Sunday, November 16, 2008

"ಕಿಂಗ್ ಕತೆ"

- ಜಯದೇವ ಪ್ರಸಾದ.





ಶ್ರೀ. ಹರಿ ಕುಮಾರ್’, ಭಾ. . ಸೇ

ಕೋಣೆಯ ಹೊರಗೆ ಬಾಗಿಲಿನ ಪಕ್ಕದಲ್ಲಿ ಬೋರ್ಡ್ ತೂಗಿಹಾಕಿತ್ತು. ಕೆಳಗೆ ಗೋಡೆಯುದ್ದಕ್ಕೂ ಸಾಲಾಗಿ ನಾಲ್ಕೈದು ಬೆಂಚುಗಳನ್ನಿರಿಸಲಾಗಿತ್ತು. ಸಾರ್ವಜನಿಕರು ಬೆಂಚುಗಳನ್ನು ತುಂಬಿ ಅದೂ ಅಲ್ಲದೆ ಪಕ್ಕದಲ್ಲಿ ವೆರಾಂಡದುದ್ದಕ್ಕೂ ನೆರೆದಿದ್ದರು. ಎಲ್ಲರಿಗೂ ಹೆಚ್ಚಲ್ಲ; ಒಮ್ಮೆ, ಒಂದೇ ನಿಮಿಷಕ್ಕಾಗಿ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಬೇಕಾಗಿತ್ತು. ಪ್ರತಿಯೊಬ್ಬರಿಗೂ ಅವರವರದೇ ಅಹವಾಲು. ಕೆಲವರಿಗೆ ಪಟ್ಟೆ ಸಮಸ್ಯೆ, ಕೆಲವರಿಗೆ ದಾರಿಯ ಸಮಸ್ಯೆ, ಕೆಲವರಿಗೆ ನೀರಿನದ್ದು, ಇನ್ನು ಕೆಲವರಿಗೆ ಕಂದಾಯ. ಅಂತೂ ಪುಟ್ಟ ಜಿಲ್ಲೆಯಲ್ಲಿ ಬರಬಹುದಾದ ಎಲ್ಲಾ ತೆರನಾದ ಸಮಸ್ಯೆಗಳೂ ಅಲ್ಲಿ ಇಲ್ಲಿ ಎಲ್ಲಾ ಅಲೆದು ಕೊನೆಗೆ ಕೆಲವು ಬಿಳೀ ಹಾಳೆಗಳಲ್ಲಿ ಅಕ್ಷರಗಳಾಗಿ ದೈನ್ಯದಿಂದ ಜೋಡಿಸಿದ ಕೈಗಳೆಡೆಯಲ್ಲಿ ಅರ್ಜಿಯಾಗಿ ಬಾಗಿಲಿನ ಹೊರಗೆ ಘಂಟೆಗಟ್ಟಲೆ ಹಾಳ ಬೀಳುತ್ತವೆ.

ಬಾಗಿಲು ಹೊಕ್ಕು ಒಳಹೋದೊಡನೆ ಎದುರಿಗೆ ದೊಡ್ಡ ಟೇಬಲ್. ಅದರ ಹಿಂದೆ ಒಂದು ಚೇರ್ - ತಿರುಗು ಕುರ್ಚಿ. ಅದರಲ್ಲಿ ಕುಳಿತಿದ್ದಾರೆ ಶ್ರೀ. ಹರಿ ಕುಮಾರ್, . ಭಾ. ಸೇ. ಕೊಠಡಿಯೊಳಗೆ ಬರುವ ಪ್ರತಿಯೊಬ್ಬರೂ ದೀನರಾಗಿ ಅತ್ಯಂತ ಗೌರವದಿಂದ ತಮ್ಮ ಅಹವಾಲನ್ನು ನೀಡುತ್ತಾರೆ. ಅತ್ಯಂತ ಭಕ್ತಿಯಿಂದ ತಮ್ಮ ಸಮಸ್ಯೆಯನ್ನು ನಿವೇದಿಸಿ ಜಿಲ್ಲಾಧಿಕಾರಿಯವರಿಂದ ಅರ್ಜಿಯ ಕೊನೆಯಲ್ಲಿ ಬರೆಯಲ್ಪಡಬೇಕಾದ ಒಂದೆರಡು ಶಬ್ದಗಳ ಸಕಾರಾತ್ಮಕ ಟಿಪ್ಪಣಿಗಾಗಿ ಆಸೆಯಿಂದ ಕಾಯುತ್ತಾರೆ.

ಹರಿಕುಮಾರ್ ಅವರಿಗೆ ಇದೆಲ್ಲಾ ಭಕ್ತಿ, ನಯ ವಿನಯ ಮಾನ ಮನ್ನಣೆಗಳು ಅಭ್ಯಾಸವಾಗಿರುತ್ತದೆ. ಬಹಳ ಬಡ ಕುಟುಂಬದಿಂದ ಬಂದ ಹರಿಕುಮಾರ್ ..ಎಸ್ ಮಾಡಿ ೧೨ ವರ್ಷಗಳೇ ಸಂದಿದ್ದವು. ಅವರಿಗೆ ಇಂತಹ ವಾತಾವರಣ ತಮ್ಮ ದೈನಂದಿನ ಕೆಲಸಗಳಲ್ಲಿ ಗಾಳಿಯಷ್ಟೇ ಸಹಜವಾಗಿ ಹೋಗಿದೆ. ಜನ ಮನ್ನಣೆ, ರಾಜ ಮರ್ಯಾದೆ ಇತ್ಯಾದಿ ಏನೂ ವಿಶೇಷವೆನಿಸುವುದಿಲ್ಲ.

ಒಬ್ಬನ ಅರ್ಜಿಯಲ್ಲಿ ಷರಾ ಗೀಚಿ ಇನ್ನೊಬ್ಬನೆಡೆಗೆ ಮುಖ ತಿರುವುತ್ತಿರುವಾಗ ಪಿ. ಬಂದು ಮೆಲುದನಿಯಲ್ಲಿ ಉಸುರಿದ " ಸರ್, ಘಂಟೆಗೆ ಮೈದಾನಿನಲ್ಲಿ ಸಭೆ. ಎಲ್ಲರೂ ಕಾದಿದ್ದಾರೆ. ಲೇಟ್ ಆಗ್ತಾ ಇದೆ.". ಜಿಲ್ಲಾಧಿಕಾರಿ ಕೂಡಲೇ ಹೊರಟರು. ನೆರೆದಿದ್ದ ಜನರಿಗೆಲ್ಲಾ ನಿರಾಸೆಯಾದರೂ ಭಕ್ತಿಯಿಂದ ದೂರಸರಿದು ಅವರಿಗೆ ದಾರಿ ಮಾಡಿ ಕೊಟ್ಟರು ಪಿ. "ಇನ್ನು ನಾಳೆ.....ಸಾಹೇಬ್ರಿಗೆ ಬೇರೆ ಮೀಟಿಂಗಿಗೆ ಹೋಗ್ಲಿಕ್ಕೆ ಉಂಟು" ಎಂದು ಎರಡು-ಮೂರು ಬಾರಿ ಅನ್ನೌನ್ಸ್ ಮಾಡುತ್ತಿರುವಾಗಲೇ ಜಿಲ್ಲಾಧಿಕಾರಿಯ ಕೆಂಪುದೀಪದ ಕಾರು ಡುರ್ ಗುಟ್ಟುತ್ತಾ ಕಚೇರಿಯ ಆವರಣದಿಂದ ಹೊರಗೆ ಹೋಯಿತು.

