Sunday, November 16, 2008

"ಕಿಂಗ್ ಕತೆ"

- ಜಯದೇವ ಪ್ರಸಾದ.





ಶ್ರೀ. ಹರಿ ಕುಮಾರ್’, ಭಾ. . ಸೇ

ಕೋಣೆಯ ಹೊರಗೆ ಬಾಗಿಲಿನ ಪಕ್ಕದಲ್ಲಿ ಬೋರ್ಡ್ ತೂಗಿಹಾಕಿತ್ತು. ಕೆಳಗೆ ಗೋಡೆಯುದ್ದಕ್ಕೂ ಸಾಲಾಗಿ ನಾಲ್ಕೈದು ಬೆಂಚುಗಳನ್ನಿರಿಸಲಾಗಿತ್ತು. ಸಾರ್ವಜನಿಕರು ಬೆಂಚುಗಳನ್ನು ತುಂಬಿ ಅದೂ ಅಲ್ಲದೆ ಪಕ್ಕದಲ್ಲಿ ವೆರಾಂಡದುದ್ದಕ್ಕೂ ನೆರೆದಿದ್ದರು. ಎಲ್ಲರಿಗೂ ಹೆಚ್ಚಲ್ಲ; ಒಮ್ಮೆ, ಒಂದೇ ನಿಮಿಷಕ್ಕಾಗಿ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಬೇಕಾಗಿತ್ತು. ಪ್ರತಿಯೊಬ್ಬರಿಗೂ ಅವರವರದೇ ಅಹವಾಲು. ಕೆಲವರಿಗೆ ಪಟ್ಟೆ ಸಮಸ್ಯೆ, ಕೆಲವರಿಗೆ ದಾರಿಯ ಸಮಸ್ಯೆ, ಕೆಲವರಿಗೆ ನೀರಿನದ್ದು, ಇನ್ನು ಕೆಲವರಿಗೆ ಕಂದಾಯ. ಅಂತೂ ಪುಟ್ಟ ಜಿಲ್ಲೆಯಲ್ಲಿ ಬರಬಹುದಾದ ಎಲ್ಲಾ ತೆರನಾದ ಸಮಸ್ಯೆಗಳೂ ಅಲ್ಲಿ ಇಲ್ಲಿ ಎಲ್ಲಾ ಅಲೆದು ಕೊನೆಗೆ ಕೆಲವು ಬಿಳೀ ಹಾಳೆಗಳಲ್ಲಿ ಅಕ್ಷರಗಳಾಗಿ ದೈನ್ಯದಿಂದ ಜೋಡಿಸಿದ ಕೈಗಳೆಡೆಯಲ್ಲಿ ಅರ್ಜಿಯಾಗಿ ಬಾಗಿಲಿನ ಹೊರಗೆ ಘಂಟೆಗಟ್ಟಲೆ ಹಾಳ ಬೀಳುತ್ತವೆ.

ಬಾಗಿಲು ಹೊಕ್ಕು ಒಳಹೋದೊಡನೆ ಎದುರಿಗೆ ದೊಡ್ಡ ಟೇಬಲ್. ಅದರ ಹಿಂದೆ ಒಂದು ಚೇರ್ - ತಿರುಗು ಕುರ್ಚಿ. ಅದರಲ್ಲಿ ಕುಳಿತಿದ್ದಾರೆ ಶ್ರೀ. ಹರಿ ಕುಮಾರ್, . ಭಾ. ಸೇ. ಕೊಠಡಿಯೊಳಗೆ ಬರುವ ಪ್ರತಿಯೊಬ್ಬರೂ ದೀನರಾಗಿ ಅತ್ಯಂತ ಗೌರವದಿಂದ ತಮ್ಮ ಅಹವಾಲನ್ನು ನೀಡುತ್ತಾರೆ. ಅತ್ಯಂತ ಭಕ್ತಿಯಿಂದ ತಮ್ಮ ಸಮಸ್ಯೆಯನ್ನು ನಿವೇದಿಸಿ ಜಿಲ್ಲಾಧಿಕಾರಿಯವರಿಂದ ಅರ್ಜಿಯ ಕೊನೆಯಲ್ಲಿ ಬರೆಯಲ್ಪಡಬೇಕಾದ ಒಂದೆರಡು ಶಬ್ದಗಳ ಸಕಾರಾತ್ಮಕ ಟಿಪ್ಪಣಿಗಾಗಿ ಆಸೆಯಿಂದ ಕಾಯುತ್ತಾರೆ.

