಾಗಿ ಇಟ್ಟಿರುವುದು ಗಾಜಿನ ಗೋಡೆಯ ಮೂಲಕ ನನಗೆ ಕುಳಿತಲ್ಲಿಂದಲೇ ಕಾಣಿಸುತ್ತಿತ್ತು. ಅಡ್ಮಿನ್ ಸೆಕ್ಶನಿನವರು ರೂಮನ್ನು ಸಿದ್ಧಪಡಿಸಿ ತಮ್ಮ ಮುಂದಿನ ಕೆಲಸಕ್ಕೆ ಆಚೀಚೆ ಹಾಯುವಾಗಲೆಲ್ಲಾ ಅವರ ದೃಷ್ಟಿಗಳು ನನ್ನನ್ನೇ ಅಗತ್ಯಕ್ಕಿಂತಲೂ ತುಸು ಹೆಚ್ಚು ಹೊತ್ತು ನೋಡುತ್ತಿರುವಂತೆ ನನಗೆ ತೋರ ತೊಡಗಿತು. ಅಂದರೆ, ಇಂದಿನ ಮೀಟಿಂಗಿನ ಮುಖ್ಯ ಮಸಾಲೆ ಅವಾಗಲೇ ಆಫ಼ೀಸಿನ ಎಲ್ಲರಿಗೂ ವಾಸನೆ ಹತ್ತಿ ಹೋಗಿತ್ತು.
ಕಂಪನಿಯದ್ದು ಕೋಟ್ಯಂತರ ವ್ಯವಹಾರ. ದುಡ್ಡು ಒಂದು ಚೂರು ಆಚೀಚೆ ಆದರೆ ಯಾರಿಗೆ ತಾನೇ ಗೊತ್ತಾಗುತ್ತದೆ? ಕೆಲ ಸಮಯದಿಂದ ನಡೆಯುತ್ತಿರುವ ಒಂದು ಅವ್ಯವಹಾರದ ಬಳ್ಳಿ ಒಂದು ದಿನ ಕಾಲಿಗೆ ತೊಡರಿತು. ಸುಪರ್ವೈಸರ್ ಲಕ್ಷ್ಮಣ ನಡೆಸುತ್ತಿದ್ದ ಒಂದು ಕಾರಾನಾಮ. ಕಂಪನಿಯ ದುಡ್ಡು ಕೊಳ್ಳೆ ಹೊಡೆಯುವ ಒಂದು ಕಾರ್ಯತಂತ್ರ. ಅದರ ಹಿಂದೆ ಬಿದ್ದು ಸಂಪೂರ್ಣ ಮಾಹಿತಿ ಕಲೆ ಹಾಕಿದೆ. ಎಲ್ಲಾ ಪುರಾವೆಗಳೊಂದಿಗೆ ಮ್ಯಾನೇಜ್ಮೆಂಟಿಗೆ ರಿಪೋರ್ಟ್ ಕೊಟ್ಟೆ. ಅವರಿಂದ ನಿರೀಕ್ಷಿತ ಉತ್ತರ ಸಿಗಲಿಲ್ಲ. ನಾನು ಕೊಟ್ಟ ಪುರಾವೆಗಳು ಗಟ್ಟಿಯಿಲ್ಲ ಎಂದು ಕಾಲ ದೂಡತೊಡಗಿದರು. ಆಕ್ಷನ್ ತಗೊಳ್ಳಲು ಆಗುವುದಿಲ್ಲಬಾಡ್ ಪಿ.ಆರ್ಪ್ರಾಬ್ಲೆಂ ಬರುತ್ತದೆ ಅಂತೆಲ್ಲ ನನ್ನನ್ನು ಸುಮ್ಮನಾಗಿಸಲು ಪ್ರಯತ್ನಿಸಿದರು.
ಕೇಸನ್ನು ಇತ್ಯರ್ಥ ಮಾಡಲೇ ಬೇಕು ಎಂದು ಹಟ ಹಿಡಿದೆ. ನನ್ನ ಕಂಪನಿಯ ಸಂಪತ್ತನ್ನು ರಕ್ಷಿಸುವುದು, ಅದಕ್ಕಾಗಿ ಹೋರಾಡುವುದು ನನ್ನ ಕರ್ತವ್ಯ. ಅದರಲ್ಲೇಕೆ ಅಂಜಿಕೆ? ಅಂತೂ ನನ್ನ ಸತತ ಮೂರು ತಿಂಗಳ ಹೋರಾಟದ ಫಲ - ಇಂದು ಕೇಸಿನ ಫ಼ೈನಲ್ ಎನ್ಕ್ವಯರಿ. ಸದ್ಯ ! ಇನ್ನು ಜಯ ಸಿದ್ಧ. ಧರ್ಮ ಯುದ್ಧದಲ್ಲಿ ನ್ಯಾಯಕ್ಕೆ ಎಂದಿಗೂ ಗೆಲುವು ನಿಶ್ಚಿತ. ಎಲ್ಲಾ ಆಲದ ಮರದ ಸತ್ಯದ ಪ್ರಮಾಣ.