ಅಂದು ಜಿಲ್ಲಾಧಿಕಾರಿ ಹರಿಕುಮಾರ್ ದಿನದ ಎಲ್ಲಾ ಕೆಲಸಗಳನ್ನು ಮುಗಿಸಿ ಮನೆಗೆ ಬಂದು ಊಟ ಮಾಡಿ ಸೋಫ಼ಾದಲ್ಲಿ ಕುಳಿತಾಗ ರಾತ್ರಿ ಘಂಟೆ ಹತ್ತು.

ಅಷ್ಟರಲ್ಲಿ " ಅಪ್ಪ, ಕತೆ.......ಅಪ್ಪ, ಕತೆ" ಎಂಟು ವರ್ಷದ ಮಗು ಹರ್ಷ ಕತೆಗಾಗಿ ರಾತ್ರಿಯ ಹತ್ತು ಗಂಟೆಗೆ ಅಪ್ಪನನ್ನು ಪೀಡಿಸತೊಡಗಿದ.

ರಾತ್ರಿ ಎಷ್ಟು ಹೊತ್ತಾದರೂ ಕತೆಯಿಲ್ಲದೆ ಮಗ ಹರ್ಷನಿಗೆ ನಿದ್ದೆ ಬರುವುದಿಲ್ಲ. ಅಪ್ಪ ಹರೀಶ್ ಕುಮಾರರಿಗಾದರೋ, ಹಗಲಿಡೀ ಆಫ಼ೀಸಿನ ಕೆಲಸ; ಟೆನ್ಷನ್, ಕೆಲಸದ ಒತ್ತಡ, ಪ್ರಯಾಣ - ಎಲ್ಲದರಿಂದ ಬಿಡುಗಡೆಯಾಗಿ ರಾತ್ರಿ ಊಟವಾಗಿ ಸೋಫ಼ಾದಲ್ಲಿ ಕುಳಿತು ಬೆಳಗ್ಗೆ ಅರೆಬರೆ ಓದಿದ ಪೇಪರ್ ತೆರೆದು ಕಣ್ಣು ಹಾಯಿಸುತ್ತಲೇ ತೂಕಡಿಕೆ ಆರಂಭವಾಗುತ್ತದೆ.

" ಬೇಡ. ನನಗೆ ನಿದ್ದೆ ಬರ್ತದೆ. ಅಮ್ಮನತ್ರ ಹೇಳು"
" ಅಮ್ಮ ಕಿಚನ್ನಲ್ಲಿ........ ನೀನೇ ಹೇಳು ಕತೆ. ಪ್ಲೀಸ್........"
" ದೀದಿ ಹತ್ರ ಕೇಳು. ಅವಳು ಹೇಳ್ತಾಳೆ." ಅಂತ ಮನೆಯಲ್ಲಿ ಕೆಲಸಕ್ಕಿರುವ ಮೈಡ್ ಹತ್ರ ಸಾಗ ಹಾಕಲು ಪ್ರಯತ್ನಿಸಿದರು.
" ದೀದಿಗೆ ಕತೆ ಹೇಳ್ಲಿಕ್ಕೆ ಬರುದಿಲ್ಲ. ನೀನೇ ಹೇಳಪ್ಪ." ಮಗನ ಸ್ವರದಲ್ಲಿ ಒತ್ತಾಯವಿತ್ತು, ಆಸೆಯಿತ್ತು.

ಮಗನ ಮನಸ್ಸನ್ನು ಒಡೆಯಲು ಇಚ್ಚಿಸದ ಹರಿ ಓದುತ್ತಿದ್ದ ಪೇಪರ್ ಮಡಚಿಟ್ಟು ಕುಳಿತಲ್ಲಿಂದ ಎದ್ದು ಕೈಯೆಳೆದುಕೊಂಡು ಹೋಗುತ್ತಿರುವ ಮಗನ ಹಿಂದೆ " .ಕೆ.., .ಕೆ" ಎಂದು ಹೇಳುತ್ತಾ ಹೆಜ್ಜೆ ಹಾಕಿದರು. ಕೆಲಸದಾಕೆ ಹಾಸಿಗೆಯನ್ನು ರೆಡಿ ಮಾಡಿಟ್ಟಿದ್ದಳು. ಹರ್ಷನನ್ನು ಹಾಸಿಗೆಯಲ್ಲಿ ಇರಿಸಿ ಪಕ್ಕದಲ್ಲಿ ಅಡ್ಡ ಬಿದ್ದುಕೊಂಡರು.

" ಕತೆ ಬೇಡ. ಇವತ್ತು ಬೆನ್ನು ತಟ್ಟುತ್ತೇನೆ. ಮಲಗು. ಕತೆ ನಾಳೆ ಆಯ್ತಾ?" ಇನ್ನೊಮ್ಮೆ ಕತೆಯ ಪೀಡೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರು ಹರಿ ಕುಮಾರ್.

" ಇಲ್ಲ. ಕತೆ ಬೇಕು. ನೀನು ಜಸ್ಟ್ ನವ್ ಎಗ್ರಿ ಆಗಿದ್ದಿ. ಈಗ ನೋ ಚೀಟಿಂಗ್", ಮಗ ಬಿಡಲಿಲ್ಲ.

"ಒಂದು ಕತೆ ಹೇಳಿ ಮರಾಯ್ರೆ.. ಮಗನನ್ನು ನಿದ್ದೆ ಮಾಡ್ಸಿ" ಕಿಚನ್ನಿನಿಂದ ಇತರ ಸದ್ದುಗಳನ್ನು ಮೀರಿಸಿ ಸತೀವಾಣಿ ಮೊಳಗಿತು.

