Sunday, December 7, 2008

" ಏ ನನ್ನ ಗುಲಾಬೀ.............................. " (ಹಾಸ್ಯ ಕತೆ)............."



"ಏ ನನ್ನ ಗುಲಾಬೀ.........." ಎಂದು ಉಲಿದದ್ದು ಗುಲಾಬಿಯಂತಹ ಮುದ್ದಿನ ಮೊಗದ, ಬಳ್ಳಿಯಂತೆ ಬಳುಕುವ, 70 m m ಸ್ಚ್ರೀನಿನಲ್ಲಿ ಥಳುಕುವ ಮಾದಕ ಕಂಗಳ ಯಾವುದೇ ಆಮದಿತ ಸೆಕ್ಸೀ ಸ್ವರವಲ್ಲ. " ಏ ನನ್ನ ಗುಲಾಬೀ........." ಎಂದು ಒದರಿದ್ದು ಸುಡುಕು ಮೊಗದ, ಕೆಡುಕು ಕಂಗಳ ಒಂದು ಕೈ ಸೊಂಟದಲ್ಲಿರಿಸಿ, ಇನೊಂದು ಕೈಯಲ್ಲಿ ನನ್ನನ್ನು ’ಒಂದು ಕೈ’ ನೋಡಲಾಹ್ವಾನಿಸುವ ನನ್ನ ವನ್ ಐನ್ಡ್ ದ ವನ್ಲೀ ಹೌಸ್ ವಾನರ್ ನನ್ಹೆಂಡ್ತಿ !! ಅವಳು ಹಾಗಂದಿದ್ದು ಮೂರು ದಿನದಿಂದ ನೀರು ಕಾಣದ, ಬರಗಾಲ ಪೀಡಿತ, ಬಿಸಿಲಿಗೆ ಬಳಲಿ bend-ಆದ ಮುಡಿ ತಿರುಚಿದ, ಎಲೆ ಕರಟಿದ ಮನೆಯಂಗಳದಲ್ಲಿ ಪೋಟಸ್ಥ ನಮ್ಮ ಒಂದು ಗುಲಾಬಿ ಗಿಡವನ್ನು ನೋಡಿ.

ಇಷ್ಟರಲ್ಲೇ ನಿಮಗೆ ಆಗಿರುವ ಪ್ರಮಾದದ ಅರಿವು ಆಗಿರಬಹುದು. ಎಮ್ಮ ಮನೆಯಂಗಳದ ಗುಲಾಬಿ ಗಿಡವೊಂದು ನೀರು ಕಂಡು ಮೂರು ದಿನಗಳಾದ್ದವು; ಕಾಣದೆಯೂ ಮೂರು ದಿನಗಳೇ ಆಗಿದ್ದವು! ಬೇರೆಲ್ಲಾ ಗಿಡಗಳೂ ಕಾಲ ಕಾಲಕ್ಕೆ ನೀರುಂಡು ನಳ ನಳಿಸುತ್ತಿದ್ದರೂ ಇದೊಂದು ಗೋಡೆಯಂಚಿನ ಗಿಡ ಮಾತ್ರ ನೀರಿಗಾಗಿ ಕಳ ಕಳಿಸುತ್ತಿತ್ತು; ಬೇಸಿಗೆಯ ಈ ಬಿಸಿಗೆ ಸಾಯುವ ಪರಿಸ್ಥಿತಿಯಲ್ಲಿ ಮುಖ ಕರಟಿ ರೋಧಿಸುತ್ತಿತ್ತು.

" ಏ ನನ್ನ ಗುಲಾಬೀ......" ಸ್ವರಾತಿರೇಕದಿಂದ ಬೊಬ್ಬಿಟ್ಟಾಗಲೇ ನಿಮಗೆಲ್ಲ ತಿಳಿದುಹೋಗಿರಬೇಕು ನಮ್ಮಿಬ್ಬರೊಳಗೆ ಅದರ ನೀರಾವರಿಯ ಉಸ್ತುವಾರಿ ಯಾರ ಮಡಿಲಿನ ಕೂಸೆಂದು. ’ಪಂಪ-ರನ್ನ’ ಮಾಡಿ ’ಹನಿ ಹನಿ’ ಯಾಗಿ ನೀರನ್ನ ’ಹಾಯ್ಕು’ವ ಕೆಲಸ ಅಲ್ಪಸ್ವಲ್ಪ ಸಾಹಿತ್ಯದಲ್ಲಿ ಆಸಕ್ತಿಯಿರುವ ನನಗೇ ಬಂದು ಸೇರಿದ್ದು ಆಶ್ಚರ್ಯವೆನಿಸಲಾರದು. ಪುರುಷಸ್ವಾತಂತ್ರ್ಯದ ಕಾಲವಿನ್ನೂ ಆರಂಭವಾಗದಿದ್ದರೂ ಪತ್ರಿಕೆಗಳಲ್ಲಿ ಇತ್ತೀಚೆಗೆ " ಪುರುಷ ಸಂಪದ" ಎಂಬ ಕಾಲಂ ಅಂತೂ ಆರಂಭವಾಗಿರುವ ಕಲಿಯುಗದ ಈ ಅಪೂರ್ವ ಕಾಲಘಟ್ಟದಲ್ಲಿ ಎಲ್ಲರ ಮನೆ ದೋಸೆಯಂತೆ ನಮ್ಮ ಮನೆಯಲ್ಲೂ ಮನೆಗೆಲಸಗಳೆಲ್ಲಾ ಲಿಂಗಾವಾರು ಪ್ರಾಂತ್ಯಗಳಾಗಿ ಹಂಚಿಹೋಗಿವೆ. ಕೆಲವು ಹಿಸ್ಸಾದರೆ ಇನ್ನು ಕೆಲವು ಹರ್ಸಾಗಿವೆ. ಇನ್ನೆಷ್ಟೊ ಕೆಲವು ಕೆಲಸಗಳು ಕಾಸರಗೋಡು-ಬೆಳಗಾವಿನಂತೆ ವಿವಾದಿತ ಪ್ರಾಂತ್ಯಗಳಾಗಿ ಲಾಗಾಯ್ತಿನಿಂದ ವಾರಸುದಾರರಿಲ್ಲದೆ ಕಂಗೊಳಿಸುತ್ತವೆ. ಆದರೆ ಸದ್ಯಕ್ಕೆ ಈ ನೀರಾವರಿ ಯಂತೂ ಅವಿವಾದಾಸ್ಪದವಾಗಿಯೂ ನನ್ನದೇ ವರಿ ಎಂಬುದು ಅವಳು ಪ್ರಸ್ತುತ ಪಡಿಸಿದ ಡೆಸಿಬೆಲ್ಲಿನಿಂದಲೇ ಸ್ವಯಂವೇದ್ಯ !