ಮೀಟಿಂಗ್ ರೂಮಿನಲ್ಲಿ ಈಗಾಗಲೇ ಬರಬೇಕಾದ ಮೂರು ಜನರೂ ಬಂದಿದ್ದರು. ತಮ್ಮೊಳಗೆ ಗಂಭೀರವಾಗಿ ಚರ್ಚಿಸುತ್ತಿದ್ದರು. ತನಿಕೆಯ ಪೂರ್ವಭಾವೀ ತಯಾರಿ ನಡೆಸುತ್ತಿದ್ದಂತೆ ತೋರುತ್ತಿತ್ತು.
ನಾವು ಕುಳಿತಿರುವ ಕ್ಯುಬಿಕಲ್ಲಿನಲ್ಲಿ ನನ್ನದೇ ಒಂದು ಪ್ರೈವೇಟ್ ವಿಶ್ವ ಇದೆ. ವಿಶ್ವದ ಕೇಂದ್ರ ಅಂದ್ರೆ ಆಲದ ಮರದ ಒಂದು ಚಿಕ್ಕ ಫ಼ೋಟೊ. ದಿನಾಲೂ ಅದಕ್ಕೆ ಹೂ ಏರಿಸಿ, ಕುಂಕುಮ ಹಚಿದ ಮೇಲೆಯೇ ದಿನ ಆರಂಭ. ದಿನಕ್ಕೆ ಸಾವಿರಾರು ಬಾರಿ ಕೆಲಸದಲ್ಲಿ ತೊಡಗಿದ್ದಾಗೆ ಕಣ್ಣಿಗೆ ಬೀಳುವ ಆಲದ ಮರದ ದಿವ್ಯ ಕೃಪಾದೃಷ್ಟಿ ಸದಾ ಮನಸ್ಸಿಗೆ ಶಕ್ತಿ ಹಾಗೂ ಉಲ್ಲಾಸ ನೀಡುತ್ತದೆ. ಒಮ್ಮೆ ಅದನ್ನೇ ದೃಷ್ಟಿಸಿ ಮತ್ತೆ ಕಣ್ಣು ಮುಚ್ಚಿ ಮನಸ್ಸಿನಲ್ಲಿ ದೈವಿಕ ಶಕ್ತಿಯನ್ನು ತುಂಬಿಕೊಂಡೆ. ಇನ್ನೇನು, ನನ್ನನ್ನು ಕರೆಯುತ್ತಾರೆ..., ನಾನು ಒಳಗೆ ಹೋಗುತ್ತೇನೆ...., ಹೋಗಿ ನನ್ನ ವಾದ ಮಂಡಿಸಿ ಪುರಾವೆ ಒದಗಿಸಿ ಲಕ್ಷ್ಮಣನ ವಿರುದ್ಧ ಆಕ್ಷನ್ ತೆಗೆದುಕೊಳ್ಳುವಂತೆ ಅವರನ್ನು ಒತ್ತಾಯಿಸುವೆ...., ಧರ್ಮಕಾರ್ಯದ ಅಂತಿಮ ಕ್ಷಣಗಳು............
ಕಣ್ಣು ತೆರೆದು ತಲೆ ಎತ್ತಿ ನೋಡಿದಾಗ ಹಲ್ಲು ಕಿಸಿದು ಎದುರು ನಿಂತಿದ್ದ ಸುಬ್ಬು ಕಂಡ. ಸುಬ್ಬು ಅಂದರೆ ಸುಬ್ರಹ್ಮಣ್ಯಂ ನಮ್ಮ ಕಂಪನಿಯ ಮಾರ್ಕೆಟಿಂಗ್ ಮ್ಯಾನೇಜರ್. ಅತ್ಯಂತ ಶಿಸ್ತಿನಿಂದ ಅಚ್ಚುಕಟ್ಟಾಗಿ ಡ್ರೆಸ್ ಧರಿಸುವ ಸುಬ್ಬು ಕಂಪನಿಯ ಏಣಿಯಲ್ಲಿ ಅತ್ಯಂತ ಶೀಘ್ರವಾಗಿ ಮೇಲೇರಿದ ಕೆಲವೇ ಕೆಲವರಲ್ಲಿ ಒಬ್ಬ. ಅವನ ಸಕ್ಸೆಸ್ ಕಂಡು ಕರುಬುವವರು ಹಲವರು. ಆದರೆ ಅವನು ಈವರೆಗೆ ಯಾವುದೇ ಪ್ರಾಜೆಕ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿ ಕಂಪನೆಗೆ ಲಾಭ ಗಳಿಸಿದ್ದನ್ನು ಕಂಡವರಿಲ್ಲ. ದಿನಾ ಫ಼ೋನ್, ಮೊಬೈಲ್, -ಮೈಲ್ ನಲ್ಲಿ ಕಾಲ ಕಳೆಯುವ ಸುಬ್ಬು ಮೀಟಿಂಗುಗಳಲ್ಲಿ, ಸೀನಿಯರ್ಸ್ ಬಂದಾಗ ಮಾಡಲ್ಪಡುವ ಪ್ರೆಸೆಂಟೇಷನ್ನುಗಳಲ್ಲಿ ಎತ್ತಿದ ಕೈ. ಅವನನ್ನು ಮೀರಿಸುವವರು ಬೇರಾರೂ ಇಲ್ಲ. ಜೂನಿಯರ್ಸುಗಳು ಹಗಲೂ ರಾತ್ರಿ ಕಷ್ಟ ಪಟ್ಟು ಮಾಡುವ ಕೆಲಸಗಳನ್ನು ಮೀಟಿಂಗ್ ರೂಮಿನಲ್ಲಿ ಅತ್ಯದ್ಭುತವಾಗಿ ತಾನೇ ಮಾಡಿದೆನೆಂದು ಮಾಯೆ ಸೃಷ್ಟಿಸುವುದಲ್ಲದೆ ಕೆಟ್ಟು ಹೋದ ಪ್ರತಿಯೊಂದು ಕಾರ್ಯಗಳಿಗೂ ಇನ್ನೊಬ್ಬನನ್ನು ದೋಷಿಯನ್ನಾಗಿಸಿ ಲೀಲಾಜಾಲವಾಗಿ ಮಾತನಾಡಿ ತನ್ನ ಅಭಿವೃದ್ದಿಯ ಏಣಿಯಲ್ಲಿ ದಿನಾ ಮೇಲೇರುವ ಒಂದು ಸಂಘೀಯ ಕೀಟ.