"ಸರಿ" ಅಂತ ಹೇಳಿ ಮಗನನ್ನು ಸರಿಯಾಗಿ ಅಪ್ಪಿ ಹಿಡಿದುಕೊಂಡು ಕತೆ ಹೇಳಲು ರೆಡಿಯಾದರು ಹರಿ ಕುಮಾರ್.

"ಯಾವ ಕತೆ ಬೇಕು?"

"ಕಿಂಗ್ ಕತೆ...." ಉತ್ಸಾಹದಿಂದ ಹೇಳಿದ ಹರ್ಷ.

" ........... ಅದು ಬೇಡ. ಬೇರೆ ಯಾವುದಾದರೂ...." ಕಿಂಗ್ ಕತೆಗೆ ಶತಮಾನೋತ್ಸವ ಆಗಿತ್ತು. ಕತೆ ಹೇಳಿ ಹೇಳಿ ಬೋರ್ ಹೊಡೆದು ಹೋಗಿತ್ತು ಹರಿ ಅವರಿಗೆ. ಕಿಂಗಿಗೂ ಹರ್ಷನಿಗೂ ಅದ್ಯಾವ ಜನ್ಮದ ಋಣಾನುಬಂಧವೋ ಏನೋ, ಹರ್ಷನಿಗೆ ಅದೇ ಕತೆ ಬೇಕು. ಕೇಳಿದಷ್ಟೂ ಇನ್ನೂ ಬೇಕು ಅಂತ ಹಟ ಅವನದ್ದು. ಕೊನೆಗೆ ಅದೇ ಕಿಂಗ್ ಕತೆಯನ್ನು ತಿದ್ದಿ ತೀಡಿ ತಿರುಚಿ ಮುರುಚಿ ಹಲವಾರು ವೇರಿಯೇಶನ್ನುಗಳನ್ನು ಮಾಡಿ ಮಾಡಿ ಒಬ್ಬ ಅದ್ಭುತ ಅಶು-ಕತೆಗಾರರಾಗುವ ಎಲ್ಲಾ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದರು ಹರಿ ಕುಮಾರ್.

ಇಂದು ಪುನಃ ಕಿಂಗ್ ಕತೆ................

" ಒಂದು ಊರಿನಲ್ಲಿ ಒಬ್ಬ ಕಿಂಗ್ ಇದ್ದ............" ನಿದ್ದೆಯಿಂದ ಭಾರವಾದ ಕಣ್ಣುಗಳನ್ನು ಬಲವಂತವಾಗಿ ತೆರೆದಿಟ್ಟು ಕತೆ ಆರಂಭಿಸಿದರು ಹರಿ ಕುಮಾರ್. " ಅವನು ಬಹಳ ಚೆನ್ನಾಗಿ ರಾಜ್ಯಭಾರ ಮಾಡ್ತಿದ್ದ..."

"ರಾಜ್ಯಭಾರ ಅಂದ್ರೆ..?"

"ರಾಜ್ಯಭಾರ ಅಂದ್ರೆರೂಲ್’. ಹಿ ವಾಸ್ ಗುಡ್ ರೂಲರ್. ನೀನೀಗ ಬೇಗ ನಿದ್ದೆ ಮಾಡ್ಬೇಕು. ಕೊಶ್ಚನ್ ಕೇಳ್ಕೊಂಡು ಇರೋದು ಅಲ್ಲ."

" ಹೂಂ. ಕಂಟಿನ್ಯೂ...." ಹರ್ಷ ಅಪ್ಪನಿಗೆ ಇನ್ನಷ್ಟು ಅಂಟಿಕೊಂಡು ಮೈಯೆಲ್ಲ ಕಿವಿಯಾದ.

" .ಕೆ. ಒಂದು ದಿನ ರಾಜನಿಗೆ ಅವನ ರಾಜ್ಯಭಾರದ ಬಗ್ಗೆ ಜನ ಏನು ತಿಳ್ಕೊಂಡಿದಾರೆ ಅಂತ ಕಂಡು ಹಿಡಿಯುವ ಮನಸ್ಸಾಯಿತು. ಅದಕ್ಕೆ ಅವನು ಒಂದು ಮಾರುವೇಷ ಅಂದ್ರೆ; ಕಿಂಗ್ ಡ್ರೆಸ್ ಅಲ್ಲ, ಬೇರೆ ಒಂದು ಆರ್ಡಿನರಿ ಮಾಮ ಥರ ಡ್ರೆಸ್ ಮಾಡಿಕೊಂಡು ಒಂದು ಕಂಬಳಿ ಸುತ್ತಿಕೊಂಡು ಊರೆಲ್ಲ ಸುತ್ತು ಹಾಕ್ಲಿಕ್ಕೆ ಹೋದ. ಅವನು ಕಿಂಗ್ ಅಂತ ಯಾರಿಗೂ ಗುರುತು ಹಿಡಿಯಲಿಕ್ಕೆ ಸಾಧ್ಯವೇ ಇರಲಿಲ್ಲ...."

ಕತೆಗೆ ಒಂದು ಹೊಸ ತಿರುವು ಕೊಟ್ಟರು ಹರಿ ಕುಮಾರ್. ಹೊಸ ಟ್ರಾಕ್ ಕೇಳಿ ಹರ್ಷನಿಗೆ ಖುಶಿಯಾಯಿತು. ಒಂದು ಮುಗುಳ್ನಗೆ ಬೀರಿ ಕತೆಯನ್ನು ಆಸಕ್ತಿಯಿಂದ ಆಸ್ವಾದಿಸತೊಡಗಿದನು....

" ಹಾಗೇ ಕಂಬಳಿಯಲ್ಲಿ ಮುಸುಕು ಹಾಕ್ಕೊಂಡು ಮನೆ ಮನೆ ಸುತ್ತಿ ಕಿಟಕಿಗಳ ಹಿಂದೆ ಅಡಗಿ ನಿಂತುಕೊಂಡು ಜನರ ಮಾತುಕತೆ ಕೇಳಿಸಿಕೊಂಡು ಇದ್ದ ರಾಜ. ಹಾಗೇ ತಿರುಗುತ್ತಾ ಇರುವಾಗ ಒಂದು ಕಡೆಯಲ್ಲಿ ಸಡನ್ನಾಗಿ ಒಬ್ಬ ಪೋಲಿಸ್ ಬಂದು ಅವನನ್ನು ಹಿಡಿದುಬಿಟ್ಟ. ರಾಜ ಕೂಡಲೇ " ನನ್ನನ್ನು ಬಿಡಾ; ನಾನು ರಾಜ" ಅಂತ ಜೋರು ಮಾಡಿದ. ಅದನ್ನೆಲ್ಲ ಕೇಳಿಸಿಕೊಳ್ಳದೆ ಪೋಲಿಸ್ ಅವನ ಮುಸುಕನ್ನು ಎಳೆದು ಬಿಸಾಡಿ ರಾಜನ ಕೆನ್ನೆಗೆ ಒಂದು ಹೊಡೆದುಕಳ್ಳ..., ನೀನು ಕಳ್ಳತನ ಮಾಡೋದೂ ಅಲ್ದೆ....., ರಾಜ ಅಂತೆ ರಾಜ !!’ ಅಂತ ಜೋರಗಿ ಇನ್ನೆರಡು ಪೆಟ್ಟು ಹಾಕಿದ", ಹರಿ ಕುಮಾರ್ ನಿದ್ದೆಗಣ್ಣಿನಲ್ಲಿ ಮನಬಂದಂತೆ ಕತೆಕಟ್ಟತೊಡಗಿದರು.