ಹುಲಿಯನ್ನು ಕಂಡು ಜೀವದಾಸೆಯಿಂದ ಪ್ರಚೋದಿತವಾದ ಜಿಂಕೆಮರಿಯಂತೆ ಕೂಡಲೇ ನಾನು ಜಾಗೃತನಾದೆ. ನನ್ನ ಹೆಡ್ ಆಪೀಸು ಕೂಡಲೇ ದೇಶದ ಎಲ್ಲಾ ಹೆಡ್ ಆಪೀಸುಗಳಂತೆ ನಿಧಾನವಾಗಿ ಕೆಲಸ ಮಾಡಲು ಆರಂಭಿಸಿತು. ಆದರೆ, ನಮ್ಮೆರಡು ಕೈಗಳು ಭುಜಗಳಲ್ಲಿದ್ದರೂ ಇಂತಹ ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡಲಾರದೇ ಕೈ ಕೊಡುವುದು ತಲೆಯೇ ಅಲ್ಲದೆ ಭುಜಗಳಲ್ಲ. ಆ ಕ್ಷಣದಲ್ಲಿ ಹೊಳೆದ ಕೆಲವು ಉತ್ತರಗಳನ್ನು ಅದಷ್ಟು ಕ್ಷಿಪ್ರವಾಗಿ ಒಂದು ತೌಲನಾತ್ಮಕ ಅಧ್ಯಯನಕ್ಕೆ ಒಳಪಡಿಸಿ ಬೆಸ್ಟಾಫ಼್ ಕಾರಣಾಸ್ ಎಂಬ ಒಂದನ್ನು ಹೆಕ್ಕಿ ಹೊರಕ್ಕೆಳೆದೆ-

" ಗೋಡೆಯಂಚಿಗಿದೆಯಲ್ಲ......., ಹಾಗಾಗಿ ಪೈಪ್ ಅಲ್ಲಿಯವರೆಗೆ ಬರುವುದಿಲ್ಲ...ಹ್ಹೆ ಹ್ಹೆ ಹ್ಹೆ..... ನೀರು ಹಾಯಿಸುವಾಗ ಬಹುಶಃ ಸರಿಯಾಗಿ ಬಿದ್ದಿರಲಿಕ್ಕಿಲ್ಲ...ಹ್ಹೆ ಹ್ಹೆ ಹ್ಹೆ...ಬ್ಬೆ ಬ್ಬೆ ಬ್ಬೆ !! "

" ವೆಲ್ ಟ್ರಡ್.... ಕಮ್ ಔಟ್ ವಿದ್ ಅ ಬೆಟರ್ ವನ್ ನೆಕ್ಷ್ಟ್ ಟೈಮ್, ಡ್ಯೂಡ್ " ಎಂಬಂತೆ ಲುಕ್ಕಿದಳು ಅಲ್ಲಲ್ಲ, ಸ್ಟೇರಿದಳು.

ಅರ್ಧಾಂಗಿಯೆದುರು ನಾನು ಕಾಲಂಗಿಯಾದೆ (ಕಾಲಂಗಿ ಕನ್ನಡ; ಅದರ ಇಂಗ್ಲೀಷ್ ರೂಪಾಂತರ-socks!!). ತಪ್ಪು ನನ್ನದೇ. ಗುಲಾಬಿಯು ಬಾಡಿತ್ತು, ಆಟವು ಮುಗಿದಿತ್ತು. ಬಲೀ ಕಾ ಬಕ್ರಾ ಎಂದಾದೊಡೆ ತನ್ನ ಕೊರಳ್ ಒಪ್ಪಿಸುವುದೇ ಲೇಸೆಂದಿದ್ದ ಸರ್ವಜ್ಞ!

ನಂಬಿದರೆ ನಂಬಿ, ಬಿಟ್ಟರೆ ಬಿಡಿ; ನನ್ನಪ್ಪ್ರಾಣೆಗೂ ಹೇಳ್ತೇನೆ..... ನಾನಂತೂ ಒಂದು ಪೈ ವರದಕ್ಷಿಣೆ ತೆಗೆದುಕೊಂಡಿಲ್ಲ. ಪ್ರಮಾಣ ಬೇಕಿದ್ರೆ ಮಾಡ್ತೇನೆ. ಆದರೆ ತಿಂಗಳಿಗೊಮ್ಮೆ ನಾವು ಮಾವನ ಮನೆಗೆ ಹೋದಾಗ್ಲೆಲ್ಲ ಇನ್ಸ್ಟಾಲ್ಮೆಂಟೋಪಾದಿಯಲ್ಲಿ ಗುಲಾಬಿ ಗಿಡಗಳು ಪೋಟ್ ರೂಪೇಣ ನನ್ನ ಕಾರಿನ ಡಿಕ್ಕಿಯೇರಿ ನಕ್ಕದ್ದು ನಿಜ. ಇವು ವರದಕ್ಷಿಣೆಯೂ ಅಲ್ಲ; ವಾರದಕ್ಷಿಣೆಯೂ ಅಲ್ಲ, ಒಂಥರಾ ಮಾಸದಕ್ಷಿಣೆ ಎನ್ನ ಬಹುದು. ಆದರೆ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಸ್ವೀಕರಿಸಿರುವ ಈ ಮಾಸದಕ್ಷಿಣೆಗಳು ವರ್ಷಪೂರ್ತಿ ನನ್ನನ್ನು ’ದುಡಿಸಿಕೊಳ್ಳುವುದು’ ಅಂತೂ ಪರಮ ಸತ್ಯ. ಗೇಟಿನೊಳಗೆ ಸಾಲಾಗಿ ಕುಳಿತು ಸಾಲಂ ಕೃತ ನನ್ನ ಮನೆಯನ್ನು ಸಾಲಂಕೃತಗೊಳಿಸುತ್ತವೆ. ಈ ಗುಲಾಬೀ ಕುಂಡಗಳು ಸಂಸಾರವೆಂಬ ಶೋಕಭೂಮಿಯಲ್ಲಿ ಅಗ್ನಿಕುಂಡಗಳಾಗಿ ಉರಿಯುತ್ತವೆ. ದಿನಾ ನೀರು ಹಾಕಿದರೂ ಆರದ ಜಗತ್ತಿನ ಏಕೈಕ ಟೈಪ್ ಆಫ಼್ ಕುಂಡವಾಗಿ ನನ್ನ ಹೊಟ್ಟೆ ಉರಿಸುತ್ತವೆ.