" ಸೋ, ನಿಮ್ಮ ಆಲದ ಮರ...." ಎಂದು ತುಟಿ ಬಿರಿದ ಸುಬ್ಬು.
ಆಫ಼ೀಸಿನಲ್ಲಿ ಎಲ್ಲರಿಗೂ ಫ಼ೊಟೋ ಒಂದು ತಾತ್ಸಾರ. ಒಂದು ಅತಿದೊಡ್ಡ ಕಂಪನಿಯ ಗ್ಲಾಮರ್ ಇಮೇಜಿಗೆ ಇಂತಹ ಫ಼ೋಟೋ, ಕುಂಕುಮ ಸರಿ ಹೊಂದುವುದಿಲ್ಲ ಎಂಬ ಕುಹಕ. ಸಾಫ಼ಿಸ್ಟಿಕೇಟೆಡ್ ಜನ!
"..................." ಅಂತಹ ಬಾಣಗಳಿಗೆ ನಾನು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಮುಖ ಸೀರಿಯಸ್ಸಾಗಿ ಇರಿಸಿ ಸುಮ್ಮನೆ ಕುಳಿತು ಮುಂದಿನ ಮಾತಿಗೆ ಕಾದೆ.
" .ಕೆ, .ಕೆ.................... ಏನಿದು ಭಟ್, ನಿನ್ಮೇಲೆ ಎನ್ಕ್ವಯರಿ? ಮೇ ಆಸ್ಕ್?" ಎಂದು ನೇರವಾಗಿ ಮಾತಿಗೆ ಇಳಿದ.
" ನನ್ನ ಮೇಲೆ ಎನ್ಕ್ವಯರಿ ಅಲ್ಲ. ನಾನು ಹಿಡಿದ ಕರಪ್ಷನ್ ಕೇಸಿನ ಮೇಲೆ ಎನ್ಕ್ವಯರಿ.... ಲಕ್ಷ್ಮಣ್ ಮೇಲೆ. ಎಲ್ರಿಗೂ ಗೊತ್ತು. ನಿನಗೆ ಗೊತ್ತಿಲ್ವ? " ಸ್ಪಷ್ಟೀಕರಣ ಗಡಸಾಗಿ ಕೊಟ್ಟೆ.
" ಆರ್ ಯೂ ಶೂರ್, ಭಟ್ ?" ಅಂತ ಮೂತಿ ಒಂತರಾ ತಿರುಚಿ ಕಣ್ಣು ಅಗಲಿಸಿದ. ಸುಬ್ಬುವಿನ ಮುದ್ರೆಯ ಹಿಂದೆ ಯವುದೋ ಘನವಾದ ರಹಸ್ಯ ಅಡಗಿರುತ್ತೆ. " ಕ್ವೆಶ್ಚನ್ ಎಲ್ರಿಗೂ ಗೊತ್ತಿರೋದು ಅಲ್ಲ ಭಟ್. ಲಕ್ಷ್ಮಣ್ ಕೇಸಲ್ಲಿ ನೀನು ಮಾಡಿರೋ ಕೆಲಸ ಎಲ್ಲ ನನಗೆ ಗೊತ್ತು. ಪ್ರಶ್ನೆ ಈಗ ನಿನ್ನ ಮೇಲಿರೋ ಆಪಾದನೆಯದ್ದು. ನನಗೆ ತಿಳಿದ ಹಾಗೆ ನಿನ್ನ ವಿರುದ್ಧ ಈಗಾಗಲೇ ಸಾಕಷ್ಟು ಪುರಾವೆ ಮ್ಯಾನೇಜ್ಮೆಂಟ್ ಕೈಯಲ್ಲಿ ಇದೆ. ಇವತ್ತಿನ ಮೀಟಿಂಗ್ ಲಕ್ಷ್ಮಣ್ ಮೇಲಿನ ಆಪಾದನೆ ಮೇಲಲ್ಲ, ನಿನ್ನ ಮೇಲಿನ ಅಪಾದನೆ ಬಗ್ಗೆ....... ಯು ಮೆ ನಾಟ್ ಬಿ ಏಬಲ್ ಟು ಕೌಂಟರ್ ದೆಮ್." ಅಂತ ಸ್ವಲ್ಪ ಹೊತ್ತು ಸುಮ್ಮನಾದ.