"ರಾಜನಿಗೆ ಪೆಟ್ಟಾ........." ಹರ್ಷನಿಗೆ ಜೋರಾಗಿ ನಗೆ ಬಂತು.

" ಹೌದು. ಅವನಿಗೆ ಏನು ಗೊತ್ತು ರಾಜ ಅಂತ. ಅವನು ನೆನೆಸಿದ್ದು ಕಳ್ಳ ಅಂತ. ರಾಜನ ಡ್ರೆಸ್ ಇರ್ಲಿಲ್ಲ ಅಲ್ವ?" ಅವರು ವಿವರಣೆಕೊಟ್ಟರು.

ಹರ್ಷ ಜೋರಾಗಿ ನಗತೊಡಗಿದ. ಅವನಿಗೆ ಇವತ್ತಿನ ಕಿಂಗ್ ಕತೆ ಬಹಳ ಇಷ್ಟವಾಯಿತು. ಜೊತೆಗೆಡಿಶ್...ಡಿಶ್ಅಂತ ರಾಜನಿಗೆ ಅವನೂ ಎರಡು ಕೊಟ್ಟ.

" ಆಮೇಲೆ, ಇನ್ನೂ ಒಂದೆರಡು ಜನ ಪೋಲಿಸರು ಸೇರಿ ರಾಜನ ಕೈಗೆ ಹಗ್ಗ ಕಟ್ಟಿ ಅವನನ್ನು ಸ್ಟೇಶನಿಗೆ ಎಳ್ಕೊಂಡು ಹೋದ್ರು. ಧಾಂಡಿಗರ ಎದುರು ರಾಜನಿಗೆ ಫ಼ೈಟ್ ಮಾಡ್ಲಿಕ್ಕೆ ಆಗ್ಲೇ ಇಲ್ಲ. ಅವನುನಾನು ರಾಜ, ನಾನು ರಾಜ, ಬಿಡಿ ನನ್ನಅಂತ ಜೋರಾಗಿ ಬೊಬ್ಬೆ ಹಾಕ್ತಾ ಇದ್ದ. ಪೋಲೀಸರು ಅವನಿಗೆ ಸರಿಯಾಗಿ ನಾಲ್ಕು ಕೊಟ್ಟು ಎಳ್ಕೊಂಡು ಹೋದ್ರು."

" ರಾಜ ಯಾಕೆ ಅವರನ್ನ ಕಿಲ್ ಮಾಡ್ಬಾರ್ದು?" ಮಗ ಪ್ರಶ್ನೆ ಕೇಳಿದ. "ರಾಜ ಅಂದ್ರೆ ಆಲ್ ಪವರ್ ಫ಼ುಲ್ ಅಲ್ವ?"

" ಇಲ್ಲ ಮಗ.. ಈಗ ಅವನಿಗೆ ರಾಜನ ಡ್ರೆಸ್ ಇಲ್ಲ, ಕಿರೀಟ ಇಲ್ಲ, ಸಿಂಹಾಸನ ಇಲ್ಲ, ಮುಖ್ಯವಾಗಿ ರಾಜನ ಸ್ಥಾನ ಇಲ್ಲ. ಈಗ ಅವನೊಬ್ಬ ಪೋಲಿಸರ ಕೈಗೆ ಸಿಕ್ಕಿ ಬಿದ್ದ ಸಾಮಾನ್ಯ ವ್ಯಕ್ತಿ. ಅರಮನೆಯಲ್ಲಿ ಆಗುತ್ತಿದ್ದರೆ ಇಷ್ಟು ಹೊತ್ತಿಗೆ................. "

ಹೇಳುತ್ತಾ ಹೋದಂತೆ ಹರಿಕುಮಾರ್ ಅವರಿಗೆ ಕತೆಯಲ್ಲಿ ಹೊಸ ಹೊಸ ಹೊಳಹುಗಳು ಕಾಣಿಸತೊಡಗಿದವು. ಅವರದ್ದೇ ಆಶು-ಕತೆಯಲ್ಲಿ ಅವರಿಗೇ ಹೊಸ ಅರ್ಥಗಳು ಕಾಣತೊಡಗಿದವು. ಬರುತ್ತಿದ್ದ ನಿದ್ದೆ ಹಾರಿ ಹೋಯಿತು. ಸಂಪೂರ್ಣ ಎಚ್ಚರವಾಯಿತು. ಮಲಗಿದಲ್ಲೇ ಏನನ್ನೋ ಡೀಪಾಗಿ ಯೋಚಿಸುತ್ತಾ ಸುಮ್ಮನೆ ಇದ್ದು ಬಿಟ್ಟರು. ಹರ್ಷ ಅವನಷ್ಟಕ್ಕೇ ನಿದ್ದೆಗೆ ಜಾರಿದ್ದು ಅವರಿಗೆ ತಿಳಿಯಲೇ ಇಲ್ಲ.

ಕಿಚನ್ ಕೆಲಸ ಮುಗಿಸಿ ಹೆಂಡ್ತಿ "ಬನ್ನಿ ಮಾರಾಯ್ರೇ....ಇನ್ನು ಹೋಗಿ ಮಲಗೋಣ. ಏನು ಭಾರೀ ಅಲೋಚನೆ ಇವತ್ತು?" ಎಂದು ಕಣ್ಣು ತಿಕ್ಕಿಕೊಂಡು ಹತ್ತಿರ ಬಂದರು.

ಹರಿ ಕುಮಾರ್ ಸುಮ್ಮನೆ ಹೆಂಡತಿಯನ್ನೇ ದೃಷ್ಟಿಸುತ್ತಾ ಇದ್ದುಬಿಟ್ಟರು.