ಇಂದಿನ ಕೊಳ್ಳಬಾಕ ಸಂಸ್ಕೃತಿಯ ಯಾವುದೇ ಸರಕಿನಂತೆ ಈ ಪಿಶಾಚಿಗಳೂ ಕೇವಲ ಅವೇ ಆಗಿ ಬರುವುದಿಲ್ಲ, ಜೊತೆಗೆ ಕೆಲವು ಸಲಹೆಗಳೂ ಉಚಿತವಾಗಿ ಬರುತ್ತವೆ. ಪ್ರತಿ ಬಾರಿ ಒಂದೊಂದು ಕುಂಡವನ್ನೂ ಬಿದಾಯಿಯೋ ಪಿದಾಯಿಯೋ ಮಾಡುವಾಗಲೂ ಅವಳ ಹೆಡ್ ಆಫ಼ೀಸು ವಾನರ್ ಅಂದ್ರೆ ನನ್ನತ್ತೆ ಈ ಉಚಿತ ಕೊಡುಗೆಗಳನ್ನ ಪುಂಖಾನುಪುಂಖವಾಗಿ ನೀಡುತ್ತಲೇ ಬಂದಿದ್ದಾರೆ. "ದಿನಕ್ಕೆರಡು ಬಾರಿ ನೀರು ಹಾಕಬೇಕು................ , ಸರೀ ನೀರು ಹಾಕಬೇಕು..... , ಸರೀ ಬಿಸಿಲು ಬೀಳಬೇಕು.......... , ಇರುವೆ ಬಾರದಂತೆ ನೋಡಿಕೊಳ್ಳಬೇಕು....... , ಸೆಗಣಿ ಹಾಕ ಬೇಕು (ಎಲ್ಲಾ ನಾನೇ ಮಾಡ ಬೇಕೆ !!!! ) ಹೌದು. ಈಚೀಚೆಗೆ ಅದರ ಬಗ್ಗೆ ಯಾವುದೇ ಸಂಶಯವೂ ಉಳಿದಿಲ್ಲ. ಅಂತಹ ಸಲಹಾರ್ಚನಾ ಸಂದರ್ಭಗಳಲ್ಲಿ ಕಾರಿನ ಬದಿಸೀಟಿನಲ್ಲಿ ಕೋಪೈಲಟಿಗಳಾಗಿ ವಿರಾಣಿಮಾನವಾಗಿರುವ ಅವಳು ಕೇವಲ "ಗೊತ್ತಾಯಿತೇ........" ಎಂಬಂತೆ ನನ್ನನ್ನು ನೋಡಿ ಹುಬ್ಬೇರಿಸುವುದು ಮಾತ್ರ. ನಾನಂತೂ ಈ ಗು-lobby ಗೆ ಸಂಪೂರ್ಣವಾಗಿ ಶರಣಾಗಿದ್ದೇನೆ, ನನ್ನನ್ನು ನಾನು ಅರ್ಪಿಸಿಕೊಂಡಿದ್ದೇನೆ. ಈ ನಾಲ್ಕು ಮಾತುಗಳೊಂದಿಗೆ ಸೆರಗಿನಿಂದ ಕಣ್ಣೊರಸುತ್ತಾ ತಾವೇ ನೀರುಣಿಸಿ ಸಾಕಿ ಸಲಹಿದ ಗುಲಾಬಿಗಿಡವನ್ನು ಅತೀವ ದುಃಖದಿಂದ ಬೀಳ್ಕೊಡುವ ಆ ಮಾಹಾದಾನಿಗಳ ನೇತ್ರಾವತಿ ನನ್ನ ಹಾಲತ್ತನ್ನು ಕಂಡು ನನಗಾಗಿಯೇ ಹರಿಸಿದ್ದು ಎಂದು ನಾನು ಸುಳ್ಳೇ ಭಾವಿಸಿ ಸಮಾಧಾನ ಪಟ್ಟುಕೊಳ್ಳುತ್ತೇನೆ.

ಈ ಹೂ ಕುಂಡಗಳಿಗೂ ನನಗೂ ಯಾವ ಜನ್ಮದ ಮೈತ್ರಿಯೋ ನಾನರಿಯೆ. ನನಗಂತೂ ಈ ಹದಿನಾರನೇ ಶತಮಾನದ ಇಂಗ್ಲೀಷ್ ನಾಟಕಕಾರನು ಹೇಳಿದ್ದೆಲ್ಲವೂ ಶುದ್ಧ ನಾಟಕವೆಂದು ಖಚಿತವಾಗಿದೆ. ನನಗಾದರೋ, ಗುಲಾಬಿ ಬೇರಾವ ಹೆಸರಿನಿಂದಲೂ ಅಷ್ಟೇ ಅಪ್ರಿಯ, ಅಷ್ಟೇ ಭಯಾನಕ! ನಾಳೆಯಿಂದ ಅದನ್ನು ಕಮಲವೆಂದು ಕರೆದರೆ ಅದರಲ್ಲಿರುವ ಮುಳ್ಳುಗಳು ಮಾಯವಾಗುತ್ತವೇನು ?