ನನ್ನನ್ನು ಎತ್ತಿ ಪ್ರಪಾತದಿಂದ ಕೆಳಕ್ಕೆ ನೂಕಿದಂತಾಯಿತು. ಏನು ಹೇಳುತ್ತಿದ್ದಾನಿವನು? ಇದು ಇನ್ನೊಂದು ಕುಹಕವೇ?
" ಮೈ ಗ್ರೇಪ್ ವೈನ್ ಯು ನೋ" ಎಂದು ಭುಜ ಹಾರಿಸಿ ನನ್ನ ಪ್ರತಿಕ್ರಿಯೆಗಾಗಿ ಕಾದು ನಿಂತ. ಈಗ ತಾನೆ ಬೌನ್ಸರ್ ಎಸೆದ ಅಕ್ರಂನಂತೆ ನನ್ನ ಮೋರೆಯನ್ನು ಸೀಳಿ ನೋಡತೊಡಗಿದ.
ಈಗಾಗಲೇ ಅಕ್ಕಪಕ್ಕದವರೆಲ್ಲ ನಮ್ಮನ್ನೇ ಗಮನಿಸಿದಂತಿತ್ತು. ಗಾಜಿನ ಗೋಡೆಯ ಆಚೆಗಿನ ಮೂವರೂ ಅಧಿಕಾರಿಗಳೂ ತಮ್ಮ ಮಾತುಕತೆ ಕೈಬಿಟ್ಟು ನಮ್ಮನ್ನೇ ಆಸಕ್ತಿಯಿಂದ ನೋಡುವುದು ಕಂಡುಬರುತ್ತಿತ್ತು.
"ಓಹ್................." ಅಂದೆ.
ಪ್ಲಾಟ್ ನಿಚ್ಚಲವಾಗಿ ಕಾಣತೊಡಗಿತು.
"ಸೋ, ನೀನು ಅವರ ರಾಯಭಾರಿ ಅಲ್ಲವೇ? ಗೋ ಟು ಹೆಲ್........ ನಾನು ಕ್ಯಾರ್ ಮಾಡೋದಿಲ್ಲ. ಸುಳ್ಳು ಸಾಕ್ಷಿ ಕ್ರಿಯೇಟ್ ಮಾಡಿ ನನ್ನನ್ನೇ ಸಿಕ್ಕಿಸಿ ಹಾಕಲು ಪ್ರಯತ್ನ ಪಡ್ತೀರಾ? ನಾನು ಸತ್ಯ ಬಿಡೋದಿಲ್ಲ. ಲಕ್ಷ್ಮಣ್ ಕೇಸ್ ಪ್ರೂವ್ ಮಾಡೇ ಮಾಡ್ತೀನಿ......." ನನ್ನ ಅಬ್ಬರಕ್ಕೆ ಸುಬ್ಬು ತುಸು ಕೂಲಾದ. ದೂರದಿಂದ ಗಮನಿಸುತ್ತಿದ್ದವರಲ್ಲಿ ಕೆಲವರು ಒಂದೆರಡು ಹೆಜ್ಜೆ ಹತ್ತಿರಕ್ಕೆ ಬಂದು ಹೆಚ್ಚು ಆಸಕ್ತಿಯಿಂದ ನಮ್ಮನ್ನೇ ನಿರುಕಿಸತೊಡಗಿದರು.
" ರಿಲಾಕ್ಸ್..........ರಿಲಾಕ್ಸ್. ನಾನು ಬರೇ ನಿಂಗೆ ಸಹಾಯ ಮಡೋದಿಕ್ಕೆ ಟ್ರೈ ಮಾಡ್ತಾ ಇದ್ದೇನೆ. ನಾನು ನಿನ್ನ ಫ಼್ರೆಂಡ್. ನೀನು ಅಪಾಯಕ್ಕೆ ಸಿಲುಕಿ ಹಾಕಿಕೊಳ್ತಾ ಇದ್ದೀಯ. ಅದಕ್ಕೇ, ಲೆಟ್ಸ್ ಸೀ ವ್ಹಾಟ್ ವಿ ಕಾನ್ ವರ್ಕ್ ಔಟ್"
"ದೇರ್ ಈಸ್ ನಥಿಂಗ್ ಟು ವರ್ಕ್ ಔಟ್, ಸುಬ್ಬು. ವಾಂಟ್ ಆಕ್ಷನ್ ಎಗೈನ್ಸ್ಟ್ ಲಕ್ಷ್ಮಣ್. ಯಾಕೆ, ಕರಪ್ಷನ್ ಕಂಪನಿ ಪಾಲಿಸಿಗೆ ವಿರುದ್ಧ ಅಲ್ಲವೇ? ಅವನನ್ನು ಯಾಕೆ ನೀವೆಲ್ಲ ಪ್ರೊಟೆಕ್ಟ್ ಮಾಡ್ತೀರಾ?"