"ನಾಳೆ ಸಾಹೇಬ್ರು ಆಫ಼ಿಸಿಗೆ ಹೋಗಬೇಡ್ವೇ? ದರ್ಬಾರಿನಲ್ಲಿ ಜನ ಎಲ್ಲಾ ಕಾಯ್ತಾ ಇರಲ್ವಾ ನಿಮ್ಮ ದರ್ಶನಕ್ಕೆ... ?"

" ಹೌದು.........ಕಾಯ್ತಿರ್ತಾರೆ.... ಸಾವಿರಾರು ಜನ.....", ಹರಿ ಕುಮಾರ್ ಜೋರಾಗಿ ಒಮ್ಮೆ ನಿಟ್ಟುಸಿರು ಬಿಟ್ಟು ಮಲಗಿದಲ್ಲಿಂದ ಎದ್ದು ತಮ್ಮ ಬೆಡ್ ರೂಮಿನೆಡೆಗೆ ನಿಧಾನವಾಗಿ ಹೆಜ್ಜೆ ಹಾಕಿದರು.


* * * *


[ನಡುಮನೆಯವರ "ಮಲ್ಲಿಗೆ ಮುಗುಳು ೨೦೦೮" ಸ್ಪರ್ಧೆಯಲ್ಲಿ ಆಯ್ಕೆಯಾದ ಸಣ್ಣ ಕತೆ. ಪ್ರಕಟಣೆ ಡಿಸೆಂಬರ್ ನಲ್ಲಿ ]

ಅಪೂರ್ವ ಸಾಹಿತಿ ಗಣಪತಿ ಮೊಳೆಯಾರ

- ಜಯದೇವ ಪ್ರಸಾದ.


ಇದೇ ತಾ| ೨೧.೦೩.೨೦೦೮ ರಂದು ಕಾಸರಗೋಡಿನ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಶ್ರೀ ಚಂ. ಪಾ ಹಾಗೂ ಶ್ರೀ ಸಿದ್ದಲಿಂಗಯ್ಯ ಹಾಗೂ ಇತರ ಹಲವು ಗಣ್ಯರ ಉಪಸ್ಥಿತಿಯಲ್ಲಿ "ದಿ| ಗಣಪತಿ ಮೊಳೆಯಾರ- ಸಂಸ್ಮರಣೆ" ಕೃತಿ ಬಿಡುಗಡೆಗೊಂಡಿತು ಹಾಗೂ "ಗಣಪತಿ ಮೊಳೆಯಾರ ಪ್ರತಿಷ್ಠಾನ", ಉಡುಪಿ ಯವರ ವತಿಯಿಂದ ಅಖಿಲ ಕರ್ನಾಟಕ ಕಾಲೇಜು ಮಟ್ಟದ ಕಥಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು. ಕೃತಿಯಲ್ಲಿ ಅವರ ಬದುಕು-ಬರಹ ಗಳ ಬಗ್ಗೆ ಲೇಖನಗಳಲ್ಲದೆ ಅವರು ಬಾಲ್ಯದಲ್ಲಿ ಬರೆದ ಪ್ರಕಟಿತ ಕತೆಗಳನ್ನು ಸಂಪಾದಿಸಲಾಗಿತ್ತು.

ದಿ| ಗಣಪತಿ ಮೊಳೆಯಾರರದು ಅದ್ಭುತ ಪ್ರತಿಭೆ. ಎಳವೆಯಿಂದಲೇ ಪದ್ಯ, ಕತೆ ಕಾದಂಬರಿಗಳನ್ನು ಬರೆಯುತ್ತಿದ್ದ ಅವರು ಸಂಸ್ಕೃತ-ಕನ್ನಡ ಭಾಷಾಂತರ ಕ್ಷೇತ್ರದಲ್ಲೂ ಅಸಾಧಾರಣ ಸಾಧನೆಗಳನ್ನು ಗೈದು ಕೇವಲ ೪೫ ವರ್ಷದ ವಯಸ್ಸಿನಲ್ಲಿ ಹೃದ್ರೋಗಕ್ಕೆ ತುತ್ತಾಗಿ ವಿಧಿವಶರಾದರು. ಪುತ್ತೂರಿನಲ್ಲಿ ಎಲ್..ಸಿ ಯಲ್ಲಿ ಉದ್ಯೋಗಿಯಾಗಿದ್ದ ಅವರು ಅನುವಾದಿಸಿದ ಕೆಲವು ನಾಟಕಗಳೂ ಹಾಗೂ ಸ್ವತಂತ್ರ ಕೃತಿಗಳೂ ಶಾಲಾ ಕಾಲೇಜುಗಳಿಗೆ ಪಠ್ಯವಾಗಿದ್ದುದೇ ಪದವಿ ಮೆಟ್ಟಲನ್ನು ಹತ್ತದ ಅವರ ಪಾಂಡಿತ್ಯಕ್ಕೆ ಸಾಕ್ಷಿ !

ಆಗಿನ ಮದ್ರಾಸ್ ಸರಕಾರದ ಆಡಳಿತಕ್ಕೆ ಒಳಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲೂಕಿನಲ್ಲಿ ಬೇಳ ಗ್ರಾಮವಿದೆ. ಇಂದು ಕಾಸರಗೋಡು ಕೇರಳಕ್ಕೆ ಸೇರಿದ್ದು ಅದೊಂದು ಜಿಲ್ಲೆಯಾಗಿದೆ. ಬೇಳ ಗ್ರಾಮದ ಮೊಳೆಯಾರು ಮನೆಯಲ್ಲಿ ಗಣಪತಿ ಮೊಳೆಯಾರರ ಜನನ- ೨೩.೦೧.೧೯೩೬ ರಂದು. ಮೊಳೆಯಾರ ವೆಂಕಪ್ಪ ಭಟ್ಟರು ತಂದೆ. ಗಂಗಮ್ಮ ತಾಯಿ. ಕೃಷಿಯೊಂದಿಗೆ ಹಳ್ಳಿಯ ಮದ್ದುಗಳನ್ನೂ ಮಾಡುತ್ತಿದ್ದ ವೆಂಕಪ್ಪ ಭಟ್ಟರು ಮೂಲತ: ಸಣ್ಣ ಕೃಷಿಕರು. ಬಡಕುಟುಂಬ.