ಹಣದುಬ್ಬರದ ಅಬ್ಬರದ ಈ ಕಾಲದಲ್ಲಿ ಕುಟುಂಬಯೋಜನೆಗೆ ಯಾವುದೇ ಪ್ರಚಾರ ಬೇಕಿಲ್ಲ. ಹಣದ ಬೆಲೆ ಅರಿತಿರುವ ಯಾವನಾದರೂ ಬೇಕೂಫ ಕುಟುಂಬ ಯೋಜನೆಯ ಯೋಚನೆ ಮಾಡದಿರಲಾರ. ಹಾಗಾಗಿ ಮಕ್ಕಳನ್ನು ನರ್ಸಿಸಿ ಹೆಚ್ಚು ಅನುಭವವಿಲ್ಲದಿದ್ದರೂ ಒಂದು ಸಣ್ಣ ಹೂತೋಟ ಎಮ್ಮ ಮನೆಯಂಗಳದಿ ರಾರಾಜಿಪುದು. ಅಲ್ಲದೆ ಅದಕ್ಕೆ ನಾನೇ ಮಾಲಿ ನಾನೇ ಮಾಲೀಕ. ನಿವೃತ್ತಿ ಜೀವನದಲ್ಲಿ ಒಂದು ವೃತ್ತಿ. ಸ್ವಯಂ ನಿವೃತ್ತಿಯನ್ನು ನಾನೇ ತಗೊಂಡಿದ್ದರೂ ಈ ಹೂತೋಟದಲ್ಲಿನ ವೃತ್ತಿ ನನ್ನ ಮೇಲೆ ಹೇರಲ್ಪಟ್ಟಿದ್ದು. ಈ ಮಾಲಿತನ ಕಮ್ ಮಾಲೀಕತನ ಪಟ್ಟ ನನಗೆ ನಂಬಾಸ್ ಅರ್ಥಾತ್ ನನ್ಹೆಂಡ್ತಿಯೇ ಕಟ್ಟಿದ್ದು ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲವೆಂದು ಹೇಳತಕ್ಕಂಥಹ ಒಂದು ಮಾತನ್ನ ನಾನಿಲ್ಲಿ ಹೇಳಬಯಸುತ್ತೇನೆ.

ಮೊದಮೊದಲು ಈ ಪೂಕಳ ಕಾರ್ಯಕಾರೀ ವಿಷಯಗಳಲ್ಲಿ ನಮ್ಮೊಳಗೆ ಭಾರೀ ಮಾತುಕತೆಗಳಾಗುತ್ತಿದ್ದವು. ನೀರಿನ ಬಗ್ಗೆ, ಗೊಬ್ಬರದ ಬಗ್ಗೆ, ಸಸ್ಯದ ಆರೈಕೆಯ ಬಗ್ಗೆ..... ನಾನು ಲೆಫ಼್ಟಾದರೆ ಅವಳು ರೈಟು; ನಾನು ರೈಟಾದರೆ ಅವಳು ರಾಂಗು. ಹೂಗಳ ಸರ್ವತೋಮುಖ ಏಳ್ಗೆಗಾಗಿ ಅವಳು ಮಾಡಿದ ಕೆಲವು ನಿಸ್ವಾರ್ಥ ನಿರುಪದ್ರವೀ ಸಲಹೆಗಳು (ಸ್ವಯಂಘೋಷಿತ) ನನಗೆ ಕರ್ಣಕಠೋರವಾಗಿ ಕೇಳುತ್ತಿದ್ದವು. ನನ್ನ ಮೇಲೆ ನಡೆಯುವ ದಬ್ಬಾಳಿಕೆ ಎಂದೂ ತೋರುತ್ತಿದ್ದವು. ಕೆಲವೊಮ್ಮೆ ಮಾತಿಗೆ ಮಾತು ಜೋರಾಗಿ ಜಗಳಗಳಾಗಿ ಮಕ್ಕಳ ಮಧ್ಯಸ್ಥಿಕೆಯಿಲ್ಲದೆ ಪರಿಹರಿಸಲ್ಪಡುತ್ತಿರಲಿಲ್ಲ. ನಮ್ಮ ಮಾತುಗಳೆಲ್ಲ ಕತೆಗಳಾಗಿ ನೆರೆ ಹೊರೆಯ ಮನೆಗಳಲ್ಲಿ ಕರೆಂಟಿಲ್ಲದಾಗಲೋ, ಟಿ.ವಿ ಕೆಟ್ಟೋದಾಗಲೋ ಆಡಿಕೊಳ್ಳಲು ಬಳಕೆಯಾಗುತ್ತಿದ್ದವು. ’ಸಂಪೂರ್ಣ ಗುಲಾಬಾಯಣ ದರ್ಶನ’ದ ಅಖೈರಿಗೆ ಅವಳು ತೀರ್ಪಿಸಿದ್ದು ಹೀಗೆ:

೧. ನೀರಾವರಿಯ ಸಂಪೂರ್ಣ ವರಿ ನಿಮ್ಮದು.
೨. ನೀರಾವರಿಯನ್ನು ಬೇಕಾಬಿಟ್ಟಿ ಮಾಡುವ ಪರಿಯೂ ನಿಮ್ಮದೇ.
೩. ಆದರೆ, ಒಂದಾದರೂ ಗಿಡ ಬಾಡಿರುವ ಸ್ಥಿತಿಯಲ್ಲಿ ನನಗೆ ಕಾಣಬಾರದು.

ಇದು ಪುರುಷ ಸ್ವಾತಂತ್ರ್ಯಕ್ಕೆ ಅವಳು ಮಾಡಿದ ಅತ್ಯಂತ ಶ್ರೇಷ್ಠ ಸೇವೆ !

ಅಂತೂ ಜನ್ಮ ತಾಳಿತು ನಮ್ಮ ಕರಾರುವಾಕ್ಕಾದ ವಾಕ್-ಕರಾರು. ಇದನ್ನು ನಾನು ಸಹಿಸಲಿಲ್ಲ ’ಸಹಿ’ಸಲೂ ಇಲ್ಲ. ಆದರೂ ಈ ಉರುಳಿಗೆ ಕೊರಳ್ ಕೊಟ್ಟೆ. ಬೇ-ಸತ್ತಿದ್ದ ನನಗೆ ದಿನದಿಂದ ದಿನಕ್ಕೆ ಹದಗೆಡುತ್ತಿದ್ದ ಈ ಸಂಸದ್ ಅಧಿವೇಶನದಿಂದ ಒಟ್ಟಾರೆ ಹೊರಬಂದರೆ ಸಾಕಿತ್ತು. ಅಂದು ನನಗೆ ಅಷ್ಟರಲ್ಲೇ ವಿಜಯೋತ್ಸವ.