" ನೋಡು ಭಟ್, ಇಲ್ಲಿ, ಕಾರ್ಪರೇಟ್ ಸಂಸ್ಕೃತಿಯಲ್ಲಿ ಈಸಲು, ಈಸಿ ಜಯಿಸಲು ಪ್ರತಿಭೆ, ಶ್ರಮ, ಹಾನೆಸ್ಟಿ ಮಾತ್ರ ಇದ್ದರೆ ಸಾಲದು. ಇಲ್ಲಿ ಬೇಕಾಗಿರುವುದು ರಣತಂತ್ರ. ಯಾರು ಮೊದಲು ಚೂರಿ ಎಳೆದು ಕುತ್ತುತ್ತಾನೋ ಅವನು ಜಯಿಸುತ್ತಾನೆ; ಉಳಿದವನು ಮಣ್ಣು ಮುಕ್ಕುತ್ತಾನೆ. ನೀನು ಒಬ್ಬ ಎಸಳು. ನಿನಗೆ ಅರ್ಥ ಆಗೋಲ್ಲ. ಆದ್ರಿಂದ ಹೇಳ್ತಾ ಇದ್ದೀನಿ. ಈಗ ಮೀಟಿಂಗ್ ಇದೆ. ಅಲ್ಲಿ ಎನ್ಕ್ವೈರಿನಿನ್ನ ಮೇಲೆ’; ’ಲಕ್ಷ್ಮಣ್ಮೇಲೆ ಅಲ್ಲ. ನೀನು ಸ್ವಲ್ಪ ಕೋಪರೇಟ್ ಮಾಡಿದ್ರೆ ಎಲ್ಲ ಸರಿ ಹೋಗತ್ತೆ. ಮ್ಯಾನೇಜ್ಮೆಂಟ್ ಹತ್ರ ನಾನೂ ವಿಷಯ ಮಾತನಾಡಬಲ್ಲೆ" ಸ್ವಲ್ಪ ಹತ್ತಿರ ಸರಿದು ಅತ್ಯಂತ ಆತ್ಮೀಯ ಸ್ವರದಲ್ಲಿ ನುಡಿದನು ಸುಬ್ಬು.
ಊಸರವಳ್ಳಿ ಉಸುರಿದಂತಾಯಿತು. ಹೊಟ್ಟೆ ಹಿಂಡತೊಡಗಿತು. ಮೈ ಬೆವರಿತು. ನಿಧಾನವಾಗಿ ಟೇಬಲ್ ಮೇಲಿನ ಅಲದ ಮರವನ್ನು ದೃಷ್ಟಿಸಿದೆ. ನಮ್ಮ ಆಲದ ಮರ- ನಮ್ಮ ಅತಿ ನಂಬಿಕೆಯ ಆಲದ ಮರ-ಅದರ ಕೆಳಗೆ ಇರುವುದು ತಂಗಾಳಿ. ಮೇಲ್ಗಡೆ ಹಕ್ಕಿಗಳ ಮಧುರ ಚಿಲಿಪಿಲಿ, ಶಾಂತ ವಾತಾವರಣ..ನೆನಸುತ್ತಾ ಹೋದಂತೆ ಹೊಟ್ಟೆಯ ಸಂಕಟ ಕಮ್ಮಿಯಾಗತೊಡಗಿತು. ಮನಸ್ಸು ನಿಧಾನವಾಗಿ ಪ್ರಶಾಂತವಾಗತೊಡಗಿತು. ಇದೆಲ್ಲ ಬಿಟ್ಟು ದೂರ, ಬಲು ದೂರ ಆಲದ ಮರದ ಬಳಿಗೆ ಹೋಗಿ ಅದರ ಬೀಳಲುಗಳಲ್ಲಿ ಜೋತಾಡಿದೆ. ಮನಸ್ಸು ಹಗುರೆನಿಸಿತು. ಧೈರ್ಯ, ಹುಮ್ಮಸ್ಸು ಮೂಡಿತು.
ನಿಧಾನವಾಗಿ ಕಣ್ಣು ತೆರೆದು ನನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿದೆ:
"ಸುಬ್ಬು, ವಿಲ್ ಫ಼ೈಟ್ ಫ಼ಾರ್ ಟ್ರುತ್.......... ನಾನು ಸತ್ಯಕ್ಕಾಗಿ ಹೋರಾಡುತ್ತೇನೆ."
ಸುಬ್ಬು ಧೀರ್ಘಕಾಲ ನನ್ನನ್ನೇ ದಿಟ್ಟಿಸಿದ. ಕೊನೆಗೆ " .ಕೆ....., ನಿನ್ನ ನಿರ್ಧಾರ; ಆಲ್ ಬೆಸ್ಟ್" ಎಂದು ನಿಟ್ಟುಸಿರು ಬಿಟ್ಟು ಗಾಜಿನ ಆಚೆಗೆ ಅಸಹಾಯಕತೆಯ ಸಂಜ್ಞೆ ತೂರಿ ಅಲ್ಲಿಂದ ಹೊರಟು ಹೋದ.
ನಾನು ಮಾತನಾಡಲಿಲ್ಲ. ಸುಮ್ಮನಿದ್ದೆ. ಹಲ್ಲು ಕಚ್ಚಿ ಸುಮ್ಮನೇ ಮರದ ಫ಼ೋಟೋವನ್ನೇ ದಿಟ್ಟಿಸುತ್ತಾ ಜಗತ್ತಿನ ಪರಿವೆಯನ್ನೇ ಬಿಟ್ಟು ಧ್ಯಾನಿಸತೊಡಗಿದೆ.