ಗಣಪತಿ ಮೊಳೆಯಾರರ ತಂದೆಯವರಿಗೆ ಆರು ಮಂದಿ ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳು. ಗಣಪತಿ ಭಟ್ ಸಾಹಿತಿಯಾಗಿ ಗಣಪತಿ ಮೊಳೆಯಾರ ಎಂಬ ಹೆಸರಿನಿಂದ ಪ್ರಸಿದ್ಧಿಗೆ ಬಂದರು. ಎಲ್..ಸಿ ಡೆವಲಪ್ ಮೆಂಟ್ ಆಫ಼ೀಸರರಾಗಿದ್ದು ಎಮ್.ಜಿ.ಭಟ್ ಎಂದು ಪ್ರಸಿದ್ಧಿಗೊಂಡರು.

ಗಣಪತಿ ಮೊಳೆಯಾರ ಬಾಲ್ಯದಲ್ಲಿ ಚುರುಕಾಗಿದ್ದರು. ತಂದೆ ಎಳವೆಯಲ್ಲೇ ಸ್ವರ್ಗಸ್ಥರಾದುದರಿಂದ ಮನೆಯ ಹಿರಿಯಣ್ಣ ಮೊಳೆಯಾರ ಶಂಕರ ನಾರಾಯಣ ಭಟ್ಟರು ಮನೆಯ ಮೇಲ್ವಿಚಾರಣೆ ನೋಡಿಕೊಂಡರು. ಉದ್ದಾಮ ಸಾಹಿತಿ, ಪಂಡಿತ ಮೊಳೆಯಾರು ಶಂಕರ ನಾರಾಯಣ ಭಟ್ಟರ ಹಿರಿಯ ಮಗ ಪ್ರೊ. ವಿ. ಬಿ. ಮೊಳೆಯಾರ (ಸಾಹಿತಿ, ಪ್ರಕಾಶಕ, ಸಂಘಟಕ) ಮತ್ತು ಗಣಪತಿ ಮೊಳೆಯಾರ ಸಮಾನ ವಯಸ್ಕರು. ಪಕ್ಕದಮನೆಯಾದ ಇನ್ನೊಂದು ಮೊಳೆಯಾರಿನಲ್ಲಿ ಜನಿಸಿ ಪ್ರಸಿದ್ಧಿಗೊಂದ ಶ್ರೀ ರಾ.ಮೊ. ವಿಶ್ವಾಮಿತ್ರ (ಸಾಹಿತಿ-ಪ್ರಕಾಶಕ, ವಿವೇಕ ಸಾಹಿತ್ಯ ಮಾಲೆ) ಹಾಗೂ ಶ್ರೀ. ಸುಬ್ರಾಯನ್ (ಸಾಹಿತಿ, ಜ್ಯೋತಿಷಿ) ಇವರ ಹಿರಿಯ ಅಣ್ಣಂದಿರು. ಹೀಗೆ, "ಮೊಳೆಯಾರು" ಗಡಿನಾಡಿನ ಒಂದು ಪ್ರಸಿದ್ಧ ಸಾಹಿತ್ಯ ಕರ್ಮಿಗಳ ಮನೆತನ.

ಬೇಳ ಗ್ರಾಮಕ್ಕೂ ಪೆರಡಾಲ ಗ್ರಾಮಕ್ಕೂ ಗಡಿಯಾಗಿರುವ ನೀರ್ಚಾಲಿನಲ್ಲಿ ಖಂಡಿಗೆ ಮನೆತನದವರು ನಡೆಸಿಕೊಂಡು ಬರುತ್ತಿದ್ದ ಶಾಲೆಯೇಮಹಾಜನ ಸಂಸ್ಕೃತ ಕಾಲೇಜುಎಂಬ ಶಾಲೆ. ಶಾಲೆ ಇಂದು ಒಂದು ಹೈಸ್ಕೂಲಾಗಿ ಪರಿವರ್ತನೆಯಾಗಿದೆ. ಶಾಲೆಯಲ್ಲಿಯೇ ಇವರ ವಿದ್ಯಾಭ್ಯಾಸ. ಅಲ್ಲಿ ಎಂಟ್ರನ್ಸ್ ಪರೀಕ್ಷೆಯ ತನಕ ವ್ಯಾಸಂಗ ಮಾಡಿದುದರಿಂದ ಸಂಸ್ಕೃತ ಕನ್ನಡ ಭಾಷೆಗಳಲ್ಲಿ ಇವರಿಗೆ ಪ್ರಾಥಮಿಕ ವ್ಯಾಸಂಗ ದೊರೆಯಿತು. ಸಂಸ್ಕೃತ ಹಳೆಗನ್ನಡಗಳಲ್ಲಿ ಇವರು ಬಳಿಕ ಗಳಿಸಿದ ಪಾಂಡಿತ್ಯವೆಲ್ಲವೂ ಸ್ವಾಧ್ಯಯನ.

ಇವರ ಹಿರಿಯಣ್ಣ ಪಂಡಿತ ಶಂಕರ ನಾರಾಯಣ ಮೊಳೆಯಾರರು ವೇಳೆಗೆ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ಅಲ್ಲಿ ಮನೆ ಮಾಡಿಕೊಂಡು ಇರುವ ವೇಳೆಯಲ್ಲಿ ಮಂಗಳೂರಿಗೆ ಕರೆದುಕೊಂಡು ಬಂದು ಗಣಪತಿ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ (೧೯೫೩) ತನಕ ವ್ಯಾಸಂಗ ಮಾಡಿಸಿದರು. ಮೊಳೆಯಾರರು ಬಳಿಕ ಅಲ್ಲಿಯೇ "ಶಿಕ್ಷಣ ತರಬೇತಿ"ಯನ್ನೂ ಪಡೆದು (ಜೂನ್ ೧೯೫೩ - ಮಾರ್ಚ್ ೧೯೫೪) ಅಧ್ಯಾಪಕ ವೃತ್ತಿಯ ಅರ್ಹತೆ ಪಡೆದರು. ಬಳಿಕ, ಕಾಸರಗೋಡಿನ ನುಳ್ಳಿಪ್ಪಾಡಿಯ ಏಡೆಡ್ ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭವಾಯಿತು. ಅಲ್ಲಿ ಎರಡು ವರ್ಷಗಳ ಬಳಿಕ ಹಿರಿಯಡ್ಕದ ಸರಕಾರೀ ಶಾಲೆಯಲ್ಲಿ ಉದ್ಯೋಗಾವಕಾಶ ದೊರೆಯಿತು. ವರ್ಗಾವಣೆಯೊಂದಿಗೆ ಕನ್ಯಾನ ಶಾಲೆಯಲ್ಲಿ ಹಾಗೂ ಪುತ್ತೂರಿನ ಬೋರ್ಡ್ ಹೈಸ್ಕೂಲ್ ( ತಿಂಗಳು) ಗಳಲ್ಲೂ ಕಾರ್ಯ ನಿರ್ವಹಿಸಿದರು.