ಹರಿಕುಮಾರ್ ಅವರಿಗೆ ಇದೆಲ್ಲಾ ಭಕ್ತಿ, ನಯ ವಿನಯ ಮಾನ ಮನ್ನಣೆಗಳು ಅಭ್ಯಾಸವಾಗಿರುತ್ತದೆ. ಬಹಳ ಬಡ ಕುಟುಂಬದಿಂದ ಬಂದ ಹರಿಕುಮಾರ್ ..ಎಸ್ ಮಾಡಿ ೧೨ ವರ್ಷಗಳೇ ಸಂದಿದ್ದವು. ಅವರಿಗೆ ಇಂತಹ ವಾತಾವರಣ ತಮ್ಮ ದೈನಂದಿನ ಕೆಲಸಗಳಲ್ಲಿ ಗಾಳಿಯಷ್ಟೇ ಸಹಜವಾಗಿ ಹೋಗಿದೆ. ಜನ ಮನ್ನಣೆ, ರಾಜ ಮರ್ಯಾದೆ ಇತ್ಯಾದಿ ಏನೂ ವಿಶೇಷವೆನಿಸುವುದಿಲ್ಲ.

ಒಬ್ಬನ ಅರ್ಜಿಯಲ್ಲಿ ಷರಾ ಗೀಚಿ ಇನ್ನೊಬ್ಬನೆಡೆಗೆ ಮುಖ ತಿರುವುತ್ತಿರುವಾಗ ಪಿ. ಬಂದು ಮೆಲುದನಿಯಲ್ಲಿ ಉಸುರಿದ " ಸರ್, ಘಂಟೆಗೆ ಮೈದಾನಿನಲ್ಲಿ ಸಭೆ. ಎಲ್ಲರೂ ಕಾದಿದ್ದಾರೆ. ಲೇಟ್ ಆಗ್ತಾ ಇದೆ.". ಜಿಲ್ಲಾಧಿಕಾರಿ ಕೂಡಲೇ ಹೊರಟರು. ನೆರೆದಿದ್ದ ಜನರಿಗೆಲ್ಲಾ ನಿರಾಸೆಯಾದರೂ ಭಕ್ತಿಯಿಂದ ದೂರಸರಿದು ಅವರಿಗೆ ದಾರಿ ಮಾಡಿ ಕೊಟ್ಟರು ಪಿ. "ಇನ್ನು ನಾಳೆ.....ಸಾಹೇಬ್ರಿಗೆ ಬೇರೆ ಮೀಟಿಂಗಿಗೆ ಹೋಗ್ಲಿಕ್ಕೆ ಉಂಟು" ಎಂದು ಎರಡು-ಮೂರು ಬಾರಿ ಅನ್ನೌನ್ಸ್ ಮಾಡುತ್ತಿರುವಾಗಲೇ ಜಿಲ್ಲಾಧಿಕಾರಿಯ ಕೆಂಪುದೀಪದ ಕಾರು ಡುರ್ ಗುಟ್ಟುತ್ತಾ ಕಚೇರಿಯ ಆವರಣದಿಂದ ಹೊರಗೆ ಹೋಯಿತು.

ಅಂದು ಜಿಲ್ಲಾಧಿಕಾರಿ ಹರಿಕುಮಾರ್ ದಿನದ ಎಲ್ಲಾ ಕೆಲಸಗಳನ್ನು ಮುಗಿಸಿ ಮನೆಗೆ ಬಂದು ಊಟ ಮಾಡಿ ಸೋಫ಼ಾದಲ್ಲಿ ಕುಳಿತಾಗ ರಾತ್ರಿ ಘಂಟೆ ಹತ್ತು.