ಎಷ್ಟೋ ಹೊತ್ತಿನ ಬಳಿಕ ಒಳಗಿಂದ ಕರೆ ಬಂತು.
ಫ಼ೋಟೋಕ್ಕೆ ನಮಸ್ಕರಿಸಿ ಕುರ್ಚಿಯಿಂದೆದ್ದು ಹೋಗಿ ಮೀಟಿಂಗ್ ರೂಮೊಳಗೆ ಅಡಿಯಿಟ್ಟೆ. ಎದುರಿಗೆ ಕಂಡು ಬಂದದ್ದು ವಿಚಿತ್ರ ದೃಶ್ಯ !!!!!
ಅಂದದ ಕೋಣೆಯಲ್ಲಿ ಉತ್ತಮ ದರ್ಜೆಯ ಆಸನಗಳಲ್ಲಿ ಕಂಡದ್ದು ಆಫ಼ೀಸರುಗಳಲ್ಲ.................. ಕಾಡಿನ ಘೋರ ಮೃಗಗಳು !!!!!!!!
ಮುಖ್ಯ ಸೀಟಿನಲ್ಲಿ, ಎಂ.ಡಿ ಜಾಗದಲ್ಲಿ ಒಂದು ಕೊಬ್ಬಿದ ಸಿಂಹ ಬಾಯ್ತೆರೆದು ನನ್ನನ್ನು ತಿನ್ನುವಂತೆ ಎದಿರು ನೋಡುತ್ತಿತ್ತು! ಅದರ ಕೋರೆಹಲ್ಲುಗಳನ್ನೂ ಕುಣಿದಾಡುವ ಮೂಗಿನ ಹೊಳ್ಳೆಗಳನ್ನೂ ನೋಡಿದಾಗಲೇ ಹೊಟ್ಟೆಯೊಳಗಿನ ಸಂಕಟ ಪುನರಾರಂಭವಾಯಿತು. ಪಕ್ಕದ ಸೀಟಿನಲ್ಲಿ ಒಂದು ನರಿ - ಪಕ್ಕಾ ನರಿ - ಮೂತಿ ಉದ್ದ ಮಾಡಿ ಸಿಗರೇಟು ಸೇದುತ್ತಾ ಬಾಯಿಯಲ್ಲಿ ಬೆಂಕಿ ಉಗುಳುತ್ತಾ ಡ್ರಾಗನ್ನಿನಂತೆ ನನ್ನತ್ತ ಉರಿಯುವ ಕಣ್ಗಳಿಂದ .......... ಅಬ್ಬಬ್ಬ ಯಾವತ್ತೂ ಒಂದು ನರಿಯನ್ನು ರೀತಿ ಕಂಡದ್ದಿಲ್ಲ. ಅದರ ಪಕ್ಕದ ಸೀಟಿನಲಿ ಒಂದು ಹೆಬ್ಬಾವು. ತನ್ನ ಹಸಿರು ಮೈಯಲ್ಲಿ ಕಪ್ಪು ಪಟ್ಟೆಗಳೊಂದಿಗೆ ನಿಧಾನವಾಗಿ ಬಾಯಿ ಬಿಡುತ್ತಾ ಇದ್ದಲ್ಲಿಂದ ಮೇಜಿನ ಮೇಲಕ್ಕೇರಿ ನನ್ನ ಕಡೆಗೆ ಬಾಯ್ಬಿಟ್ಟು ಬರತೊಡಗಿತು.
ವೃತ್ತಿಪರತೆಗೆ ಹತ್ತಾರು ಪ್ರಶಸ್ತಿಗಳನ್ನು ಪಡೆದು ಪತ್ರಿಕೆಗಳ ಉದ್ದಕ್ಕೂ ಪ್ರಶಂಸೆಗಳಿಸಿದ ಇಂತಹ ಕಂಪನಿಯ ಮೀಟಿಂಗ್ ರೂಮಿನಲ್ಲಿ ಕಾಡು ಜಂತುಗಳು ಎಲ್ಲಿಂದ ಸೇರಿದವು? ಒಮ್ಮೆಲೇ ಮೈ ಜುಂ ಎಂದು ಹೆದರಿ ಕೈ ಕಾಲು ನಡುಗತೊಡಗಿತು. ಅಚಾನಕ್ಕಾಗೇ ನಡೆದ ಘಟನೆಯಿಂದ ಹೆದರಿ ಜೀವದ ಆಸೆಯಿಂದ ಕೋಣೆಯಿಂದ ಹೊರಕ್ಕೆ ಹೋಗಬೇಕೆಂದು ಅಡಿ ಇಡುವಷ್ಟರಲ್ಲೇ ಜೋರಾಗಿ ಘರ್ಜಿಸುತ್ತಾ ಸಿಂಹ ಮೈ ಮೇಲೆ ಹಾರಿತು. ಅದರ ಪಂಜುಗಳಿಂದ ಬಿದ್ದ ಪೆಟ್ಟಿಗೆಫಳ್..........’ ಎಂದು ಮುಖದಿಂದ ರಕ್ತ ಹಾರಿ ಎದುರಿಗಿದ್ದ ಮೇಜಿನ ಮೇಲಿನ ಬಟ್ಟೆಯನ್ನು ಕೆಂಪಾಗಿಸಿತು. ನೋವಿನಿಂದ ಜೋರಾಗಿ ಕಿರುಚುತ್ತಿರುವಾಗ ಮೇಜಿನ ಮೇಲೇರಿ ಬಂದ ಹೆಬ್ಬಾವು ಇಡಿಯಾಗಿ ನನ್ನನ್ನು ನುಂಗ ತೊಡಗಿತು. ಗಾಜಿನ ಗೋಡೆಯ ಹೊರಗಿಂದ ಗಾಜಿಗಂಟಿಕೊಂಡಂತೆ ಪರಿಚಿತ ಮುಖಗಳಲ್ಲಿ ಕೆಲವರು ಕೇಕೆ ಹಾಕಿ ನಗುತ್ತಿದ್ದರೆ ಇನ್ನು ಕೆಲವರು ನಿರ್ಲಿಪ್ತಭಾವದಿಂದ ನನ್ನನ್ನು ದಿಟ್ಟಿಸುತ್ತಿದ್ದರು. ಯಾರೊಬ್ಬನೂ ಒಳ ಬಂದು ಮೃಗಗಳಿಂದ ನನ್ನನ್ನು ರಕ್ಷಿಸಲು ಇಚ್ಛಿಸಿದಂತೆ ಕಾಣಲಿಲ್ಲ.