ಕನ್ಯಾನದಲ್ಲಿ ಅಧ್ಯಾಪಕನಾಗಿರುವಾಗಲೇ ಎಲ್..ಸಿ ಪ್ರತಿನಿಧಿಯಾಗಿಯೂ ಕಾರ್ಯವನ್ನಾರಂಭಿಸಿದ್ದರು ಹಾಗೂ ಸಾವಿತ್ರಿ (ಅಣಿಲೆ ಮನೆ, ಬದಿಯಡ್ಕ) ಎಂಬವರೊಂದಿಗೆ ಮೊಳೆಯಾರರ ವಿವಾಹವೂ (೨೯..೧೯೫೯) ಜರುಗಿತ್ತು. ಒಳ್ಳೆಯ ಅಧ್ಯಾಪಕನೆಂದು ಖ್ಯಾತನಾದ ಇವರಿಗೆ ಅದರಿಂದ ಬೇರೇನಾದರೂ ಸಾಧಿಸಬೇಕೆಂಬ ಆಶೆ ಅಂಕುರಿಸಿ ೧೯೬೧ ರಲ್ಲಿ ಎಲ್..ಸಿ ಪರೀಕ್ಷೆಗೆ ಹಾಜರಾಗಿ ಡೆವಲಪ್ ಮೆಂಟ್ ಆಫ಼ೀಸರನಾಗಿ ಆಯ್ಕೆಗೊಂಡರು. ಆಗ ಎಮ್.ಜಿ.ಭಟ್ ಡೆವಲಪ್ ಮೆಂಟ್ ಆಫ಼ೀಸರರಾಗಿ ಮಂಗಳೂರಿಗೆ ಮತ್ತೆ ಬಂದರು. ಸಂಸಾರಿಯಾಗಿ ಮಂಗಳೂರಿಗೆ ಬಂದವರು ಎಸ್.ಕೆ.ಡಿ.ಬಿ ಹಾಸ್ಟೆಲಿನ ಬಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸತೊಡಗಿದರು. ಇನ್ನೆರಡು ವರ್ಷಗಳ ಬಳಿಕ ೧೯೬೩ ರಲ್ಲಿ ಎಲ್. . ಸಿ ವತಿಯಿಂದ ವಿಟ್ಲಕ್ಕೆ ವರ್ಗವಾಗಿ ಅಲ್ಲಿ ಪೇಟೆಯಲ್ಲಿಯೇ ಮನೆ ಮಾಡಿ ಸುಮಾರು ೧೨ ವರ್ಷ ಅಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಬಳಿಕ ೧೯೭೫ ರಲ್ಲಿ ಪುತ್ತೂರಿಗೆ ವರ್ಗವಾಗಿ ಕೊನೆಯವರೆಗೆ ಅಲ್ಲಿಯೇ ನೆಲೆಸಿದರು.

ವಿದ್ಯಾರ್ಥಿಯಾಗಿರುವಾಗಲೇ ಹಲವು ಪತ್ರಿಕೆಗಳಿಗೆ ಪದ್ಯ, ಕತೆಗಳನ್ನು ಬರೆದು ಹೆಸರು ಪಡೆದಿದ್ದರು. ಆಗಿನ ಪ್ರಚಲಿತ ಕನ್ನಡ ದೈನಿಕಗಳಲ್ಲಿ ಕತೆ ಕವನಗಳು ಪ್ರಕಟವಾಗುತ್ತಿತ್ತು ಹಾಗೂ ಕಥಾಸ್ಪರ್ದೆಗಳಲ್ಲಿ ಬಹುಮಾನ ಗಳಿಸುತ್ತಿದ್ದರು. ಸಾಹಿತ್ತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು ಹಾಗೂ ಕಾಸರಗೋಡು ಕನ್ನಡನಾಡು ಚಳುವಳಿಯಲ್ಲಿ ಬಹಳವಾಗಿ ತಮ್ಮನ್ನು ತೊಡಗಿಸಿಗೊಂಡಿದ್ದರು.

ಗಣಪತಿ ಮೊಳೆಯಾರರ ಕೃತಿಗಳು:


ಕಾದಂಬರಿ:

. ಪುರಸ್ಕಾರ (೧೯೫೩)
. ಪೂರ್ವಪುಣ್ಯ (೧೯೫೩)

ಕಥಾಸಂಕಲನ:

. ಸ್ವಾಮಿಭಕ್ತಿ (೧೯೫೨)
. ಅಗ್ನಿಕುಂಡ (೧೯೫೮)

ಕವನ ಸಂಕಲನ:

. ಜೇನುತೊಟ್ಟಿ (೧೯೫೨)
. ವೈಜಯಂತಿ (೧೯೬೮)

ಜೀವನ ಚರಿತ್ರೆ:

. ಭಾರತದ ಬೆಳಕು (೧೯೭೨)
. ರಘುವಂಶದ ಕಥೆ (೧೯೭೪)



ಅನುವಾದಿತ ಕೃತಿಗಳು:

ಕಾವ್ಯಗಳು:

. ರೈವತಕ ಗಿರಿ ವರ್ಣನೆ (೧೯೬೯)
(ಶಿಶುಪಾಲ ವಧೆ, ನೇ ಸರ್ಗ, ಮಾಘ)
(ಉಳಿದ ಭಾಗಗಳು ಅಪೂರ್ಣ)
. ಮೇಘದೂತದ ಪ್ರತಿಕೃತಿ (ಕಾಳಿದಾಸ) (೧೯೭೨)


ನಾಟಕಗಳು:

. ಮಹಾವೀರ ಚರಿತಂ (ಭವಭೂತಿ) (೧೯೭೦)
. ವಿದ್ಧಶಾಲ ಭಂಜಿಕೆ (ರಾಜಶೇಖರ) (೧೯೭೦)
. ಸಂಸ್ಕೃತದ ಎರಡು ಪ್ರಹಸನಗಳು (೧೯೭೦)
(ಲಟಕಮೇಲಕಂ (ಶಶಿಧರ) ಹಾಗೂ
ಮತ್ತ ವಿಲಾಸ ಪ್ರಹಸನ (ಮಹೇಂದ್ರ ವಿಕ್ರಮ ವರ್ಮ)
. ಚಂಡಕೌಶಿಕ (ಆರ್ಯ ಕ್ಷೇಮೀಶ್ವರ) (೧೯೭೧)
. ಮುದ್ರಾರಾಕ್ಷಸ (ವಿಶಾಖದತ್ತ) (೧೯೭೧)
. ವೇಣೀ ಸಂಹಾರ (ಭಟ್ಟ ನಾರಾಯಣ) (೧೯೭೨)
. ಅಭಿಜ್ಞಾನ ಶಾಕುಂತಲ (ಕಾಳಿದಾಸ) (೧೯೭೩)