ಅಷ್ಟರಲ್ಲಿ " ಅಪ್ಪ, ಕತೆ.......ಅಪ್ಪ, ಕತೆ" ಎಂಟು ವರ್ಷದ ಮಗು ಹರ್ಷ ಕತೆಗಾಗಿ ರಾತ್ರಿಯ ಹತ್ತು ಗಂಟೆಗೆ ಅಪ್ಪನನ್ನು ಪೀಡಿಸತೊಡಗಿದ.

ರಾತ್ರಿ ಎಷ್ಟು ಹೊತ್ತಾದರೂ ಕತೆಯಿಲ್ಲದೆ ಮಗ ಹರ್ಷನಿಗೆ ನಿದ್ದೆ ಬರುವುದಿಲ್ಲ. ಅಪ್ಪ ಹರೀಶ್ ಕುಮಾರರಿಗಾದರೋ, ಹಗಲಿಡೀ ಆಫ಼ೀಸಿನ ಕೆಲಸ; ಟೆನ್ಷನ್, ಕೆಲಸದ ಒತ್ತಡ, ಪ್ರಯಾಣ - ಎಲ್ಲದರಿಂದ ಬಿಡುಗಡೆಯಾಗಿ ರಾತ್ರಿ ಊಟವಾಗಿ ಸೋಫ಼ಾದಲ್ಲಿ ಕುಳಿತು ಬೆಳಗ್ಗೆ ಅರೆಬರೆ ಓದಿದ ಪೇಪರ್ ತೆರೆದು ಕಣ್ಣು ಹಾಯಿಸುತ್ತಲೇ ತೂಕಡಿಕೆ ಆರಂಭವಾಗುತ್ತದೆ.

" ಬೇಡ. ನನಗೆ ನಿದ್ದೆ ಬರ್ತದೆ. ಅಮ್ಮನತ್ರ ಹೇಳು"
" ಅಮ್ಮ ಕಿಚನ್ನಲ್ಲಿ........ ನೀನೇ ಹೇಳು ಕತೆ. ಪ್ಲೀಸ್........"
" ದೀದಿ ಹತ್ರ ಕೇಳು. ಅವಳು ಹೇಳ್ತಾಳೆ." ಅಂತ ಮನೆಯಲ್ಲಿ ಕೆಲಸಕ್ಕಿರುವ ಮೈಡ್ ಹತ್ರ ಸಾಗ ಹಾಕಲು ಪ್ರಯತ್ನಿಸಿದರು.
" ದೀದಿಗೆ ಕತೆ ಹೇಳ್ಲಿಕ್ಕೆ ಬರುದಿಲ್ಲ. ನೀನೇ ಹೇಳಪ್ಪ." ಮಗನ ಸ್ವರದಲ್ಲಿ ಒತ್ತಾಯವಿತ್ತು, ಆಸೆಯಿತ್ತು.

ಮಗನ ಮನಸ್ಸನ್ನು ಒಡೆಯಲು ಇಚ್ಚಿಸದ ಹರಿ ಓದುತ್ತಿದ್ದ ಪೇಪರ್ ಮಡಚಿಟ್ಟು ಕುಳಿತಲ್ಲಿಂದ ಎದ್ದು ಕೈಯೆಳೆದುಕೊಂಡು ಹೋಗುತ್ತಿರುವ ಮಗನ ಹಿಂದೆ " .ಕೆ.., .ಕೆ" ಎಂದು ಹೇಳುತ್ತಾ ಹೆಜ್ಜೆ ಹಾಕಿದರು. ಕೆಲಸದಾಕೆ ಹಾಸಿಗೆಯನ್ನು ರೆಡಿ ಮಾಡಿಟ್ಟಿದ್ದಳು. ಹರ್ಷನನ್ನು ಹಾಸಿಗೆಯಲ್ಲಿ ಇರಿಸಿ ಪಕ್ಕದಲ್ಲಿ ಅಡ್ಡ ಬಿದ್ದುಕೊಂಡರು.