ಇದು ಅತ್ಯಂತ ಅನಿರೀಕ್ಷಿತ !! ಹೀಗಾಗಲು ಸಾಧ್ಯವೇ ಇಲ್ಲ. ಯಾರು ಬಂದರೂ ಬಾರದಿದ್ದರೂ ಸರಿ, ಈಗ ನನ್ನ ಆಲದ ಮರ ಬರುತ್ತದೆ... ಬಂದು ನನ್ನನ್ನು ಮರಣಾಂತಿಕ ಪರಿಸ್ಥಿತಿಯಿಂದ ಪಾರು ಮಾಡುತ್ತದೆ. ಇದು ಖಂಡಿತ. ಇದು ನಂಬಿಕೆ. ಜೀವನವಿಡೀ ನಂಬಿದ ಆಲದ ಮರ ಈಗ ಕೈ ಬಿಡದು. "ಹೇ ಮರವೇ ..., ಕಾಪಾಡು" ಎಂದು ಜೋರಾಗಿ ಒಮ್ಮೆ ಚೀರಿದೆ.
ಕಣ್ಣು ಕತ್ತಲೆ ಆವರಿಸತೊಡಗಿತು. ಮೈಕೈಗಳೆಲ್ಲ ರಕ್ತದಿಂದ ತೋಯ್ದು ನಿಧಾನವಾಗಿ ಹೆಬ್ಬಾವಿನ ಬಾಯೊಳಗೆ ಜಾರತೊಡಗಿತು. ಮೃಗಗಳ ಆರ್ಭಟೆ, ಸಹೋದ್ಯೊಗಿಗಳ ಕೇಕೆ ಕಿವಿ ಚುಚ್ಚುತ್ತಿತ್ತು. ನೋವು ಏರುತ್ತಿತ್ತು; ಮತ್ತೆ ಮರದ ಪ್ರಾರ್ಥನೆಯಲ್ಲೇ ತೊಡಗಿರುವಾಗ ಒಮ್ಮೆಗೇ ಎಲ್ಲಾ ಕತ್ತಲೆ,
ಒಮ್ಮೆಗೇ ಎಲ್ಲಾ ಕತ್ತಲೆ; ಏನೂ ಕಾಣಿಸದು. ನೋವು ಮಾಯವಾಯಿತು, ದೇಹ ಹಗುರವಾಯಿತು. ನಿಧಾನವಾಗಿ ಮೇಲೇರತೊಡಗಿದೆ - ಆಕಾಶದತ್ತ. ಮಧುರವಾದ ಅನುಭವವಾಗತೊಡಗಿತು. ಆಲದ ಮರದ ಶಕ್ತಿ ನನ್ನನ್ನು ಎಳೆಯುತ್ತಿರಬಹುದೆ? ತನ್ನ ರಕ್ಷಣಾ ಪರಿಧಿಯೊಳಗೆ ಮುಚ್ಚಿ ಕೊಂಡೊಯ್ಯುತ್ತಿರಬಹುದೆ?............
ತೇಲುತ್ತಾ ತೇಲುತ್ತಾ ಊರಿಗೆ ಬಂದೆ. ಊರ ಮಧ್ಯೆ ಬಸ್ ಸ್ಟಾಂಡ್, ಬಳಿಯಲ್ಲಿ ನನ್ನ ಮನೆ, ಹಿಂದೆ ಹಿತ್ತಿಲು; ಅದರಲ್ಲಿ ಪಾಗಾರಕ್ಕೆ ಅಂಟಿದಂತ ಪುರಾತನ ಆಲದ ಮರ. ನಿಧಾನವಾಗಿ ಮರದ ಮುಂದೆ ಬಂದಿಳಿದೆ. ಎದುರಿಗೇ ಇದೆ ನಾವು ತಲೆ ತಲಾಂತರದಿಂದ ನಂಬಿ ಪೂಜಿಸುತ್ತಾ ಬಂದ ಆಲದ ಮರ.