ಅಂದಿನಿಂದ ಆರಂಭವಾಯಿತು- ಸೊಂಟಕ್ಕೆ ಕೈ! ಒಪ್ಪಂದದಂತೆ ಒಪ್ಪ+ಅಂದವಾಗಿ ಗಿಡಗಳ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಮಡಿಲಲ್ಲಿ ಡಂಪಿಸಿ ಅವಳು ಬರೇ ಮೇಲ್ವಿಚಾರಣೆ ಮಾಡತೊಡಗಿದಳು. ಆಫ಼ೀಸಿನಿಂದ ಬೇಗನೆ ಬಂದ ದಿನಗಳಲ್ಲೆಲ್ಲಾ ಕೈತೋಟ ವನ್ನು ಒಂದು ಸ್ಕಾನ್ ಮಾಡುವಳು. (ವಾಹ್ ರೇ ನಸೀಬ್..., ಸೊಂಟಕ್ಕೂ ಕೈ ತೋಟಕ್ಕೂ ಕೈ!! ಸ್ಕಾನ್ನಿಂಗಿನಲ್ಲಂತೂ ಅವಳದು ಎತ್ತಿದ ಕೈ!! ) ಅವಳ ಕಣ್ಣುಗಳೇ ಒಂದು "ಬಾಡೋಮೀಟರ್" ಎಲ್ಲೆಲ್ಲಿ ಯಾವ ಗಿಡಗಳು ಬಾಡುತಿದೆಯೆಂದು ಕರಾರುವಾಕ್ಕಾಗಿ ( ಅಂದ್ರೆ, ಆಸ್ ಪರ್ ಕೋಂಟ್ರಾಕ್ಟ್) ಹೇಳಬಲ್ಲಳು. ಯಾವ ಯಾವ ಗಿಡಗಳಿಗೆ ಎಷ್ಟು ಮಿಲ್ಲಿ ನೀರು ಕಡಿಮೆ ಹನಿಸಿರುವೆ ಎಂದೂ ಗ್ರಹಿಸಬಲ್ಲಳು. " ಏ ನನ್ನ ಗುಲಾಬೀ............... , " ಎಂದು ಒದರಿದ್ದು ಅಂತಹುದೇ ಒಂದು ಸ್ಕಾನ್ನಿಂಗಿನ ಬಳಿಕ.

" ಇದನ್ನು ಬದುಕಿಸಿ ಜೀವ ಮಾಡಿ ತೋರಿಸಿದರೆ ಸಾಕಲ್ಲವೇ? ಅದು ನನ್ನ ಜವಾಬ್ದಾರಿ " ಎಂದು ಖಂಡಿತ ಸ್ವರದಲ್ಲಿ ಹೇಳಿದೆ. ಏನೂ ಹೇಳದೆ ಸೀದಾ ಮನೆಯೊಳಗೆ ಧಿಮಿ ಧಿಮಿಸಿದಳು ಭಾರ್ಯಾಮಣಿ. ಹಾಗೆ ನಡೆಯುವಾಗ ಮನೆಯೊಳಗೆ ಯಾವುದೇ ಕಂಪನ-ಗಿಂಪನ ಉಂಟಾಗದಿದ್ದರೂ ನನ್ನ ಮನದೊಳಗೆ ಭೂಕಂಪ ಸ್ಪೋಟಿಸತೊಡಗಿತು. ನಾನು ಮಾಡಿದ ಚ್ಯಾಲೆಂಜ್... !! ಅದು ನಾನು ಮಾಡಿದ ಎರಡನೇ ತಪ್ಪು. ಒಂದು ತಪ್ಪನ್ನು ಒಪ್ಪ ಮಾಡಲು ಹೋಗಿ ಇನ್ನೊಂದು ತಪ್ಪು. (ಶಾಬ್ಬಾಶ್ ಬೇಟೇ !! ) ಅಂತೂ ಚ್ಯಾಲೆಂಜ್ ಮಾಡಿಯಾಯಿತು, ಒಡನೇ ಕಾರ್ಯ ಪ್ರವೃತ್ತನಾದೆ. ಬಾಡಿದ ಗುಲಾಬಿ ಕುಂಡವನ್ನು ಡಾ| ಮಾಲಿ ಯವರ ಐ.ಸೀ.ಯು ಗೆ ಅಡ್ಮಿಟ್ ಮಾಡಿದೆ. ಗೋಡೆಯಂಚಿನಿಂದ ಸ್ಥಾನಪಲ್ಲಟಗೊಳಿಸಿ ಬಾಗಿಲೆದುರು ತಂದಿರಿಸಿದೆ. ತೀವ್ರ ಶುಶ್ರೂಶೆಗೆ ಒಳಪಡಿಸಿದೆ. ದಿನಕ್ಕೆ ನಾಲ್ಕು ಬಾರಿ ನಿರುಣಿಸತೊಡಗಿದೆ. ಅತ್ಯಂತ ಸೂಕ್ಷ್ಮವಾಗಿ ಪರೀಕ್ಷಿಸತೊಡಗಿದೆ. ಮೂರು ದಿನಗಳ ಬರಪೀಡೆಯಿಂದಾಗಿ ಎಲೆಗಳೆಲ್ಲವೂ ಒಣಗಿ ಉದುರಿತ್ತು. ಮಧ್ಯದ ಒಂದು ದಂಟು ಮಾತ್ರ ಉಳಿದಿತ್ತು. ಅದು ಕೂಡ ಅರೆಸತ್ತು ಹಸಿರು ಸಂಪೂರ್ಣ ಮಾಸಿ ಒಣಗಿದ ಗಿಡವಾಗಿಯೇ ತೋರುತ್ತಿತ್ತು. ಬದುಕಿಸುವ ಆಶೆ ಹೆಚ್ಚು ಉಳಿದಿಲ್ಲ ಎಂಬುದು ಮಕ್ಕಳಿಗೂ ತೋರತೊಡಗಿತು. ಆದರೆ ರಣವೀಳ್ಯೆ ತೆಗೆದುಕೊಂಡಾಗಿತ್ತಲ್ಲವೇ? ಇನ್ನು ಎರಡೇ ದಾರಿ- ಮಾಡು ಇಲ್ಲವೇ ಮಾಡಿ !! ಬೇರೆ ದಾರಿ ಇಲ್ಲ. ಮುಂಬರುವ ಕಷ್ಟದಿನಗಳ ಮುನ್ಸೂಚನೆಗಳು ನನಗವಳ ನಡವಳಿಕೆಯಿಂದಲೇ ಮನದಟ್ಟಾಗತೊಡಗಿತು.