" ಕತೆ ಬೇಡ. ಇವತ್ತು ಬೆನ್ನು ತಟ್ಟುತ್ತೇನೆ. ಮಲಗು. ಕತೆ ನಾಳೆ ಆಯ್ತಾ?" ಇನ್ನೊಮ್ಮೆ ಕತೆಯ ಪೀಡೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರು ಹರಿ ಕುಮಾರ್.

" ಇಲ್ಲ. ಕತೆ ಬೇಕು. ನೀನು ಜಸ್ಟ್ ನವ್ ಎಗ್ರಿ ಆಗಿದ್ದಿ. ಈಗ ನೋ ಚೀಟಿಂಗ್", ಮಗ ಬಿಡಲಿಲ್ಲ.

"ಒಂದು ಕತೆ ಹೇಳಿ ಮರಾಯ್ರೆ.. ಮಗನನ್ನು ನಿದ್ದೆ ಮಾಡ್ಸಿ" ಕಿಚನ್ನಿನಿಂದ ಇತರ ಸದ್ದುಗಳನ್ನು ಮೀರಿಸಿ ಸತೀವಾಣಿ ಮೊಳಗಿತು.

"ಸರಿ" ಅಂತ ಹೇಳಿ ಮಗನನ್ನು ಸರಿಯಾಗಿ ಅಪ್ಪಿ ಹಿಡಿದುಕೊಂಡು ಕತೆ ಹೇಳಲು ರೆಡಿಯಾದರು ಹರಿ ಕುಮಾರ್.

"ಯಾವ ಕತೆ ಬೇಕು?"

"ಕಿಂಗ್ ಕತೆ...." ಉತ್ಸಾಹದಿಂದ ಹೇಳಿದ ಹರ್ಷ.

" ........... ಅದು ಬೇಡ. ಬೇರೆ ಯಾವುದಾದರೂ...." ಕಿಂಗ್ ಕತೆಗೆ ಶತಮಾನೋತ್ಸವ ಆಗಿತ್ತು. ಕತೆ ಹೇಳಿ ಹೇಳಿ ಬೋರ್ ಹೊಡೆದು ಹೋಗಿತ್ತು ಹರಿ ಅವರಿಗೆ. ಕಿಂಗಿಗೂ ಹರ್ಷನಿಗೂ ಅದ್ಯಾವ ಜನ್ಮದ ಋಣಾನುಬಂಧವೋ ಏನೋ, ಹರ್ಷನಿಗೆ ಅದೇ ಕತೆ ಬೇಕು. ಕೇಳಿದಷ್ಟೂ ಇನ್ನೂ ಬೇಕು ಅಂತ ಹಟ ಅವನದ್ದು. ಕೊನೆಗೆ ಅದೇ ಕಿಂಗ್ ಕತೆಯನ್ನು ತಿದ್ದಿ ತೀಡಿ ತಿರುಚಿ ಮುರುಚಿ ಹಲವಾರು ವೇರಿಯೇಶನ್ನುಗಳನ್ನು ಮಾಡಿ ಮಾಡಿ ಒಬ್ಬ ಅದ್ಭುತ ಅಶು-ಕತೆಗಾರರಾಗುವ ಎಲ್ಲಾ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದರು ಹರಿ ಕುಮಾರ್.

ಇಂದು ಪುನಃ ಕಿಂಗ್ ಕತೆ................

" ಒಂದು ಊರಿನಲ್ಲಿ ಒಬ್ಬ ಕಿಂಗ್ ಇದ್ದ............" ನಿದ್ದೆಯಿಂದ ಭಾರವಾದ ಕಣ್ಣುಗಳನ್ನು ಬಲವಂತವಾಗಿ ತೆರೆದಿಟ್ಟು ಕತೆ ಆರಂಭಿಸಿದರು ಹರಿ ಕುಮಾರ್. " ಅವನು ಬಹಳ ಚೆನ್ನಾಗಿ ರಾಜ್ಯಭಾರ ಮಾಡ್ತಿದ್ದ..."