ಆದರೆ ಮರ ಎಂದಿನಂತಿಲ್ಲ. ಮರ ಸೊರಗಿದೆ. ಕಳೆಗೆಟ್ಟಿದೆ. ನೋಡ ನೋಡುತ್ತಿದ್ದಂತೆಯೇ ಎಲೆಗಳು ಉದುರತೊಡಗಿ ಕೊಂಬೆಗಳು ಬೋಳಾಗತೊಡಗಿದವು. ಬೀಳಲುಗಳು ಮರಕಳಚಿ ನೆಲಕ್ಕೆ ಬೀಳತೊಡಗಿದವು. ಕಾಂಡವು ಲಟ ಲಟನೆ ಕಳಚತೊಡಗಿದವು. ಮರವನ್ನು ಸಾವಿರಾರು ಸಿಂಹಗಳು, ನರಿಗಳು, ಹೆಬ್ಬಾವುಗಳು ಮುರಿದು ಭಕ್ಷಿಸತೊಡಗಿದವು. ಸ್ವಲ್ಪ ಹೊತ್ತಿನಲ್ಲೇ ಬೇರುಗಳು ಹರಿದು ಹೋಗಿ ಭೂಮಿಯೇ ಬಿರಿದು ಬುಡ ಮೇಲಾಗಿ ಭಯಂಕರ ಶಬ್ದದೊಂದಿಗೆ ಮಗುಚಿ ಬಿತ್ತು - ಮುತ್ತಜ್ಜನ ಮುತ್ತಜ್ಜ ನೆಟ್ಟ ಆಲದ ಮರ !!!
ಜೋರಾಗಿ ಬಂದ ಸುಂಟರಗಾಳಿ ನನ್ನನ್ನು ಎತ್ತಿ ಮೊದಲು ಮರವಿದ್ದ ಭಾರೀ ಹೊಂಡದೊಳಕ್ಕೆ ನನ್ನನ್ನು ಎಳೆದುಕೊಂಡು ಹೋಯಿತು. ನಾನು ಜೋರಾಗಿ " ಯಾಕೆ.................., ಯಾಕೆ...................., ಯಾಕೆ " ಎಂದು ಚೀರುತ್ತಾ ಭೂಗರ್ಭದಲ್ಲಿ ಮಾಯವಾದೆ.
* * *
ಮೀಟಿಂಗ್ ಬಳಿಕ ಆಫ಼ೀಸಿನಲ್ಲೊಂದು ಸರ್ಕ್ಯುಲರ್ ಇಶ್ಯೂ ಆಯಿತು.....................
"ದಿನಾಂಕ .............. ರಂದು ನಡೆದ ತನಿಖಾ ಸಮಿತಿಯ ಮೀಟಿಂಗಿನಲ್ಲಿ ಮಿ. ಭಟ್ ಅವರ ವಿರುದ್ಧ ತನಿಖೆ ನಡೆಸಲಾಯಿತು. ತನಿಖೆಯ ಕೊನೆಯಲ್ಲಿ ಮಿ. ಭಟ್ ಅವರು ತಮ್ಮ ರಾಜೀನಾಮೆಯನ್ನು ತತ್ಕ್ಷಣವೇ ಸಲ್ಲಿಸಿದ್ದಾರೆ."
ಸರ್ಕ್ಯುಲರ್ ಓದಿ ಕೆಲವರು ಸಂತಸಪಟ್ಟರು..., ಕೆಲವರು ಭಯಗೊಂಡರು.... ಆದರೆ ಯಾರೂ ದುಃಖಿಸಲಿಲ್ಲ !!
ಭಟ್ ಅವರ ಟೇಬಲಿನಲ್ಲಿ ಅಂಟಿದ್ದ ಕುಂಕುಮದ ಬಣ್ಣವನ್ನು ಟಿಷ್ಯೂ ಪೇಪರಿನಿಂದ ಅಂದವಾಗಿ ಕ್ಲೀನ್ ಮಾಡಿ ಕ್ಯುಬಿಕಲ್ಲನ್ನು ಬೇರೊಬ್ಬರಿಗೆ ಕೊಡಲಾಯಿತು.
* * *
ಕತೆ ಕೇಳಿ ಕೆಲವರು "ಕೈಲಾಗದ ಭಟ್ಟ, ಮೂರ್ಖ!" ಎಂದು ನಕ್ಕು ಬಿಟ್ಟರು. ಇನ್ನು ಕೆಲವರು "ಕತೆ ಇಲ್ಲಿಗೆ ಮುಗಿಯುವುದಿಲ್ಲ; ಸತ್ಯಕ್ಕೆ ಎಂದೆಂದಿಗೂ ಜಯ ಇದ್ದೇ ಇದೆ" ಅಂತ ತಮ್ಮ ಗಟ್ಟಿ ನಂಬಿಕೆ ಸೂಚಿಸಿದರು.
ನೀವೇನು ಹೇಳುತ್ತೀರಿ ?


PUBLISHED IN UDAYAVANI SAPTHAHIKA 26.10.2008