ಅಪ್ರಕಟಿತ ನಾಟಕಗಳು:

. ರತ್ನಾವಳಿ (ಶ್ರೀ ಹರ್ಷ) (೧೯೭೩)
. ಪ್ರಿಯದರ್ಶಿಕೆ (ಶ್ರೀ ಹರ್ಷ) (೧೯೭೩)
೧೦. ದೂತ ನಾಟಕಗಳು
-ದೂತಾಂಗದ (ಮಹಾಕವಿ ಸುಭಟ) (೧೯೭೩)
-ದೂತವಾಕ್ಯ (ಮಹಾಕವಿ ಭಾಸ) (೧೯೭೯)
-ದೂತ ಘಟೋತ್ಕಚ (ಮಹಾಕವಿ ಭಾಸ) (೧೯೭೯)
೧೧. ಮಾಲತೀ ಮಾಧವ (ಅಪೂರ್ಣ...೧೯೮೧)

ಭಾರತದ ಬೆಳಕುಪುಸ್ತಕವು ಕೇರಳದಲ್ಲಿ ಎಸ್.ಎಸ್.ಎಲ್.ಸಿ ಗೆ ಉಪಪಠ್ಯವಾಗಿತ್ತು. ’ಚಂಡಕೌಶಿಕವು ಕೇರಳದಲ್ಲಿ ಪಿ. ಡಿ. ಸಿ ತರಗತಿಗೆ ಪಠ್ಯವಾಗಿತ್ತು. ಅವರು ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗಲೇ ಬರೆದಸಿಡಿಲು ಮರಿಎಂಬ ಒಂದು ಸಣ್ಣ ಕತೆ ಬಳಿಕ ಕೇರಳದಲ್ಲಿ ಹೈಸ್ಕೂಲಿಗೆ ಪಠ್ಯವಾಯಿತು. ’ಮುದ್ರಾರಾಕ್ಷಸವು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಿಗ್ರಿ ತರಗತಿಗೆ ಪಠ್ಯವಾಗಿತ್ತು. ’ಸಿಡಿಲು ಮರಿಯು ಅತ್ಯಂತ ಜನಪ್ರಿಯವಾಗಿ ಇತ್ತೀಚೆಗೆ ಪ್ರಕಟಣೆಗೊಂಡಕಾಸರಗೋಡಿನ ಕತೆಗಳು’ (ಸಂ: ಶ್ರೀ. ವಸಂತ ಕುಮಾರ, ಪೆರ್ಲ) ಗೃಂಥದಲ್ಲೂ ಶತಮಾನದ ಕತೆಗಳಲ್ಲೊಂದಾಗಿ ಬೆಳಕುಕಂಡಿದೆ.

ಇವರು ಅನುವಾದಗಳಿಗೆ ಅತ್ಯಂತ ಕ್ಲಿಷ್ಟವಾದ ಸಾಹಿತ್ಯಗಳನ್ನೇ ಆರಿಸಿ ಮೂಲಕ್ಕೆ ಚ್ಯುತಿ ಬಾರದಂತೆ ಛಂದೋಬದ್ಧವಾಗಿ ಅನುವಾದಿಸಿರುವುದರಿಂದ ಅತ್ಯಂತ "ಸಾಹಸಿ ಹಾಗೂ ಪರಿಣಾಮಕಾರಿ" ಭಾಷಾಂತರಕಾರರೆಂದು ಹೆಸರುಗಳಿಸಿದ್ದರು. ತಮ್ಮ ಸ್ವಂತ ಖರ್ಚಿನಿಂದ "ಅಭಿಜ್ಞಾನ ಸಾಹಿತ್ಯ ಮಾಲೆ" ಯನ್ನು ಆರಂಭಿಸಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ಮೊಳೆಯಾರರಿಗೆ ಸಂಸ್ಕೃತದಲ್ಲಿದ್ದ ಪ್ರೇಮ ಅಪಾರ.

ಪುತ್ತೂರಿನ ಸ್ವಗೃಹದಲ್ಲಿ ಹೃದ್ರೋಗಕ್ಕೆ ತುತ್ತಾಗಿ ೧೯..೧೯೮೧ ರಂದು ತನ್ನ ಕೇವಲ ೪೫ ನೇ ವಯಸ್ಸಿನಲ್ಲಿ ವಿಧಿವಶರಾದಾಗ ಕನ್ನಡ ಸಾಹಿತ್ಯ ಲೋಕ ತನ್ನ ಒಬ್ಬ ಅಪೂರ್ವ ಪ್ರತಿಭೆಯನ್ನು ಕಳಕೊಂಡು ಇಂದಿಗೆ ೨೭ ವರ್ಷಗಳೇ ಸಂದವು.

ಶ್ರೀ. ಮೊಳೆಯಾರರು ಪತ್ನಿ ಸಾವಿತ್ರಿಯವರನ್ನೂ, ಇಬ್ಬರು ಮಗಳಂದಿರನ್ನೂ ಒಬ್ಬ ಮಗನನ್ನೂ ಅಗಲಿದ್ದಾರೆ. ಇವರು ದಿವಂಗತರ ನೆನೆಪಿನಲ್ಲಿ ಸಧ್ಯದಲ್ಲಿ ಒಂದು ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ. ಮೊಳೆಯಾರರ ಕೃತಿಗಳು ಸಂಶೋಧನೆ, ಅಧ್ಯಯನಕ್ಕೊಳಗಾಗಬೇಕು ಎಂಬುದು ಇವರ ಆಸೆ. ಸೂಕ್ತ ಪ್ರಕಾಶಕರೊಂದಿಗೆ ಅಪ್ರಕಟಿತ ನಾಟಕಾನುವಾದಗಳನ್ನು ಪ್ರಕಟಿಸುವ ಯೋಜನೆ ಇದೆ. ಹಾಗೂ ವಿದ್ಯಾರ್ಥಿ ಕಥಾಸ್ಪರ್ಧೆಯು ಪ್ರತಿವರ್ಷ ಯುವ ಪ್ರತಿಭೆಗಳನ್ನು ಪ್ರೊತ್ಸಾಹಿಸಲಿರುವುದು.


[ ಪ್ರಕಟನೆ: ಗಾಂಧಿ ಬಜಾರ್ ಪತ್ರಿಕೆ, ಎಪ್ರಿಲ್ ೨೦೦೮ ]