ಅವಳ ಕೋಪ ಹುಸಿಮುನಿಸಲ್ಲ ಮಾರಾಯ್ರೇ, ಹಸಿ ಮೆಣಸು! ಖಾರ ಅಂದ್ರೆ ಖಾರ. ಮಾತೂ ಇಲ್ಲ ಕತೆಯೂ ಇಲ್ಲ. ಪಲ್ಯಗಳ ಉಪ್ಪೇರತೊಡಗಿತು; ಕಾಪಿಗಳು ಸಕ್ಕರೆ ಕಾಣದೆ ಡಯಾಬಿಟಿಸ್ ರೋಗಿಗಳಂತೆ ಕಂಗಾಲಾಗಹತ್ತಿದವು. ಅಡಿಗೆ ಕೋಣೆಯಲ್ಲಿಪಾತ್ರೆಗಳು ಸದ್ದೇರಿಸಿ ಸಂಭಾಷಿಸಲಾರಂಭಿಸಿದವು. " ಭಲ್ಲಿರೇನಯ್ಯ, ಈ ಸತಿಪತಿಯ ಕಾಳಗವನ್ನು..." ಎಂದು ’ಗುಲಾಬಿ ಪುರಾಣ’ ಎಂಬ ಪ್ರಸಂಗವನ್ನು ಯಕ್ಷಗಾನಿಸುವಂತೆ ಅನಿಸತೊಡಗಿತು. ಸ್ತ್ರೀವೇಷ ಸಡನ್ನಾಗಿ ರಾಕ್ಷಸ ವೇಷವಾಗಿ ಧಿಂಗಣಿಸುವಂತೆ ಕನಸುಬೀಳತೊಡಗಿತು. ಮಕ್ಕಳಿಗೂ ನಾನು ರಜದ ಮಜವಾದೆ. ಕುಡಿಯಲು ನೀರು ಬೇಕಾದಾಗ "ಅಪ್ಪಾ, ರೋಸ್ ವಾಟರ್" ಎಂದೋ, ಮನೆಯಲಿ ಅತ್ತಿತ್ತ ಸುತ್ತು ಬರುವಾಗ " ರೋಜ಼್ ರೋಜ಼್ ಮಕೋನಿಸ......" ಎಂದು ಹಾಡುತ್ತಲೋ, ಅಥವಾ " ಇಕ್ ರೋಜ಼್ ಮೈ ತಡಪ್ಕರ್........." ಎಂದು ಅರಚುತ್ತಲೋ, ಅಮ್ಮ ಆಪೀಸಿನಿಂದ ಬಂದು ತೋಟ ನೋಡಿ ಗುಲಾಬಿವದನಳಾದಾಗ " ರೋಸೀ ಲಿಪ್ಸ್, ಡಿಂಪಲ್ ಚಿನ್....." ಎಂದು ಕನಲುತ್ತಲೋ, ತೊದಲುತ್ತಲೋ, ಮರುಗುತ್ತಲೋ ನನ್ನ ಏರುತ್ತಿರುವ ಬಿ.ಪಿ ಗೆ ಶೃತಿ ಸೇರಿಸತೊಡಗಿದರು. ಪಕ್ಕವಾದ್ಯದಲ್ಲಿ ಬೀಟ್ಸ್ ನೊಂದಿಗೆ ನನ್ನ ಹಾರ್ಟ್ ಸಹಕರಿಸತೊಡಗಿತು.

ಮಿಸೆಸ್ ದ್ರೌಪದಿಗೆ ಒಂದು ಬಾರಿ ಪಾರಿಜಾತ ಪುಷ್ಪ ಬೇಕೆಂದು ಆಸೆಯಾಯಿತಂತೆ. ಆಸೆ ಹಟವಾಗಿ ರೂಪಾಂತರಗೊಳ್ಳಲು ಎಷ್ಟು ಹೊತ್ತು ಬೇಕು? ಎದುರಿಗೆ ಸಿಕ್ಕಿವ ಬಡ/ಭಡಾ ಭೀಮಸೇನ! ಪಾಪ! ಗಂಡುಗಲಿ ಭೀಮ ಗೊಂಡಾರಣ್ಯದಲ್ಲಿ ಅಲೆದಲೆದು ಅರೆಸತ್ತ. ಅವನ ಪಾಡು ಯಾರಿಗೂ ಬೇಡ. ಅಂತಹ ಮಹಾ ಧೈರ್ಯಶಾಲಿ ನಿಷ್ಪುಷ್ಪಿತನಾಗಿ ಬರಿಗೈಯಲ್ಲಿ ಮಡದಿಯ ಮುಖ ಕಾಣಲು ಧೈರ್ಯ ಸಾಲದೆ ತಾನಿದ್ದ ಅರಣ್ಯದಲ್ಲೇ ಇನ್ನೊಂದು ಟೆಂಪರವರಿ ಸತಿಗಾಗಿ ಅಲೆದಾಡಲಾರಂಭಿಸಿದ. ಪಾರಿಜಾತ ಪುಷ್ಪ ಸಿಗದಿದ್ದರೂ ಸುಲಭವಾಗಿ ಸಿಕ್ಕಳು ಹಿಡಿಂಬಿ ಎಂಬ ರಕ್ಕಸಿ! ಅವಳಾದರೂ ಸರಿ; ಮುನಿದ ನಾರಿಯಿಂದ ಒಲಿದ ಮಾರಿಯೇ ಲೇಸೆಂದು ಹಲವು ವರುಷ ಅವಳೊಂದಿಗೆ ಸಂಸಾರತೂಗಿಸಿದ. ವೀರಾಧಿವೀರ ಭೀಮಸೇನನೇ ಒಂದು ಕೇವಲ ಪಾರಿಜಾತ ಪುಷ್ಪಕ್ಕಾಗಿ ಇಷ್ಟು ಬವಣೆ ಪಟ್ಟಿರುವಾಗ ನಾನು ಒಂದು ಗುಲಾಬಿಗಾಗಿ ಬರುವ ಕಷ್ಟ ಏನು ಮಹಾ? ಆಫ಼್ಟರಾಲ್, ಇಟ್ಸ್ ಅ ರೋಸ್ ಯು ನೋ ! ನಾನು ಈ ವಿಷಯವನ್ನು ಹೇಳಿದಾಗೆಲ್ಲಾ ನಾನು ಪುರಾಣವನ್ನು ತಿರುಚಿದ್ದೇನೆ ಎಂದು ಅವಳು ಹೇಳುವಳು. ಮಹಾಭಾರತದಲ್ಲಿ ನಡೆದ ಘಟನೆ ಹಾಗಲ್ಲವೇ ಅಲ್ಲ ಎಂದು ವಾದಿಸುವಳು. ನನಗೆ ಅವಳೆದುರು ನನ್ನ ಇಷ್ಟು ಸಣ್ಣ ಮುಖ ತಿರುಚಲೇ ಧೈರ್ಯ ಸಾಲದು! ಇನ್ನು ಅಷ್ಟು ದೊಡ್ಡ ಪುರಾಣವನ್ನೆಂತು ತಿರುಚುವೆನು?