"ರಾಜ್ಯಭಾರ ಅಂದ್ರೆ..?"

"ರಾಜ್ಯಭಾರ ಅಂದ್ರೆರೂಲ್’. ಹಿ ವಾಸ್ ಗುಡ್ ರೂಲರ್. ನೀನೀಗ ಬೇಗ ನಿದ್ದೆ ಮಾಡ್ಬೇಕು. ಕೊಶ್ಚನ್ ಕೇಳ್ಕೊಂಡು ಇರೋದು ಅಲ್ಲ."

" ಹೂಂ. ಕಂಟಿನ್ಯೂ...." ಹರ್ಷ ಅಪ್ಪನಿಗೆ ಇನ್ನಷ್ಟು ಅಂಟಿಕೊಂಡು ಮೈಯೆಲ್ಲ ಕಿವಿಯಾದ.

" .ಕೆ. ಒಂದು ದಿನ ರಾಜನಿಗೆ ಅವನ ರಾಜ್ಯಭಾರದ ಬಗ್ಗೆ ಜನ ಏನು ತಿಳ್ಕೊಂಡಿದಾರೆ ಅಂತ ಕಂಡು ಹಿಡಿಯುವ ಮನಸ್ಸಾಯಿತು. ಅದಕ್ಕೆ ಅವನು ಒಂದು ಮಾರುವೇಷ ಅಂದ್ರೆ; ಕಿಂಗ್ ಡ್ರೆಸ್ ಅಲ್ಲ, ಬೇರೆ ಒಂದು ಆರ್ಡಿನರಿ ಮಾಮ ಥರ ಡ್ರೆಸ್ ಮಾಡಿಕೊಂಡು ಒಂದು ಕಂಬಳಿ ಸುತ್ತಿಕೊಂಡು ಊರೆಲ್ಲ ಸುತ್ತು ಹಾಕ್ಲಿಕ್ಕೆ ಹೋದ. ಅವನು ಕಿಂಗ್ ಅಂತ ಯಾರಿಗೂ ಗುರುತು ಹಿಡಿಯಲಿಕ್ಕೆ ಸಾಧ್ಯವೇ ಇರಲಿಲ್ಲ...."

ಕತೆಗೆ ಒಂದು ಹೊಸ ತಿರುವು ಕೊಟ್ಟರು ಹರಿ ಕುಮಾರ್. ಹೊಸ ಟ್ರಾಕ್ ಕೇಳಿ ಹರ್ಷನಿಗೆ ಖುಶಿಯಾಯಿತು. ಒಂದು ಮುಗುಳ್ನಗೆ ಬೀರಿ ಕತೆಯನ್ನು ಆಸಕ್ತಿಯಿಂದ ಆಸ್ವಾದಿಸತೊಡಗಿದನು....

" ಹಾಗೇ ಕಂಬಳಿಯಲ್ಲಿ ಮುಸುಕು ಹಾಕ್ಕೊಂಡು ಮನೆ ಮನೆ ಸುತ್ತಿ ಕಿಟಕಿಗಳ ಹಿಂದೆ ಅಡಗಿ ನಿಂತುಕೊಂಡು ಜನರ ಮಾತುಕತೆ ಕೇಳಿಸಿಕೊಂಡು ಇದ್ದ ರಾಜ. ಹಾಗೇ ತಿರುಗುತ್ತಾ ಇರುವಾಗ ಒಂದು ಕಡೆಯಲ್ಲಿ ಸಡನ್ನಾಗಿ ಒಬ್ಬ ಪೋಲಿಸ್ ಬಂದು ಅವನನ್ನು ಹಿಡಿದುಬಿಟ್ಟ. ರಾಜ ಕೂಡಲೇ " ನನ್ನನ್ನು ಬಿಡಾ; ನಾನು ರಾಜ" ಅಂತ ಜೋರು ಮಾಡಿದ. ಅದನ್ನೆಲ್ಲ ಕೇಳಿಸಿಕೊಳ್ಳದೆ ಪೋಲಿಸ್ ಅವನ ಮುಸುಕನ್ನು ಎಳೆದು ಬಿಸಾಡಿ ರಾಜನ ಕೆನ್ನೆಗೆ ಒಂದು ಹೊಡೆದುಕಳ್ಳ..., ನೀನು ಕಳ್ಳತನ ಮಾಡೋದೂ ಅಲ್ದೆ....., ರಾಜ ಅಂತೆ ರಾಜ !!’ ಅಂತ ಜೋರಗಿ ಇನ್ನೆರಡು ಪೆಟ್ಟು ಹಾಕಿದ", ಹರಿ ಕುಮಾರ್ ನಿದ್ದೆಗಣ್ಣಿನಲ್ಲಿ ಮನಬಂದಂತೆ ಕತೆಕಟ್ಟತೊಡಗಿದರು.