" ಅದು ಸತ್ತೇ ಹೋಗಿದೆ. ಇನ್ನು ಅದಿಕ್ಯಾಕೆ ನೀರು ವೇಸ್ಟ್ ಮಾಡೋದು? ನಿಮ್ಮ ಹತ್ರ ಹೇಳಿದ್ರೆ ಹೀಗೇ ಅಗೋದು. ನಾನು ಮೊದಲೇ ಹೇಳಿದ್ದೆ ದಿನ ನಿತ್ಯ ಸರೀ ನೀರು ಬಿದ್ದೇ ಬೀಳ ಬೇಕು ಗುಲಾಬಿಗೆ. ಹೇಳಿದ್ರೆ ಅಗಲ್ಲ, ಮಾಡ್ಲಿಕ್ಕೂ ಆಗಲ್ಲ. ಅವಸ್ಥೆ. ಈಗ ನನ್ನ ಅಮ್ಮನಿಗೆ ಏನು ಉತ್ತರ ಹೇಳ್ಲಿ? ಆ ವೆರೈಟಿ ಸಿಗಲ್ಲ. ಅಷ್ಟು ದೂರ ಕೊಡೈಯಿಂದ ತಂದಿದ್ರು..............."

ಎಂದು ನನ್ನ ಪರ್ಫ಼ಾರ್ಮನ್ಸ್ ಅಪ್ರೈಸಲನ್ನು ಸುಶ್ರಾವ್ಯವಾಗಿ ವಾಚಿಸತೊಡಗಿದಳು. ಓಟ್ಟಿನಲ್ಲಿ ಆ ಗುಲಾಬಿ ಗಿಡ ಅತ್ಯಂತ ವಿರಳವೆಂದೂ, ಅವಳ ಅಮ್ಮನ ಪ್ರೀತಿಯ ಕೊಡುಗೆಯೆಂದೂ, ನಾನು ಎಂದಿನಂತೆ ನನ್ನ ಅಹಂಕಾರದಿಂದ ಅದರ ಜೀವ ತೆಗೆದು ಹಾಕಿದೆನೆಂದೂ, ಅವಳ ತಂಗಿಗೆ ಆ ಗಿಡದಲ್ಲಿ ಮನಸ್ಸಿತ್ತೆಂದೂ, ಮತ್ತ್ಯಾವುದೋ ಚಾಣಾಕ್ಷ ರಾಜಕೀಯದಿಂದಾಗಿ ಅವಳು ಅದನ್ನು ಗಿಟ್ಟಿಸಿಕೊಂಡಿದ್ದಳೆಂದೂ ಅದನ್ನು ತಂಗಿಗಾದರೂ ಕೊಟ್ಟಿದ್ದರೆ ಗಿಡವಾದರೂ ಎಲ್ಲಾದರೂ ಒಂದು ಕಡೆ ಜೀವದಲ್ಲಿ ಇರುತ್ತಿತ್ತೆಂದೂ (ಮೊದಲು ಉದರ ಬುದ್ಧಿ ಈಗ ಉದಾರ ಬುದ್ಧಿ. ವಾವ್!!) ಈಗ ಅವಳು ನನ್ನಿಂದಾಗಿ ತನ್ನ ಹೆಡ್ಡಾಪೀಸಿನಲ್ಲಿ ಮುಖ ತೋರಿಸಲು ಹೇಗೆ ’ಲಾಯಖ್ ನಹೀ ರಹೀ’ ಎಂದೂ ಬುಸುಗುಟ್ಟತೊಡಗಿದಳು.

ಗುಲಾಬಿ ಗಿಡದ ಹಿಂದಿನ ರಾಜಕೀಯ ನನಗೆ ಈಗ ಪರಿಚಯವಾಗತೊಡಗಿತು. ಒಟ್ಟಿನಲ್ಲಿ, ಒಂದು ಗುಲಾಬಿ, ಬರೇ ಗುಲಾಬಿಯಲ್ಲ; ಗುಲಾಬಿಯಲ್ಲ; ಗುಲಾಬಿಯಲ್ಲ !!! ಎಂಬ ಪರಮ ಸತ್ಯದ ದರ್ಶನವಾಗತೊಡಗಿತು. ನಾನು ಅರಿಯದೆಯೇ ಯಾವ ಹುತ್ತಕ್ಕೆ ಕೈಹಾಕಿದೆನೋ ಎಂದು ಪರಿತಪಿಸತೊಡಗಿದೆ. ಗುಲಾಬಿ ಗಿಡದ ಜೀವಕ್ಕಿಂತ ತನ್ನಮ್ಮನ ಬಳಿ ಹೇಗೆ ಮುಖ ತೋರಿಸುವುದೆಂಬ ಸಮಸ್ಯೆಯೇ ಎಲ್ಲದರಿಂದ ಮಿಗಿಲಾಗಿ ಅವಳಿಗಿದ್ದಂತೆ ತೋರತೊಡಗಿತು. ಆದರೇನು ಮಾಡೋಣ? ಮಾಡದ್ದನ್ನು ಉಣ್ಣಲಾದೀತೇ? ಮಾಡಿದ್ದನ್ನು ಉಣ್ಣದಿರಲಾದೀತೇ?

ಆ ಭಗವಂತನಿಗೂ ನನ್ನಲ್ಲಿ ಕರುಣೆ ಬಾರದ ಕಾರಣ ದಿನೇ ದಿನೇ ಓ ನನ್ನ ಗುಲಾಬಿಯು ನನ್ನ ಮಡಿಲೆಂಬ ಐ. ಸಿ. ಯು ನಲ್ಲಿ ಕೊನೆಯುಸಿರೆಳೆಯತೊಡಗಿತು. ಒಂದು ವೇಳೆ ಇದು ಇಹ ಲೋಕ ತ್ಯಜಿಸಿ ಪರಂಧಾಮಕ್ಕೆ ವಿಮಾನವೇರಿದರೆ ಮುಂದೆ ಮನೆಯಲ್ಲಿ ಒಂದು ಯಃಕಶ್ಚಿತ್ ರೋಜಿಗಾಗಿ ರೋಜಾನಾ ನಡೆಯಲಿರುವ ಕುರುಕ್ಷೇತ್ರದ ಸವಿಗಲ್ಪನೆಯಲ್ಲೇ ನಡುಗತೊಡಗಿದೆ. ಈಗಾಗಲೇ ಹೂ, ಎಲೆಗಳನ್ನು ಉದುರಿಸಿಕೊಂಡು ಬರೇ ಮುಳ್ಳುಗಳನ್ನು ಹೊತ್ತು ನಿಂತು ಜೀವನ್ಮರಣಗಳ ಮಧ್ಯೆ ತುಯ್ದಾಡುತ್ತಿರುವ ಗಿಡ ನನಗೆ ಮುಂಬರುವ ದಿನಗಳ ಭೀಕರ ಕಲ್ಪನೆಯಾಗಿ ಚುಚ್ಚತೊಡಗಿದವು. " ಮೆಸರ್ಸ್ ಗುಲಾಬ್ ಚಂದ್ ಐನ್ಡ್ ಸನ್ಸ್" ಪ್ರಾಯೋಜಿತ ಧಾರಾವಾಹಿಯ ಎಪಿಸೋಡುಗಳ ಟ್ರೈಲರ್‌ಗಳು ಮನದಲ್ಲಿ ಮೂಡತೊಡಗಿದವು. ಹದಿಹರಯದಲ್ಲಿಯೂ ಕಟ್ಟುನಿಟ್ಟಾಗಿ ನಿಯತ್ತು ಪಾಲಿಸಿದ ನನಗೆ ಈಗ ಈ ವಯಸ್ಸಿನಲ್ಲಿ ಸೊಂಟಗಳೂ ಕೈಗಳೂ ಬಂದು ನಿದ್ದೆಯಲ್ಲಿ ಕಾಡತೊಡಗಿದವು.

ಹೇಗಾದರೂ ಮಾಡಿ ಗಿಡವನ್ನು ಬದುಕಿಸಬೇಕು, ಜೊತೆಗೆ ಅವಳ ಅಮ್ಮನ ಮನೆಯಲ್ಲಿ ನಡೆಯಲಿರುವ ಮರ್ಯಾದೆಯ ಹರಾಜನ್ನು ನಿಲ್ಲಿಸಬೇಕೆಂದು ನಾನು ಯಾವತ್ತೂ ಕಾಣದ ಯಾವತ್ತೂ ಬೇಡದ(ಪ್ರಾರ್ಥಿಸದ) ದೇವರಲ್ಲೆಲ್ಲಾ ಬೇಡತೊಡಗಿದೆ. ಹೇಗಾದರೂ ಅವಳಮ್ಮನಿಗೆ ಈ ಸುದ್ದಿ ಮುಟ್ಟುವ ಮೊದಲೇ ಗಿಡಕ್ಕೆ ಜೀವ ತುಂಬಿ ಆ ಮೂಲಕ ನನ್ನ ಜೀವವನ್ನೂ ಕಾಪಿಡುವ ಬಗ್ಗೆ ಚಿಂತಿಸತೊಡಗಿದೆ.

ಇಹ ಪರದ ತೊಳಲಾಟದಲ್ಲಿ ದಿನಗಳೆರಡು ಉರುಳಿದವು; ರಾತ್ರಿಗಳು ಹೊರಳಿದವು; ಕೋಪ-ರೋಷಗಳು ಕೆರಳಿದವು; ಕೆಂಗಣ್ಣುಗಳು ಅರಳಿದವು; ಕದನಗಳು ಮರಳಿದವು; ಉರುಳೊಳು ಕೊರಳುಗಳು ನರಳಿದವು;............

ಅಂತಹ ಒಂದು ಸುದಿನ ನಾನು ನನ್ನ ರೋಜಿಯೆದುರು ಸುಡುವ ಬಿಸಿಲಲ್ಲಿ ಕುಳಿತು ’ಮಂಡೆಬಿಸಿ’ ಮಾಡುತ್ತಿರುವಾಗ ಮನೆಯೆದುರು ಕಾರು ಬಂದು ನಿಂತ ಸದ್ದು ಕೇಳಿಸಿತು. ಕಾರಿನಿಂದ ಇಳಿದದ್ದು ಅವಳಮ್ಮ !! ಇಳಿದ ಕೂಡಲೇ ಅವರ ಸ್ಕಾನೀಗಣ್ಣಿಗೆ ಕಂಡಿದ್ದು ಸತ್ತು ಸುಣ್ಣವಾಗಿ ಇಹ ತ್ಯಜಿಸಿ ಇನ್ನಿಲ್ಲವಾದ, ಕೊಡೈ ಸಂಜಾತ, ಅಪರೂಪದ ಗುಲಾಬಿ ಗಿಡದ ಪಾರ್ಥವ ಶರೀರ!! ಹೈ ಕಮಾಂಡಿನ ಮುಖಚರ್ಯೆ ಬದಲಾಗುವುದಕ್ಕೂ, ನನ್ನ ಮನೆ ವಾನರೆಸ್ ನನ್ಹೆಂಡ್ತಿ ಕಾರಿನ ಸದ್ದಿಗೆ ಹೊರಬಂದು ಆ ಚರ್ಯೆಯನ್ನು ಗುರುತಿಸುವುದಕ್ಕೂ ಸರಿ ಹೋಯಿತು. ಒಂದೆಡೆಯಲ್ಲಿ ತಾಯಿ-ಮಗಳ ಈ ಅಪೂರ್ವ ಸಮಾಗಮ, ಇನ್ನೊಂದೆಡೆಯಲ್ಲಿ ಸತ್ತು ಕರಟಿ ಸ್ವರ್ಗವಾಸಿಯಾದ ಗುಲಾಬಿ ಗಿಡದ ಎದುರಲ್ಲಿ ಪೆಕರನಂತೆ ನಿಂತ ಬಕರನಾದ ನಾನು........!!!

................. ನಾನು ಇನ್ನೇನೂ ಹೇಳಲಾರೆ. ಇಲ್ಲಿಗೆ ನನ್ನ ಕಥೆ ಮುಗಿಯಿತು ಸ್ವಾಮಿ !!!


ಪ್ರಕಟನೆ: ’ತರಂಗ’ ೨೬.೧೧.೨೦೦೮

No comments:

Post a Comment