"ರಾಜನಿಗೆ ಪೆಟ್ಟಾ........." ಹರ್ಷನಿಗೆ ಜೋರಾಗಿ ನಗೆ ಬಂತು.

" ಹೌದು. ಅವನಿಗೆ ಏನು ಗೊತ್ತು ರಾಜ ಅಂತ. ಅವನು ನೆನೆಸಿದ್ದು ಕಳ್ಳ ಅಂತ. ರಾಜನ ಡ್ರೆಸ್ ಇರ್ಲಿಲ್ಲ ಅಲ್ವ?" ಅವರು ವಿವರಣೆಕೊಟ್ಟರು.

ಹರ್ಷ ಜೋರಾಗಿ ನಗತೊಡಗಿದ. ಅವನಿಗೆ ಇವತ್ತಿನ ಕಿಂಗ್ ಕತೆ ಬಹಳ ಇಷ್ಟವಾಯಿತು. ಜೊತೆಗೆಡಿಶ್...ಡಿಶ್ಅಂತ ರಾಜನಿಗೆ ಅವನೂ ಎರಡು ಕೊಟ್ಟ.

" ಆಮೇಲೆ, ಇನ್ನೂ ಒಂದೆರಡು ಜನ ಪೋಲಿಸರು ಸೇರಿ ರಾಜನ ಕೈಗೆ ಹಗ್ಗ ಕಟ್ಟಿ ಅವನನ್ನು ಸ್ಟೇಶನಿಗೆ ಎಳ್ಕೊಂಡು ಹೋದ್ರು. ಧಾಂಡಿಗರ ಎದುರು ರಾಜನಿಗೆ ಫ಼ೈಟ್ ಮಾಡ್ಲಿಕ್ಕೆ ಆಗ್ಲೇ ಇಲ್ಲ. ಅವನುನಾನು ರಾಜ, ನಾನು ರಾಜ, ಬಿಡಿ ನನ್ನಅಂತ ಜೋರಾಗಿ ಬೊಬ್ಬೆ ಹಾಕ್ತಾ ಇದ್ದ. ಪೋಲೀಸರು ಅವನಿಗೆ ಸರಿಯಾಗಿ ನಾಲ್ಕು ಕೊಟ್ಟು ಎಳ್ಕೊಂಡು ಹೋದ್ರು."

" ರಾಜ ಯಾಕೆ ಅವರನ್ನ ಕಿಲ್ ಮಾಡ್ಬಾರ್ದು?" ಮಗ ಪ್ರಶ್ನೆ ಕೇಳಿದ. "ರಾಜ ಅಂದ್ರೆ ಆಲ್ ಪವರ್ ಫ಼ುಲ್ ಅಲ್ವ?"

" ಇಲ್ಲ ಮಗ.. ಈಗ ಅವನಿಗೆ ರಾಜನ ಡ್ರೆಸ್ ಇಲ್ಲ, ಕಿರೀಟ ಇಲ್ಲ, ಸಿಂಹಾಸನ ಇಲ್ಲ, ಮುಖ್ಯವಾಗಿ ರಾಜನ ಸ್ಥಾನ ಇಲ್ಲ. ಈಗ ಅವನೊಬ್ಬ ಪೋಲಿಸರ ಕೈಗೆ ಸಿಕ್ಕಿ ಬಿದ್ದ ಸಾಮಾನ್ಯ ವ್ಯಕ್ತಿ. ಅರಮನೆಯಲ್ಲಿ ಆಗುತ್ತಿದ್ದರೆ ಇಷ್ಟು ಹೊತ್ತಿಗೆ................. "

ಹೇಳುತ್ತಾ ಹೋದಂತೆ ಹರಿಕುಮಾರ್ ಅವರಿಗೆ ಕತೆಯಲ್ಲಿ ಹೊಸ ಹೊಸ ಹೊಳಹುಗಳು ಕಾಣಿಸತೊಡಗಿದವು. ಅವರದ್ದೇ ಆಶು-ಕತೆಯಲ್ಲಿ ಅವರಿಗೇ ಹೊಸ ಅರ್ಥಗಳು ಕಾಣತೊಡಗಿದವು. ಬರುತ್ತಿದ್ದ ನಿದ್ದೆ ಹಾರಿ ಹೋಯಿತು. ಸಂಪೂರ್ಣ ಎಚ್ಚರವಾಯಿತು. ಮಲಗಿದಲ್ಲೇ ಏನನ್ನೋ ಡೀಪಾಗಿ ಯೋಚಿಸುತ್ತಾ ಸುಮ್ಮನೆ ಇದ್ದು ಬಿಟ್ಟರು. ಹರ್ಷ ಅವನಷ್ಟಕ್ಕೇ ನಿದ್ದೆಗೆ ಜಾರಿದ್ದು ಅವರಿಗೆ ತಿಳಿಯಲೇ ಇಲ್ಲ.

ಕಿಚನ್ ಕೆಲಸ ಮುಗಿಸಿ ಹೆಂಡ್ತಿ "ಬನ್ನಿ ಮಾರಾಯ್ರೇ....ಇನ್ನು ಹೋಗಿ ಮಲಗೋಣ. ಏನು ಭಾರೀ ಅಲೋಚನೆ ಇವತ್ತು?" ಎಂದು ಕಣ್ಣು ತಿಕ್ಕಿಕೊಂಡು ಹತ್ತಿರ ಬಂದರು.

ಹರಿ ಕುಮಾರ್ ಸುಮ್ಮನೆ ಹೆಂಡತಿಯನ್ನೇ ದೃಷ್ಟಿಸುತ್ತಾ ಇದ್ದುಬಿಟ್ಟರು.

"ನಾಳೆ ಸಾಹೇಬ್ರು ಆಫ಼ಿಸಿಗೆ ಹೋಗಬೇಡ್ವೇ? ದರ್ಬಾರಿನಲ್ಲಿ ಜನ ಎಲ್ಲಾ ಕಾಯ್ತಾ ಇರಲ್ವಾ ನಿಮ್ಮ ದರ್ಶನಕ್ಕೆ... ?"

" ಹೌದು.........ಕಾಯ್ತಿರ್ತಾರೆ.... ಸಾವಿರಾರು ಜನ.....", ಹರಿ ಕುಮಾರ್ ಜೋರಾಗಿ ಒಮ್ಮೆ ನಿಟ್ಟುಸಿರು ಬಿಟ್ಟು ಮಲಗಿದಲ್ಲಿಂದ ಎದ್ದು ತಮ್ಮ ಬೆಡ್ ರೂಮಿನೆಡೆಗೆ ನಿಧಾನವಾಗಿ ಹೆಜ್ಜೆ ಹಾಕಿದರು.


* * * *


[ನಡುಮನೆಯವರ "ಮಲ್ಲಿಗೆ ಮುಗುಳು ೨೦೦೮" ಸ್ಪರ್ಧೆಯಲ್ಲಿ ಆಯ್ಕೆಯಾದ ಸಣ್ಣ ಕತೆ. ಪ್ರಕಟಣೆ ಡಿಸೆಂಬರ್ ನಲ್ಲಿ ]

1 comment: